ಸೋಮವಾರ, ಡಿಸೆಂಬರ್ 9, 2019
20 °C

ಸ್ವಕನಾಮಿಕ್ಸು

Published:
Updated:
Prajavani

ನಾನು ಆವತ್ತು ತುರೇಮಣೆ ಮನೆ ಹತ್ತಿರ ಹೋದಾಗ ಹೆಗಲಿಗೆ ಚೀಲ ಹಾಕಿ ಹೊರಟಿದ್ದರು. ತರಕಾರಿ ಅಂಗಡಿ ಕೆಂಪಣ್ಣ ‘ಏನ್ ತುರೇಮಣೆಸಾ ಈಕಡೀಕೆ ಬರದೇ ಬುಟ್ಬುಟ್ರಿ?’ ಅಂದ. ಯಾವ ತರಕಾರೀನೂ 60ಕ್ಕೆ ಕಡಮೆ ಇರಲಿಲ್ಲ. ‘ನಮಿಗೇ ಗೀಟಕಿಲ್ಲಾ ಕಣ್ಸಾ. ಕೇಜಿಗೆ ಐವತ್ತು ಪೈಸ ಲಾಭ ಅಷ್ಟೇಯಾ’ ಅಂದ. ಇನ್ನು ಎಣ್ಣೆ ಬೆಲೆ ಮುಗಿಲು ಮುಟ್ಟಿತ್ತು. ‘ಇದೇನ್ಲಾ ಹೊಟ್ಟೆಗಾಕ ಎಣ್ಣೆ, ಅಡುಗೆ ಎಣ್ಣೆ, ಗಾಡಿಗಾಕ ಎಣ್ಣೆ ಎಲ್ಲಾದರ ರೇಟು ನೂರರ ತಾವೇ ಅವಲ್ಲೋ!’ ಅಂದ್ರು.

‘ಮತ್ತೆ ಯಾವುದರ ರೇಟು ಇಳಿದದೆ ಹೇಳಿ ಸಾ ನೋಡಮು?’ ಅಂದೆ.

‘ನೋಡ್ಲಾ ಬೆಳೆದೋನಿಗೆ, ಮಾರೋನಿಗೆ, ತಿನ್ನೋನಿಗೆ ಏನೂ ದಕ್ಕಕುಲ್ಲ. ಎಲ್ಲಾ ದಲ್ಲಾಳಿ ಬಾಯಿಗೆ ಹೋಯ್ತದೆ. ಹಂಗೇ ಈಗ ರಾಜಕೀಯ, ವ್ಯಾಪಾರ ಎರಡೂ
ಕಡೆ ದಲ್ಲಾಳಿಗಳು ಅಟಕಾಯಿಸಿಕಂಡವರೆ’ ಅಂದರು.

‘ರಾಜಕೀಯದ ದಲ್ಲಾಳಿಗಳು ಅಂದ್ರೆ ಯಾರು ಸಾ?’ ಅಂತ ಕೇಳಿದೆ. ‘ಅಯ್ಯೋ ಬಡ್ಡೆತ್ತುದೇ ಸರ್ಕಾರ ಅನ್ನೋ ದೇವರಿಗೂ ದರಿದ್ರ ನಾರಾಯಣರಾದ ನಮಗೂ ಮಧ್ಯೆ ನಿಂತು, ನಮಗೆ ಬರಬೇಕಾದದ್ದನ್ನ ನೆಕ್ಕಿ ನೋಡಿ ಒಸೊಸಿ ಕೊಡೋರು ಯಾರು!’ ಅಂದ್ರು. ನನಗೆ ತಲೆಯಲ್ಲಿ ಸ್ವಲ್ಪ ಬೆಳಕು ಬಿತ್ತು.

‘ವ್ಹಾ... ಅದಕ್ಕೆ ಅನ್ನಿ ನಡಂತರದಲ್ಲಿರೋ ರಾಜಕಾರಣಿಗಳ ಆದಾಯ ವರ್ಷೊಪ್ಪತ್ತಿನಲ್ಲೇ ನೂರಿನ್ನೂರು ಪಟ್ಟು ಜಾಸ್ತಿಯಾಗದು!’ ಅಂತ ಬಾಯಿಬುಟ್ಟೆ.

‘ಹ್ಞೂಂ ಕನಲಾ, ಜೇನು ಬಿಚ್ಚೋವಾಗ ಕೈಗೆ ಹತ್ತಿದ್ದನ್ನ ನೆಕ್ಕಿಕ್ಯಂತರೆ. ನೆನ್ನೆ ಎಲೆಕ್ಷನ್ನು ಅಪಿಡವಿಟ್ಟು ಕೊಡುವಾಗ ಒಬ್ರು ಹೋದೊರ್ಸ ಲಕ್ಷ ಡಿಕ್ಲೇರ್ ಮಾಡಿಕ್ಯಂಡಿದ್ದು ಈಗ ಐನೂರು ಕೋಟಿಯಾಗದಂತೆ. ಇದು ನೆಕ್ಕಿದ್ದರ ಲೆಕ್ಕ ಕಣೋ! ಈ ಥರಾ ಇನ್ನೂ ಸುಮಾರು ಜನವುರೆ. ಹಿಂಗೆ ಆದಾಯ ಎರ‍್ರಾಬಿರ‍್ರಿ ಜಾಸ್ತಿಯಾಗೋ ಹಣಾನುಬಂಧದ ಎಕನಾಮಿಕ್ಸನ್ನ ಏನಂತ ಕರಿಬೌದು ಹೇಳು ಬಡ್ಡಿಹೈದ್ನೆ’ ಅಂತ ಸವಾಲು ಹಾಕಿದರು. ಆಗ ನನಗೆ ಹೊಳೆದದ್ದು ಒಂದೇ ನೋಡಿ.

‘ಸಾ ಅದು ಸ್ವಕನಾಮಿಕ್ಸು!’ ಅಂದೆ.

ಪ್ರತಿಕ್ರಿಯಿಸಿ (+)