ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್: ವಾಸ್ತವಕ್ಕೆ ಹತ್ತಿರ ಅಭಿವೃದ್ಧಿ ಆಶಯಗಳಿಗೆ ಬಲು ದೂರ

Last Updated 31 ಮಾರ್ಚ್ 2021, 21:46 IST
ಅಕ್ಷರ ಗಾತ್ರ

ಚುನಾಯಿತ ಕೌನ್ಸಿಲ್‌ ಅಸ್ತಿತ್ವದಲ್ಲಿಲ್ಲದ ಸಂದರ್ಭದಲ್ಲಿ ಆಡಳಿತಾಧಿಕಾರಿಯ ಉಸ್ತುವಾರಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2021–22ನೇ ಸಾಲಿನ ಬಜೆಟ್‌ನ ಮಂಡನೆ ಆಗಿದೆ. ವಾಸ್ತವಿಕ ಲೆಕ್ಕಾಚಾರಗಳಿಗೆ ಈ ಬಾರಿ ಒತ್ತು ನೀಡಲಾಗಿದ್ದು, 2020–21ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಬಜೆಟ್‌ ಗಾತ್ರ ₹ 2,400 ಕೋಟಿಯಷ್ಟು ಕಡಿಮೆಯಾಗಿದೆ. ಆರ್ಥಿಕ ನಿರ್ವಹಣೆಯ ಹೊಣೆಯನ್ನು ವಾರ್ಡ್ ಮತ್ತು ವಲಯ ಮಟ್ಟಕ್ಕೆ ವಿಕೇಂದ್ರೀಕರಿಸುವ, ಅನವಶ್ಯಕ ವೆಚ್ಚವನ್ನು ನಿಯಂತ್ರಿಸುವ ಹಾಗೂ ಸಾರ್ವಜನಿಕ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ಅಂಶಗಳಿಗೆ ಒತ್ತು ನೀಡಲಾಗಿದೆ ಎನ್ನುವುದು ಬಿಬಿಎಂಪಿ ಪ್ರತಿಪಾದನೆ. ಈ ಪ್ರತಿಪಾದನೆಗೆ ಪೂರಕವಾದ ಕೆಲವು ಅಂಶಗಳು ಬಜೆಟ್‌ನಲ್ಲಿ ಕಾಣುತ್ತಿವೆ. ಹೊಸ ಯೋಜನೆಗಳ ಘೋಷಣೆಗಿಂತ, ಘೋಷಿಸಿದ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿರುವುದು ಒಳ್ಳೆಯ ನಿರ್ಧಾರ. ಪಾದಚಾರಿ ಮಾರ್ಗಗಳು, ಉದ್ಯಾನಗಳು ಮತ್ತು ಶೌಚಾಲಯಗಳ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಕಾರ್ಯಗಳಿಗೆ ಅನುದಾನ ಹೆಚ್ಚಿಸಿರುವುದು ಕೂಡ ಸ್ವಾಗತಾರ್ಹ ಹೆಜ್ಜೆ. ಕೋವಿಡ್‌ನಂತಹ ಸಾಂಕ್ರಾಮಿಕದ ನಿಯಂತ್ರಣಕ್ಕೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿತ್ತು. ಆರೋಗ್ಯ ಸೇವೆ ಸುಧಾರಣೆಗಾಗಿ ಹೆಚ್ಚಿನ ಅನುದಾನ ಒದಗಿಸಿರುವುದೂ ಸಮಂಜಸ ನಿರ್ಧಾರವೇ.ಆದರೆ, 1.20 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅವಲೋಕಿಸಿದಾಗ ಈ ಬಜೆಟ್‌ನಲ್ಲಿಅನೇಕ ಕೊರತೆಗಳು ಕಾಣುತ್ತವೆ.

ಘನತ್ಯಾಜ್ಯ ನಿರ್ವಹಣೆಗೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಬಿಬಿಎಂಪಿ ವಿನಿಯೋಗಿಸಿದೆ. ಖರ್ಚು ಮಾಡಿದ್ದಕ್ಕೆ ತಕ್ಕಂತೆ ತ್ಯಾಜ್ಯ ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ಈ ಸಲ ಬಜೆಟ್‌ ಮೊತ್ತದಲ್ಲಿ ಶೇ 17ರಷ್ಟನ್ನು ಕಸ ನಿರ್ವಹಣೆಗೇ ಎತ್ತಿಡುವ ಪ್ರಸಂಗ ಬರುತ್ತಿರಲಿಲ್ಲವೇನೋ. ಈ ಬಾಬತ್ತಿನ ಪಾಲು ಹೆಚ್ಚುವುದೆಂದರೆ ಅಭಿವೃದ್ಧಿ ಚಟುವಟಿಕೆಗಳಿಗೆ ಬಿದ್ದ ಏಟು ಎಂತಲೇ ಲೆಕ್ಕ. ಈಗ ಆಗಿದ್ದು ಕೂಡ ಅದೇ. ಬೆಂಗಳೂರು ನಗರದಲ್ಲಿ ಈ ಹಿಂದೆ ಕೈಗೊಂಡ ಹಾಗೂ ಸದ್ಯ ಅನುಷ್ಠಾನದ ಹಂತದಲ್ಲಿರುವ ಕಾಮಗಾರಿಗಳ ಬಿಲ್‌ ಮೊತ್ತ ₹ 10 ಸಾವಿರ ಕೋಟಿ. ಅಂದರೆ, ಬಜೆಟ್‌ ಗಾತ್ರಕ್ಕೂ ಮಿಗಿಲು! ಹಣಕಾಸಿನ ವಿಷಯವಾಗಿ ಬಿಬಿಎಂಪಿ ಇದುವರೆಗೆ ಹೊಣೆಗೇಡಿತನದಿಂದ ವರ್ತಿಸಿದುದರ ದ್ಯೋತಕ ಇದು. ವರಮಾನ ನಿರೀಕ್ಷೆಯ ಲೆಕ್ಕಾಚಾರವನ್ನು ಉತ್ಪ್ರೇಕ್ಷೆಯಿಂದ ಮಾಡುವುದು, ವರ್ಷ ವರ್ಷವೂ ಕಾಮಗಾರಿ ಬಿಲ್‌ಗಳ ಬಾಕಿ ಉಳಿಸುತ್ತಾ ಹೋಗುವುದು ಅದು ಬೆಳೆಸಿಕೊಂಡು ಬಂದಿರುವ ಚಾಳಿ. ಬಾಕಿ ಹೊರೆಯೇ ಬೆಟ್ಟದಷ್ಟಿದ್ದಾಗ ಹೊಸ ಮೂಲಸೌಕರ್ಯ ಕಾಮಗಾರಿಗಳಿಗೆ ಎಲ್ಲಿಂದ ಸಿಗಲಿದೆ ಅನುದಾನ? ಹೀಗಿದ್ದೂ ವಾರ್ಡ್‌ ಒಂದರಲ್ಲಿ ಪ್ರತಿಮೆಗಳಿಗೆ ಪಾಲಿಷ್‌ ಮಾಡುವುದಕ್ಕೆ ₹ 20 ಲಕ್ಷ ಹಣ ಕಾಯ್ದಿರಿಸಲಾಗಿದೆ. ಆರ್ಥಿಕ ಸಂಕಷ್ಟದ ವೇಳೆ ಇಂತಹ ಉದ್ದೇಶಗಳಿಗೆ ಇಷ್ಟೊಂದು ಮೊತ್ತವನ್ನು ವೆಚ್ಚ ಮಾಡಬೇಕೇ? ಬಿಬಿಎಂಪಿ ಸರಹದ್ದನ್ನು ವಿಸ್ತರಿಸುವುದಾಗಿ ಸರ್ಕಾರ ಪ್ರಕಟಿಸಿದ್ದರೂ ಹೊಸತಾಗಿ ಅಸ್ತಿತ್ವಕ್ಕೆ ಬರಲಿರುವ ವಾರ್ಡ್‌ಗಳ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಳ್ಳುವ ಉತ್ಸಾಹವನ್ನು ಬಿಬಿಎಂಪಿ ತೋರಿಲ್ಲ. ಆರ್ಥಿಕ ದುರ್ಬಲರಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದ ‘ಒಂಟಿಮನೆ’ ಕಾರ್ಯಕ್ರಮದ ಬಾಕಿ ಮೊತ್ತ ₹ 900 ಕೋಟಿಯಷ್ಟು ಇರುವುದನ್ನೇ ಮುಂದೆ ಮಾಡಿಕೊಂಡು ಈಗ ಆ ಕಾರ್ಯಕ್ರಮವನ್ನೇ ಸ್ಥಗಿತಗೊಳಿಸಿರುವುದು ಸರಿಯಲ್ಲ. ‘ಬಿ ಖಾತಾ’ ನಿರ್ವಹಣೆಯನ್ನು ಸ್ಥಗಿತಗೊಳಿಸುವ ಬಗ್ಗೆ ಮತ್ತೆ ಬಜೆಟ್‌ನಲ್ಲಿ ಪುನರುಚ್ಚರಿಸಲಾಗಿದೆ. ಹಿಂದಿನ ಬಜೆಟ್‌ಗಳಲ್ಲೂ ವರ್ಷದ ವಿಧಿಯಂತೆ ಈ ಕುರಿತು ಉಲ್ಲೇಖಿಸಲಾಗಿತ್ತಾದರೂ ಕಾಗದದ ಘೋಷಣೆಯಾಗಿ ಉಳಿಯುತ್ತಿದೆ. ಕಾನೂನು ಬಿಕ್ಕಟ್ಟುಗಳಿಗೆ ಆಸ್ಪದ ಇಲ್ಲದಂತೆ ‘ಬಿ ಖಾತಾ’ ಗೊಂದಲಗಳನ್ನು ಬಗೆಹರಿಸಲು ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕಿದೆ. ತಾನು ಘೋಷಿಸಿರುವಂತೆ ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಅಭಿವೃದ್ಧಿ ಕೆಲಸಗಳು ಕಡೆಗಣನೆಗೆ ಒಳಗಾಗದಂತೆ ನೋಡಿಕೊಳ್ಳುವ ಹೊಣೆ ಬಿಬಿಎಂಪಿ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT