ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಏಷ್ಯನ್ ಕ್ರೀಡಾಕೂಟದಲ್ಲಿ ಸಾಧನೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಪ್ರೇರಣೆ

Published 8 ಅಕ್ಟೋಬರ್ 2023, 17:32 IST
Last Updated 8 ಅಕ್ಟೋಬರ್ 2023, 22:47 IST
ಅಕ್ಷರ ಗಾತ್ರ

ಭಾರತದ ಕ್ರೀಡಾಪಟುಗಳು ಚೀನಾದ ಹಾಂಗ್‌ಝೌನಲ್ಲಿ ನಡೆದ ಹತ್ತೊಂಬತ್ತನೇ ಏಷ್ಯನ್
ಕ್ರೀಡಾಕೂಟದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದರು. ಇದೇ ಮೊದಲ ಬಾರಿಗೆ ಭಾರತವು ಒಟ್ಟು 107 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿತು. ಇದರಲ್ಲಿ 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕಗಳು ಸೇರಿವೆ. ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನೂ ಪಡೆಯಿತು. ಕ್ರೀಡಾಕ್ಷೇತ್ರದಲ್ಲೂ ಬಲಾಢ್ಯ ಆಗಿರುವ ಚೀನಾದಲ್ಲಿ ಕಳೆದ ಎರಡು ವಾರಗಳ ಅವಧಿಯಲ್ಲಿ ತ್ರಿವರ್ಣ ಧ್ವಜ ಪ್ರತಿದಿನವೂ ಅರಳುವಂತೆ ಮಾಡಿದ್ದು ಭಾರತೀಯರ ಅಮೋಘ ಸಾಧನೆಯೇ ಸರಿ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಗಳಿಸಿದ್ದ 70 ಪದಕಗಳೇ ಭಾರತದ ಶ್ರೇಷ್ಠ ಸಾಧನೆಯಾಗಿತ್ತು. ಈ ಬಾರಿ ಭಾರತ ತಂಡದಲ್ಲಿ 655 ಅಥ್ಲೀಟ್‌ಗಳಿ‌ದ್ದರು. ಅವರಲ್ಲಿ ಹದಿನಾರು ವರ್ಷದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದರು. ಟೆನಿಸ್ ತಾರೆ 43 ವರ್ಷದ ರೋಹನ್ ಬೋಪಣ್ಣ ಅತಿ ಹಿರಿಯ ವಯಸ್ಸಿನ ಕ್ರೀಡಾಪಟುವಾಗಿದ್ದರು. ಇಂತಹ ಯುವ ಮತ್ತು ಅನುಭವಿ ಕ್ರೀಡಾಪಟುಗಳ ಮಿಶ್ರಣವು ಭಾರತದ ಸಾಧನೆಗೆ ಕಾರಣವಾಯಿತು. ಹೋದ ವರ್ಷವೇ ನಡೆಯಬೇಕಿದ್ದ ಕೂಟವನ್ನು ಕೋವಿಡ್‌ನಿಂದಾಗಿ ಮುಂದೂಡಲಾಗಿತ್ತು. ಅದರಿಂದ ಲಭಿಸಿದ ಸಮಯವೂ ಕ್ರೀಡಾಪಟುಗಳ ಸಿದ್ಧತೆಗೆ ಅನುಕೂಲ ಮಾಡಿಕೊಟ್ಟಿತು. ಕ್ರೀಡಾಪಟುಗಳಿಗೆ ವಿದೇಶಿ ತರಬೇತುದಾರರ ಮಾರ್ಗದರ್ಶನವೂ ಸಿಗುತ್ತಿದೆ. ಆಧುನಿಕ ತಂತ್ರಜ್ಞಾನ, ಕ್ರೀಡಾವೈದ್ಯಕೀಯ ಮತ್ತು ಮಾನಸಿಕ ತಜ್ಞರ ನೆರವು ಸಿಗುತ್ತಿರುವುದು ಕೂಡ ಕ್ರೀಡಾಪಟುಗಳ ಸಾಮರ್ಥ್ಯ ಹೆಚ್ಚಿಸುತ್ತಿದೆ. ಆದರೂ ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಇಷ್ಟು ಸಾಧನೆ ಸಾಕೇ ಎಂಬ ಪ್ರಶ್ನೆಯೂ ಕಾಡದಿರದು. ಆದರೆ, ಕ್ರಿಕೆಟ್‌ ಆಟವನ್ನು ಆರಾಧಿಸುವ ದೇಶದಲ್ಲಿ ಬೇರೆ ಕ್ರೀಡೆಗಳೂ ಈ ಮಟ್ಟದ ಸಾಧನೆ ಮಾಡುತ್ತಿರುವುದು ಶುಭಸೂಚಕ. ಈ ಹಿಂದೆ ಟ್ರ್ಯಾಕ್‌ ಮತ್ತು ಫೀಲ್ಡ್‌ ಸ್ಪರ್ಧೆಗಳಲ್ಲಿ ಪದಕ ಜಯಿಸುತ್ತಿದ್ದವರು ಬೆರಳೆಣಿಕೆಯಷ್ಟಿದ್ದರು. ಆದರೆ ಈ ಕೂಟದಲ್ಲಿ ಇದೊಂದೇ ವಿಭಾಗದಿಂದ 29 ಪದಕಗಳು ಲಭಿಸಿವೆ. ಅದರಲ್ಲಿ ಆರು ಚಿನ್ನ ಇರುವುದು ವಿಶೇಷ. ಜಕಾರ್ತ ಏಷ್ಯಾ ಕ್ರೀಡಾಕೂಟ, 2020ರ ಟೋಕಿಯೊ ಒಲಿಂಪಿಕ್ಸ್ ಮತ್ತು ಈಚೆಗೆ ವಿಶ್ವ ಅಥ್ಲೆಟಿಕ್ ಕೂಟದ ಜಾವೆಲಿನ್ ಥ್ರೋನಲ್ಲಿ ಚಿನ್ನ ಜಯಿಸಿದ್ದ ನೀರಜ್ ಚೋಪ್ರಾ ಇಲ್ಲಿ ಮತ್ತೊಮ್ಮೆ ಬಂಗಾರ ಗೆದ್ದರು. ಅವರ ನಿರಂತರ ಸಾಧನೆಯು ಯುವ ಅಥ್ಲೀಟ್‌ಗಳಿಗೆ ಪ್ರೇರಣೆಯಾಗಿದೆ. ಈ ವಿಭಾಗದಲ್ಲಿಯೇ ಕಿಶೋರ್ ಜೇನಾ ಅವರು ಬೆಳ್ಳಿ ಜಯಿಸಿದರೆ, ಮಹಿಳೆಯರಲ್ಲಿ ಅನ್ನು ರಾಣಿ ಸ್ವರ್ಣ ಗೆದ್ದರು. ಈ ಬಾರಿ ಟ್ರ್ಯಾಕ್‌ ಸ್ಪರ್ಧೆಗಳಲ್ಲಿ ಮಿಂಚಿದ ಪಾರುಲ್ ಚೌಧರಿ, ಜ್ಯೋತಿ ಯರ‍್ರಾಜಿ, ಹರ್ಮಿಲನ್ ಬೇನ್ಸ್, ತಜೀಂದರ್ ಪಾಲ್ ಸಿಂಗ್ ತೂರ್, ಮುರಳಿ ಶ್ರೀಶಂಕರ್ ಮತ್ತು ಅವಿನಾಶ್ ಸಾಬ್ಳೆ ಅವರ ಸಾಧನೆಯೂ ಗಮನಾರ್ಹ.

ಆರ್ಚರಿಯಲ್ಲಿ ಓಜಸ್ ದೇವತಾಳೆ ಹಾಗೂ ಜ್ಯೋತಿ ಸುರೇಖಾ ವೆನ್ನಂ ಚಿನ್ನದ ಹ್ಯಾಟ್ರಿಕ್ ಸಾಧನೆ ಮಾಡಿದರು. ಬಲಾಢ್ಯ ದಕ್ಷಿಣ ಕೊರಿಯಾದ ಸವಾಲು ಮೆಟ್ಟಿ ನಿಂತರು. ಶೂಟಿಂಗ್‌ನಲ್ಲಿಯೂ ಚೀನಾದ ಪ್ರಾಬಲ್ಯವನ್ನು ಮುರಿಯುವಲ್ಲಿ ಭಾರತ ಸ್ಪರ್ಧಿಗಳು ಯಶಸ್ವಿಯಾದರು. ಬ್ಯಾಡ್ಮಿಂಟನ್‌ನಲ್ಲಿ
ಇದೇ ಮೊದಲ ಬಾರಿಗೆ ಭಾರತಕ್ಕೆ ಪುರುಷರ ಡಬಲ್ಸ್‌ನಲ್ಲಿ ಚಿನ್ನ ಒಲಿಯಲು ಚಿರಾಗ್ ಶೆಟ್ಟಿ, ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಜೋಡಿ ಕಾರಣವಾಯಿತು. ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್ ಕಂಚು ಪಡೆದರು. ಕಬಡ್ಡಿಯಲ್ಲಿ ಮಹಿಳೆಯರ ಮತ್ತು ಪುರುಷರ ತಂಡಗಳು ಸ್ವರ್ಣ ಜಯಿಸಿದವು. ಹಾಕಿ ತಂಡಗಳೂ ಮಿಂಚಿದವು. ರೋಯಿಂಗ್, ಸೇಲಿಂಗ್, ಈಕ್ವೆಸ್ಟ್ರಿಯನ್, ಸ್ಕ್ವಾಷ್‌, ಬ್ರಿಜ್, ಗಾಲ್ಫ್, ಸ್ಕೇಟಿಂಗ್, ವುಷು, ಕೆನೊಯಿಂಗ್ ಮತ್ತು ಸೆಪಕ್ ಟಕ್ರಾದಂತಹ ಕ್ರೀಡೆಗಳಲ್ಲಿಯೂ ಈ ಬಾರಿ ಪದಕ ಒಲಿದಿರುವುದು ವಿಶೇಷ. ಈ ಆಟಗಳು ಭಾರತದಲ್ಲಿ ಇನ್ನೂ ಬೇರೂರಿಲ್ಲ. ಕ್ರಿಕೆಟ್‌ನಲ್ಲಿಯೂ ಎರಡು ಚಿನ್ನ ಒಲಿದವು. ಆದರೆ, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮತ್ತು ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ನಿರಾಶೆ ಮೂಡಿಸಿದರು. ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಅವರು ತೊಡೆಯ ಸ್ನಾಯುಸೆಳೆತದಿಂದ ಪದಕ ತಪ್ಪಿಸಿಕೊಂಡರು. ಆದರೂ ಭಾರತವು ಶತಕದ ಗುರಿ ತಲುಪಲು ಸಮಸ್ಯೆಯಾಗಲಿಲ್ಲ. ಇಷ್ಟಾದರೂ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಷ್ಟು ಎತ್ತರಕ್ಕೇರಲು ಭಾರತ ಇನ್ನೂ ಬಹುದೂರ ಸಾಗಬೇಕಿದೆ. ಈ ಬಾರಿಯೂ ಪದಕ ಗಳಿಕೆಯಲ್ಲಿ ಚೀನಾ ಪಾರಮ್ಯ ಮುಂದುವರಿಸಿತು. ಕೂಟದ ಉದ್ಘಾಟನೆ ಸಮಾರಂಭದಲ್ಲಿ ಆತಿಥೇಯರು ಅತ್ಯಾಧುನಿಕ ತಂತ್ರಜ್ಞಾನದ ಚಮತ್ಕಾರಗಳನ್ನು ತೋರಿಸಿ ಅಚ್ಚರಿ ಮೂಡಿಸಿದ್ದರು. ಆದರೆ ಕ್ರೀಡೆಗಳ ಆಯೋಜನೆಯಲ್ಲಿ ಕೆಲವು ತಾಂತ್ರಿಕ ಲೋಪಗಳು ಕಂಡುಬಂದವು. ಜಾವೆಲಿನ್ ಥ್ರೋನಲ್ಲಿ ಚೋಪ್ರಾ ಅವರು ಮಾಡಿದ ಮೊದಲ ಎಸೆತದ ಫಲಿತಾಂಶವನ್ನು ದಾಖಲಿಸುವಲ್ಲಿ ತಾಂತ್ರಿಕ ಸಿಬ್ಬಂದಿ ವಿಫಲವಾಯಿತು. ಇದರಿಂದಾಗಿ ನೀರಜ್ ಅವರ ಥ್ರೋ ವ್ಯರ್ಥವಾಯಿತು. ಓಟದ
ಸ್ಪರ್ಧೆಗಳಲ್ಲಿ, ಪುರುಷರ ಕಬಡ್ಡಿ ಫೈನಲ್‌ನಲ್ಲಿಯೂ ಇಂತಹುದೇ ಲೋಪಗಳು ವಿವಾದಕ್ಕೆ ಕಾರಣವಾದವು.
ಅರುಣಾಚಲಪ್ರದೇಶ ಗಡಿ ವಿವಾದದ ಹಿನ್ನೆಲೆಯಲ್ಲಿ ಭಾರತದ ಮೂವರು ವುಷು ಸ್ಪರ್ಧಿಗಳಿಗೆ ಚೀನಾ ವೀಸಾ ನೀಡಿರಲಿಲ್ಲ. ಆದರೆ, ಈ ಅಡೆತಡೆಗಳನ್ನು ದಾಟಿದ ಭಾರತವು ಪದಕ ಗಳಿಕೆಯಲ್ಲಿ ಮೂರಂಕಿ ಸಾಧನೆ ಮಾಡಿದೆ. ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟಕ್ಕೆ ಸಿದ್ಧವಾಗಲು ಇದು ಸ್ಫೂರ್ತಿಯಾಗಲಿದೆ.

Hangzhou: Gold medallist India
Hangzhou: Gold medallist India

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT