ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಹಿತ್ತಲ ಗಿಡದ ಹಿಡನ್ ಅಜೆಂಡಾ!

Last Updated 27 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

‘ತುಂಬಾ ಥ್ಯಾಂಕ್ಸ್ ಕಣ್ರೀ’ ಎಂದಳು ಶ್ರೀಮತಿ. ನಾನು ಗೊಂದಲಗೊಂಡು, ‘ಯಾತಕ್ಕೆ?’ ಎಂದೆ.

‘ಮಹಿಳಾ ಸಮಾಜದಲ್ಲಿ ನಾನು ಮಾಡಿದ ಕಿತ್ತೂರು ಚೆನ್ನಮ್ಮ ಜಯಂತಿ ಭಾಷಣ ಅದ್ಭುತವಾಗಿತ್ತೂಂತ ಎಲ್ಲ ಸದಸ್ಯರೂ ನನ್ನನ್ನ ತುಂಬ ಹೊಗಳಿದ್ರು! ನಿಮ್ಗೆ ಥ್ಯಾಂಕ್ಸ್ ಹೇಳಿದ್ದು ಆ ಭಾಷಣ ಬರೆದುಕೊಟ್ಟಿದ್ದಕ್ಕೆ’.

ನಾನು ಫುಲ್ ಖುಷಿಯಾಗಿ ಹೇಳಿದೆ- ‘ಆಧುನಿಕ ಭಾರತದಲ್ಲಿಯೂ ಮಹತ್ತರ ಸಾಧನೆ ಮಾಡಿದ ಎಷ್ಟೊಂದು ಮಹಿಳೆಯರಿದ್ದಾರೆ. ನಮೋ ಮೊನ್ನೆಯ ಮನ್ ಕೀ ಬಾತ್‌ನಲ್ಲಿ ದೇಶದ ನಾರಿಯರನ್ನ ಅಷ್ಟೊಂದು ಹೊಗಳಿದಾರೆ. ಭಾರತ ನೂರು ಕೋಟಿ ಕೊರೊನಾ ಲಸಿಕೆ ಗುರಿ ಸಾಧಿಸಲು ಮಹಿಳೆಯರ ಕೊಡುಗೆ ಅಪಾರ ಎಂದರು. ಅಲ್ಲದೆ ಉತ್ತರಾಖಂಡದ ಪೂನಂ ನೌತಿಯಾಲ್‌ಗೆ ಫೋನ್ ಮಾಡಿ ಅಭಿನಂದಿಸಿದರು’.

‘ಯಾಕೆ?’

‘ಆಕೆ, ತಂಡದೊಡನೆ ದಿನಾಲೂ ಗುಡ್ಡಗಾಡಿನಲ್ಲಿ ಸಂಚರಿಸಿ ಲಸಿಕೆ ಹಾಕುವ ಗುರಿ ಸಾಧಿಸಿದಳಂತೆ. ನಮ್ಮ ಸ್ವಾತಂತ್ರ್ಯಪೂರ್ವದಲ್ಲೇ ಯುಎನ್‌ಗೆ ಪ್ರಭಾವ ಮತ್ತು ಬಲ ತುಂಬಿದವರು ಹಂಸ ಮೆಹ್ತಾ, ಲಕ್ಷ್ಮಿ ಮೆನನ್, ವಿಜಯಲಕ್ಷ್ಮಿ ಪಂಡಿತ್‌ರಂಥ ಭಾರತೀಯ ಮಹಿಳೆಯರು ಅಂದ್ರು. ಪೊಲೀಸರಾಗ್ತಿರೋ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗ್ತಿದೇಂತ ಹೆಮ್ಮೆಪಟ್ಟರು.

‘ಹೋಲ್ಡ್ ಆನ್... ನಿಮ್ಗೆ ‘ಹಿತ್ತಲ ಗಿಡ ಮದ್ದಲ್ಲ’ ಅನ್ನೋ ಗಾದೆ ಗೊತ್ತಲ್ಲ?’

‘ಗೊತ್ತು, ಏನೀಗ?’

‘ನಿಮ್ಮ ಕಣ್ಣಿಗೆ ಬೇರೆ ಹೆಣ್ಮಕ್ಕಳೇ ಕಾಣ್ತಾರೆ ಹೊರತು ಮನೆಯವ್ರು ಕಾಣೋಲ್ಲ’.

‘ಯಾಕೆ, ಕೊರೊನಾ ಟೈಮಲ್ಲಿ ಎಲ್ಲ ಗೃಹಕೃತ್ಯ ಕಲ್ತುಕೊಂಡು ನಿಂಗೆ ಸಹಾಯ ಮಾಡಿದೀನಲ್ಲ’.

‘ಆದ್ರೂ ನನ್ನ ಬಹುದಿನದ ಸಣ್ಣ ಬೇಡಿಕೆ ಇನ್ನೂ ಈಡೇರಿಲ್ಲ’.

‘ಅದೇನು ಅಪ್ಪಣೆಯಾಗಲಿ’.

‘ನಿಮ್ಗೆ ಪ್ರಮೋಷನ್ ಆದಾಗ ಕೇಳಿದ್ದಕ್ಕೆ ಲಾಂಗ್ ಚೈನ್ ಮಾಡಿಸಿಕೊಡ್ತೀನಿ ಅಂದಿದ್ರಿ... ಈ ದೀಪಾವಳಿ ಲಕ್ಷ್ಮಿ ಪೂಜೆಗಾದ್ರೂ...’

ಅಮ್ಮಾವ್ರು ಅಷ್ಟು ಅಕ್ಕರೆಯಿಂದ ಥ್ಯಾಂಕ್ಸ್ ಹೇಳಿದ್ದರ ಹಿಂದಿನ ಹಿಡನ್ ಅಜೆಂಡಾ ಗೊತ್ತಾಗಿ ಸುಸ್ತಾದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT