ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬಿಜೆಪಿ ಪ್ರಾಬಲ್ಯ ಮುಂದುವರಿಕೆ: ಎಎಪಿ ಜಿಗಿತ, ಕಾಂಗ್ರೆಸ್ ಕುಸಿತ

Last Updated 10 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶವು ಸ್ಪಷ್ಟ ಸಂದೇಶವೊಂದನ್ನು ರವಾನಿಸಿದೆ. ಬಿಜೆಪಿಯ ಪ್ರಭಾವವು ಮಾಸಿಲ್ಲ, ಕಾಂಗ್ರೆಸ್ಸಿನ ಪ್ರಭಾವವು ತೀರಾ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ.

ಚುನಾವಣೆ ನಡೆದ ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶದ ಎಲ್ಲೆಡೆಯೂ ಈ ಸ್ಥಿತಿ ಇದೆ ಎಂಬುದು ಆ ಸಂದೇಶ. ದೇಶದ ರಾಜಕೀಯದಲ್ಲಿ ಬಹಳ ಮಹತ್ವದ್ದಾಗಿರುವ ಉತ್ತರಪ್ರದೇಶದಲ್ಲಿ ದೊಡ್ಡ ಬಹುಮತ ದೊಂದಿಗೆ ಬಿಜೆಪಿ ಅಧಿಕಾರಕ್ಕೆ ಮರಳಲಿದೆ.

ಅಭಿವೃದ್ಧಿ ಮತ್ತು ಕಾನೂನು–ಸುವ್ಯವಸ್ಥೆಯ ಹೆಸರಿನಲ್ಲಿ ಬಿಜೆಪಿ ಅಲ್ಲಿ ಚುನಾವಣೆ ಎದುರಿಸಿತ್ತು. 1985ರ ನಂತರದಲ್ಲಿ ಉತ್ತರಪ್ರದೇಶದಲ್ಲಿ ಪಕ್ಷವೊಂದು ಸತತ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರುತ್ತಿರುವುದು ಇದೇ ಮೊದಲು. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಜಾತಿವಾದಿ, ಸರ್ವಾಧಿಕಾರಿ ಪ್ರವೃತ್ತಿಯದ್ದು ಎಂಬ ಟೀಕೆ ವ್ಯಾಪಕವಾಗಿತ್ತು.

ಆದರೆ, ಈ ಟೀಕೆಯು ಜನರ ಮೇಲೆ ದೊಡ್ಡ ಪ್ರಭಾವ ಬೀರಿದಂತಿಲ್ಲ. ‍ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಜನರ ಮೇಲೆ ದೊಡ್ಡ ಮಟ್ಟದ ಪ್ರಭಾವ ಹೊಂದಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಕೆಲವೊಮ್ಮೆ ಬಹಿರಂಗವಾಗಿ, ಕೆಲವೊಮ್ಮೆ ಗುಪ್ತವಾಗಿ ನಡೆಸಿದ ಧಾರ್ಮಿಕ ಧ್ರುವೀಕರಣವು ಪಕ್ಷದ ಪರವಾಗಿ ಕೆಲಸ ಮಾಡಿದೆ. ಇದರ ಜೊತೆಯಲ್ಲಿಯೇ, ಪಕ್ಷವು ಕಟ್ಟಿದ ಅಭಿವೃದ್ಧಿಯ ಸಂಕಥನ ಕೂಡ ಕೆಲಸ ಮಾಡಿದೆ.

ಕೋಮುವಾದಿ ರಾಜಕಾರಣ ಹಾಗೂ ಅಭಿವೃದ್ಧಿ ನೀತಿಗಳು ಬಿಜೆಪಿಯ ಪರವಾಗಿ ಕೆಲಸ ಮಾಡಿ ದಂತೆ ಕಾಣಿಸುತ್ತಿದೆ. ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಕಾರಿಡಾರ್‌ ಅಭಿವೃದ್ಧಿಯಂತಹ ಕೆಲಸಗಳು ಪಕ್ಷಕ್ಕೆ ಒಳ್ಳೆಯ ಫಸಲು ತಂದುಕೊಟ್ಟಿವೆ.

ರೈತರ ಪ್ರತಿಭಟನೆ, ಕೆಲವು ಹಿಂದುಳಿದ ವರ್ಗಗಳು ಬಿಜೆಪಿಯಿಂದ ದೂರವಾಗುತ್ತಿವೆ ಎಂಬ ವರದಿಗಳು ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪರಿಣಾಮವನ್ನೇನೂ ಬೀರಿದಂತಿಲ್ಲ. ಬಿಜೆಪಿಯು ಯಾದವೇತರ ಒಬಿಸಿ ಮತಗಳಲ್ಲಿ ಒಂದಿಷ್ಟನ್ನು ಕಳೆದು ಕೊಂಡಿದೆ ಎಂದಾದಲ್ಲಿ, ಜಾಟವ ಸಮುದಾಯದ ಒಂದಿಷ್ಟು ಮತಗಳನ್ನು ಗಳಿಸಿ ಕೊಂಡಿರುವಂತೆ ಕಾಣುತ್ತಿದೆ. ಈ ಸಮುದಾಯವು ಇದುವರೆಗೆ ಬಿಎಸ್‌ಪಿಯ ಮತಬ್ಯಾಂಕ್ ಆಗಿತ್ತು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಬಿಜೆಪಿ ನೀಡಿದ ಭರವಸೆಯು ಜನರಿಗೆ ಹೆಚ್ಚು ಇಷ್ಟವಾಗಿರ ಬಹುದು. ಉತ್ತರಪ್ರದೇಶದಲ್ಲಿ ಬಿಎಸ್‌ಪಿ ನೆಲೆ ಕುಸಿದಿರುವುದು ಈ ಬಾರಿಯ ಫಲಿತಾಂಶದ ಒಂದು ಮುಖ್ಯ ಅಂಶ. ಬಿಎಸ್‌ಪಿಯ ಮತಗಳು ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಡುವೆ ಹಂಚಿಹೋಗಿರಬಹುದು. ಉತ್ತರ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಕೂಡ ಇತ್ತು ಎಂಬುದನ್ನು ಫಲಿತಾಂಶ ತೋರಿಸುತ್ತಿದೆ.

ಪಕ್ಷವು ಹಿಂದಿನ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ. ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷವು ದೊಡ್ಡ ಮುನ್ನಡೆ ಪಡೆದಿದೆ. ಈ ಬಾರಿಯ ಫಲಿತಾಂಶದೊಂದಿಗೆ ಉತ್ತರಪ್ರದೇಶವು ಪಶ್ಚಿಮ ಬಂಗಾಳದ ರೀತಿಯಲ್ಲಿಯೇ ಎರಡು ಪ್ರಧಾನ ಪಕ್ಷಗಳ ಚುನಾವಣಾ ಕಣವಾಗಿ ಮಾರ್ಪಾಟು ಹೊಂದಿದೆ.

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸಾಧಿಸಿರುವ ಗೆಲುವು, ಕಾಂಗ್ರೆಸ್ ಕಂಡಿರುವ ಸೋಲು ಒಂದಕ್ಕೊಂದು ಪೂರಕವಾಗುವಂತೆ ಇವೆ. ಕಾಂಗ್ರೆಸ್‌ನ ಕುಸಿತದಿಂದ ಸೃಷ್ಟಿಯಾದ ಶೂನ್ಯವನ್ನು ತುಂಬುವ ಕೆಲಸವನ್ನು ಎಎಪಿ ಮಾಡುತ್ತಿರುವಂತಿದೆ. ಪಂಜಾಬ್‌ನಲ್ಲಿನ ಗೆಲುವಿನ ಮೂಲಕ ಇದೇ ಮೊದಲ ಬಾರಿಗೆ ದೆಹಲಿಯಿಂದ ಆಚೆಗೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಇತರ ಎಲ್ಲ ರಾಜಕೀಯ ಪಕ್ಷಗಳನ್ನು ಗುಡಿಸಿ ಹಾಕಿದೆ ಎಎಪಿ. ‘ದೆಹಲಿ ಮಾದರಿ ಆಡಳಿತ’, ವಿಶ್ವಾಸಾರ್ಹ ನಾಯಕತ್ವ, ಇತರ ಪಕ್ಷಗಳ ಬಗ್ಗೆ ಅಲ್ಲಿನ ಜನರಲ್ಲಿ ಉಂಟಾಗಿದ್ದ ಅಸಮಾಧಾನವು ಎಎಪಿ ಗೆಲುವಿಗೆ ನೆರವಾಗಿವೆ.

ಪಂಜಾಬ್‌ನಲ್ಲಿ ಕಾಂಗ್ರೆಸ್ ಕಂಡಿರುವುದು ಸೋಲನ್ನು ಮಾತ್ರವೇ ಅಲ್ಲ, ಅಲ್ಲಿ ಪಕ್ಷದ ಬೇರುಗಳು ಕೂಡ ದುರ್ಬಲಗೊಂಡಿವೆ ಎಂದು ಅನಿಸುತ್ತಿದೆ. ಚುನಾವಣೆ ಹತ್ತಿರವಾದಾಗ ಕಾಂಗ್ರೆಸ್ ಪಕ್ಷವು ತನ್ನ ಮುಖ್ಯಮಂತ್ರಿಯನ್ನು ಆ ಸ್ಥಾನದಿಂದ ಇಳಿಸಿತು. ಆದರೆ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಸ್ಪಷ್ಟತೆ ಪಕ್ಷಕ್ಕೆ ಇರಲಿಲ್ಲ. ಪಂಜಾಬ್‌ನಲ್ಲಿನ ಪಕ್ಷದ ಸೋಲು ಆ ರಾಜ್ಯದ ಕಾಂಗ್ರೆಸ್ ಘಟಕದ ಸೋಲಷ್ಟೇ ಅಲ್ಲ. ಅದು ಪಕ್ಷದ ರಾಷ್ಟ್ರೀಯ ನಾಯಕತ್ವದ ತಂತ್ರಗಾರಿಕೆಯ ಸೋಲು ಕೂಡ ಹೌದು. ಉತ್ತರಾಖಂಡದಲ್ಲಿ ಪಕ್ಷ ಕಂಡಿರುವ ಸೋಲು ಸಹ ಇದನ್ನೇ ಹೇಳುತ್ತಿದೆ. ಅಲ್ಲಿ ತನ್ನ ಪರವಾಗಿ ಹಲವು ಅಂಶಗಳು ಕೆಲಸ ಮಾಡುತ್ತಿದ್ದರೂ, ಅವುಗಳನ್ನು ಗೆಲುವಾಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಉತ್ತರಾಖಂಡದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆಡಳಿತದ ವಿಚಾರದಲ್ಲಿ ಅಂಥ ಹೆಸರೇನೂ ಇರಲಿಲ್ಲ. ಬಿಜೆಪಿಯಲ್ಲಿ ಬಣಗಳು ಹುಟ್ಟಿಕೊಂಡಿದ್ದವು. ಕೊನೆಯ ಒಂದು ವರ್ಷದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯನ್ನು ಸರ್ಕಾರ ಕಂಡಿತ್ತು. ಹೀಗಿದ್ದರೂ ಅಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.

ಸಣ್ಣ ರಾಜ್ಯಗಳಾದ ಮಣಿಪುರ ಮತ್ತು ಗೋವಾದಲ್ಲಿ ಕೂಡ ಇದೇ ರೀತಿ ಆಗಿದೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಗಟ್ಟಿ ನೆಲೆ ಹೊಂದಿತ್ತು. ಆದರೆ, ಈಗ ಅದು ಗೋವಾದಲ್ಲಿ ಎರಡನೆಯ ಸ್ಥಾನಕ್ಕೆ, ಮಣಿಪುರದಲ್ಲಿ ನಾಲ್ಕನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಮಣಿಪುರದಲ್ಲಿ ಬಿಜೆಪಿಯು ಬಹುಮತ ಪಡೆದಿದೆ. ಗೋವಾದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಚುನಾವಣೆ ನಡೆದ ಒಟ್ಟು ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯ ಕಂಡಿದೆ.

ಅಂದರೆ, ಎಲ್ಲ ರಾಜ್ಯಗಳಲ್ಲಿಯೂ ತನ್ನ ಅಧಿಕಾರ ಉಳಿಸಿಕೊಂಡಿದೆ. ಐದು ರಾಜ್ಯಗಳ ಪೈಕಿ ಅಧಿಕಾರ ಹೊಂದಿದ್ದ ಒಂದೇ ರಾಜ್ಯವನ್ನು ಕೂಡ ಕಾಂಗ್ರೆಸ್ ಕಳೆದುಕೊಂಡಿದೆ. ಇತರ ಕೆಲವೆಡೆ ಅಧಿಕಾರಕ್ಕೆ ಬರಬಹುದಾಗಿದ್ದ ಅವಕಾಶವನ್ನು ಹಾಳು ಮಾಡಿಕೊಂಡಿದೆ. ಈಗ ಅನುಭವಿಸಿರುವ ಸೋಲಿನಿಂದ ಚೇತರಿಸಿಕೊಳ್ಳುವುದು ಕಾಂಗ್ರೆಸ್ಸಿಗೆ ಸುಲಭದ ಕೆಲಸ ಆಗಿರುವುದಿಲ್ಲ. ಪಕ್ಷವು ಸಂಪೂರ್ಣವಾಗಿ ಹೊಸಹುಟ್ಟು ಪಡೆಯಬೇಕಿದೆ.ಈ ಚುನಾವಣೆಯು ಲೋಕಸಭಾ ಚುನಾವಣೆಯ ಪೂರ್ವಸಿದ್ಧತಾ ಪರೀಕ್ಷೆ ಇದ್ದಂತೆ ಎಂದು ಬಣ್ಣಿಸಲಾಗಿತ್ತು. ಈ ಫಲಿತಾಂಶವು ಬಿಜೆಪಿಗೆ ಲೋಕಸಭಾ ಚುನಾವಣೆ ಎದುರಿಸಲು ಹೊಸ ಹುರುಪು ನೀಡಬಹುದು. ಆದರೆ, ಕಾಂಗ್ರೆಸ್ಸಿನ ಭವಿಷ್ಯದ ಬಗ್ಗೆ, ಎಎಪಿಯು ವಹಿಸಬಹುದಾದ ಪಾತ್ರದ ಬಗ್ಗೆ, ಆ ಪಕ್ಷದ ಮುಂದಿನ ಆಲೋಚನೆಗಳ ಬಗ್ಗೆ, ಬಿಜೆಪಿಯೇತರ ಪಕ್ಷಗಳು ಒಟ್ಟಾಗುವ ಯೋಜನೆಗಳ ಬಗ್ಗೆ ಪ್ರಶ್ನೆಗಳನ್ನು ಇದು ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT