ಕಾರ್ಮಿಕರಿಗೆ ಪಿಂಚಣಿ ತುಟಿಗೆ ಸವರಿದ ತುಪ್ಪ

ಶುಕ್ರವಾರ, ಮಾರ್ಚ್ 22, 2019
21 °C

ಕಾರ್ಮಿಕರಿಗೆ ಪಿಂಚಣಿ ತುಟಿಗೆ ಸವರಿದ ತುಪ್ಪ

Published:
Updated:
Prajavani

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ’ ಪಿಂಚಣಿ ಯೋಜನೆಯನ್ನು ಪ್ರಕಟಿಸಿದೆ. ವೃದ್ಧಾಪ್ಯ ವೇತನವೂ ಸೇರಿದಂತೆ ಯಾವುದೇ ಸಮಾಜ ಕಲ್ಯಾಣ ಯೋಜನೆಗಳ ಲಾಭವೂ ದೊರೆಯದಿರುವ ಸುಮಾರು 42 ಕೋಟಿ ಶ್ರಮಿಕರಿಗೆ ಹೊಸ ಪಿಂಚಣಿ ಯೋಜನೆ ಆಸರೆ ಆಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಹೊಸ ಯೋಜನೆ ಎಂದು ಬಣ್ಣಿಸಲಾಗಿದ್ದರೂ ಇದು ಹೊಸ ಯೋಜನೆ ಅಲ್ಲ. ಯುಪಿಎ ಸರ್ಕಾರದ 2011ರ ‘ಸ್ವಾವಲಂಬನ’ ಯೋಜನೆಯು ‘ಅಟಲ್ ಪಿಂಚಣಿ ಯೋಜನೆ’ ಆಗಿತ್ತು. ಇದೀಗ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ’ದ ಹೊಸ ಹೆಸರು ಧರಿಸಿದೆ. ಮೊದಲಿಗಿಂತ ತುಸುವೇ ಹೆಚ್ಚು ಹೂರಣ ಇರಿಸಲಾಗಿದೆ ಅಷ್ಟೇ. ಬದುಕಿನ ಮುಸ್ಸಂಜೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ನಿಜವಾದ ಆಸರೆಯಾಗುವ ಗುರಿ ಈಡೇರಿಲ್ಲ. ಜಾರಿ ಮಾಡುವಲ್ಲಿ ಹಲವು ತೊಡಕುಗಳು ಅಡ್ಡ ಬರಲಿವೆ. ಯೋಜನೆಯ ವಂತಿಗೆ- ನಾಮನಿರ್ದೇಶನ ಕುರಿತ ನಿಬಂಧನೆಗಳು ಮತ್ತು ಷರತ್ತುಗಳ ಕಾರಣ, ಕಾರ್ಮಿಕ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. 60ನೇ ವರ್ಷದಿಂದ ತಿಂಗಳಿಗೆ ಮೂರು ಸಾವಿರ ರೂಪಾಯಿ ಕೈಗೆ ಸಿಗುವ ಈ ಪಿಂಚಣಿ ಮೊತ್ತ ಸಾಧಾರಣ. ಈ ₹3,000ದ ಮೊತ್ತ ಕೂಡ 18ನೇ ವಯಸ್ಸಿನಿಂದ ಹೊಸ ಯೋಜನೆ ಸೇರಿ ಮಾಸಿಕ ₹55 ವಂತಿಗೆ ತುಂಬುವ ಕಾರ್ಮಿಕನಿಗೆ ಮಾತ್ರ ಲಭಿಸುವುದು. ಯೋಜನೆಯನ್ನು ಸೇರುವ ವಯಸ್ಸು ಹೆಚ್ಚಿದಂತೆಲ್ಲ ವಂತಿಗೆಯ ಮೊತ್ತವೂ ಹೆಚ್ಚಲಿದೆ. ಉದಾಹರಣೆಗೆ, 29 ವರ್ಷ ವಯಸ್ಸಿನ ಕಾರ್ಮಿಕನೊಬ್ಬ ಇಂದಿನಿಂದ ಈ ಯೋಜನೆ ಸೇರಿ 2050ರಿಂದ ತಿಂಗಳಿಗೆ ₹ 3,000 ಪಿಂಚಣಿ ಪಡೆಯಬೇಕಿದ್ದರೆ ನಿವೃತ್ತಿಯ ತನಕ ₹100ರ ಮಾಸಿಕ ಕಂತು ತುಂಬಬೇಕು. ಸರ್ಕಾರವೂ ಅಷ್ಟೇ ಮೊತ್ತವನ್ನು ತುಂಬಲಿದೆ. 40ರ ವಯಸ್ಸಿನಲ್ಲಿ ಸೇರುವವರಿಗೆ 20 ವರ್ಷಗಳ ನಂತರ ದೊರೆಯುವ ₹3000ದ ಮೌಲ್ಯವನ್ನು ಹಣದುಬ್ಬರವು ಅದೆಷ್ಟು ಕುಗ್ಗಿಸಿದ್ದೀತು? ಇನ್ನೂ ಹೆಚ್ಚು ಕಾಲ ಕಾಯಬೇಕಾದವರ ದುಃಸ್ಥಿತಿ ಹೇಳತೀರದು. ತಿಂಗಳಿಗೆ ₹15 ಸಾವಿರಕ್ಕಿಂತ ಹೆಚ್ಚು ಗಳಿಸುವವರು ಈ ಯೋಜನೆಗೆ ಅನರ್ಹರು. ತಿಂಗಳ ವೇತನ ರೂಪದಲ್ಲಿ ಕಡಿಮೆ ಗಳಿಸುವ ಕಾರ್ಮಿಕರು ತಮ್ಮ ಪಾಲಿನ ವಂತಿಗೆಯನ್ನು ತುಂಬುವ ಕುರಿತು ಸಂದೇಹಗಳಿವೆ. 18-40 ವಯೋಮಾನ ನಿರ್ಬಂಧದ ಕಾರಣ ಸುಮಾರು 13 ಕೋಟಿ ಅಸಂಘಟಿತ ಕಾರ್ಮಿಕರು ಯೋಜನೆಯಿಂದ ಹೊರಗೆ ಉಳಿಯಲಿದ್ದಾರೆ.

ಪಾಲಿಸಿದಾರರು ತಮ್ಮ ಪಾಲಿನ ಹಣ ತುಂಬುವ ಇತರೆ ಪಿಂಚಣಿ ಯೋಜನೆಗಳಲ್ಲಿ ಅವರ ನಿಧನದ ನಂತರ ಅವರ ಮಕ್ಕಳಿಗೆ ಇಲ್ಲವೇ ಅವಲಂಬಿತರಿಗೆ ಪಿಂಚಣಿ ಸಂದಾಯ ಆಗುತ್ತದೆ. ಆದರೆ ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಪಿಂಚಣಿ ಯೋಜನೆಯ ಪಾಲಿಸಿದಾರ ಮತ್ತು ಆತನ ಪತ್ನಿ ಇಲ್ಲವೇ ಪಾಲಿಸಿದಾರಳು ಮತ್ತು ಆಕೆಯ ಪತಿ ಇಬ್ಬರೂ ತೀರಿಹೋದರೆ ಆತ ಅಥವಾ ಆಕೆಯ ಪಿಂಚಣಿ ಯೋಜನೆಯ ಹಣ ಅವರ ಮಕ್ಕಳಿಗೆ ಸಿಗುವುದಿಲ್ಲ, ಬದಲಾಗಿ ಸರ್ಕಾರ ಅದನ್ನು ವಾಪಸು ಪಡೆಯಲಿದೆ. ಸಂಘ ಪರಿವಾರಕ್ಕೆ ಸೇರಿದ ಭಾರತೀಯ ಮಜ್ದೂರ್ ಸಂಘ ಕೂಡ ಈ ನಿರ್ಬಂಧವನ್ನು ಅನ್ಯಾಯ ಎಂದು ಕರೆದಿದೆ. ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಅಸಂಘಟಿತ ವಲಯಗಳ  ಕೊಡುಗೆ ಶೇ 50ರಷ್ಟು ಇದೆ. ದೇಶದ ಶ್ರಮಿಕ ಸೇನೆಯಲ್ಲಿ ಅಸಂಘಟಿತ ವಲಯದ್ದೇ ಸಿಂಹಪಾಲು. ಆದರೂ, ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅವರಿಗಾಗಿ ಸಾಮಾಜಿಕ- ಆರ್ಥಿಕ ಸುರಕ್ಷತಾ ಕ್ರಮಗಳು ಇಲ್ಲವೇ ಇಲ್ಲ ಎಂದರೂ ನಡೆದೀತು. ಬಜೆಟ್‌ನಲ್ಲಿ ಗೋರಕ್ಷಣೆಗೆ ₹750 ಕೋಟಿ ಮೀಸಲಿಡಲಾಗಿದೆ. ಆದರೆ, ವಿಶ್ವದ ಅತ್ಯಂತ ದೊಡ್ಡ ಪಿಂಚಣಿ ಯೋಜನೆಗಳಲ್ಲಿ ಒಂದು ಎಂದು ಸರ್ಕಾರವೇ ಬಣ್ಣಿಸಿಕೊಂಡಿರುವ 42 ಕೋಟಿ ಶ್ರಮಿಕರಿಗೆ ಸಂಬಂಧಿಸಿದ ಈ ಯೋಜನೆಗೆ ತೆಗೆದಿರಿಸಿರುವ ಮೊತ್ತ ಕೇವಲ ₹500 ಕೋಟಿ ಎಂಬುದು ಕ್ರೂರ ವಿಡಂಬನೆ. ಬೀದಿ ವ್ಯಾಪಾರಿಗಳು, ಬಿಸಿಯೂಟದ ಕೆಲಸಗಾರರು, ಚಪ್ಪಲಿ ಹೊಲಿಯುವವರು, ಚಿಂದಿ ಆಯುವವರು, ರಿಕ್ಷಾ ತುಳಿಯುವವರು, ಕಟ್ಟಡ ನಿರ್ಮಾಣ ಕೆಲಸಗಾರರು ಮುಂತಾದವರಿಗೆ ನ್ಯಾಯ ಒದಗಿಸುವಲ್ಲಿ ಹೊಸ ಪಿಂಚಣಿ ಯೋಜನೆ ವಿಫಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮತ ಸೆಳೆಯಲು ಬಡ ಶ್ರಮಿಕರ ತುಟಿಗೆ ಸವರಿರುವ ತುಪ್ಪವಿದು. ಹೊಟ್ಟೆಗೆ ಇಳಿಯುವುದಿರಲಿ, ಬಾಯಿಗೂ ಸಿಗದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !