ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಲಿಂಗ ವಿವಾಹಕ್ಕೆ ಮಾನ್ಯತೆ ಬೇಡಿಕೆ– ಸಮುದಾಯದ ನಿರೀಕ್ಷೆ ಹುಸಿ

Published 19 ಅಕ್ಟೋಬರ್ 2023, 20:41 IST
Last Updated 19 ಅಕ್ಟೋಬರ್ 2023, 20:41 IST
ಅಕ್ಷರ ಗಾತ್ರ

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿರುವುದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಮದುವೆಯ ಹಕ್ಕಿಗೆ ಮಾನ್ಯತೆ ನೀಡುವ ಮೂಲಕ ಪೂರ್ಣ ಪ್ರಮಾಣದ ಸಮಾನತೆಯನ್ನು ನ್ಯಾಯಾಲಯವು ನೀಡಬಹುದು ಎಂಬ ನಿರೀಕ್ಷೆ ಈ ಸಮುದಾಯಕ್ಕೆ ಇತ್ತು. ಮದುವೆಯ ಹಕ್ಕು ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಬದುಕುವ ಹಕ್ಕು, ಸಮಾನತೆಯ ಹಕ್ಕು, ಖಾಸಗಿತನದ ಹಕ್ಕು ಮತ್ತು ತಾರತಮ್ಯಕ್ಕೆ ಒಳಗಾಗದಿರುವ ಹಕ್ಕನ್ನು ನ್ಯಾಯಾಲಯವು ಈ ಹಿಂದೆ ಹಲವಾರು ಬಾರಿ ಎತ್ತಿಹಿಡಿದಿದೆ.

ಅದೇ ರೀತಿಯಲ್ಲಿಯೇ ಈ ತೀರ್ಪು ಕೂಡ ಬರಬಹುದು ಎಂಬ ಭರವಸೆ ಇರಿಸಿಕೊಳ್ಳಲಾಗಿತ್ತು. ಖಾಸಗಿತನದ ಹಕ್ಕನ್ನು ಎತ್ತಿ ಹಿಡಿದು 2017ರಲ್ಲಿ ತೀರ್ಪು ನೀಡಲಾಗಿತ್ತು. ಸಲಿಂಗ ಲೈಂಗಿಕತೆಯನ್ನು ಅಪರಾಧಮುಕ್ತಗೊಳಿಸಿ 2018ರಲ್ಲಿ ತೀರ್ಪು ನೀಡಲಾಗಿತ್ತು.

ಅದೇ ರೀತಿಯಲ್ಲಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮದುವೆಯ ಹಕ್ಕನ್ನು ನ್ಯಾಯಾಲಯವು ನೀಡಲಿದೆ ಎಂಬ ನಿರೀಕ್ಷೆ ಇತ್ತು. ನ್ಯಾಯಾಲಯವು ಈ ಹಕ್ಕನ್ನು ನೀಡುವ ವಿಚಾರದಲ್ಲಿ ಸನಿಹದವರೆಗೂ ಹೋಗಿದೆ. ಆದರೆ ನಿರ್ಣಾಯಕವಾದ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ನ್ಯಾಯಾಲಯವು ಸಂಸತ್ತಿಗೆ ನೀಡಿದೆ. ಈ ಅವಕಾಶವನ್ನು ಸಂಸತ್ತಿಗೆ ನೀಡುವುದು ಎಂದರೆ, ಚರ್ಚೆಯು ಎಲ್ಲಿ ಆರಂಭವಾಗಿದೆಯೋ ಅಲ್ಲಿಗೇ ಒಯ್ದು ನಿಲ್ಲಿಸಿದಂತೆ. 

ಐವರು ನ್ಯಾಯಮೂರ್ತಿಗಳು ಹಲವು ವಿಚಾರಗಳ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸಲಿಂಗ ಮದುವೆಗೆ ಮಾನ್ಯತೆ ಕೊಡುವುದಕ್ಕಾಗಿ ವಿಶೇಷ ವಿವಾಹ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ವಿಚಾರವನ್ನು ಎಲ್ಲರೂ ತಿರಸ್ಕರಿಸಿದ್ದಾರೆ. ನ್ಯಾಯಾಲಯವು ಕಾಯ್ದೆಯನ್ನು ರೂಪಿಸುವುದಿಲ್ಲ, ಬದಲಿಗೆ ಕಾಯ್ದೆಯನ್ನು ವ್ಯಾಖ್ಯಾನಿಸಿ, ಅದು ಯಾವ ರೀತಿಯಲ್ಲಿ ಅನ್ವಯವಾಗುತ್ತದೆ ಎಂಬುದನ್ನು ತಿಳಿಸುವ ಕೆಲಸವನ್ನಷ್ಟೇ ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹೇಳಿದ್ದಾರೆ. ವಿಶೇಷ ವಿವಾಹ ಕಾಯ್ದೆಯನ್ನು ರದ್ದುಪಡಿಸಬೇಕು ಎಂಬುದು ನ್ಯಾಯಾಲಯದ ಮುಂದೆ ಇದ್ದ ಅರ್ಜಿಗಳ ಕೋರಿಕೆ ಆಗಿರಲಿಲ್ಲ. ಈ ಕಾಯ್ದೆಯನ್ನು ರದ್ದು ಮಾಡಿದರೆ, ಅನಪೇಕ್ಷಿತ ಪರಿಣಾಮಗಳು ಉಂಟಾಗಬಹುದು ಎಂದು ನ್ಯಾಯಾಲಯವು ಹೇಳಿದ್ದು ಸರಿಯಾಗಿಯೇ ಇದೆ.

ಆದರೆ, ಈ ಕಾಯ್ದೆಯನ್ನು ಮರುವ್ಯಾಖ್ಯಾನಗೊಳಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿತ್ತು. ಹಾಗೆ ಮಾಡಿದ್ದರೆ, ಆ ಕಾಯ್ದೆಯ ಅನ್ವಯ ಹೇಗೆ ಎಂಬುದು ಸ್ಪಷ್ಟವಾಗುತ್ತಿತ್ತು. ಆದರೆ, ಹಾಗೆ ಮಾಡುವಲ್ಲಿ ನ್ಯಾಯಾಲಯವು ವಿಫಲವಾಗಿದೆ. ತಮ್ಮ ಸಾಂಗತ್ಯಕ್ಕೆ ಮಾನ್ಯತೆ ಪಡೆದುಕೊಳ್ಳುವ ಹಕ್ಕು ಸಲಿಂಗ ಜೋಡಿಗೆ ಇದೆ ಎಂದು ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಕಿಶನ್‌ ಕೌಲ್ ಹೇಳಿದ್ದಾರೆ.

ಆದರೆ ಇಂತಹ ಮಾನ್ಯತೆಯು ಕಾನೂನಿನ ಮೂಲಕವಷ್ಟೇ ಸಾಧ್ಯ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ರವೀಂದ್ರ ಭಟ್‌ ಮತ್ತು ಪಿ.ಎಸ್‌. ನರಸಿಂಹ ಹೇಳಿದ್ದಾರೆ. ಮದುವೆ ಎಂಬುದು ಸಾಮಾಜಿಕ ಸಂಸ್ಥೆ ಹೌದು. ಆದರೆ, ವ್ಯಕ್ತಿಗಳ ಆಯ್ಕೆಯ ಮೂಲಕ ಈ ಸಂಸ್ಥೆ ರೂಪುಗೊಳ್ಳುತ್ತದೆ. ಹಾಗಾಗಿಯೇ, ಮದುವೆಯ ಸುತ್ತ ಇರುವ ಸಾಮಾಜಿಕ ನಿಯಮಗಳು ಮತ್ತು ಕಾನೂನು ನಿರ್ಬಂಧಗಳಿಗಿಂತ ವ್ಯಕ್ತಿಗಳ ಆಯ್ಕೆಗಳಿಗೆ ಆಧಾರವಾಗಿರುವ ಅವರ ಹಕ್ಕುಗಳಿಗೆ ಮಹತ್ವ ನೀಡಬೇಕಾಗಿದೆ. 

ಸಲಿಂಗ ಮದುವೆಯ ವಿಚಾರದಲ್ಲಿ ಸರ್ಕಾರದ ನಿಲುವನ್ನು ನ್ಯಾಯಾಲಯವು ಒಪ್ಪಿದೆ. ಸರ್ಕಾರವು ಯಾವ ನಿಲುವು ಹೊಂದಿದೆ ಎಂಬುದು ಗೊತ್ತೇ ಇದೆ. ಹಾಗಾಗಿ, ಸರ್ಕಾರವು ಸಲಿಂಗ ಮದುವೆಗೆ ಯಾವುದೇ ರೂಪದಲ್ಲಾದರೂ ಮಾನ್ಯತೆ ನೀಡುವ ಸಾಧ್ಯತೆ ಇಲ್ಲ. ಸಲಿಂಗ ಜೋಡಿಗೆ ಜೊತೆಯಾಗಿ ಬದುಕುವ, ಬೆದರಿಕೆ ಮತ್ತು ಕಿರುಕುಳಮುಕ್ತವಾಗಿರುವ ಹಕ್ಕು ಇದೆ ಎಂದು ನ್ಯಾಯಾಲಯವು ಹೇಳಿದೆ. ಆದರೆ ಅವರು ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದೇ ಎಂಬ ವಿಚಾರದಲ್ಲಿ ಒಮ್ಮತ ಇಲ್ಲ. ಸಲಿಂಗ ಜೋಡಿಯ ಹಕ್ಕುಗಳು ಮತ್ತು ಸೌಲಭ್ಯಗಳ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಸರ್ಕಾರವು ಇದನ್ನು ಹೇಗೆ ತೆಗೆದುಕೊಳ್ಳಲಿದೆ ಮತ್ತು ಹೇಗೆ ಜಾರಿ ಮಾಡಲಿದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ತಮ್ಮ ಹಕ್ಕುಗಳಿಗೆ ಸ್ವೀಕೃತಿ ದೊರೆಯಲು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಸುದೀರ್ಘ ಹೋರಾಟ ನಡೆಸಬೇಕಾಗಿದೆ ಎಂಬುದನ್ನು ತೀರ್ಪು ತೋರಿಸಿಕೊಟ್ಟಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT