ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಚೆಸ್ ಕ್ರೀಡೆಯಲ್ಲಿ ಸಂಚಲನ ಸೃಷ್ಟಿಸಿದ ಗುಕೇಶ್ ಸಾಧನೆ

Published 24 ಏಪ್ರಿಲ್ 2024, 19:33 IST
Last Updated 24 ಏಪ್ರಿಲ್ 2024, 19:33 IST
ಅಕ್ಷರ ಗಾತ್ರ

ಒಂದು ದಶಕದ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಭಾರತದ ಯುವ ಪ್ರತಿಭಾನ್ವಿತ ಚೆಸ್‌ ಆಟಗಾರರಲ್ಲಿ ಒಬ್ಬರಾದ ದೊಮ್ಮರಾಜು ಗುಕೇಶ್‌ ಅವರು ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಟೊರಾಂಟೊದಲ್ಲಿ ನಡೆದ ಈ ಟೂರ್ನಿಯಲ್ಲಿ ಘಟಾನುಘಟಿ ಆಟಗಾರರ ನಡುವೆ ಅವರು ಎಲ್ಲರ ನಿರೀಕ್ಷೆ ಮೀರಿ ಅಗ್ರಸ್ಥಾನ ಪಡೆದಿರುವುದು ಮಹತ್ಸಾಧನೆ. ಇಲ್ಲಿ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹಿರಿಮೆಗೂ ಅವರು ಭಾಜನರಾಗಿದ್ದಾರೆ. ರಷ್ಯಾದ ಚೆಸ್‌ ದಿಗ್ಗಜ ಗ್ಯಾರಿ ಕ್ಯಾಸ್ಪರೋವ್‌ ಅವರ ದಾಖಲೆಯನ್ನು ಮುರಿದಿದ್ದಾರೆ. ಭಾರತದಲ್ಲಿ ವಿಶ್ವನಾಥನ್ ಆನಂದ್‌ ಬಿಟ್ಟರೆ ಈ ಟೂರ್ನಿಯನ್ನು ಗೆದ್ದ ಎರಡನೇ ಆಟಗಾರ ಎನಿಸಿದರು. ವಿಶ್ವ ಚೆಸ್‌ ಸಾಮ್ರಾಟನಿಗೆ ಸವಾಲೊಡ್ಡುವ (ಚಾಲೆಂಜರ್‌) ಆಟಗಾರನನ್ನು ಆಯ್ಕೆ ಮಾಡಲು ಈ ಟೂರ್ನಿ ನಡೆಯುತ್ತದೆ. ಕ್ಯಾಂಡಿಡೇಟ್ಸ್‌ ಟೂರ್ನಿ ಗೆಲುವಿನ ಮೂಲಕ 17 ವರ್ಷ ವಯಸ್ಸಿನ ಗುಕೇಶ್‌, ವಿಶ್ವ ಚೆಸ್‌ ಚಾಂಪಿಯನ್‌, ಚೀನಾದ ಡಿಂಗ್ ಲಿರೆನ್‌ ಅವರಿಗೆ ಸವಾಲು ಹಾಕುವ ಅರ್ಹತೆ ಪಡೆದಿದ್ದಾರೆ. ಈ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ ಈ ವರ್ಷಾಂತ್ಯದಲ್ಲಿ ನಡೆಯಬೇಕಿದೆ. ಮೊದಲ ಪ್ರಯತ್ನದಲ್ಲೇ ಚಾಂಪಿಯನ್‌ ಆಗಿರುವುದು ಗುಕೇಶ್‌ ಅವರ ಹೆಗ್ಗಳಿಕೆ.

ವಿಶ್ವದ ಎರಡನೇ ಮತ್ತು ಮೂರನೇ ಕ್ರಮಾಂಕದ ಆಟಗಾರರಾದ ಅಮೆರಿಕದ ಫ್ಯಾಬಿಯಾನೊ ಕರುವಾನಾ ಮತ್ತು ಹಿಕಾರು ನಕಾಮುರಾ, ಎರಡು ಸಲ ಚಾಂಪಿಯನ್ ಆದ ರಷ್ಯಾದ ಇಯಾನ್ ನೆಪೊಮ್‌ನಿಷಿ, ಫ್ರಾನ್ಸ್‌ನ ಅಲಿರೇಝಾ ಫಿರೋಜ್‌ ಅವರಂತಹ ಆಟಗಾರರ ನಡುವೆ ಗುಕೇಶ್‌ ಅವರ ಈ ಸಾಧನೆ ಶ್ಲಾಘನೀಯ. ಭಾರತದ ಚೆಸ್‌ ತವರು ಚೆನ್ನೈನ ಈ ಆಟಗಾರ ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಗೆದ್ದು, ಎಂಟು ಡ್ರಾ ಮಾಡಿಕೊಂಡು, ಒಂದನ್ನು ಮಾತ್ರ ಸೋತಿದ್ದರು. ಅವರ ಗಟ್ಟಿ ಮನೋಬಲ ಹಾಗೂ ಸಮಯದ ಒತ್ತಡದಲ್ಲೂ ಚಕಚಕನೆ ನಡೆಗಳನ್ನು ಇರಿಸುವ ಜಾಣ್ಮೆ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶ್ವ ಚೆಸ್‌ನಲ್ಲಿ ಭಾರತ ಪ್ರಬಲ ಶಕ್ತಿ ಆಗುತ್ತಿದೆ. ಗುಕೇಶ್‌ ಅವರ ಸಾಧನೆ ಇದಕ್ಕೆ ಪೂರಕವಾಗಿದೆ. 2023ರಲ್ಲಿ ಚೆನ್ನೈನ ಪ್ರಜ್ಞಾನಂದ ವಿಶ್ವಕಪ್‌ ಫೈನಲ್‌ ತಲುಪಿ ಚೆಸ್‌ ಲೋಕದ ಗಮನ ಸೆಳೆದಿದ್ದರು. ಎರಡು ವರ್ಷ ಹಿಂದೆ ಚೆನ್ನೈನಲ್ಲಿ ನಡೆದ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ ಎರಡನೇ ತಂಡ ಕಂಚಿನ ಪದಕ ಗೆಲ್ಲಲು ಗುಕೇಶ್ ಅವರ ಕೊಡುಗೆ ಗಣನೀಯ. ಅವರು ಮೊದಲ ಬೋರ್ಡ್‌ನಲ್ಲಿ ಹನ್ನೊಂದು ಪಂದ್ಯಗಳ ಪೈಕಿ ಒಂಬತ್ತನ್ನು ಗೆದ್ದು ವೈಯಕ್ತಿಕ ಚಿನ್ನದ ಪದಕ ಗಳಿಸಿದ್ದರು. ನೆದರ್ಲೆಂಡ್ಸ್‌ನ ವೈಕ್‌ಆನ್‌ ಝೀಯಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಟಾಟಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಗುಕೇಶ್‌ ಜಂಟಿ ಅಗ್ರಸ್ಥಾನ ಪಡೆದು, ಟೈಬ್ರೇಕರ್‌ನಲ್ಲಿ ರನ್ನರ್ ಅಪ್‌ ಆಗಿದ್ದರು.

ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಪ್ರಜ್ಞಾನಂದ ಅವರು ಐದನೇ ಸ್ಥಾನ ಮತ್ತು ಮಹಾರಾಷ್ಟ್ರದ ವಿದಿತ್‌ ಗುಜರಾತಿ ಆರನೇ ಸ್ಥಾನ ಗಳಿಸಿದ್ದಾರೆ. ಮೊದಲ ಬಾರಿ ಮಹಿಳಾ ವಿಭಾಗದ ಟೂರ್ನಿಯೂ ಜೊತೆಗೇ ನಡೆದಿತ್ತು. ಇದರಲ್ಲಿ ಚೀನಾದ ಝೊಂಗ್‌ಯಿ ತಾನ್‌ ಆರಂಭದಿಂದಲೇ ಮುನ್ನಡೆ ಸಾಧಿಸಿ ಅರ್ಹರಾಗಿ ಚಾಂಪಿಯನ್ ಎನಿಸಿದರು. ಆದರೆ ಕೊನೆಗಳಿಗೆಯಲ್ಲಿ ಪುಟಿದೆದ್ದ ಭಾರತದ ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಕೋನೇರು ಹಂಪಿ ಎರಡನೇ ಸ್ಥಾನ ಗಳಿಸಿದರು. ಪ್ರಜ್ಞಾನಂದ ಅವರ ಅಕ್ಕ ಹಾಗೂ ಇತ್ತೀಚೆಗಷ್ಟೇ ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ ನಾಲ್ಕನೇ ಸ್ಥಾನ ಗಳಿಸಿದ್ದು ಗಮನಾರ್ಹ. ಆರಂಭದಲ್ಲಿ ಹಿನ್ನಡೆ ಕಂಡ ಅವರು ಕೊನೆಯ ಐದು ಸುತ್ತುಗಳಲ್ಲಿ ಜಯ ಸಾಧಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಗುಕೇಶ್ ಅವರ ಯಶಸ್ಸು ಭಾರತದಲ್ಲಿ ಚೆಸ್‌ ಆಟಕ್ಕೆ ಇನ್ನಷ್ಟು ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ವರ್ಷಾಂತ್ಯದಲ್ಲಿ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡಲಿರುವುದು ಭಾರತಕ್ಕೆ ಹೆಮ್ಮೆಯ ವಿಷಯ. ಆನಂದ್ ನಂತರ ಭಾರತದ ಎರಡನೇ ವಿಶ್ವ ಚಾಂಪಿಯನ್‌ ಆಗುವ ಅವಕಾಶವನ್ನು ಈ ಯುವಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT