ಭಾನುವಾರ, ಮಾರ್ಚ್ 29, 2020
19 °C

ಎನ್‌ಪಿಆರ್‌ ಮತ್ತು ಜನಗಣತಿ ಆತಂಕ ನಿವಾರಿಸುವ ಹೊಣೆ ಸರ್ಕಾರದ್ದು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಹಾಗೂ ಜನಗಣತಿ– 2021ರ ವಿಚಾರವಾಗಿ ಜನರಲ್ಲಿ ಅತೃಪ್ತಿ ಮತ್ತು ಭೀತಿ ಆವರಿಸಿದೆ’ ಎಂದು ಕಾಂಗ್ರೆಸ್ಸಿನ ಆನಂದ ಶರ್ಮ ನೇತೃತ್ವದ ‘ಕೇಂದ್ರ ಗೃಹ ಸಚಿವಾಲಯದ ಅನುದಾನ ಬೇಡಿಕೆಗಳ ಕುರಿತ ಸದನ ಸಮಿತಿ’ಯು ತನ್ನ ವರದಿಯಲ್ಲಿ ಹೇಳಿದೆ. ಈ ವರದಿಯನ್ನು ಮಾರ್ಚ್‌ 5ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

‘ಈ ಆತಂಕಗಳ ಕುರಿತು ಮಾಧ್ಯಮಗಳ ಮೂಲಕ ಸೂಕ್ತ ರೀತಿಯಲ್ಲಿ ಸಾರ್ವಜನಿಕವಾಗಿ ಚರ್ಚೆ ಆಗಬೇಕಿತ್ತು. ಜನಗಣತಿಯು ಸುಗಮವಾಗಿ ನಡೆಯುವಂತೆ ಆಗಲು ಗೃಹ ಸಚಿವಾಲಯವು ಮಾರ್ಗೋಪಾಯಗಳನ್ನು ಪರಿಗಣಿಸ ಬೇಕು. ಇಲ್ಲವಾದರೆ, ಕೆಲವು ರಾಜ್ಯಗಳಲ್ಲಿ ಇಡೀ ಪ್ರಕ್ರಿಯೆಗೆ ಅಡ್ಡಿ ಎದುರಾಗುವ ಸಾಧ್ಯತೆ ಇದೆ’ ಎಂದು ಈ ಸಮಿತಿ ಹೇಳಿದೆ.

ಎನ್‌ಪಿಆರ್‌ಗೆ ಸಂಬಂಧಿಸಿದ ಹಲವು ಸಂಗತಿಗಳ ವಿಚಾರವಾಗಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮನವರಿಕೆ ಮಾಡಿಕೊಡಬೇಕು. ಎನ್‌ಪಿಆರ್ ವಿಚಾರದಲ್ಲಿ ದೇಶದಲ್ಲಿ ಎಲ್ಲಿ ಕೂಡ ಆತಂಕ ಇರಬಾರದು, ರಾಷ್ಟ್ರೀಯ ಸಹಮತ ಇರಬೇಕು ಮತ್ತು ಸ್ಪಷ್ಟತೆ ಮೂಡಿರಬೇಕು. ಇದರಿಂದ ಜನಗಣತಿ ಮತ್ತು ಎನ್‌ಪಿಆರ್‌ ಕೆಲಸಗಳನ್ನು ಸುಗಮವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದೂ ಸಮಿತಿ ಹೇಳಿದೆ.

ಎನ್‌ಪಿಆರ್‌ ಪ್ರಕ್ರಿಯೆಯನ್ನು ಪ್ರಸ್ತುತ ಯೋಜಿಸಿರುವ ರೀತಿಯಲ್ಲಿ ನಡೆಸಬಾರದು, ಅದನ್ನು ಈ ಹಿಂದಿನ ಮಾದರಿಯಲ್ಲೇ ನಡೆಸಬೇಕು ಎಂಬ ಆಗ್ರಹವು ಬಿಜೆಪಿಯ ಪಾಲುದಾರಿಕೆ ಇರುವ ಬಿಹಾರ ರಾಜ್ಯ ಸರ್ಕಾರದಿಂದ ಕೂಡ ಬಂದಿದೆ. ಕೇರಳ ಸರ್ಕಾರವು ಎನ್‌ಪಿಆರ್‌ಗೆ ಸಂಬಂಧಿಸಿದ ಕೆಲಸಗಳನ್ನು ಸ್ಥಗಿತ ಗೊಳಿಸುವಂತೆ ಸೂಚಿಸಿದೆ ಎಂಬ ವರದಿಗಳು ಇವೆ. ಎನ್‌ಪಿಆರ್‌ಗೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಸಮಿತಿಯ ಮಾತುಗಳು ಮಹತ್ವ ಪಡೆದುಕೊಳ್ಳುತ್ತವೆ. 

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ಎನ್‌ಪಿಆರ್‌ ಕುರಿತು ದೇಶದಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ. ದೇಶದ ಧರ್ಮನಿರಪೇಕ್ಷ ಪರಂಪರೆಗೆ ಪೌರತ್ವ ಕಾಯ್ದೆಯು ಸವಾಲಾಗಿ ಪರಿಣಮಿಸಿದೆ ಎಂದು ಅದನ್ನು ವಿರೋಧಿಸುತ್ತಿರುವವರು ಹೇಳುತ್ತಿದ್ದಾರೆ. ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯ ಪರಿಣಾಮವಾಗಿ ಪೌರತ್ವ ಪಟ್ಟಿಯಿಂದ ಸರಿಸುಮಾರು 19 ಲಕ್ಷ ಜನ ಹೊರಗೆ ಉಳಿದಿದ್ದಾರೆ.

ಇಂತಹ ಎನ್‌ಆರ್‌ಸಿ ಪ್ರಕ್ರಿಯೆಯನ್ನು ದೇಶದ ಇತರ ರಾಜ್ಯಗಳಲ್ಲಿಯೂ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯು ಅಸ್ಸಾಂನಲ್ಲಿನ ಪರಿಣಾಮಗಳನ್ನು ಅರಿತವರಲ್ಲಿ ಆತಂಕ ಮೂಡಿಸಿದೆ. ಆದರೆ, ಎನ್‌ಆರ್‌ಸಿ ಪ್ರಕ್ರಿಯೆಯನ್ನು ದೇಶದ ಇತರ ರಾಜ್ಯಗಳಲ್ಲಿ ನಡೆಸುವ ಕುರಿತು ಚರ್ಚೆಯೇ ನಡೆದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ, ಜನರಲ್ಲಿ ಮೂಡಿರುವ ಆತಂಕವನ್ನು ಈ ಹೇಳಿಕೆಯು ತಗ್ಗಿಸಿದಂತೆ ಕಾಣಿಸುವುದಿಲ್ಲ.

ಸಿಎಎ ಮತ್ತು ಎನ್‌ಆರ್‌ಸಿಯನ್ನು ಒಟ್ಟಾಗಿ ಗ್ರಹಿಸಿದಾಗ ಗೋಚರವಾಗುವ ಚಿತ್ರಣ ಕೂಡ, ಇವು ಮೂಡಿಸಿರುವ ಆತಂಕವನ್ನು ಇನ್ನಷ್ಟು ಹೆಚ್ಚಿಸ ಬಲ್ಲವು. ದೇಶದಲ್ಲಿ ಇಂತಹ ಆತಂಕ ಉಂಟಾಗಿರುವ ಸಂದರ್ಭದಲ್ಲಿಯೇ ಎನ್‌ಪಿಆರ್‌ ಪ್ರಕ್ರಿಯೆಯನ್ನು ಆರಂಭಿಸಬೇಕಾಗಿದೆ. ಇದು, ಹತ್ತು ವರ್ಷಗಳ ಹಿಂದೆ ಕೂಡ ನಡೆದಿತ್ತು ಎಂಬುದು ನಿಜ. ಆಗ, ಎನ್‌ಪಿಆರ್‌ ವಿಚಾರವಾಗಿ ಈಗಿನಂತೆ ಆತಂಕ ಉಂಟಾಗಿರಲಿಲ್ಲ ಎಂಬುದೂ ನಿಜ. ಆದರೆ, ಈಗ ಎನ್‌ಪಿಆರ್‌ ಮೂಲಕ ಸಂಗ್ರಹಿಸುವ ದಾಖಲೆಗಳನ್ನು ಭಾರತೀಯ ಪೌರರ ರಾಷ್ಟ್ರೀಯ ನೋಂದಣಿಗೆ (ಎನ್‌ಆರ್‌ಐಸಿ) ಬಳಸಿಕೊಳ್ಳಲಾಗುವುದು ಎಂದು ಕೇಂದ್ರದ ಸಚಿವರು ಒಂದಕ್ಕಿಂತ ಹೆಚ್ಚು ಸಂದರ್ಭ ಗಳಲ್ಲಿ ನೀಡಿರುವ ಲಿಖಿತ ಹೇಳಿಕೆಗಳು, ಈಗಿನ ಎನ್‌ಪಿಆರ್‌ ಕುರಿತು ಜನರಲ್ಲಿ ಆತಂಕ ಸೃಷ್ಟಿಸಿವೆ. ಎನ್‌ಪಿಆರ್‌ ಪ್ರಕ್ರಿಯೆಗೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಈ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಅನುಮಾನ–ಆತಂಕ ಇವೆ. ಇಂತಹ ಸನ್ನಿವೇಶದಲ್ಲಿಯೇ ಆರಂಭವಾಗಲಿರುವ ಜನಗಣತಿಯ ಮೊದಲ ಹಂತದ ಜೊತೆಯಲ್ಲೇ ಎನ್‌ಪಿಆರ್‌ ಕೂಡ ನಡೆಯಲಿರುವ ಕಾರಣ, ಜನಗಣತಿಯೆಂಬ ಅತ್ಯಗತ್ಯ ಪ್ರಕ್ರಿಯೆಯ ಮೇಲೆ ಅನುಚಿತ ಪರಿಣಾಮ ಉಂಟಾಗಬಹುದು. ಹಾಗಾಗದಂತೆ ನೋಡಿಕೊಳ್ಳುವ, ಜನರಲ್ಲಿ ವಿಶ್ವಾಸ ಮೂಡಿಸುವ ಹೊಣೆ ಸರ್ಕಾರದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು