ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭಾರತದಲ್ಲಿ ತೀವ್ರ ನಿರುದ್ಯೋಗ; ಸರ್ಕಾರ ಎಚ್ಚರಗೊಳ್ಳಲು ಸಕಾಲ

Published 30 ಮಾರ್ಚ್ 2024, 0:11 IST
Last Updated 30 ಮಾರ್ಚ್ 2024, 0:11 IST
ಅಕ್ಷರ ಗಾತ್ರ

ಭಾರತದಲ್ಲಿ ನಿರುದ್ಯೋಗ ಸಮಸ್ಯೆಯು ಗಂಭಿರವಾಗಿಯೇ  ಇದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್‌ಒ) ಇತ್ತೀಚೆಗೆ ಬಿಡುಗಡೆ ಮಾಡಿದ ‘ಭಾರತದ ಉದ್ಯೋಗ ಸ್ಥಿತಿಯ ವರದಿ’ ಹೇಳಿದೆ. ನಿರುದ್ಯೋಗಿಗಳ ಪೈಕಿ ಶೇಕಡ 83ರಷ್ಟು ಯುವಜನರೇ ಇದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರೌಢಶಿಕ್ಷಣ ಪಡೆದ ನಿರುದ್ಯೋಗಿ ಯುವಜನರ ಪ್ರಮಾಣವು 2000ನೇ ಇಸವಿಯಲ್ಲಿ ಶೇ 35.2ರಷ್ಟು ಇತ್ತು; ಈ ಪ್ರಮಾಣವು 2022ರಲ್ಲಿ ಶೇ 65.7ರಷ್ಟಕ್ಕೆ ಏರಿಕೆಯಾಗಿದೆ. ಕಾರ್ಮಿಕ ವರ್ಗದ ಭಾಗವಹಿಸುವಿಕೆ ದರ (ಎಲ್‌ಎಫ್‌ಪಿಆರ್‌), ಕಾರ್ಮಿಕ–ಜನಸಂಖ್ಯೆ ಅನುಪಾತವು 2000ನೇ ಇಸವಿಯಿಂದ 2018ರವರೆಗಿನ ದೀರ್ಘಾವಧಿಯಲ್ಲಿ ಕುಸಿಯುತ್ತಲೇ ಸಾಗಿತ್ತು. 2019ರ ಬಳಿಕ ಈ ಅಂಶಗಳಲ್ಲಿ ಅಲ್ಪ ಸುಧಾರಣೆ ಕಂಡಿದೆ. ಈ ಸುಧಾರಣೆಯನ್ನು ಕೂಡ ಹೆಚ್ಚು ಜಾಗರೂಕತೆಯಿಂದ
ವ್ಯಾಖ್ಯಾನಿಸಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಏಕೆಂದರೆ, ಆರ್ಥಿಕತೆಯ ಬೆಳವಣಿಗೆ ದರವು ಅತ್ಯಂತ ಕಡಿಮೆ ಇದ್ದ ಅವಧಿಯಲ್ಲಿ ಈ ಸುಧಾರಣೆ ಕಂಡುಬಂದಿರುವುದು ಪ್ರಶ್ನೆ ಹುಟ್ಟುಹಾಕಿದೆ. ಕಾರ್ಮಿಕ ವರ್ಗದಲ್ಲಿ ಶೇ 90ರಷ್ಟು ಮಂದಿ ಅನೌಪಚಾರಿಕ ಕೆಲಸಗಳಲ್ಲಿ ಇದ್ದಾರೆ. ಕಾರ್ಮಿಕ ವರ್ಗದ ಭಾಗವಹಿಸುವಿಕೆ ದರವು ಇಂಡೊನೇಷ್ಯಾ ಮತ್ತು ವಿಯೆಟ್ನಾಂನಂತಹ ಅಭಿವೃದ್ಧಿಶೀಲ ದೇಶಗಳಿಗಿಂತಲೂ ಭಾರತದಲ್ಲಿ ಕಡಿಮೆ ಇದೆ. ಈ ದೇಶಗಳಲ್ಲಿ ಈ ದರವು ಶೇ 60ಕ್ಕಿಂತ ಹೆಚ್ಚು ಇದೆ. ಮಹಿಳೆಯರ ಭಾಗವಹಿಸುವಿಕೆ ದರವು 2022ರಲ್ಲಿ ಶೇ 32.8ರಷ್ಟು ಮಾತ್ರ ಇತ್ತು. ಇದು ಅತ್ಯಂತ ಕಳವಳಕಾರಿ. ಪುರುಷರ ಭಾಗವಹಿಸುವಿಕೆ ದರವು
ಶೇ 77.2ರಷ್ಟಿದೆ. ಮಹಿಳೆಯರ ದರಕ್ಕೆ ಹೋಲಿಸಿದರೆ ಇದು 2.3 ಪಟ್ಟು ಹೆಚ್ಚು. 

ವರದಿಯಲ್ಲಿ ಎಚ್ಚರಿಕೆಯ ಅಂಶಗಳು ಹಲವು ಇವೆ. 2010ರಿಂದ 2019ರ ನಡುವೆ ಉದ್ಯೋಗ, ಶಿಕ್ಷಣ ಅಥವಾ ತರಬೇತಿಯಲ್ಲಿ ತೊಡಗಿಕೊಂಡಿಲ್ಲದ ಯುವಜನರ ಪಾಲು ಸರಾಸರಿ ಶೇ 29.2ರಷ್ಟಿತ್ತು. ಇದು ದಕ್ಷಿಣ ಏಷ್ಯಾದಲ್ಲಿಯೇ ಅತಿ ಹೆಚ್ಚು. ಕುಶಲ ಕೆಲಸಗಳಿಗೆ ಉದ್ಯೋಗಿಗಳೇ ಸಿಗುತ್ತಿಲ್ಲ ಎಂಬ ದೂರು ಉದ್ಯಮ ವಲಯದಲ್ಲಿ ಸದಾ ಇದೆ. ಹಾಗಿದ್ದರೂ
ನಿರುದ್ಯೋಗಿಗಳಲ್ಲಿ ಹೆಚ್ಚಿನವರು ವಿದ್ಯಾವಂತರೇ ಎಂಬುದು ವಿರೋಧಾಭಾಸಕರ. ನಮ್ಮ ಶಿಕ್ಷಣ ವ್ಯವಸ್ಥೆಯು ಉದ್ಯೋಗಗಳಿಗೆ ಬೇಕಾದ ಸಮರ್ಪಕ ತರಬೇತಿಯನ್ನು ನೀಡುತ್ತಿಲ್ಲ ಎಂಬುದು ಒಂದೆಡೆ ಯಾದರೆ, ಅರ್ಥವ್ಯವಸ್ಥೆಯು ಅಗತ್ಯ ಇರುವಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ ಎಂಬುದು ಇನ್ನೊಂದು ವಾಸ್ತವ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಅರ್ಥವ್ಯವಸ್ಥೆಯು ಚೇತರಿಸಿಕೊಂಡಿದ್ದರೂ ಸೃಷ್ಟಿಯಾಗು ತ್ತಿರುವ ಉದ್ಯೋಗದ ಸ್ವರೂಪವೇ ಬದಲಾಗಿದೆ. ಹಲವು ಮಂದಿ ಬೇಸಾಯ ಮಾಡಲು ಹಿಂದಿರುಗಿದ್ದಾರೆ. ಆದರೆ ಬೇಸಾಯವನ್ನು ಲಾಭದಾಯಕ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ. ಬಹಳ ಮಂದಿ, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸ್ವಉದ್ಯೋಗ ಕಂಡುಕೊಂಡಿದ್ದಾರೆ. ಆದರೆ ಅವು ಸುಸ್ಥಿರವಲ್ಲ ಮತ್ತು ವೈಫಲ್ಯದ ಭಯ ಸದಾ ಇರುತ್ತದೆ. ಬೇಸಾಯೇತರ ಉದ್ಯೋಗಗಳಲ್ಲಿ ಕುಸಿತ ಉಂಟಾಗಿದೆ. ಬಹಳ ಜನರಿಗೆ ಪೂರ್ಣಾವಧಿ ಕೆಲಸ ಇಲ್ಲದಿರುವುದು ಗಂಭೀರವಾದ ಸಮಸ್ಯೆಯಾಗಿದೆ. 

ಜನಸಂಖ್ಯೆಯಲ್ಲಿ ಯುವಜನರ ಪಾಲು ಗಣನೀಯ ಎಂಬ ವಿಚಾರದಲ್ಲಿ ಭಾರತಕ್ಕೆ ಬಹುದೊಡ್ಡ ಹೆಮ್ಮೆ ಇದೆ. ದೊಡ್ಡ ಪ್ರಮಾಣದಲ್ಲಿ ಇರುವ ಯುವ ಸಮೂಹದ ಅನುಕೂಲವನ್ನು ಪಡೆದುಕೊಳ್ಳ
ಬೇಕು ಎಂಬ ಬಯಕೆಯನ್ನೂ ದೇಶವು ಹೊಂದಿದೆ. ಆದರೆ ಜನಸಂಖ್ಯೆಯಲ್ಲಿ ಇರುವ ಯುವಜನರ ಪಾಲು ಕ್ರಮೇಣ ಕುಸಿಯಲಿದೆ. ಹಾಗಾಗಿ, ದೇಶದ ಪ್ರಗತಿಯಲ್ಲಿ ಈ ಯುವ ವರ್ಗದ ಅನುಕೂಲ ಪಡೆಯಬಹುದು ಎಂಬ ಅಂಶವೂ ಮರೆಯಾಗುತ್ತದೆ. ದೊಡ್ಡ ಮಟ್ಟದ ನಿರುದ್ಯೋಗವು ಸೃಷ್ಟಿಸುವ ಸಂಕಟ ಮತ್ತು ಅತೃಪ್ತಿಯು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಲ್ಲದು. ಆರ್ಥಿಕ ಪ್ರಗತಿಯೊಂದೇ ಸಾಲದು. ಅಸಮಾನ ಪ್ರಗತಿ, ನಿರುದ್ಯೋಗ ಮತ್ತು ಹಣದುಬ್ಬರ ಒಟ್ಟಾಗಿ ಬಿಕ್ಕಟ್ಟು ಸೃಷ್ಟಿಸಬಲ್ಲವು. ಈಗ ಇರುವ ಸಂಕಷ್ಟದ ಸ್ಥಿತಿಯಿಂದ ದೇಶವು ಹೊರಗೆ ಬರಲು ಉದ್ಯೋಗ ಸೃಷ್ಟಿ ಆಧಾರಿತ ಆರ್ಥಿಕ ಪ್ರಗತಿ ಕಾರ್ಯತಂತ್ರ, ಅದಕ್ಕೆ ಪೂರಕವಾದ ಶಿಕ್ಷಣ ವ್ಯವಸ್ಥೆ, ಸಾಮರಸ್ಯದ ಸಾಮಾಜಿಕ ಮತ್ತು ಆರ್ಥಿಕ ನೀತಿಯು ಅತ್ಯಗತ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT