ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನಲ್ಲಿ ಮಾತು: ಹಕ್ಕು ನಿರಾಕರಣೆ ಪ್ರಜಾಸತ್ತಾತ್ಮಕ ನಡೆ ಖಂಡಿತ ಅಲ್ಲ

Last Updated 19 ಮಾರ್ಚ್ 2023, 20:16 IST
ಅಕ್ಷರ ಗಾತ್ರ

ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ದುರದೃಷ್ಟಕರ ರೀತಿಯಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ಭಾಗದ ಕಲಾಪಗಳು ಈವರೆಗೆ ವ್ಯರ್ಥವಾಗಿವೆ. ಭಾರತದ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ನೀಡಿದ ಹೇಳಿಕೆಗೆ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಅದಾನಿ ಸಮೂಹದ ವಹಿವಾಟಿನ ಕುರಿತು ಕೇಳಿಬಂದಿರುವ ಆರೋಪಗಳಿಗೆ ಸಂಬಂಧಿಸಿ ಚರ್ಚೆ ಆಗಬೇಕು ಮತ್ತು ಪ್ರಕರಣವನ್ನು ಸಂಸತ್ತಿನ ಜಂಟಿ ಸದನ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಆಗ್ರಹಿಸಿವೆ. ರಾಹುಲ್‌ ಅವರ ಹೇಳಿಕೆಯ ಕುರಿತು ತನಿಖೆ ನಡೆಸಲು ಸಂಸದೀಯ ಸಮಿತಿ ರಚಿಸಬೇಕು ಎಂದು ಬಿಜೆಪಿ ಸಂಸದರೊಬ್ಬರು ಆಗ್ರಹಿಸಿದ್ದಾರೆ. ರಾಹುಲ್ ಅವರನ್ನು ಲೋಕಸಭೆಯಿಂದ ಅಮಾನತು ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೆಹರೂ–ಗಾಂಧಿ ಕುಟುಂಬದ ಕುರಿತಂತೆ ನೀಡಿದ ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಲು ಅವಕಾಶ ಕೋರಿದೆ. ಸದನದಲ್ಲಿ ತಮ್ಮನ್ನು ಟೀಕಿಸಿದ ಸಚಿವರಿಗೆ ಪ್ರತಿಕ್ರಿಯೆ ಕೊಡಲು ರಾಹುಲ್‌ ಅವರಿಗೆ ಹಕ್ಕು ಇದೆ ಎಂಬ ವಿಚಾರವನ್ನು ಸ್ಪೀಕರ್ ಅವರ ಗಮನಕ್ಕೆ ಕಾಂಗ್ರೆಸ್ ಪಕ್ಷವು ತಂದಿದೆ.

ಸಂಸತ್ತಿನಲ್ಲಿ ಮಾತನಾಡುವ ಹಕ್ಕನ್ನು ರಾಹುಲ್‌ ಅವರಿಗೆ ನಿರಾಕರಿಸುವ ಮೂಲಕ, ಭಾರತದಲ್ಲಿ
ಪ್ರಜಾಪ್ರಭುತ್ವವನ್ನು ದಮನ ಮಾಡಲಾಗಿದೆ ಎಂದು ಅವರು ನೀಡಿರುವ ಹೇಳಿಕೆಯು ಸರಿ ಎಂಬಂತೆ ಸರ್ಕಾರ ವರ್ತಿಸಿದೆ. ನಮ್ಮ ಮುಖಂಡರು ಬೇರೊಂದು ದೇಶದಲ್ಲಿ ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲೇನೂ ಅಲ್ಲ. ಪ್ರಧಾನಿ ಮೋದಿ ಅವರು ಬೇರೆ ದೇಶಗಳಿಗೆ ಹೋದಾಗ ಇಂತಹ ಹೇಳಿಕೆಗಳನ್ನು ನೀಡಿದ್ದು ಇದೆ. ಭಾರತದ ವ್ಯವಹಾರಗಳಲ್ಲಿ ಬಾಹ್ಯ ಹಸ್ತಕ್ಷೇಪ ಬೇಕು ಎಂದು ರಾಹುಲ್‌ ಹೇಳಿಲ್ಲ ಎಂಬುದು ಅವರ ಹೇಳಿಕೆಯನ್ನು ಎಚ್ಚರಿಕೆಯಿಂದ ಗಮನಿಸಿದರೆ ತಿಳಿಯುತ್ತದೆ. ದೇಶದೊಳಗಿನ ಸಮಸ್ಯೆಗಳನ್ನು ದೇಶದ ಒಳಗೇ ಪರಿಹರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಯನ್ನು ‘ದೇಶವಿರೋಧಿ’ ಎಂದು ಪರಿಗಣಿಸುವುದು ಮತ್ತು ‘ಸಂಸತ್ತು ಮತ್ತು ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಗಳಿಗೆ ಅಪಮಾನ ಮಾಡುವ ಷಡ್ಯಂತ್ರ’ ಎಂದು ಹೇಳುವುದು ಸಮಂಜಸ ಅಲ್ಲ. ರಾಹುಲ್‌ ಗಾಂಧಿ ಅವರು ದೇಶವಿರೋಧಿ ಟೂಲ್‌ಕಿಟ್‌ನ ಭಾಗ ಎಂದೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಬಿಟ್ಟಿದ್ದಾರೆ. ಪ್ರಜಾಪ್ರಭುತ್ವದ ವಿಚಾರದಲ್ಲಿ ತನ್ನದು ವಿರೋಧಾಭಾಸಕರ ನಿಲುವು ಎಂಬುದು ಕೂಡ ಆಡಳಿತಾರೂಢ ಪಕ್ಷಕ್ಕೆ ಅರಿವಾಗುತ್ತಿಲ್ಲ ಎಂಬುದೇ ವಿಚಿತ್ರ.

ಸದನವನ್ನು ಸುಗಮವಾಗಿ ನಡೆಸಿಕೊಂಡು ಹೋಗುವುದು ಆಡಳಿತ ಪಕ್ಷದ ಹೊಣೆಗಾರಿಕೆ; ಪ್ರಜಾಪ್ರಭುತ್ವದಲ್ಲಿ ಸಮಾನ ಹಕ್ಕನ್ನು ಹೊಂದಿರುವ ವಿರೋಧ ಪಕ್ಷಗಳನ್ನು ಉತ್ತಮವಾಗಿ, ನ್ಯಾಯಯುತವಾಗಿ ನಡೆಸಿಕೊಳ್ಳುವುದು ಕೂಡ ಸರ್ಕಾರದ್ದೇ ಕೆಲಸ. ಪ್ರಮುಖ ವಿರೋಧ ಪಕ್ಷದ ನಾಯಕನೊಬ್ಬ ಸಂಸತ್ತಿನಲ್ಲಿ ಮಾತನಾಡುವುದನ್ನು ತಡೆಯುವುದು, ಅದನ್ನು ಸಮರ್ಥಿಸಿಕೊಳ್ಳಲು ತರ್ಕರಹಿತ ಕಾರಣಗಳನ್ನು ಮುಂದಿಡುವುದು, ಅವರನ್ನು ಶಿಕ್ಷಿಸಲು ಮುಂದಾಗುವುದು ಖಂಡಿತವಾಗಿ ಪ್ರಜಾಸತ್ತಾತ್ಮಕ ಅಲ್ಲ. ‘ಭಾರತ್‌ ಜೋಡೊ ಯಾತ್ರೆ’ ಬಳಿಕ ರಾಜಕೀಯವಾಗಿ ಹೆಚ್ಚು ಸಕ್ರಿಯವಾಗಿರುವ ರಾಹುಲ್‌ ಅವರ ಹುಮ್ಮಸ್ಸು ಕುಗ್ಗಿಸುವುದು ಆಡಳಿತ ಪಕ್ಷದ ಉದ್ದೇಶ ಇದ್ದಂತಿದೆ. ಅದಲ್ಲದೆ ಇದ್ದರೆ, ಅದಾನಿ ಸಮೂಹಕ್ಕೆ ಸಂಬಂಧಿಸಿದ ಅಕ್ರಮ ಆರೋಪದ ಕುರಿತು ಸಂಸತ್ತಿನಲ್ಲಿ ಚರ್ಚೆ ಆಗುವುದನ್ನು ತಪ್ಪಿಸಲು ಸರ್ಕಾರ ಬಯಸುತ್ತಿದ್ದಂತಿದೆ. ಇವಲ್ಲದೆ ಬೇರೆ ಕಾರಣಗಳೂ ಇರಬಹುದು. ರಾಹುಲ್ ಅವರು ಸಂಸತ್ತಿನಲ್ಲಿ ಮಾತನಾಡುವುದನ್ನು ತಡೆಯುವುದಕ್ಕೆ ಇವು ಯಾವುವೂ ಸಮರ್ಥನೆ ಆಗುವುದಿಲ್ಲ. ಪ್ರಜಾಪ್ರಭುತ್ವ ಇಲ್ಲವಾಗುತ್ತಿದೆ ಎಂದು ಹೇಳಿದ ರಾಹುಲ್‌ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವುದೇ ಅವರಿಗೆ ತಿರುಗೇಟು ನೀಡುವುದಕ್ಕೆ ಇರುವ ಅತ್ಯುತ್ತಮ ಮಾರ್ಗ ಎಂಬುದರ ಅರಿವು ಕೂಡ ಸರ್ಕಾರ ಮತ್ತು ಆಡಳಿತ ಪಕ್ಷಕ್ಕೆ ಇಲ್ಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT