ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜೀವ ಹೀರುವ ವಿದ್ಯುತ್ ತಂತಿಗಳು; ಅಮಾಯಕರ ಜೀವಕ್ಕೆ ಬೆಲೆಯಿಲ್ಲವೇ?

Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್‌ ತಂತಿಗೆ ಎರಡು ಜೀವಗಳು ಬಲಿಯಾಗಿರುವ ಪ್ರಕರಣ, ಬೆಸ್ಕಾಂ ಅಧಿಕಾರಿಗಳ ಆತ್ಮಾವಲೋಕನಕ್ಕೆ ಪ್ರೇರಣೆಯಾಗಬೇಕು.

ಪಾದಚಾರಿ ಮಾರ್ಗದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿಯನ್ನು ತುಳಿದು 23 ವರ್ಷ ವಯಸ್ಸಿನ ತಾಯಿ ಹಾಗೂ ಒಂಬತ್ತು ತಿಂಗಳ ಹೆಣ್ಣುಮಗು ಸಾವಿಗೀಡಾಗಿರುವುದಕ್ಕೆ ಬೆಸ್ಕಾಂನ ನಿರ್ಲಕ್ಷ್ಯವೇ ಕಾರಣವಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ ಬಳಿಯ ಹೋಪ್‌ ಫಾರ್ಮ್‌ ಬಳಿ ಈ ದುರ್ಘಟನೆ ಸಂಭವಿಸಿದೆ. ತಮಿಳುನಾಡಿನಿಂದ ತಾಯಿಯನ್ನು ನೋಡಲು ಮಗು ಹಾಗೂ ಪತಿಯೊಂದಿಗೆ ಬಂದಿದ್ದ ದುರ್ದೈವಿ ಮಹಿಳೆ, ನೆಲದ ಮೇಲೆ ಬಿದ್ದಿದ್ದ ತಂತಿಯನ್ನು ತುಳಿದಾಗ, ವಿದ್ಯುತ್‌ ಪ್ರವಹಿಸುವಿಕೆಯಿಂದ ಬೆಂಕಿ ಹತ್ತಿಕೊಂಡಿದೆ. ಪತ್ನಿ ಹಾಗೂ ಮಗು ಕಣ್ಣೆದುರೇ ಸಾವಿಗೀಡಾಗುವುದನ್ನು ಪತಿ ಅಸಹಾಯಕತೆಯಿಂದ ನೋಡಬೇಕಾಯಿತು. ವಿದ್ಯುತ್‌ ತಂತಿ ತುಂಡರಿಸಿ ಬಿದ್ದಿದ್ದರೂ ಅದನ್ನು ಕೂಡಲೇ ಸರಿಪಡಿಸದ ಬೆಸ್ಕಾಂ, ದುರ್ಘಟನೆಯ ಹೊಣೆಯನ್ನು ಹೊರಬೇಕಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೆಸ್ಕಾಂನ ಐವರು ನೌಕರರನ್ನು ಅಮಾನತುಗೊಳಿಸಲಾಗಿದೆ ಹಾಗೂ ಅವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ದುರ್ಘಟನೆಯ ಹೊಣೆಯನ್ನು ಕೆಲವು ನೌಕರರ ಮೇಲೆ ಹೊರಿಸಿ ಕೈತೊಳೆದುಕೊಳ್ಳುವಷ್ಟಕ್ಕೇ ಬೆಸ್ಕಾಂನ ಜವಾಬ್ದಾರಿ ಕೊನೆಗೊಳ್ಳಬಾರದು. ಎರಡು ಜೀವಗಳ ಸಾವು ಬೆಸ್ಕಾಂ ಅಧಿಕಾರಿಗಳ ಆತ್ಮಾವಲೋಕನಕ್ಕೆ ಪ್ರೇರಣೆಯಾಗಬೇಕು. ಕಳೆದ ಆರು ವರ್ಷಗಳ ಅವಧಿಯಲ್ಲಿ ಬೆಸ್ಕಾಂ ಕಾರ್ಯವ್ಯಾಪ್ತಿಯ ಜಿಲ್ಲೆಗಳಲ್ಲಿ 70 ಸಾವುಗಳು ವಿದ್ಯುತ್‌ ಅವಘಡಗಳಿಂದ ಸಂಭವಿಸಿವೆ. ಹೀಗೆ ಸಾವಿಗೀಡಾದವರಲ್ಲಿ ಬೆಸ್ಕಾಂನ ನೌಕರರೂ ಸೇರಿದ್ದಾರೆ. ತನ್ನ ಉದ್ಯೋಗಿಗಳು ಹಾಗೂ ಬಳಕೆದಾರರ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಪದೇಪದೇ ಹೇಳುತ್ತಿದ್ದರೂ ವಿದ್ಯುತ್‌ ತಂತಿಗಳಿಗೆ ಅಮಾಯಕರು ಬಲಿಯಾಗುವುದೇನೂ ತಪ್ಪಿಲ್ಲ. ಶಾಲೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ವಿದ್ಯುತ್‌ ಸರಬರಾಜು ಕಂಪನಿಗಳು ಹೇಳಿಕೊಂಡಿವೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲೇ ಹೆಚ್ಚಿನ ಸಾವು
ನೋವು ಸಂಭವಿಸುತ್ತಿದೆ. ತುಂಡಾದ ವಿದ್ಯುತ್‌ ತಂತಿ, ಅಪಾಯಕರ ಮಟ್ಟದಲ್ಲಿ ಹರಿಯುವ ಮೋರಿ ಹಾಗೂ ತೆರೆದ ಮ್ಯಾನ್‌ಹೋಲ್‌ಗಳು ನಾಗರಿಕ ವ್ಯವಸ್ಥೆಯಲ್ಲಿ ಸಹಜ ಎನ್ನುವಂತಾಗಿದೆ.

ವಿದ್ಯುತ್‌ ಅಪಘಾತಗಳನ್ನು ತಪ್ಪಿಸುವ ದೃಷ್ಟಿಯಿಂದ ನೆಲದಡಿಯಲ್ಲಿ ಕೇಬಲ್‌ಗಳನ್ನು ಅಳವಡಿ
ಸುವ ಯೋಜನೆ ಶೇ 90ರಷ್ಟು ಪೂರ್ಣಗೊಂಡಿದೆ ಎಂದು ಬೆಸ್ಕಾಂ ಹೇಳಿಕೊಂಡಿದೆ. ಆದರೂ ಸಾವಿನ ನಾಲಿಗೆಗಳಂತೆ ಕಾಣಿಸುವ ತುಂಡಾದ ಕೇಬಲ್‌ಗಳು, ವಿದ್ಯುತ್ ತಂತಿಗಳು ಹಾಗೂ ದುಃಸ್ಥಿತಿಯಲ್ಲಿ
ರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಅನೇಕ ಪ್ರದೇಶಗಳಲ್ಲಿ ಕಾಣಬಹುದು. ಬೆಂಗಳೂರಿನ ಹಲವೆಡೆ ಭೂಗತ ಕೇಬಲ್‌ಗಳನ್ನು ಅಳವಡಿಸುವುದಕ್ಕೆ ಬೆಸ್ಕಾಂಗೆ ಇನ್ನೂ ಸಾಧ್ಯವಾಗಿಲ್ಲ. ವಿದ್ಯುತ್‌ ತಂತಿಗಳು ಮುರಿದುಬೀಳದಂತೆ ನಿಗಾ ವಹಿಸುವುದು ಹಾಗೂ ತುಂಡಾದಾಗ ತಕ್ಷಣ ದುರಸ್ತಿಗೊಳಿಸುವ ದಕ್ಷತೆಯನ್ನೂ ಬೆಸ್ಕಾಂ ಅಧಿಕಾರಿಗಳು ಪ್ರದರ್ಶಿಸಿಲ್ಲ. ಕಾರ್ಯನಿರ್ವಹಣೆಯಲ್ಲಿನ ಈ ಲೋಪವೇ ಬೆಂಗಳೂರಿನಲ್ಲಿ ತಾಯಿ–ಮಗುವಿನ ಜೀವವನ್ನು ಬಲಿ ತೆಗೆದುಕೊಂಡಿದೆ. ಅವಘಡಕ್ಕೆ ಕಾರಣರಾದ ಅಧಿಕಾರಿಗಳಿಗೆ ತಕ್ಕ ದಂಡನೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯುತ್‌ ತಂತಿಗಳು ಜನರ ಸಂಪರ್ಕಕ್ಕೆ ಬಾರದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದ ವಿವಿಧ ಭಾಗಗಳಲ್ಲೂ ವಿದ್ಯುತ್‌ ಸರಬರಾಜು ಕಂಪನಿಗಳ ಹೊಣೆಗೇಡಿತನದಿಂದಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಸಮಯದ ಹಿಂದಷ್ಟೇ ಹದಿನಾಲ್ಕು ವರ್ಷದ ಬಾಲಕನೊಬ್ಬ ವಿದ್ಯುತ್‌ ತಂತಿ ತುಳಿದು ಸಾವಿಗೀಡಾದ ಘಟನೆ ಬೆಳಗಾವಿಯಿಂದ ವರದಿಯಾಗಿತ್ತು. ಬೇಲೂರು ತಾಲ್ಲೂಕಿನ ಬಳ್ಳೂರಿನಲ್ಲಿ ವೃದ್ಧೆಯೊಬ್ಬರು ಹಾಗೂ ಹಸು ವಿದ್ಯುತ್‌ ತಂತಿಗೆ ಬಲಿಯಾದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಸಾವಿಗೀಡಾದ ವೃದ್ಧೆಯ ಸಂಬಂಧಿಯೊಬ್ಬರೂ ವಿದ್ಯುತ್‌ ಆಘಾತದಿಂದಲೇ ಕಳೆದ ವರ್ಷ ಸಾವಿಗೀಡಾಗಿದ್ದರು.

ಜೋತು ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಸರಿಪಡಿಸುವಂತೆ ಎಷ್ಟು ಬಾರಿ ಮನವಿ ಮಾಡಿಕೊಂಡರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಹಸು, ಎಮ್ಮೆ, ಕುರಿ, ಆಡು, ನಾಯಿಯಂತಹ ಪ್ರಾಣಿಗಳೂ ತುಂಡಾದ ವಿದ್ಯುತ್‌ ತಂತಿಗಳನ್ನು ಸ್ಪರ್ಶಿಸಿ ಜೀವ ಕಳೆದುಕೊಂಡಿರುವ ಹಲವಾರು ಘಟನೆಗಳು ನಡೆದಿವೆ. ಅಧಿಕಾರಿಶಾಹಿ ಸಂವೇದನೆ ಕಳೆದುಕೊಂಡರೆ ಜನರ ಜೀವಕ್ಕೂ ಬೆಲೆಯಿಲ್ಲ, ಜಾನುವಾರುಗಳ ಜೀವಕ್ಕೂ ಬೆಲೆಯಿಲ್ಲ. ವಿದ್ಯುತ್‌ ಆಘಾತದಿಂದ ಜನ ಜೀವ ಕಳೆದುಕೊಂಡಾಗ, ‘ಇಂಥ ಘಟನೆ ಮತ್ತೊಮ್ಮೆ ನಡೆಯುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಬೆಸ್ಕಾಂ ಹಾಗೂ ಸರ್ಕಾರ ಹೇಳುತ್ತವೆ. ಜೋರು ಮಳೆ ಸಂದರ್ಭದಲ್ಲಿ ತುಂಬಿ ಹರಿಯುವ ರಾಜಧಾನಿಯ ಮೋರಿಗಳು ಬಲಿ ಪಡೆದಾಗಲೂ ಇದೇ ರೀತಿಯ ಅನುಕಂಪ ಮತ್ತು ಕಾಳಜಿ ವ್ಯಕ್ತವಾಗುತ್ತದೆ. ಘಟನೆ ತಣ್ಣಗಾಗುತ್ತಾ ಹೋದಂತೆ ವ್ಯವಸ್ಥೆಯೂ ನಿದ್ರಿಸತೊಡಗುತ್ತದೆ. ಸರ್ಕಾರ ಹಾಗೂ ವ್ಯವಸ್ಥೆ ಮತ್ತೆ ಎಚ್ಚೆತ್ತುಕೊಳ್ಳುವುದು ಮತ್ತೊಂದು ಸಾವು ಸಂಭವಿಸಿದಾಗಲೇ. ಈ ಮರೆವಿನ ಸರಪಳಿ ಇನ್ನಾದರೂ ಕೊನೆಗೊಳ್ಳಬೇಕು. ಬೆಂಗಳೂರಿನಲ್ಲಿ ಸಂಭವಿಸಿರುವ ತಾಯಿ–ಮಗುವಿನ ಸಾವು ವ್ಯವಸ್ಥೆಗೆ ಪಾಠವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT