ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ದಿವ್ಯ ದೃಷ್ಟಿ!

Last Updated 1 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ಹಲೋ... ಬ್ರೇಕಿಂಗ್ ನ್ಯೂಸ್ ಟೀವಿ ರಿಪೋಟ್ರು ತೆಪರೇಸಿ ಸಾಹೇಬ್ರಾ?’

‘ಹೌದು, ಯಾರು ಮಾತಾಡೋದು?’

‘ನಾನು ಹೊಸಳ್ಳಿ ಬಾಬಣ್ಣ ಸಾ, ನಂದೊಂದು ಎಮ್ಮೆ ಕಳೆದಿತ್ತು. ಹುಡುಕಿ ಕೊಡ್ತೀರೇನೋ ಅಂತ ಕೇಳಾಕೆ ಫೋನ್ ಮಾಡ್ದೆ...’

‘ರೀ...ನಾವು ಟೀವಿಯೋರು, ಎಮ್ಮೆ ಹುಡುಕಿ ಕೊಡೋರಲ್ಲ. ಪೊಲೀಸರಿಗೆ ಕಂಪ್ಲೇಂಟ್ ಕೊಡಿ, ಹುಡುಕಿ ಕೊಡ್ತಾರೆ’.

‘ಸರಿ ಹೋತು, ಅಲ್ಲ ಸಾ ದಿನಕ್ಕೊಂದು ವಿಡಿಯೊ ಬಿಡ್ತಿರೋ ಆ ಸೀಡಿ ಹುಡುಗಿನೇ ಹುಡುಕೋಕೆ ಆಗ್ಲಿಲ್ಲ ಅವರಿಗೆ. ಇನ್ನು ಕಳೆದೋಗಿರೋ ನನ್ನ ಎಮ್ಮೆ ಹುಡುಕಿ ಕೊಡ್ತಾರಾ?’

‘ಅದೆಲ್ಲ ಗೊತ್ತಿಲ್ಲ, ನನ್ನ ನಂಬರ್ ಯಾರು ಕೊಟ್ರು ನಿಮಗೆ?’

‘ನೀವು, ನಿಮ್ಮ ಟೀವಿಯೋರ ದಿವ್ಯದೃಷ್ಟಿಗೆ ಎಲ್ಲ ಗೊತ್ತಾಗುತ್ತೆ ಅಂತ ಯಾರೋ ಹೇಳಿದ್ರು, ಅದ್ಕೇ ಕೇಳಿದೆ. ದಿನಕ್ಕೆ ಆರು ಲೀಟರು ಹಾಲು ಕರೆಯೋ ಎಮ್ಮೆ ಸಾರ್ ಅದು...’‌

‘ರೀ ಇಡ್ರಿ ಫೋನು... ಅದು ಎಷ್ಟ್ ಲೀಟರಾದ್ರು ಕರೀಲಿ, ನಮಗೆ ದಿವ್ಯದೃಷ್ಟಿ ಇದೆ ಅಂತ ನಿಮಗ್ಯಾರು ಹೇಳಿದ್ರು?’

‘ಅಲ್ಲ ಸಾ, ಆ ಯುವತಿ ಜಡ್ಜ್ ಮುಂದೆ ಹೇಳಿಕೆ ಕೊಡುವಾಗ ಅಲ್ಲಿ ಯಾರ‍್ಯಾರಿದ್ರು?’

‘ಜಡ್ಜ್ ಸಾಹೇಬ್ರು, ಯುವತಿ, ಆಮೇಲೆ ಟೈಪಿಸ್ಟು ಮೂರೇ ಜನ...’

‘ಅಲ್ವ ಸಾ? ಆದ್ರೆ ನಿಮ್ ಟೀವಿಯಲ್ಲಿ ಜಡ್ಜ್ ಮುಂದೆ ಆ ಹುಡುಗಿ ಏನೇನ್ ಹೇಳಿಕೆ ಕೊಟ್ರು ಅನ್ನೋದನ್ನ ಅಕ್ಷರಕ್ಷರ ಬಿಡಿಸಿ ತೋರಿಸಿದ್ರಲ್ಲ, ಹೆಂಗೆ ಸಾ? ದಿವ್ಯದೃಷ್ಟಿ ತಾನೇ?’

ತೆಪರೇಸಿಗೆ ಇದು ಯಾರೋ ಕಿತಾಪತಿ ಮಾಡ್ತಿದಾರೆ ಅನ್ನಿಸಿತು. ‘ಯಾರು ಮಾತಾಡ್ತಿರೋದು? ಗುಡ್ಡೆನಾ?’ ಎಂದ.

‘ಲೇ ತೆಪರ, ನಾನು ದುಬ್ಬೀರ, ಇದು ನನ್ ಹೊಸ ನಂಬರು. ಈಗೇನು ಎಮ್ಮೆ ಹುಡುಕಿ ಕೊಡ್ತೀಯೋ ಇಲ್ವೊ?’ ಅಂದ. ಇಬ್ಬರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT