ಸೋಮವಾರ, ಆಗಸ್ಟ್ 2, 2021
20 °C

ಚುರುಮುರಿ: ರೆಡ್ ಫಂಗಸ್!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಪರಸ್ಪರ ಅಂತರ ಕಾಯ್ದುಕೊಂಡು ಹರಟೆಕಟ್ಟೆ ಸಭೆ ಸೇರಿತ್ತು. ‘ಯಾಕೋ ಜೀವನಾನೇ ಬ್ಯಾಸರಾಗೇತಿ ಕಣ್ರಲೆ... ದಿನ ಬೆಳಗಾದ್ರೆ ಅವನು ಸತ್ತ, ಇವನು ಸತ್ತ... ಕೇಳಿ ಕೇಳಿ ತೆಲಿ ಕೆಟ್ಟೋಗೇತಿ. ಈ ಕೊರೊನಾ ಅಲೆಗಳು ಇನ್ನೂ ಎಷ್ಟದಾವೋ ಏನೋ...’ ದುಬ್ಬೀರ ಬೇಸರ ವ್ಯಕ್ತಪಡಿಸಿದ.

‘ಕೊರೊನಾ ಅಲೆ ಇನ್ನೂ ಏಳೆಂಟದಾವು ಅನ್ನುಸ್ತತಿ. ಅಷ್ಟರಾಗೆ ದೇಶದ ಜನಸಂಖ್ಯೆ ಚಪಾಟೆದ್ದು ಸ್ವಚ್ಛ ಭಾರತ್ ಆಗಿರ್ತತಿ’ ಗುಡ್ಡೆ ನಕ್ಕ.

‘ಈ ಕೊರೊನಾ ಕತಿ ಹಿಂಗಾದ್ರೆ ಅದ್ಯಾವುದೋ ಫಂಗಸ್ ಅಂತಪ, ಕಲ್ ಕಲರ್ ಬರಾಕತ್ತೇತಿ. ಮೊದ್ಲು ಬ್ಲ್ಯಾಕು, ಆಮೇಲೆ ವೈಟು, ಈಗ ಹಳದಿ ಕಲರ್ ಬಂದೇತಂತೆ. ಇದ್ರುದೂ ಇನ್ನೂ ಎಷ್ಟು ಕಲರ್ ಅದಾವೋ ಏನೋ...’ ಪರ್ಮೇಶಿ ಆತಂಕ ವ್ಯಕ್ತಪಡಿಸಿದ.

‘ಕಲರ್ ಇರೋದೇ ಏಳು ಅಲ್ಲೇನ್ಲೇ? ಕಾಮನಬಿಲ್ಲಿನ ತರ ಏಳು ಕಲರ್‍ನಾಗೂ ಫಂಗಸ್ ಬರಬಹುದು ಅನುಸ್ತತಿ’ ಗುಡ್ಡೆ ಮತ್ತೆ ನಕ್ಕ.

‌ದುಬ್ಬೀರನಿಗೆ ಸಿಟ್ಟು ಬಂತು. ‘ಲೇಯ್ ನಾವಿಲ್ಲಿ ತೆಲಿಕೆಟ್ ಕುಂತಿದೀವಿ, ಇವನಿಗೆ ಎಲ್ಲ ತಮಾಸಿನೇ...’ ಎಂದು ರೇಗಿದ.

ಎಲ್ಲ ಮಾತಾಡುತ್ತಿದ್ದರೂ ತೆಪರೇಸಿ ಮಾತ್ರ ಪಿಟಿಕ್ಕನ್ನದೆ ಕುಳಿತಿದ್ದನ್ನು ನೋಡಿದ ಸಣ್ಣೀರ ‘ಯಾಕೋ ತೆಪರ, ಏನೂ ಮಾತಾಡ್ತಿಲ್ಲ? ಮುಖ ಯಾಕೋ ಕೆಂಪಾಗೇತಿ, ಮಾಸ್ಕ್ ತೆಗಿ ಇಲ್ಲಿ’ ಎಂದ.

‘ಅವನ ಮುಖ ಯಾಕೆ ಕೆಂಪಾಗೇತಿ ಅಂತ ನಂಗೊತ್ತು. ಅದು ರೆಡ್ ಫಂಗಸ್ಸು’ ಗುಡ್ಡೆ ಕಿಸಕ್ಕೆಂದ.

‘ರೆಡ್ ಫಂಗಸ್ಸಾ?’ ಎಲ್ಲರೂ ಒಟ್ಟಿಗೇ ಗಾಬರಿಯಾದರು.

‘ಹ್ಞೂಂ... ರೆಡ್ ಫಂಗಸ್ಸೇ... ನಿನ್ನೆ ರಾತ್ರಿ ಇವ್ನು ಫುಲ್ ಟೈಟಾಗಿ ಮನೇಲಿ ಹೆಂಡ್ತಿ ಮೇಲೆ ಹುಚ್ಚಾಪಟ್ಟಿ ಹಾರಾಡಿದ್ನಂತೆ. ಪಮ್ಮಕ್ಕ ಇವನ
ಮುಖ-ಮೂತಿ ನೋಡದಂಗೆ ಬಾರಿಸಿ ಇಂಗೆ ಕೆಂಪು ಮಾಡಿದಾಳೆ. ಕೆಂಪಾದವೋ ಎಲ್ಲ ಕೆಂಪಾದವೋ...’ ಎಂದ ಗುಡ್ಡೆ.

ಬೇಸರದಲ್ಲೂ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು