ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಾಮುಚ್ಚಾಲೆ ಆಟ ಸಾಕುನಿರಂತರ ವಿದ್ಯುತ್‌ ಬೇಕು

Last Updated 28 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ದೇಶದಲ್ಲಿ ಸದಾ ವಿದ್ಯುತ್‌ ಕೊರತೆ ಅನುಭವಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಹತ್ತಾರು ಯೋಜನೆಗಳನ್ನು ಹಾಕಿಕೊಂಡು, ಸಾವಿರಾರು ಕೋಟಿ ರೂಪಾಯಿ ವಿನಿಯೋಗ ಮಾಡಿದ ಮೇಲೂ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಸಾಮಾನ್ಯವಾಗಿ ನೀರಿನ ಬರ ಎದುರಿಸುವ ಬೇಸಿಗೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿದ್ಯುತ್‌ ಕೊರತೆ, ಅಣೆಕಟ್ಟುಗಳೆಲ್ಲ ಭರ್ತಿಯಾಗಿರುವ ಹಿಂಗಾರಿ ಹಂಗಾಮಿನಲ್ಲೇ ದಾಳಿ ಇಟ್ಟಿದೆ. ಜಲ ವಿದ್ಯುತ್‌ ಘಟಕಗಳು ಯಥಾಪ್ರಕಾರ ಕಾರ್ಯನಿರ್ವಹಿಸುತ್ತಿದ್ದರೂ ಕಲ್ಲಿದ್ದಲಿನ ಕೊರತೆಯಿಂದ ಉಷ್ಣ ವಿದ್ಯುತ್‌ ಸ್ಥಾವರಗಳ ಉತ್ಪಾದನೆಯಲ್ಲಿ ಏರು–ಪೇರು ಆಗಿರುವುದೇ ಇದಕ್ಕೆ ಕಾರಣ.

‘ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ’ ಎಂದು ಘೋಷಿಸಿರುವ ಮುಖ್ಯಮಂತ್ರಿ, ‘ವಿದ್ಯುತ್‌ ಖರೀದಿಯ ಯಾವುದೇ ಹೊಸ ಪ್ರಸ್ತಾವಗಳು ಇಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ. ಅವರೇ ಹೇಳಿರುವಂತೆ ರಾಜ್ಯದಲ್ಲಿ ನಿತ್ಯ ಸರಾಸರಿ 400 ಮೆಗಾವಾಟ್‌ನಷ್ಟು ವಿದ್ಯುತ್‌ ಕೊರತೆ ಇದೆ. ಈ ಕೊರತೆಯನ್ನು ಹೇಗೆ ಸರಿದೂಗಿಸಲಾಗುತ್ತದೆ ಎಂಬ ವಿಷಯವಾಗಿ ಆಡಳಿತ ವ್ಯವಸ್ಥೆ ಮೌನ ವಹಿಸಿರುವುದು ಗ್ರಾಮಾಂತರ ಭಾಗದಲ್ಲಿ ವಿದ್ಯುತ್‌ ಪೂರೈಕೆ ಹೇಗಿರಲಿದೆ ಎಂಬುದರ ದಿಕ್ಸೂಚಿ. ಅಧಿಕೃತವಾಗಿ ಘೋಷಣೆ ಆಗದಿದ್ದರೂ ಲೋಡ್‌ ಶೆಡ್ಡಿಂಗ್‌ ಜಾರಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ರಾಯಚೂರು ಹಾಗೂ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಗಳು ಕಲ್ಲಿದ್ದಲಿನ ತೀವ್ರ ಕೊರತೆಯನ್ನು ಅನುಭವಿಸುತ್ತಿವೆ. ಅದರಲ್ಲೂ ಪ್ರತಿದಿನ 1,720 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ರಾಯಚೂರು ಘಟಕದಲ್ಲಿ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ವೆಸ್ಟರ್ನ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌ ಸಂಸ್ಥೆಯು ಒಪ್ಪಂದದಲ್ಲಿ ಉಲ್ಲೇಖಿಸಿದಷ್ಟು ಪ್ರಮಾಣದಲ್ಲಿ ಕಲ್ಲಿದ್ದಲನ್ನು ಪೂರೈಕೆ ಮಾಡದ್ದರಿಂದ ಸಮಸ್ಯೆ ಉದ್ಭವಿಸಿದೆ.

ಕೈಗಾರಿಕೆ, ವಾಣಿಜ್ಯ, ಕೃಷಿ ಚಟುವಟಿಕೆಗಳ ಅಭಿವೃದ್ಧಿ ಚಕ್ರ ತಿರುಗಬೇಕಾದರೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್‌ ಅತ್ಯವಶ್ಯ. ದಶಕಗಳ ಹಿಂದೆಯೇ ಹಲವು ಯೋಜನೆಗಳನ್ನು ಹಾಕಿ ಕೊಂಡರೂ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ರಾಜ್ಯಕ್ಕೆ ಇನ್ನೂ ಸಾಧ್ಯವಾಗಿಲ್ಲ. ಕಳೆದ ಒಂದು ದಶಕದಲ್ಲಂತೂ ಮುಖ್ಯಮಂತ್ರಿಯವರಿಗೆ ಹತ್ತಿರ ಆದವರು, ಮುಖ್ಯಮಂತ್ರಿಯೇ ಆಗಲು ಕನಸು ಕಂಡವರು ಇಂಧನ ಸಚಿವರಾಗಿ ಕೆಲಸ ಮಾಡಿದ್ದಾರೆ.

ಅಂತಹ ಪ್ರಭಾವಿಗಳಿಂದಲೂ ಕಾಲಮಿತಿಯಲ್ಲಿ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಆಗದಿರುವುದಕ್ಕೆ ಇಚ್ಛಾಶಕ್ತಿ ಕೊರತೆಯಲ್ಲದೆ ಬೇರೇನೂ ಕಾರಣ ಇದ್ದಿರಲಾರದು. ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದಕ್ಕಿಂತ ಅದನ್ನು ಖರೀದಿ ಮಾಡುವುದೇ ಅಧಿಕಾರಸ್ಥರಿಗೆ ಅಪ್ಯಾಯಮಾನವಾಗಿ ಕಂಡಿರಬಹುದು. ಕಲ್ಲಿದ್ದಲು ಹಾಗೂ ವಿದ್ಯುತ್‌ ಖರೀದಿ ಅಕ್ರಮಗಳ ಕಥೆಗಳನ್ನು ಸಿಎಜಿ ವರದಿಗಳು ಪ್ರತಿವರ್ಷವೂ ಬಟಾಬಯಲು ಮಾಡುತ್ತಲೇ ಇವೆ.

ವಿದ್ಯುತ್‌ ಸೋರಿಕೆಯನ್ನು ತಡೆಗಟ್ಟಿದರೆ, ಸೌರ ಹಾಗೂ ಪವನ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದರೆ ಕೊರತೆಯನ್ನು ತಕ್ಕಮಟ್ಟಿಗೆ ನೀಗಿಸಲು ಸಾಧ್ಯವಿದೆ. ಉತ್ತರದ ರಾಜ್ಯಗಳಲ್ಲಿ ಬೇಡಿಕೆಗಿಂತಲೂ ಉತ್ಪಾದನೆ ಪ್ರಮಾಣ ಹೆಚ್ಚಿದೆ. ದಕ್ಷಿಣದ ರಾಜ್ಯಗಳ ವಿದ್ಯುತ್‌ ಸಮಸ್ಯೆಗೆ ಪರಿಹಾರ ಒದಗಿಸುವ ಹೊಣೆ ಕೇಂದ್ರ ಸರ್ಕಾರದ ಮೇಲೂ ಇದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವವರು ಮುಂಬರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿ, ವಿದ್ಯುತ್‌ ಪೂರೈಕೆ ವಿಷಯದಲ್ಲಿ ಕಣ್ಣಾಮುಚ್ಚಾಲೆ ಆಟವಾಡಲು ಹೊರಟರೆ, ಅವರಿಗೆ ಪಾಠ ಕಲಿಸಲು ಜನರ ಬಳಿ ಮತದಾನದ ಪರಮಾಧಿಕಾರವಂತೂ ಇದ್ದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT