ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ರಾಹುಲ್‌ಗೆ ಆಯೋಗದ ನೋಟಿಸ್‌: ಸಮತೋಲನಕ್ಕಿಂತ ವಸ್ತುನಿಷ್ಠ ನಿಲುವು ಅಗತ್ಯ

Published 28 ಏಪ್ರಿಲ್ 2024, 23:02 IST
Last Updated 28 ಏಪ್ರಿಲ್ 2024, 23:02 IST
ಅಕ್ಷರ ಗಾತ್ರ

ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಚುನಾವಣಾ ಆಯೋಗವು ಕೊನೆಗೂ ನೋಟಿಸ್‌ ಜಾರಿ ಮಾಡಿದೆ. ಆದರೆ, ನೋಟಿಸ್ ಕೊಟ್ಟ ರೀತಿಯು ‘ಕೊಂಕಣ ಸುತ್ತಿ ಮೈಲಾರಕ್ಕೆ’ ಎಂಬ ನಾಣ್ನುಡಿಗೆ ಅನುಗುಣವಾಗಿಯೇ ಇದೆ. ಆಯೋಗವು ಮೋದಿ ಅವರಿಗೆ ನೇರವಾಗಿ ನೋಟಿಸ್‌ ಕೊಟ್ಟಿಲ್ಲ; ಬದಲಿಗೆ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನೋಟಿಸ್‌ ನೀಡಿದೆ. ಈ ಬಳಸು ಮಾರ್ಗದ ಪ್ರಕ್ರಿಯೆಯನ್ನು ಅನುಸರಿಸಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಹಾಗೆಯೇ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಚುನಾವಣಾ ಆಯೋಗವು ಇದೇ ರೀತಿಯ ನೋಟಿಸ್‌ ಕೊಟ್ಟಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ದಾಖಲಾದ ದೂರುಗಳಿಗೆ ಸಂಬಂಧಿಸಿ ಈ ನೋಟಿಸ್‌ ನೀಡಲಾಗಿದೆ. ಎರಡೂ ಪಕ್ಷಗಳ ಮುಖ್ಯಸ್ಥರು ಸೋಮವಾರದ ಒಳಗೆ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಲಾಗಿದೆ. ಕಾಂಗ್ರೆಸ್‌ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ಕಿತ್ತುಕೊಂಡು ಅದನ್ನು ‘ಹೆಚ್ಚು ಮಕ್ಕಳನ್ನು ಹೊಂದಿರುವ’ ಮುಸ್ಲಿಮರಿಗೆ ಹಂಚುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ ಎಂದು ಮೋದಿ ಅವರು ಭಾಷಣದಲ್ಲಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ; ಇದರ ವಿರುದ್ಧ ಕಾಂಗ್ರೆಸ್‌ ನೀಡಿದ ದೂರಿನ ಆಧಾರದಲ್ಲಿ ನಡ್ಡಾ ಅವರಿಗೆ ನೋಟಿಸ್‌ ನೀಡಲಾಗಿದೆ. ‘ಒಂದು ದೇಶ, ಒಂದು ಭಾಷೆ ಮತ್ತು ಒಂದು ಧರ್ಮ’ ಎಂದು ಮೋದಿ ಅವರು ಪ್ರತಿಪಾದಿಸುತ್ತಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಖರ್ಗೆ ಮತ್ತು ರಾಹುಲ್‌ ಹೇಳಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಕೆಯಾಗಿದೆ. ಈ ದೂರಿನ ಆಧಾರದಲ್ಲಿ ಖರ್ಗೆ ಮತ್ತು ರಾಹುಲ್‌ ಅವರಿಗೆ ನೋಟಿಸ್‌ ನೀಡಲಾಗಿದೆ. 

ಯಾವ ವ್ಯಕ್ತಿಗಳ ಮೇಲೆ ದೂರು ದಾಖಲಾಗಿದೆಯೋ ಅಂತಹ ವ್ಯಕ್ತಿಗಳಿಗೆ ನೋಟಿಸ್‌ ನೀಡುವುದಕ್ಕೆ ಚುನಾವಣಾ ಆಯೋಗವು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವೇನು ಎಂಬುದು ತಿಳಿದಿಲ್ಲ. ಆಯೋಗವು ಇದೇ ಮೊದಲ ಬಾರಿಗೆ ಈ ರೀತಿಯ ಪ್ರಕ್ರಿಯೆ ಅನುಸರಿಸಿದೆ. ಆದರೆ, ಆಯೋಗದ ಈ ರೀತಿಯ ನಡವಳಿಕೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ನೇರವಾಗಿ ಮೋದಿ ಅವರಿಗೆ ನೋಟಿಸ್‌ ಕೊಡುವುದಕ್ಕೆ ಆಯೋಗಕ್ಕೆ ಭೀತಿ ಇದೆ ಅಥವಾ ಈ ವಿಚಾರದಲ್ಲಿ ಆಯೋಗವು ‘ಅತಿ ಜಾಗರೂಕತೆ’ ವಹಿಸಿದೆ ಎಂದು ಟೀಕಾಕಾರರು ಹೇಳಿದ್ದಾರೆ. ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೇತ್‌, ಬಿಜೆಪಿಯ ದಿಲೀಪ್‌ ಘೋಷ್‌ ಸೇರಿದಂತೆ ಹಲವರಿಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ನೋಟಿಸನ್ನು ಈ ಹಿಂದೆ ನೀಡಲಾಗಿದೆ. ತಾವು ಆಡುವ ಮಾತುಗಳಿಗೆ ಪಕ್ಷಗಳ ತಾರಾ ಪ್ರಚಾರಕರೇ ಹೊಣೆಗಾರರು ಮತ್ತು ಉನ್ನತ ಸ್ಥಾನಗಳಲ್ಲಿ ಇರುವವರು ಅತಿರೇಕದ ಮಾತುಗಳನ್ನು ಆಡಿದರೆ ಇನ್ನೂ ಹೆಚ್ಚಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಹೊಣೆಗಾರಿಕೆಯು ವೈಯಕ್ತಿಕವಾಗಿ ನಾಯಕರ ಮೇಲೆಯೇ ಇರುವಾಗ ಶಿಕ್ಷೆಯನ್ನು ಕೂಡ ಅವರೇ ಅನುಭವಿಸಬೇಕಾಗುತ್ತದೆ. ಹೀಗಿರುವಾಗ, ಪಕ್ಷದ ಮುಖ್ಯಸ್ಥರನ್ನು ಇಲ್ಲಿ ಎಳೆದು ತರುವ ಅಗತ್ಯ ಏನಿತ್ತು?

ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಮುಖ್ಯಸ್ಥರಿಗೆ ಏಕಕಾಲದಲ್ಲಿ ಒಂದೇ ರೀತಿಯ ನೋಟಿಸ್‌ಗಳನ್ನು ನೀಡಿರುವ ವಿಚಾರವು ಹಲವು ಪ್ರಶ್ನೆಗಳನ್ನು ಎತ್ತಿದೆ. ಇದು ಎರಡೂ ಪಕ್ಷಗಳನ್ನು ಸಮಾನವಾಗಿ ನೋಡಲಾಗಿದೆ ಎಂಬುದರ ಸಂಕೇತ ಎಂದು ಹೇಳಬಹುದು. ಆದರೆ, ಇದು ಖಚಿತತೆ ಇಲ್ಲದ, ಅಸಮಾನವಾದ ನಡೆ ಎಂಬ ಟೀಕೆ ವ್ಯಕ್ತವಾಗಿದೆ. ಮೋದಿ ಅವರಿಗೆ ಒಂದು ನೋಟಿಸ್‌ ಕೊಡುವಾಗ ರಾಹುಲ್‌ ಗಾಂಧಿ ಅವರಿಗೂ ಒಂದು ಇರಲಿ ಎಂಬ, ಸಮತೋಲನ ಕಾಯ್ದುಕೊಳ್ಳುವ ಮನೋಭಾವವನ್ನು ಇಲ್ಲಿ ಕಾಣಬಹುದು ಎಂದೂ ಟೀಕಿಸಲಾಗಿದೆ. ಮೋದಿ ಅವರ ವಿರುದ್ಧ 2014ರ ನಂತರ ಸಲ್ಲಿಕೆಯಾದ ಯಾವುದೇ ದೂರಿಗೆ ಸಂಬಂಧಿಸಿ ಆಯೋಗವು ಕ್ರಮ ಕೈಗೊಂಡಿದ್ದೇ ಇಲ್ಲ. 2019ರಲ್ಲಿ, ಒಂದು ಪ್ರಕರಣ
ದಲ್ಲಿ ಅವರನ್ನು ಆಯೋಗವು ದೋಷಮುಕ್ತಗೊಳಿಸಿತ್ತು. ಆದರೆ, ಆಗ ಆಯುಕ್ತರಾಗಿದ್ದ ಅಶೋಕ್‌ ಲವಾಸಾ ಅವರು ಆಯೋಗದ ನಿಲುವಿಗೆ ಭಿನ್ನಮತ ವ್ಯಕ್ತಪಡಿಸಿದ್ದರು ಮತ್ತು ನಂತರದಲ್ಲಿ ಅವರು ಆಯೋಗದ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಹುಲ್‌ ಗಾಂಧಿ ವಿರುದ್ಧ ಇರುವ ದೂರಿಗೆ ಹೋಲಿಸಿದರೆ ಮೋದಿ ವಿರುದ್ಧ ಇರುವ ದೂರುಗಳ ಸಂಖ್ಯೆ ಹೆಚ್ಚು ಮತ್ತು ಅವು ಹೆಚ್ಚು ಗಂಭೀರವಾದ ಪ್ರಕರಣಗಳು. ಹಾಗಾಗಿಯೇ ಆಯೋಗವು ಇಬ್ಬರೂ ನಾಯಕರನ್ನು ಸಮಾನವಾಗಿ ನೋಡಿದ್ದು ಏಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇಲ್ಲಿ ಒಂದು ಅಂಶವನ್ನು ಮತ್ತೆ ಮತ್ತೆ ಹೇಳಲೇಬೇಕಾಗಿದೆ: ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿಯಾದರೂ ಇರಬಹುದು, ಕಾನೂನು, ಅದರಲ್ಲೂ ವಿಶೇಷವಾಗಿ ಚುನಾವಣಾ ಕಾನೂನು ನಿಮಗಿಂತ ಮೇಲೆಯೇ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT