ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಮತ್ತಷ್ಟು ಬಲ: ಇನ್ನು ಬರಲಿ ಸುದಿನ

Last Updated 23 ಮೇ 2019, 18:30 IST
ಅಕ್ಷರ ಗಾತ್ರ

ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜಯ ಲಭಿಸಿದೆ. ಆ ಮೂಲಕ, ಭಾರತದ ಮತದಾರರು ಮೋದಿ ಅವರಿಗೆ ಇನ್ನೊಂದು ಅವಕಾಶ ನೀಡಿದ್ದಾರೆ. ಈ ಐದು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಕೈಗೊಂಡ ಕ್ರಮಗಳಿಗೆ ಬೆಂಬಲವನ್ನೂ ಸೂಚಿಸಿದ್ದಾರೆ. ಕಳೆದ ಬಾರಿ ‘ಒಳ್ಳೆಯ ದಿನ’ದ ಭರವಸೆ ನೀಡಿದ್ದ ಮೋದಿ, ಈ ಬಾರಿ ರಾಷ್ಟ್ರೀಯತೆ, ದೇಶದ ರಕ್ಷಣೆ, ಸೈನಿಕರ ತ್ಯಾಗ ಮುಂತಾದ ವಿಷಯಗಳನ್ನು ಜನರ ಮುಂದಿಟ್ಟಿದ್ದರು. ಅದಕ್ಕೆ ಜನ ತಲೆದೂಗಿದ್ದಾರೆ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿ ಸುಮಾರು 300 ಸ್ಥಾನಗಳಲ್ಲಿ ಗೆದ್ದಿದೆ. ಕಳೆದ ಬಾರಿಯೂ ಬಿಜೆಪಿಗೆ ಬಹುಮತ ಲಭ್ಯವಾಗಿತ್ತು. ಈ ಬಾರಿ ಲೋಕಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಇನ್ನಷ್ಟು ಹೆಚ್ಚಾಗಿದೆ. ಯಾರ ಮುಲಾಜಿಲ್ಲದೆ ಜನರ ಕಲ್ಯಾಣಕ್ಕೆ ಮುಂದಾಗಲು ಇದು ಸಕಾಲ.ಶತಮಾನದಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಬಾರಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಸಿಕ್ಕಿರಲಿಲ್ಲ. ಈ ಬಾರಿ ಕೂಡ ಮೋದಿ ಅಲೆಯಲ್ಲಿ ತೇಲಿಹೋದ ಆ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಸಿಗುವುದಿಲ್ಲ. ಇದು, ಮತ್ತೊಂದು ಹೀನಾಯ ಸೋಲು. ಕಳೆದ ಬಾರಿ 44 ಸ್ಥಾನ ಪಡೆದಿತ್ತು. ಈ ಬಾರಿ ಅದಕ್ಕಿಂತ ಆರೇಳು ಸ್ಥಾನ ಹೆಚ್ಚಿಗೆ ಪಡೆದಿದೆ. ದೇಶವನ್ನು ದಶಕಗಳ ಕಾಲ ಆಳಿದ ರಾಜಕೀಯ ಪಕ್ಷದ ಆತ್ಮಾವಲೋಕನಕ್ಕೆ ಇದು ಸಕಾಲ. ಈಗಲಾದರೂ ವಂಶಾಡಳಿತದ ಪ್ರಭಾವದಿಂದ ಬಿಡಿಸಿಕೊಳ್ಳದಿದ್ದರೆ ಹಾಗೂ ಕಾರ್ಯಕರ್ತರಲ್ಲಿ ಹೊಸ ಭರವಸೆಯನ್ನು ಮೂಡಿಸದಿದ್ದರೆ ಆ ಪಕ್ಷಕ್ಕೆ ಉಳಿಗಾಲವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸತತ ಎರಡು ಸೋಲು ಕಾಂಗ್ರೆಸ್ ಪಕ್ಷವನ್ನು ಕಂಗೆಡಿಸಬಹುದು. ಆದರೆ, ಸೋಲನ್ನು ಜಯದ ಸೋಪಾನವಾಗಿ ಪರಿವರ್ತಿಸಿಕೊಳ್ಳುವ ಸವಾಲು ಪಕ್ಷದ ನಾಯಕತ್ವದ ಮೇಲಿದೆ.

ಆಡಳಿತಾರೂಢ ಬಿಜೆಪಿ, ದೇಶದ ಜನರ ಮನದಿಂಗಿತವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದೆ. ಅದಕ್ಕೆ ತಕ್ಕಂತೆ ಚುನಾವಣೆಯ ತಂತ್ರಗಳನ್ನು ಹೆಣೆಯುತ್ತಿದೆ. ಬಿಜೆಪಿಯ ತಂತ್ರ ಈ ಬಾರಿಯೂ ಫಲ ನೀಡಿದೆ. ಅಚ್ಛೇದಿನ್, ಉದ್ಯೋಗ ಸೃಷ್ಟಿ, ಬಡತನ ನಿವಾರಣೆಯಂತಹ ಭರವಸೆಗಳನ್ನು ಬದಿಗಿಟ್ಟು ಈ ಬಾರಿ ಅದು ಹೊಸ ದಾರಿಯನ್ನೇ ಹಿಡಿಯಿತು. ಯುದ್ಧೋನ್ಮಾದದ ವಾತಾವರಣವನ್ನು ಸೃಷ್ಟಿಸಿತು. ಬಾಲಾಕೋಟ್ ಮತ್ತು ಪುಲ್ವಾಮಾ ಪ್ರಕರಣಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಬಳಸಿಕೊಂಡಿತು. ಜನರ ಭಾವುಕತೆಯನ್ನು ಮತವನ್ನಾಗಿ ಪರಿವರ್ತಿಸುವ ಯಾವುದೇ ಅವಕಾಶವನ್ನೂ ಬಿಜೆಪಿ ಬಿಟ್ಟುಕೊಡಲಿಲ್ಲ. ಕಾರ್ಯಕರ್ತರ ಜೊತೆಗೂಡಿ ಸಂಘಟಿತ ಹೋರಾಟವನ್ನೂ ಎನ್‌ಡಿಎ ನಡೆಸಿತು. ಇವೆಲ್ಲವೂ ವಿಜಯದ ಮೆಟ್ಟಿಲುಗಳಾದವು. ಆದರೆ ಇಂತಹ ಸಂಘಟಿತ ಯತ್ನವು ವಿರೋಧ ಪಕ್ಷಗಳಿಂದ ನಡೆಯಲಿಲ್ಲ. ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ್ ರಚನೆಯಾದರೂ ಅದು ನಾಯಕರ ನಡುವಿನ ಮೈತ್ರಿಯಾಯಿತೇ ವಿನಾ ಕಾರ್ಯಕರ್ತರ ಮಟ್ಟಕ್ಕೆ ಇಳಿಯಲಿಲ್ಲ. ಕರ್ನಾಟಕದಲ್ಲಿಯೂ ಹೀಗೆಯೇ ಆಯಿತು. ಅದರ ಸಂಪೂರ್ಣ ಲಾಭ ಬಿಜೆಪಿಗೆ ದೊರೆಯಿತು. ಉತ್ತರ ಪ್ರದೇಶದಲ್ಲಿ ಕೆಲವು ಸ್ಥಾನಗಳು ಕೈತಪ್ಪಬಹುದು ಎಂದು ಮೊದಲೇ ನಿರೀಕ್ಷಿಸಿದ್ದ ಬಿಜೆಪಿ, ಆ ಸ್ಥಾನಗಳನ್ನು ತುಂಬಿಕೊಳ್ಳಲು ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ತಂತ್ರಗಾರಿಕೆ ಆರಂಭಿಸಿತು. ಅದು ಫಲ ನೀಡಿದೆ. ಉತ್ತರ ಪ್ರದೇಶದಲ್ಲಿ ಕೂಡ ಹೆಚ್ಚಿನ ನಷ್ಟವಾಗಲಿಲ್ಲ. ಅದರಿಂದಾಗಿಯೇ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಯಿತು. ಕೇಂದ್ರದಲ್ಲಿ ಈಗ ಯಾರು ಸರ್ಕಾರ ರಚಿಸುತ್ತಾರೆ ಎನ್ನುವ ಗೊಂದಲವಿಲ್ಲ. ಮೋದಿ ಅವರಿಗೆ ಎದುರಾಳಿಗಳೂ ಇಲ್ಲ. ಮುಂದಿನ ಐದು ವರ್ಷ ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಕಲ್ಯಾಣದತ್ತಲೇ ಚಿಂತಿಸುವ ಅಗತ್ಯ ಇದೆ. ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ, ಬೆಳೆಯುತ್ತಿರುವ ನಿರುದ್ಯೋಗ, ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ, ರೈತರ ಆತ್ಮಹತ್ಯೆ, ಕೈಗಾರಿಕೆಗಳ ಅವನತಿ ಹಾಗೂ ಇತರ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕಾಗಿದೆ. ಕಳೆದ ಬಾರಿ ನೀಡಿದ್ದ ಹಲವಾರು ಭರವಸೆಗಳು ಈಡೇರಿಲ್ಲ. ಅವುಗಳನ್ನೂ ಈಗ ಈಡೇರಿಸಬೇಕಾಗಿದೆ. ಸತತ ಗೆಲುವಿನಿಂದ ಮೈಮರೆತರೆ ಈಗ ಗೆಲ್ಲಿಸಿದ ಜನರೇ ಮುಂದೆ ಸೋಲಿನ ರುಚಿಯನ್ನೂ ತೋರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT