ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಶ್ಚಯ ಅಂತ್ಯ ಸ್ವಾಗತಾರ್ಹ ಬೆಳವಣಿಗೆ

Last Updated 6 ಆಗಸ್ಟ್ 2018, 2:34 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಉತ್ತರಾಖಂಡದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇಮಕಗೊಂಡಿದ್ದಾರೆ. ಈ ವಿಚಾರದಲ್ಲಿ ಅನೇಕ ತಿಂಗಳುಗಳಿಂದ ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ಮಧ್ಯೆ ಉಂಟಾಗಿದ್ದ ಸಂಘರ್ಷಕ್ಕೆ ಅಂತೂ ತೆರೆ ಬಿದ್ದಂತಾಗಿದೆ. ಸಂಘರ್ಷದ ವಾತಾವರಣವನ್ನು ತಿಳಿಗೊಳಿಸಲು ಮುಂದಾಗುವ ಮೂಲಕ ಸಕಾರಾತ್ಮಕ ಸಂದೇಶ ವ್ಯಕ್ತವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಜೋಸೆಫ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ವರ್ಷ ಜನವರಿ ತಿಂಗಳಲ್ಲೇ ಶಿಫಾರಸು ಮಾಡಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿದ್ದು ಮೂರು ತಿಂಗಳ ನಂತರ. ಈ ವಿಳಂಬಕ್ಕೆ ಯಾವ ಸಮರ್ಥನೆಯೂ ಇಲ್ಲ. ಆದರೆ, ಆ ಶಿಫಾರಸಿನಲ್ಲಿ ಹೆಸರಿಸಲಾಗಿದ್ದ ವಕೀಲೆ ಇಂದು ಮಲ್ಹೋತ್ರಾ ಅವರ ನೇಮಕಕ್ಕೆ ಮಾತ್ರ ಒಪ್ಪಿಗೆ ಸೂಚಿಸಿ ಜೋಸೆಫ್ ಅವರ ಹೆಸರನ್ನು ಕೈಬಿಟ್ಟಿದ್ದು ಹಿಂದೆಂದೂ ನಡೆದಿರದ ವಿದ್ಯಮಾನವಾಗಿತ್ತು.

‘ಜೋಸೆಫ್ ಅವರ ಸೇವಾ ಹಿರಿತನ ಕಡಿಮೆ. ಇದಕ್ಕಾಗಿ ನೇಮಕ ಮಾಡಲಾಗದು. ಜೊತೆಗೆ ಅವರು ಕೇರಳದವರಾಗಿದ್ದು ಈಗಾಗಲೇ ಕೇರಳದವರೇ ಆದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಸುಪ್ರೀಂ ಕೋರ್ಟ್‌ನಲ್ಲಿ ಸೇವೆಯಲ್ಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯವೇ ಇಲ್ಲದ ರಾಜ್ಯಗಳಿಂದ ನ್ಯಾಯಮೂರ್ತಿಗಳ ಹೆಸರುಗಳನ್ನು ಶಿಫಾರಸು ಮಾಡಿ’ ಎಂದು ಕೊಲಿಜಿಯಂಗೆ ಸರ್ಕಾರ ಸೂಚಿಸಿತ್ತು.ಸರ್ಕಾರದ ಈ ನಿಲುವನ್ನು ನ್ಯಾಯಾಂಗದ ಅನೇಕ ತಜ್ಞರು ತೀವ್ರವಾಗಿ ಟೀಕಿಸಿದ್ದರು. ಏಕೆಂದರೆ, 2016ರಲ್ಲಿ ಉತ್ತರಾಖಂಡದಲ್ಲಿನ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿ ಕಾಂಗ್ರೆಸ್ ಸರ್ಕಾರದ ಪುನರ್‌ಸ್ಥಾಪನೆಗೆ ಅವಕಾಶ ಮಾಡಿಕೊಡುವ ತೀರ್ಪನ್ನು ಜೋಸೆಫ್ ನೀಡಿದ್ದರು. ಇದಕ್ಕಾಗಿಯೇ ಜೋಸೆಫ್ ಅವರ ಹೆಸರನ್ನು ತಡೆಹಿಡಿಯಲಾಗಿತ್ತು ಎಂಬಂತಹ ಭಾವನೆ ವ್ಯಾಪಕವಾಗಿತ್ತು. ಕೇಂದ್ರದ ವಿರೋಧಕ್ಕೆ ಪ್ರತಿಯಾಗಿ ಕೊಲಿಜಿಯಂ ತಕ್ಷಣವೇ ತನ್ನ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಲಿಲ್ಲ ಎಂಬಂಥ ಟೀಕೆಗಳೂ ವ್ಯಕ್ತವಾದವು. ಕಡೆಗೆ, ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ವಿನೀತ್ ಶರಣ್ ಹೆಸರುಗಳ ಜೊತೆಗೇ ಜೋಸೆಫ್ ಅವರ ನೇಮಕಕ್ಕೂ ಮರು ಶಿಫಾರಸಿರುವ ನಿರ್ಣಯವನ್ನು ಜುಲೈ 20ರಂದು ಕೇಂದ್ರಕ್ಕೆ ಕೊಲಿಜಿಯಂ ಕಳಿಸಿತ್ತು. ಈ ಬಗ್ಗೆ ಕೇಂದ್ರ ಕೈಗೊಂಡ ನಿರ್ಧಾರವು ವಿಶ‍್ವಾಸವನ್ನು ಮರುಸ್ಥಾಪಿಸುವಂತಹದ್ದು. ಆದರೆ ಈ ಕಸರತ್ತಿನಲ್ಲಿ ನ್ಯಾಯಮೂರ್ತಿ ಜೋಸೆಫ್, ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ತಿಂಗಳ ಸೇವಾ ಹಿರಿತನವನ್ನು ಕಳೆದುಕೊಳ್ಳಬೇಕಾಯಿತು ಎಂಬುದನ್ನು ಮರೆಯುವಂತಿಲ್ಲ.

ಕೊಲಿಜಿಯಂ ಶಿಫಾರಸುಗಳ ಬಗ್ಗೆ ಕ್ರಮಗಳನ್ನು ಕೈಗೊಳ್ಳದಿರುವುದು, ಕೆಲವು ಹೆಸರುಗಳನ್ನು ಒಪ್ಪುವುದು ಹಾಗೂ ಕೆಲವು ಹೆಸರುಗಳನ್ನು ವಿನಾಕಾರಣ ಕೈಬಿಡುವುದು ಕಳೆದ ಕೆಲವು ತಿಂಗಳುಗಳಿಂದ ನಡೆದುಕೊಂಡುಬಂದಿದೆ. ರಾಜ್ಯ ಹೈಕೋರ್ಟ್‌ಗಳಿಗೆ ಸುಮಾರು 35- 40 ನ್ಯಾಯಮೂರ್ತಿಗಳ ನಾಮಕರಣಗಳ ಬಗ್ಗೆಯೂ ಮರು ಪರಿಶೀಲಿಸಬೇಕೆಂಬ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಇತ್ತೀಚಿನ ತಿಂಗಳುಗಳಲ್ಲಿ ನೀಡಿದೆ. ಇದು ನ್ಯಾಯಾಂಗ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವಂತಹದ್ದು. ಕೊಲಿಜಿಯಂ ಪುನರುಚ್ಚರಿಸಿದ ಶಿಫಾರಸುಗಳ ಬಗ್ಗೆ ಸರ್ಕಾರದ ನಿಷ್ಕ್ರಿಯತೆ ಕಾನೂನಿಗೆ ವಿರುದ್ಧವಾದದ್ದು. ಶಿಫಾರಸನ್ನು ಕೊಲಿಜಿಯಂ ಪುನರುಚ್ಚರಿಸಿದಲ್ಲಿ ನೇಮಕಾತಿಯನ್ನು ಮಾಡಲೇಬೇಕಾದ ನೀತಿಗೆ ಕೇಂದ್ರ ಬದ್ಧವಾಗಿರಬೇಕಾಗುತ್ತದೆ. ಈ ನಿಯಮ ಮುರಿಯುವುದು ಸಲ್ಲದು. ನೇಮಕಾತಿ ಪ್ರಕ್ರಿಯೆಗೆ ತಡೆ ಒಡ್ಡಿದ ಪರಿಣಾಮವಾಗಿ ವಿವಿಧ ಹೈಕೋರ್ಟ್‌ಗಳು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿಯಾಗದೆ ಇತ್ಯರ್ಥವಾಗದ ಪ್ರಕರಣಗಳ ಹೊರೆ ನ್ಯಾಯಾ
ಲಯಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 31. ಈಗ ಜೋಸೆಫ್ ಸೇರಿದಂತೆ ಮೂವರ ನೇಮಕದಿಂದ 25ಕ್ಕೆ ಏರಿದೆ. ಇನ್ನೂ ಆರು ಹುದ್ದೆಗಳು ಖಾಲಿಯೇ ಇವೆ. ಆದರೆ, ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ಬಗ್ಗೆಯೂ ಅಸಮಾಧಾನಗಳಿವೆ. ಎರಡೂ ಸದನಗಳಲ್ಲಿ ಸರ್ವಾನುಮತದಿಂದ ಅನುಮೋದನೆಗೊಂಡಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗವನ್ನು (ಎನ್‍ಜೆಎಸಿ) ಸುಪ್ರೀಂ ಕೋರ್ಟ್ ರದ್ದುಪಡಿಸಿದ ನೆಪದ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಮೊನ್ನೆಯೂ ಲೋಕಸಭೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಾಗೂ ನ್ಯಾಯಾಂಗದ ಮಧ್ಯೆ ಈ ಬಗೆಯ ಮುಸುಕಿನ ಗುದ್ದಾಟ ಸರಿಯಲ್ಲ. ಹೊಸ ವ್ಯವಸ್ಥೆ ಅಗತ್ಯ ಎನಿಸಿದಲ್ಲಿ ಆ ಬಗ್ಗೆ ಸರ್ವಾನುಮತ ಮೂಡಿಸಲು ಪ್ರಯತ್ನಗಳು ನಡೆಯುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT