ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಾಜಕೀಯ ಮೇಲಾಟಕ್ಕೆ ಕೊನೆಹಾಡಿ; ವಿಶ್ವವಿದ್ಯಾಲಯ ನಿರ್ಮಾಣ ಮಾಡಿ

Published 1 ಅಕ್ಟೋಬರ್ 2023, 21:04 IST
Last Updated 1 ಅಕ್ಟೋಬರ್ 2023, 21:04 IST
ಅಕ್ಷರ ಗಾತ್ರ

ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮೇಲಾಟವೂ ಸೇರಿಬಿಟ್ಟರೆ ಆ ಕಾರ್ಯಗಳು ಹೇಗೆ ಹಳ್ಳ ಹಿಡಿಯುತ್ತವೆ ಎನ್ನುವುದಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಸಂಕೀರ್ಣ ನಿರ್ಮಾಣಕ್ಕೆ ಐದನೇ ಸಲ ಭೂಮಿಪೂಜೆ ನಡೆದಿರುವುದೇ ಜ್ವಲಂತ ನಿದರ್ಶನ. ಆರ್‌ಜಿಯುಎಚ್‌ಎಸ್‌ನ ಕ್ಯಾಂಪಸ್‌ ಅನ್ನು ರಾಮನಗರ ಸಮೀಪದ ಅರ್ಚಕರಹಳ್ಳಿಯಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡು ಹದಿನಾರು ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಭವ್ಯವಾದ ಸೌಧ ಮೇಲೆದ್ದು, ವಿಶ್ವವಿದ್ಯಾಲಯದ ಚಟುವಟಿಕೆಗಳೆಲ್ಲ ಅಲ್ಲಿಯೇ ನಡೆಯಬೇಕಾಗಿತ್ತು. ಆದರೆ, ರಾಜಕೀಯ ಮೇಲಾಟದಿಂದ ಕಟ್ಟಡ ನಿರ್ಮಾಣ ಕೆಲಸ ಇನ್ನೂ ಆರಂಭವಾಗಿಲ್ಲ. ಸಾಮಾನ್ಯವಾಗಿ ರಾಜಕೀಯ ಬೆಂಬಲ ಇಲ್ಲದೆ ಕೆಲವು ಯೋಜನೆಗಳು ಕುಂಟುತ್ತಾ ಸಾಗುವುದುಂಟು. ಆದರೆ, ಇಲ್ಲಿ ಎದುರಾಗಿರುವುದು ಬೇರೊಂದು ರೀತಿಯ ಸಮಸ್ಯೆ. ಅಜೀರ್ಣವಾಗುವಷ್ಟು ರಾಜಕೀಯ ‘ಬಲ’ ಈ ಭಾಗದಲ್ಲಿ ಸಾಂದ್ರಗೊಂಡಿರುವುದೇ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ತೊಡಕಾಗಿ ಪರಿಣಮಿಸಿದೆ. 2007ರಲ್ಲಿ ಜೆಡಿಎಸ್‌–ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಆರ್‌ಜಿಯುಎಚ್‌ಎಸ್‌ನ ಕ್ಯಾಂಪಸ್‌ ಅನ್ನು ರಾಮನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ರಾಮನಗರ ವಿಧಾನಸಭಾ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದುದರಿಂದ ವಿಶ್ವವಿದ್ಯಾಲಯವನ್ನು ಅಲ್ಲಿಗೆ ಸ್ಥಳಾಂತರಿಸುವ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ರಾಮನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ಆದರೆ, ಆ ಸರ್ಕಾರ ಹೆಚ್ಚು ಕಾಲ ಬಾಳದ ಕಾರಣ ನಿರ್ಮಾಣ ಕಾಮಗಾರಿ ಶುರುವಾಗಲಿಲ್ಲ. 2008ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರದಿಂದ ಅದೇ ಕಾಮಗಾರಿಗೆ ಎರಡು ಬಾರಿ ಭೂಮಿಪೂಜೆ ನಡೆಸಲಾಯಿತು. ಬಳಿಕ ಕಾಂಗ್ರೆಸ್‌ ನೇತೃತ್ವದ ಸರ್ಕಾರವು 2017ರಲ್ಲಿ ವಿಶ್ವವಿದ್ಯಾಲಯ ಕಚೇರಿಯನ್ನು ರಾಮನಗರದ ಹಳೆ ಕಂದಾಯ ಭವನದ ಕಚೇರಿಯಲ್ಲಿ ತಾತ್ಕಾಲಿಕವಾಗಿ ಆರಂಭಿಸಲು ಮುಂದಾಯಿತು. ಆ ಕಚೇರಿ ಕಾರ್ಯಾರಂಭ ಮಾಡಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಈ ವರ್ಷದ ಮಾರ್ಚ್‌ನಲ್ಲಿ ಮತ್ತೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಶಾಸಕ ಎಚ್‌.ಎ.ಇಕ್ಬಾಲ್ ಹುಸೇನ್‌ ಅವರು ಇತ್ತೀಚೆಗೆ ನಡೆಸಿದ್ದು ಐದನೆಯ ಭೂಮಿಪೂಜೆಯನ್ನು. ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣ ಕಾರ್ಯ ಇಷ್ಟೊಂದು ವಿಳಂಬವಾಗುವುದಕ್ಕೆ ಮೂರೂ ಪಕ್ಷಗಳು ಸಮಾನವಾಗಿ ಕಾರಣವಾಗಿವೆ.

ಒಂದೇ ಕಾಮಗಾರಿಗೆ ಐದೈದು ಸಲ ಭೂಮಿಪೂಜೆಯನ್ನು ನಡೆಸುವುದು, ಸರ್ಕಾರ ಕೈಗೊಂಡ ತೀರ್ಮಾನದ ಮೇಲೆ ಹದಿನಾರು ವರ್ಷಗಳಾದರೂ ಕ್ರಮ ಜರುಗಿಸದೇ ಇರುವುದು ನಮ್ಮ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎನ್ನುವುದಕ್ಕೆ ಉದಾಹರಣೆ. ಸರ್ಕಾರವು ವಿಶ್ವವಿದ್ಯಾಲಯದ ಸ್ಥಳಾಂತರಕ್ಕೆ ಮೊದಲ ಬಾರಿಗೆ ನಿರ್ಧಾರ ಮಾಡಿದಾಗ, ಅದಕ್ಕೆ ಅಗತ್ಯವಾದ ಭೂಮಿ ಸ್ವಾಧೀನವೇ ಆಗಿರಲಿಲ್ಲ. ಮುಂದೆ, ಫಲವತ್ತಾದ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿ ರೈತರು ಕೋರ್ಟ್‌ ಮೆಟ್ಟಿಲೇರಿದ್ದರಿಂದ ಯೋಜನೆಯ ಅನುಷ್ಠಾನ ಬಹುಕಾಲ ತೆವಳಿತು. ಒಂದೂವರೆ ದಶಕದ ವಿಳಂಬದಲ್ಲಿ ಯೋಜನಾ ವೆಚ್ಚವು ₹ 330 ಕೋಟಿಯಿಂದ ₹ 600 ಕೋಟಿಗೆ ಹೆಚ್ಚಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಅವರ ಸಹೋದರ ಡಿ.ಕೆ.ಸುರೇಶ್‌, ಜೆಡಿಎಸ್‌ನ ಕುಮಾರಸ್ವಾಮಿ ಮತ್ತು ಬಿಜೆಪಿಯ ಕೆಲವು ಮಾಜಿ ಸಚಿವರು ಈ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಹಾತೊರೆದು ನಡೆಸಿರುವ ರಾಜಕೀಯವು ಯೋಜನೆ ಕುಂಠಿತಗೊಳ್ಳಲು ಕಾರಣ ಎಂದು ಜನ ದೂರುವುದರಲ್ಲೂ ಅರ್ಥ ಇದೆ. ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರವಾಗುವಂತೆ ನೋಡಿಕೊಂಡರು. ಆರ್‌ಜಿಯುಎಚ್‌ಎಸ್‌ನ ಕ್ಯಾಂಪಸ್‌ನಲ್ಲಿ ತಲೆ ಎತ್ತಬೇಕಿದ್ದ  ವೈದ್ಯಕೀಯ ಕಾಲೇಜನ್ನು, ಪ್ರಸ್ತುತ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕನಕಪುರಕ್ಕೆ ಸ್ಥಳಾಂತರಿಸಿದೆ. ಈ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿದ್ದು, ರಾಮನಗರ ಬಂದ್‌ ಕೂಡ ನಡೆಸಲಾಗಿದೆ. ಈ ಮಧ್ಯೆ, ‘ವಿಶ್ವವಿದ್ಯಾಲಯದ ಜೊತೆಗೆ ವೈದ್ಯಕೀಯ ಕಾಲೇಜನ್ನು ಸಹ ಅರ್ಚಕರಹಳ್ಳಿಯ ಕ್ಯಾಂಪಸ್ಸಿನಲ್ಲೇ ನಿರ್ಮಿಸಬೇಕು. ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದಾದರೆ, ನಮ್ಮ ಭೂಮಿ ವಾಪಸ್ ಕೊಡಬೇಕು’ ಎಂದು ಆಗ್ರಹಿಸಿರುವ ಅರ್ಚಕರಹಳ್ಳಿ ಭಾಗದ ರೈತರು, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಕ್ಷುಲ್ಲಕ ರಾಜಕೀಯವನ್ನು ಸುಳಿಯಗೊಡದೆ ಕಾಮಗಾರಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಎಲ್ಲ ಪಕ್ಷಗಳ ನಾಯಕರ ಹೊಣೆ. ಲೋಪ ತಿದ್ದಿಕೊಂಡು, ವಿಶ್ವವಿದ್ಯಾಲಯದ
ಸಂಕೀರ್ಣ ಈಗಲಾದರೂ ಬೇಗ ನಿರ್ಮಾಣವಾಗುವಂತೆ ಎಲ್ಲರೂ ಸಹಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT