ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಶಿಕ್ಷಣ ಸುಧಾರಣೆಮರುವಿಮರ್ಶೆ ಅಗತ್ಯ

ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ತೀರಾ ಕೆಳಮಟ್ಟದಲ್ಲಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ
Last Updated 23 ಜನವರಿ 2019, 20:00 IST
ಅಕ್ಷರ ಗಾತ್ರ

ಗ್ರಾಮೀಣ ಭಾರತದ ಶಾಲಾ ಶಿಕ್ಷಣದ ಸ್ಥಿತಿಗತಿ ಕುರಿತು ‘ಪ್ರಥಮ್‌’ ಸ್ವಯಂ ಸೇವಾ ಸಂಸ್ಥೆ ಪ್ರಕಟಿಸಿರುವ 2018ರ ವರದಿ ಶಿಕ್ಷಣ ಕ್ಷೇತ್ರದ ಪುನರ್‌ ವಿಮರ್ಶೆಗೆ ಒತ್ತಾಯಿಸುವಂತಿದೆ. ಶಾಲಾ ಶಿಕ್ಷಣದ ಸುಧಾರಣೆಯ ತೀವ್ರ ಅಗತ್ಯವನ್ನು ಸೂಚಿಸುವಂತಿರುವ ಈ ವರದಿ, ಶೈಕ್ಷಣಿಕ ಪ್ರಗತಿಯನ್ನು ಗುರಿಯಾಗುಳ್ಳ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಲು ಸಾಲು ಕಾರ್ಯಕ್ರಮಗಳ ಫಲಶ್ರುತಿಗೆ ಹಿಡಿದಿರುವ ಕನ್ನಡಿಯೂ ಹೌದು.

ದೇಶದ 596 ಜಿಲ್ಲೆಗಳ 1ರಿಂದ 8ನೇ ತರಗತಿಯ ಸುಮಾರು ಐದೂವರೆ ಲಕ್ಷ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಹಳ್ಳಿಗಾಡಿನ ಈ ಮಕ್ಕಳಲ್ಲಿ ಬಹುತೇಕರಿಗೆ ತಮ್ಮ ಮಾತೃಭಾಷೆಯಲ್ಲಿನ ಪಠ್ಯವನ್ನು ಸರಾಗವಾಗಿ ಓದುವುದು ಸಾಧ್ಯವಿಲ್ಲ ಹಾಗೂ ಸರಳವಾದ ಲೆಕ್ಕಗಳನ್ನು ಮಾಡುವುದು ತಿಳಿದಿಲ್ಲ ಎನ್ನುವುದು ಪ್ರಾಥಮಿಕ ಶಿಕ್ಷಣದ ದುರವಸ್ಥೆಯನ್ನು ಸೂಚಿಸುವಂತಿದೆ.

ಮೂರನೇ ತರಗತಿಯ ಶೇ 27.2, ಐದನೇ ತರಗತಿಯ ಶೇ 50.3 ಹಾಗೂ ಎಂಟನೇ ತರಗತಿಯ ಶೇ 73ರಷ್ಟು ಮಕ್ಕಳು ಮಾತ್ರ ಎರಡನೇ ತರಗತಿಯ ಪುಸ್ತಕಗಳನ್ನು ಓದಬಲ್ಲವರಾಗಿದ್ದಾರೆ. ಭಾಷೆಯ ಜೊತೆಗೆ ಗಣಿತದ ಲೆಕ್ಕಗಳು ಕೂಡ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯೆನಿಸಿವೆ. ಮೂರನೇ ತರಗತಿಯ ಶೇ 28 ಮಕ್ಕಳಷ್ಟೇ ವ್ಯವಕಲನದ ಸರಳ ಲೆಕ್ಕಗಳನ್ನು ಮಾಡಬಲ್ಲರು ಹಾಗೂ ಎಂಟನೇ ತರಗತಿಯ ಶೇ 44 ವಿದ್ಯಾರ್ಥಿಗಳು ಮೂರಂಕಿಯ ಸಂಖ್ಯೆಯನ್ನು ಒಂದಂಕಿಯಿಂದ ಭಾಗಿಸಲಿಕ್ಕೆ ಸಮರ್ಥರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಪಂಜಾಬ್‌ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸತತ ಪ್ರಯತ್ನದ ಮೂಲಕ ಶೈಕ್ಷಣಿಕ ಪ್ರಗತಿಯಲ್ಲಿ ಸ್ವಲ್ಪಮಟ್ಟಿಗಿನ ಚೇತರಿಕೆ ಕಂಡಿದ್ದರೆ, ದೇಶದ ದೊಡ್ಡ ರಾಜ್ಯವಾದ ಉತ್ತರಪ್ರದೇಶ ನಿರೀಕ್ಷಿತ ಸಾಧನೆ ಮಾಡಿಲ್ಲ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಸಾಧನೆ ಕೂಡ ತೀರಾ ಕಳಪೆಯೇನಲ್ಲ. ‘ಶಿಕ್ಷಣ ಹಕ್ಕು’ ಕಾಯ್ದೆಯ ನಂತರ ಶಾಲೆಗೆ ಬರುವ ಮಕ್ಕಳ ಸಂಖ್ಯೆ ನಾಟಕೀಯವಾಗಿ ಹೆಚ್ಚಿದೆ. ಸರ್ಕಾರಿ ದಾಖಲೆಗಳ ಪ್ರಕಾರ, 6ರಿಂದ 14ನೇ ವಯಸ್ಸಿನ ಶಾಲೆ ಬಿಡುವ ಮಕ್ಕಳ ಸಂಖ್ಯೆ ಶೇ 2.8ಕ್ಕೆ ಇಳಿದಿದೆ.

ಆದರೆ, ಮಕ್ಕಳ ಸಂಖ್ಯೆಯ ಹೆಚ್ಚಳದ ಜೊತೆಗೆ ಕಲಿಕೆಯ ಗುಣಮಟ್ಟ ಏರಿಕೆಯಾಗಿಲ್ಲ. ಮೂಲಭೂತ ಸೌಕರ್ಯಗಳ ಮಟ್ಟಿಗೆ ಕೂಡ ಸರ್ಕಾರಿ ಶಾಲೆಗಳದು ಆಮೆಗತಿಯ ಪ್ರಗತಿ. ಈಶಾನ್ಯ ರಾಜ್ಯಗಳ ಸ್ಥಿತಿಯಂತೂ ಮತ್ತಷ್ಟು ಶೋಚನೀಯ. ಜಮ್ಮು ಕಾಶ್ಮೀರದ ಶಾಲೆಗಳಲ್ಲಂತೂ ಕುಡಿಯುವ ನೀರಿನ ಸವಲತ್ತು ಸರಿಯಾಗಿಲ್ಲ, ಶೌಚಾಲಯಗಳಿದ್ದರೂ ನೀರಿನ ವ್ಯವಸ್ಥೆಯಿಲ್ಲ. ಅಸ್ಸಾಂ ಹೊರತುಪಡಿಸಿದರೆ ಉಳಿದ ಈಶಾನ್ಯ ರಾಜ್ಯಗಳಲ್ಲಿನ ಶಾಲೆಗಳಿಗೆ ಗ್ರಂಥಾಲಯದ ಸವಲತ್ತು ಈಗಲೂ ಮರೀಚಿಕೆಯಾಗಿದೆ.

ಸರ್ಕಾರಿ ಶಾಲೆಗಳ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದಮಾತ್ರಕ್ಕೆ, ಖಾಸಗಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿದೆ ಎಂದರ್ಥವಲ್ಲ. ಸರ್ವಾಂಗೀಣ ಶೈಕ್ಷಣಿಕ ಸಾಧನೆಯಲ್ಲಿ ಸರ್ಕಾರಿ ಶಾಲೆಗಳು ಶೇ 6ರ ಅಭಿವೃದ್ಧಿ ಸಾಧಿಸಿದ್ದರೆ, ಖಾಸಗಿ ಶಾಲೆಗಳ ಅಭಿವೃದ್ಧಿ ಶೇ 5.7ರಷ್ಟಿದೆ. ಪ್ರತಿಷ್ಠೆಯ ಪ್ರಶ್ನೆಯನ್ನು ಹೊರತುಪಡಿಸಿದರೆ ಕಲಿಕೆಯ ಗುಣಮಟ್ಟದ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಮಾತೃಭಾಷೆಯ ಪುಸ್ತಕಗಳನ್ನು ಸರಾಗವಾಗಿ ಓದಲು ಬಾರದ, ಗಣಿತದ ಲೆಕ್ಕಗಳಿಗೆ ತಿಣುಕುವ ಹಾಗೂ ಕೌಶಲಗಳ ಕೊರತೆ ಹೊಂದಿರುವ ವಿದ್ಯಾರ್ಥಿಗಳನ್ನು ಒಂದು ತರಗತಿಯಿಂದ ಇನ್ನೊಂದು ತರಗತಿಗೆ ದಾಟಿಸಲಾಗುತ್ತಿದೆ ಎನ್ನುವುದು ದೇಶದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಸಂಗತಿಯೇನಲ್ಲ. ಪ್ರಸ್ತುತ ಜಾರಿಯಲ್ಲಿರುವ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ನೀತಿ ನಿರೂಪಕರು ಮತ್ತೊಮ್ಮೆ ಗಂಭೀರವಾಗಿ ಯೋಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT