ಚುನಾವಣೆ: ವಿಷಯಾಧಾರಿತ ಚರ್ಚೆಗೆ ಒತ್ತು ದೊರಕಲಿ

ಮಂಗಳವಾರ, ಏಪ್ರಿಲ್ 23, 2019
31 °C

ಚುನಾವಣೆ: ವಿಷಯಾಧಾರಿತ ಚರ್ಚೆಗೆ ಒತ್ತು ದೊರಕಲಿ

Published:
Updated:
Prajavani

ಲೋಕಸಭಾ ಚುನಾವಣೆಯ ಪ್ರಚಾರದ ಬಿಸಿ ಏರತೊಡಗಿದೆ. ಕರ್ನಾಟಕದಲ್ಲೂ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಒಟ್ಟು 543 ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಲು ಏಪ್ರಿಲ್‌ 11ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು ಮೇ 23ರಂದು ಫಲಿತಾಂಶ ಹೊರಬೀಳಲಿದೆ.‌

ಜತೆಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಅಂದರೆ ಇನ್ನು ಎರಡು ತಿಂಗಳ ಕಾಲ ದೇಶದೆಲ್ಲೆಡೆ ‘ಚುನಾವಣಾ ಜ್ವರ’ ವ್ಯಾಪಿಸಲಿದೆ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಲೋಕಸಭೆ ಎದುರಿಸುತ್ತಿರುವ 17ನೇ ಚುನಾವಣೆಯಿದು. ಈ ಹಿಂದಿನ 16 ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಮತದಾರರು ಕಲಿಯಬಹುದಾಗಿದ್ದ ಪಾಠಗಳನ್ನು ಈ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ಆರಂಭದ ಹಲವು ವರ್ಷಗಳಲ್ಲಿ ಪ್ರಚಾರಕ್ಕೆ ಮತ್ತು ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳು ಅನುಸರಿಸುತ್ತಿದ್ದ ದಾರಿ ಸಹ್ಯವೇ ಆಗಿತ್ತು.

ಭಾವೋದ್ರೇಕವನ್ನು ಉದ್ದೀಪಿಸುವ ಅಥವಾ ಪಕ್ಷಗಳ ಕಾರ್ಯಕರ್ತರ ಮಧ್ಯೆ ಪರಸ್ಪರ ವೈಷಮ್ಯ ಹುಟ್ಟಿಸುವಂತಹ ಅತಿರೇಕದ ಪ್ರಚಾರಗಳು ಹಿಂದೆ ನಡೆಯುತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಹಣ ಮತ್ತು ಮದ್ಯದ ಹೊಳೆಯೇ ಹರಿಯುತ್ತಿದೆ. ಜತೆಗೆ ಮತದಾರರ ಜಾತಿ, ಧರ್ಮ, ಪ್ರದೇಶಗಳ ಹಿನ್ನೆಲೆಯಲ್ಲಿ ಭಾವೋದ್ರೇಕವನ್ನು ಉಕ್ಕೇರಿಸಿ ರಾಜಕೀಯ ಲಾಭ ಪಡೆಯುವ ಕುತಂತ್ರಗಳೂ ಹೆಚ್ಚಾಗಿವೆ.‌

ಧಾರ್ಮಿಕ ಉನ್ಮಾದ ಕೆರಳಿಸುವಂತಹ ಭಾಷಣಗಳನ್ನೇ ತಮ್ಮ ಟ್ರೇಡ್‌ಮಾರ್ಕ್‌ ಎಂದು ಭಾವಿಸುವ ನಾಯಕರೂ ಇದ್ದು, ಇವರನ್ನೇ ಮತ ಗಳಿಕೆಗಾಗಿ ನೆಚ್ಚಿಕೊಂಡಿರುವ ಪಕ್ಷಗಳೂ ಇವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು  ಮತದಾರರು ಅನುಸರಿಸಬೇಕಾದ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ  ಜಾರಿಗೊಳಿಸುವ ಅಗತ್ಯವಿದೆ. ವರ್ಷಗಳು ಕಳೆದಂತೆ ಚುನಾವಣೆಯಲ್ಲಿ ಹಣದ ಪಾತ್ರವೇ ಮುಖ್ಯವಾಗುತ್ತಿರುವುದು ಜನತಂತ್ರದ ಆಶಯಗಳನ್ನೇ ಅಣಕಿಸುವಂತಿದೆ.

ಚುನಾವಣೆಯ ಸಂದರ್ಭದಲ್ಲಿ ಗಂಭೀರ ಚರ್ಚೆ, ವಾಗ್ವಾದಗಳು ನಡೆಯುವುದು ಪ್ರಜಾಪ್ರಭುತ್ವದ ಸಲ್ಲಕ್ಷಣ. ಒಂದೇ ವೇದಿಕೆಯಲ್ಲಿ ಆಳುವ ಮತ್ತು ವಿರೋಧ ಪಕ್ಷಗಳ ನೇತಾರರು ಪರಸ್ಪರರನ್ನು ಪ್ರಶ್ನಿಸುವ, ಸೈದ್ಧಾಂತಿಕ ಚರ್ಚೆಗಳನ್ನು ಮಾಡುವ ಪದ್ಧತಿ ಅಮೆರಿಕದಂತಹ ದೇಶಗಳಲ್ಲಿದೆ. ನಮ್ಮಲ್ಲಿ ಆ ರೀತಿಯ ವ್ಯವಸ್ಥೆ ಇನ್ನೂ ಏಕೆ ಬಂದಿಲ್ಲ? ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಬಗ್ಗೆ ಪರಸ್ಪರ ಸಂವಾದ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡಬೇಕು.

ನಮ್ಮಲ್ಲಿ ಪ್ರಚಾರದ ಹೆಸರಲ್ಲಿ ವೈಯಕ್ತಿಕ ಚಾರಿತ್ರ್ಯ ಹನನ, ಕೀಳುಮಟ್ಟದ ಬೈಗುಳ, ಮತದಾರರಿಗೆ ಆಮಿಷವೊಡ್ಡುವ ಕೃತ್ಯಗಳೂ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳೂ ಹೆಚ್ಚು ಜನಪ್ರಿಯವಾಗಿದ್ದು, ಅಲ್ಲಂತೂ ಯಾವುದೇ ಭಿಡೆಯಿಲ್ಲದೆ ಚಾರಿತ್ರ್ಯಹನನ ಮತ್ತು ಸುಳ್ಳುಸುದ್ದಿಗಳ ವೈಭವೀಕರಣ ನಡೆಯುತ್ತದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ಈ ನಿಟ್ಟಿನಲ್ಲಿ ನಿಯಮಬದ್ಧವಾಗಿ ವರ್ತಿಸುವಂತೆ ಪಕ್ಷಗಳು ವಿಶೇಷ ತರಬೇತಿ ನೀಡಬೇಕು.

ಮತದಾರರೂ ರಾಜಕೀಯ ನಾಯಕರನ್ನು ಅವರ ಪಕ್ಷದ ಕಾರ್ಯಕ್ರಮಗಳ ಬಗ್ಗೆ, ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುವಂತೆ ಒತ್ತಾಯಿಸಬೇಕು. ಹಿಂದಿನ ಸಲದ ಚುನಾವಣೆಯಲ್ಲಿ ಪಕ್ಷಗಳು ನೀಡಿದ ಭರವಸೆಗಳ ಗತಿ ಏನಾಗಿದೆ, ಅವುಗಳಲ್ಲಿ ಎಷ್ಟು ಈಡೇರಿವೆ, ಈಡೇರಿಲ್ಲವಾದರೆ ಅವುಗಳಿಗೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಎಲ್ಲ ಮತದಾರರಿಗೂ ಇದೆ. ಮತದಾರರು ವಿಷಯಾಧಾರಿತವಾಗಿ ಪ್ರಶ್ನಿಸತೊಡಗಿದರೆ ರಾಜಕೀಯ ಪಕ್ಷಗಳು ಕೂಡಾ ಎಚ್ಚೆತ್ತುಕೊಳ್ಳುತ್ತವೆ.

ನಿರುದ್ಯೋಗ, ಭ್ರಷ್ಟಾಚಾರ, ಸಾರ್ವಜನಿಕ ಜೀವನದಲ್ಲಿ ನೈತಿಕತೆಯ ಕೊರತೆ, ಕೃಷಿ ಕ್ಷೇತ್ರದ ಬಿಕ್ಕಟ್ಟು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅವನತಿಯಂತಹ ಜ್ವಲಂತ ಸಮಸ್ಯೆಗಳು ಪ್ರಚಾರದ ಮುನ್ನೆಲೆಗೆ ಬರಬೇಕು. ಅದನ್ನು ಬಿಟ್ಟು ಮತದಾರರೇ ಹಣ, ಜಾತಿ ಮತ್ತು ಮದ್ಯದ ಬೆನ್ನುಹತ್ತಿ ಹೋದರೆ, ಆಯ್ಕೆಯಾಗುವ ಜನಪ್ರತಿನಿಧಿಯಿಂದ ಯಾವ ಒಳ್ಳೆಯ ಕೆಲಸವನ್ನೂ ನಿರೀಕ್ಷಿಸಲಾಗದು. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳು ಕುಸಿದಿವೆ ಎಂದು ಭಾಷಣ ಬಿಗಿಯುವ ಜನರೇ ರಜೆಯ ಮಜಾ ಸವಿಯಲೆಂದು ಮತದಾನಕ್ಕೆ ಚಕ್ಕರ್‌ ಹಾಕುವ ವಿದ್ಯಮಾನ ಹಿಂದೆಲ್ಲಾ ಕಂಡುಬಂದಿದೆ.

ಈ ಸಲ ಹಾಗಾಗದಿರಲಿ. ಯಾವ ಅಭ್ಯರ್ಥಿಯೂ ಸರಿಯಿಲ್ಲ ಎಂದಾದಲ್ಲಿ ‘ನೋಟಾ’ ಪ್ರಯೋಗಿಸುವ ಅಧಿಕಾರವನ್ನು ಚುನಾವಣಾ ಆಯೋಗವು ನೀಡಿದ್ದು, ಮತದಾರರು ಅದನ್ನೂ ಪ್ರಯೋಗಿಸಿ ತಮ್ಮ ಅಸಮಾಧಾನವನ್ನು ದಾಖಲಿಸಬಹುದು. ಮತದಾರ ತನ್ನ ಕರ್ತವ್ಯದಲ್ಲಿ ಪ್ರಾಮಾಣಿಕನಾಗಿದ್ದರೆ, ಜನಪ್ರತಿನಿಧಿಯನ್ನು ಪ್ರಶ್ನಿಸುವ ನೈತಿಕ ಅಧಿಕಾರ ಆತನಿಗೆ ಲಭ್ಯವಾಗುತ್ತದೆ. ಇಲ್ಲವಾದಲ್ಲಿ ‘ಕಂತೆಗೆ ತಕ್ಕ ಬೊಂತೆ’ ಎನ್ನುವಂತೆ ಮತದಾರರ ಮನೋಭಾವಕ್ಕೆ ತಕ್ಕಂತಹ ದುಷ್ಟ ಸರ್ಕಾರಗಳೇ ಲಭ್ಯವಾಗುತ್ತವೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಆತ್ಮವಿಮರ್ಶೆಯ ಕಾಲವೂ ಹೌದು ಎನ್ನುವುದನ್ನು ಮರೆಯಬಾರದು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !