ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮಾಭಿವೃದ್ಧಿ ಯೋಜನೆಗಳಿಗೆ ಸೀಮಿತ ಸಮತೋಲನ ಕಾಯ್ದುಕೊಳ್ಳುವ ಯತ್ನ

Last Updated 27 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಸರ್ವಾಂತರ್ಯಾಮಿ ಎಂಬ ರೀತಿಯಲ್ಲಿ ಆಧಾರ್ ಸಂಖ್ಯೆಯ ಬಳಕೆ ಪಸರಿಸುತ್ತಿದ್ದಂತಹ ಸಂದರ್ಭದಲ್ಲಿ ಅದರ ಬಳಕೆಯನ್ನು ಸೀಮಿತಗೊಳಿಸುವ ರೀತಿಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದು. ಸರ್ಕಾರದ ಸಬ್ಸಿಡಿಗಳು ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯ. ಆದರೆ ಮೊಬೈಲ್ ಫೋನ್, ಬ್ಯಾಂಕ್ ಖಾತೆ, ಮಕ್ಕಳ ಶಾಲಾ ಪ್ರವೇಶ ಹಾಗೂ ಸಿಬಿಎಸ್‍ಇ, ಎನ್‍ಇಇಟಿ ಮತ್ತು ಯುಜಿಸಿಗಳು ನಡೆಸುವ ಪರೀಕ್ಷೆಗಳ ಅರ್ಜಿ ಸಲ್ಲಿಕೆಗೆ ಆಧಾರ್ ಕಡ್ಡಾಯವಲ್ಲ ಎಂಬುದನ್ನು 4:1 ಬಹುಮತದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‍ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಎತ್ತಿಹೇಳಿದೆ.

ಮಧ್ಯವರ್ತಿಗಳ ಹಾವಳಿ ಇಲ್ಲದೆ ಸಬ್ಸಿಡಿಗಳು ಹಾಗೂ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳ ಹಣ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕೆಂಬ ಆಧಾರ್ ಯೋಜನೆಯ ಮೂಲ ಸದುದ್ದೇಶಕ್ಕೆ ಇದರಿಂದ ಮಾನ್ಯತೆ ಸಿಕ್ಕಿದಂತಾಗಿದೆ. ‘ಆಧಾರ್‌– ಸಬಲೀಕರಣದ ದಾಖಲೆ ಹಾಗೂ ಸಾಟಿಯಿಲ್ಲದ ಗುರುತಿನ ಸಾಕ್ಷ್ಯ’ ಎಂಬಂತಹ ಕೋರ್ಟ್ ಅಭಿಪ್ರಾಯ ಈ ನಿಟ್ಟಿನಲ್ಲಿ ಸರಿಯಾದುದು.ಸಬಲೀಕರಣದ ಗುರಿ ಸಾಧನೆ ಹಾಗೂ ನಾಗರಿಕರ ಖಾಸಗಿತನದ ಕಾಳಜಿಗಳನ್ನು ಗಣನೆಗೆ ತೆಗೆದುಕೊಳ್ಳುವ ಪ್ರಯತ್ನ ಇಲ್ಲಿದೆ.ನಾಗರಿಕರ ಖಾಸಗಿ ವ್ಯವಹಾರಗಳ ಬಗ್ಗೆ ಪ್ರಭುತ್ವದ ಅನಾರೋಗ್ಯಕರ ಕುತೂಹಲ ಅಥವಾ ಕಣ್ಗಾವಲಿನ ವ್ಯವಸ್ಥೆ ನಿರ್ಮಾಣ ಸಾಧ್ಯತೆಗೆ ಈ ಮೂಲಕ ತಡೆ ನೀಡಲಾಗಿದೆ. ಆದರೆ, ಪ್ಯಾನ್‍ ನಂಬರ್‌ಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕೆಂಬುದು ಎಷ್ಟು ಸರಿ ಎಂಬುದು ಇನ್ನೂ ಪರೀಕ್ಷೆಗೆ ಒಳಪಡಬೇಕಿದೆ.

ಈ ತೀರ್ಪು ನೀಡಿದ ಪೀಠದಲ್ಲಿದ್ದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನೀಡಿರುವ ಭಿನ್ನ ದನಿಯ ತೀರ್ಪು ಹಲವು ಮುಖ್ಯ ಅಂಶಗಳನ್ನು ಎತ್ತಿ ಹಿಡಿದಿದೆ. ಬಹುಮತದ ತೀರ್ಪಿಗೆ ವಿರುದ್ಧವಾದ ಈ ಭಿನ್ನ ಮಾತುಗಳು ಅನುಷ್ಠಾನಕ್ಕೆ ಬರುವುದಿಲ್ಲ ಎಂಬುದು ನಿಜ. ಆದರೆ ಆಧಾರ್ ಮೂಲ ವ್ಯವಸ್ಥೆಯಲ್ಲಿರುವ ದೋಷಗಳನ್ನು ಎತ್ತಿ ಹೇಳಿರುವ ಅವರ ಮಾತು ಸರ್ಕಾರದ ಕಣ್ಣು ತೆರೆಸಬೇಕಿದೆ. ‘ಆಧಾರ್ ಅಸಾಂವಿಧಾನಿಕ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ. ಗುರುತು ಸಾಬೀತುಪಡಿಸುವ ಕುರಿತಾದ ಕಾನೂನನ್ನು ಹಣಕಾಸು ಮಸೂದೆಯಾಗಿ ಹೇಗೆ ಅನುಮೋದಿಸಬಹುದು ಎಂದು ಪ್ರಶ್ನಿಸಿದ್ದಾರೆ.

‘ಆಧಾರ್ ಮಸೂದೆಗೆ ಹಣಕಾಸು ಮಸೂದೆಯ ರೂಪ ನೀಡಿ ರಾಜ್ಯಸಭೆಯ ಮುಂದೆ ತಾರದ ಕ್ರಮ ಸಾಂವಿಧಾನಿಕ ಪ್ರಕ್ರಿಯೆಯ ದುರ್ಬಳಕೆ’ ಎಂಬುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ‘ಅಧಿಕಾರದಲ್ಲಿ ಇರುವ ಪಕ್ಷವು ರಾಜ್ಯಸಭೆಯಲ್ಲಿ ಬಹುಮತ ಹೊಂದಿಲ್ಲದೆ ಇರಬಹುದು. ಆದರೆ ಹಣಕಾಸು ಮಸೂದೆ ಅಲ್ಲದ್ದನ್ನು ಹಣಕಾಸು ಮಸೂದೆ ರೂಪದಲ್ಲಿ ಮಂಡಿಸಿ ಶಾಸನಸಭೆಯ ಪಾತ್ರವನ್ನು ಮೊಟಕುಗೊಳಿಸುವುದು ಸಲ್ಲದು. ಇಂತಹದ್ದಕ್ಕೆ ಸಾಂವಿಧಾನಿಕ ಕೋರ್ಟ್‌ಗಳು ಅಸ್ತು ಎನ್ನಲು ಸಾಧ್ಯವಿಲ್ಲ’ ಎಂಬ ಅವರ ಕಟುನುಡಿಗಳು ಮನನಯೋಗ್ಯ. ಆಧಾರ್ ದತ್ತಾಂಶ ಮೂಲವ್ಯವಸ್ಥೆ ಭದ್ರವಾಗಿದೆ ಎಂಬಂತಹ ವಾದದಲ್ಲಿ ಸುಪ್ರೀಂ ಕೋರ್ಟ್‌ ನಂಬಿಕೆ ಇರಿಸಿದ್ದು, ಈ ವಿಶ್ವಾಸದ ಭಾವನೆ ತೀರ್ಪಿನಲ್ಲಿ ಎದ್ದು ಕಾಣಿಸುತ್ತದೆ. ಆದರೆ, ‘ಆಧಾರ್, ಖಾಸಗಿತನಕ್ಕೆ ಧಕ್ಕೆ ತರುತ್ತದೆ’ ಎಂಬುದು ನ್ಯಾಯಮುರ್ತಿ ಚಂದ್ರಚೂಡ್ ಅವರ ಅಭಿಪ್ರಾಯ.

ವ್ಯಕ್ತಿಯನ್ನು ಕೇವಲ 12 ಸಂಖ್ಯೆಗೆ ಇಳಿಸಿಬಿಡುತ್ತದೆ ಎಂದು ಅವರು ಹೇಳಿದ್ದಾರೆ. ಭದ್ರತೆ, ದತ್ತಾಂಶ ರಕ್ಷಣೆ, ಖಾಸಗಿತನದಂತಹ ವಿಚಾರಗಳು ಕೋರ್ಟ್‌ನ ಬಹುಮತದ ತೀರ್ಪಿನಲ್ಲಿ ಹೆಚ್ಚು ನಿರ್ವಹಣೆಯಾಗಿಲ್ಲ. ಆದರೆ, ಚಂದ್ರಚೂಡ್ ಅವರ ಭಿನ್ನಮತದ ತೀರ್ಪಿನಲ್ಲಿ ಈ ಅಂಶಗಳನ್ನು ಎತ್ತಲಾಗಿದೆ. ಆಧಾರ್ ಸಂಖ್ಯೆಗೆ ಒತ್ತಾಯಿಸಲು ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿದ್ದ ಆಧಾರ್ ಕಾಯ್ದೆಯ ಸೆಕ್ಷನ್ 57 ಕಿತ್ತು ಹಾಕಿ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಸರ್ವೋಚ್ಚ ನ್ಯಾಯಾಲಯವೇನೊ ರಕ್ಷಿಸಿದೆ. ಆದರೆ ಖಾಸಗಿ ಸಂಸ್ಥೆಗಳ ಜೊತೆಗೆ ಈಗಾಗಲೇ ಹಂಚಿಕೊಂಡಿರುವ ದತ್ತಾಂಶಗಳ ಗತಿ ಏನು ಎಂಬ ಬಗ್ಗೆ ಈ ತೀರ್ಪಿನಲ್ಲಿ ಸ್ಪಷ್ಟಪಡಿಸಿಲ್ಲ. ಹಾಗೆಯೇ ಫೋನ್ ಕಂಪನಿಗಳು ಸಂಗ್ರಹಿಸಿರುವ ಬಯೊಮೆಟ್ರಿಕ್ ದತ್ತಾಂಶಗಳನ್ನು ಅಳಿಸುವ ವಿಚಾರದಲ್ಲೂ ಈ ತೀರ್ಪು ಮೌನವಾಗಿದೆ.

ಫಲಾನುಭವಿಗಳ ಅನುಕೂಲಕ್ಕಾಗಿಯೇ ಸೃಷ್ಟಿಸಲಾದ ಈ ಗುರುತು ದೃಢೀಕರಣ ಪ್ರಕ್ರಿಯೆಯ ವೈಫಲ್ಯಗಳಿಂದಾಗಿ ಬಡಜನರು ಸೌಲಭ್ಯ ವಂಚಿತರಾದ ಪ್ರಕರಣಗಳೂ ದೊಡ್ಡ ಮಟ್ಟದಲ್ಲಿ ವರದಿಯಾಗಿವೆ. ಆಹಾರದ ಹಕ್ಕು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಕೂಲಗಳು ಅರ್ಹರಿಗೆ ದಕ್ಕದ ಸ್ಥಿತಿ ಸೃಷ್ಟಿಯಾಗಿದ್ದು ಆಕ್ರೋಶಕ್ಕೂ ಕಾರಣವಾಗಿತ್ತು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನಿರಾಕರಣೆಯಾಗಬಾರದು ಎಂದು ಕೋರ್ಟ್ ಸ್ಪಷ್ಟಮಾತುಗಳಲ್ಲಿ ನಿರ್ದೇಶಿಸಿದೆ. ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿ ‘ಆಧಾರ್’ ಬಳಕೆಯಾಗಬೇಕಾದುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT