ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ದೆಹಲಿ ಮುಖ್ಯಮಂತ್ರಿ ಆತಿಶಿ ಮುಂದಿದೆ ಕಠಿಣ ಸವಾಲು

Published : 22 ಸೆಪ್ಟೆಂಬರ್ 2024, 22:51 IST
Last Updated : 22 ಸೆಪ್ಟೆಂಬರ್ 2024, 22:51 IST
ಫಾಲೋ ಮಾಡಿ
Comments

ದೆಹಲಿ ಮುಖ್ಯಮಂತ್ರಿಯಾಗಿ ಆತಿಶಿ ಮರ್ಲೇನಾ ‍ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹುದ್ದೆಗೆ ಅವರು ಏರಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಆಮ್‌ ಆದ್ಮಿ ಪಕ್ಷ ಮತ್ತು ಸರ್ಕಾರದಲ್ಲಿ ಆತಿಶಿ ಅವರಿಗಿಂತ ಹಿರಿಯ ನಾಯಕರು ಇದ್ದಾರೆ. ಆದರೆ, ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಇತರ ಮುಖಂಡರು ಜೈಲು ಸೇರಿದ್ದ ಸಂದರ್ಭದಲ್ಲಿ ಪಕ್ಷ ಮತ್ತು ಸರ್ಕಾರದ ಪರವಾಗಿ ದಿಟ್ಟ ಧ್ವನಿಯಾಗಿದ್ದವರು ಆತಿಶಿ. ಸಚಿವೆಯಾಗುವುದಕ್ಕೆ ಮುಂಚೆ ಸರ್ಕಾರದ ಸಲಹೆಗಾರ್ತಿಯಾಗಿಯೂ ಅವರು ಉತ್ತಮ ಕೆಲಸ ಮಾಡಿದ್ದರು. ರಾಷ್ಟ್ರ ರಾಜಧಾನಿಯ ಶಾಲೆಗಳ ಚಹರೆಯನ್ನೇ ಬದಲಾಯಿಸುವಲ್ಲಿ ಅವರ ಪಾತ್ರ ಮಹತ್ವ ದ್ದಾಗಿತ್ತು. ಸಚಿವೆಯಾಗಿ ಅವರು ಹಲವು ಖಾತೆಗಳನ್ನು ನಿರ್ವಹಿಸಿ, ಆಡಳಿತದ ಅನುಭವವನ್ನೂ ಪಡೆದು
ಕೊಂಡಿದ್ದಾರೆ. ವಿಶೇಷ ಅಧಿಕಾರಗಳನ್ನು ಹೊಂದಿರುವ ಲೆಫ್ಟಿನೆಂಟ್‌ ಗವರ್ನರ್‌ ಇರುವ ದೆಹಲಿಯ ಆಡಳಿತ ಸುಲಭವೇನಲ್ಲ. ಅಧಿಕಾರಿಶಾಹಿಯ ಮೇಲೆ ದೆಹಲಿ ಸರ್ಕಾರಕ್ಕೆ ನಿಯಂತ್ರಣವೇನೂ ಇಲ್ಲ. ಅದಲ್ಲದೆ, ಪ್ರತಿಕೂಲವಾಗಿರುವ ಕೇಂದ್ರ ಸರ್ಕಾರದ ಜೊತೆಗೂ ಏಗಬೇಕು. ಬೇಸಿಗೆಯಲ್ಲಿ ದೆಹಲಿಗೆ ಹೆಚ್ಚು ನೀರು ಒದಗಿಸಬೇಕು ಎಂದು ಆತಿಶಿ ಅವರು ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು. 

ಮುಖ್ಯಮಂತ್ರಿಯಾಗಿದ್ದ ಕೇಜ್ರಿವಾಲ್‌ ಮತ್ತು ಉಪಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ ಅವರು ಬಂಧನಕ್ಕೆ ಒಳಗಾಗಿದ್ದರು. ಹೀಗಾಗಿ, ದೆಹಲಿಯಲ್ಲಿ ಆಡಳಿತ ವ್ಯವಸ್ಥೆಯು ಕುಸಿದಿದೆ. ಅದನ್ನು ಮೇಲಕ್ಕೆ ಎತ್ತುವ ಹೊಣೆಗಾರಿಕೆ ಈಗ ಆತಿಶಿ ಅವರ ಮೇಲಿದೆ. ಸಿಸೋಡಿಯಾ ಬಂಧನದ ನಂತರ ಅವರ ಬಳಿಯಲ್ಲಿದ್ದ ಎಲ್ಲ ಖಾತೆಗಳನ್ನು ನಿಭಾಯಿಸಿ ತಮ್ಮ ಸಾಮರ್ಥ್ಯ ವನ್ನು ಆತಿಶಿ ಸಾಬೀತು ಮಾಡಿದ್ದಾರೆ. ಈಗ ಅವರ ಮೇಲೆ ಇನ್ನೂ ಹೆಚ್ಚಿನ ಹೊಣೆಗಾರಿಕೆ ಇದೆ. ಹಿರಿಯ ನಾಯಕರೂ ಸೇರಿದಂತೆ ಪಕ್ಷದಿಂದ ಅವರು ಹೆಚ್ಚಿನ ರಾಜಕೀಯ ಬೆಂಬಲವನ್ನು ನಿರೀಕ್ಷಿಸಬಹುದು ಮತ್ತು ಅವರಿಗೆ ಅದರ ಅಗತ್ಯವೂ ಇದೆ. ಆತಿಶಿ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆಯೇ ವಿನಾ ಅವರು ಆಯ್ಕೆಯಾಗಿ ಬಂದವರಲ್ಲ ಎಂಬುದನ್ನೂ ಗಮನಿಸಬೇಕು. ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಇದೇ ಪರಿಪಾಟವನ್ನು ಅನುಸರಿಸಲಾಗುತ್ತಿದೆ. ಪಕ್ಷ
ಅಥವಾ ಸರ್ಕಾರದ ನಾಯಕತ್ವದ ಸ್ಥಾನಗಳಿಗೆ ಬಹಿರಂಗ ಸ್ಪರ್ಧೆ ಏರ್ಪಡುವುದನ್ನು ಯಾವ ಪ‍ಕ್ಷವೂ ಬಯಸುವುದಿಲ್ಲ. 

‘ಜನತಾ ನ್ಯಾಯಾಲಯ’ವು ಚುನಾವಣೆಯಲ್ಲಿ ತಾವು ಪ್ರಾಮಾಣಿಕ ಎಂದು ತೀರ್ಪು ನೀಡುವವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಚುನಾವಣೆಯನ್ನು ನವೆಂಬರ್‌
ನಲ್ಲಿಯೇ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಚುನಾವಣೆಯಲ್ಲಿ ಎಎಪಿ ಗೆದ್ದರೆ ತಾವು ಮತ್ತೆ ಮುಖ್ಯಮಂತ್ರಿ ಆಗುವುದಾಗಿ ಕೇಜ್ರಿವಾಲ್‌ ಹೇಳಿದ್ದಾರೆ. ಹಾಗಾಗಿ, ಕೆಲವೇ ತಿಂಗಳ ಅವಧಿಗೆ ಮಾತ್ರ ಆತಿಶಿ ಮುಖ್ಯಮಂತ್ರಿ ಹುದ್ದೆಯಲ್ಲಿ ಇರಲಿದ್ದಾರೆ. ಈಗ ಅವರು ಪಕ್ಷದ ರಾಜಕೀಯ ಮತ್ತು ಚುನಾವಣಾ ಕಾರ್ಯತಂತ್ರಕ್ಕೆ ಸರ್ಕಾರದ ಕಡೆಯಿಂದ ಬಲವಾದ ಬೆಂಬಲ ಒದಗಿಸಬೇಕಾಗಿದೆ. ಅಬಕಾರಿ ನೀತಿ ಹಗರಣದಿಂದಾಗಿ ದೆಹಲಿ ಸರ್ಕಾರ ಮತ್ತು ಎಎಪಿ ಕಳೆದುಕೊಂಡ ಹೊಳಪನ್ನು ಮರಳಿ ಸಂಪಾದಿಸ
ಬೇಕಾಗಿದೆ. ಆಗಿರುವ ಕಲೆಗಳನ್ನು ತೊಳೆಯಬೇಕಿದೆ. ಈ ವರ್ಷ ಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಸರ್ಕಾರ ನಿರ್ವಹಿಸಿದ ರೀತಿಯ ಕುರಿತೂ ಟೀಕೆಗಳು ಕೇಳಿಬಂದಿವೆ. ಆಡಳಿತಕ್ಕೆ ಸಂಬಂಧಿಸಿ ಇತರ ಸಮಸ್ಯೆಗಳೂ ಇವೆ. ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಎಎಪಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ, ಆತಿಶಿ ಅವರು ಮುಂದಿನ ಕೆಲವು ತಿಂಗಳಲ್ಲಿ ಕಠಿಣ ಸವಾಲನ್ನೇ ಎದುರಿಸಬೇಕಿದೆ. ಆಡಳಿತವನ್ನು ಬಿಗಿಗೊಳಿಸಬೇಕಿದೆ. ಭಾರಿ ಶ್ರಮವಹಿಸಿ ಕೆಲಸ ಮಾಡಬೇಕಿದೆ. ಹೊಸ ಗ್ರಹಿಕೆಗಳನ್ನು ರೂಪಿಸಬೇಕಿದೆ ಮತ್ತು ಸಂಕಥನಗಳನ್ನು ಕಟ್ಟಬೇಕಿದೆ. ಆದರೆ, ಈ ಎಲ್ಲವುಗಳಿಗೆ ಇರುವ ಸಮಯ ಮಾತ್ರ ಬಹಳ ಕಡಿಮೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT