ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ: ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಿ

Last Updated 14 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‍ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ, ಹಲವು ಆತಂಕಕಾರಿ ವಿಷಯಗಳನ್ನು ಬಹಿರಂಗಪಡಿಸಿದೆ. ದೇಶದಲ್ಲಿ ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂಬ ಅಂಶ ಗಂಭೀರವಾದುದು. ನಂತರದ ಸ್ಥಾನಗಳಲ್ಲಿರುವುದು ತ್ರಿಪುರಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳ. ರಾಜ್ಯದಲ್ಲಿ ಆತ್ಮಹತ್ಯೆ ಪಿಡುಗು ಹೆಚ್ಚುತ್ತಿರುವುದಕ್ಕೆ ಕಾರಣಗಳಾಗುತ್ತಿರುವ ಅಂಶಗಳೇನು ಎಂಬುದು ಪತ್ತೆಯಾಗಬೇಕು. ನಂತರ ಆ ಅಂಶಗಳ ನಿರ್ವಹಣೆಗೆ ನೀತಿಗಳನ್ನು ರೂಪಿಸಬೇಕಾದುದು ಆಡಳಿತ ಯಂತ್ರದ ಜವಾಬ್ದಾರಿ. ಆತ್ಮಹತ್ಯೆ ನಿಯಂತ್ರಣಕ್ಕೆ ಸಮಗ್ರ ಯೋಜನೆ ರೂಪಿಸುವುದು ಅಗತ್ಯವಿದೆ. ಆತ್ಮಹತ್ಯೆ ಪ್ರಕರಣಗಳಲ್ಲಿ ಕಂಡು ಬಂದಿರುವ ಮತ್ತೊಂದು ಕಳವಳಕಾರಿ ಅಂಶವನ್ನೂ ಈ ವರದಿ ಬಹಿರಂಗಪಡಿಸಿದೆ. ಅದು, ಈ ಪ್ರಕರಣಗಳಲ್ಲಿ ಎದ್ದು ಕಾಣಿಸುತ್ತಿರುವ ಲಿಂಗತ್ವ ಭಿನ್ನತೆ. 2016ರಲ್ಲಿ ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರತಿ 10 ಮಹಿಳೆಯರಲ್ಲಿ ನಾಲ್ವರು ಭಾರತದವರು ಎಂಬ ಅಂಶ ಕಂಗೆಡಿಸುವಂತಹದ್ದು. ಎಂದರೆ, ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರಲ್ಲಿ ಶೇ 37ರಷ್ಟು ಮಂದಿ ಭಾರತದವರು ಎಂದು ಈ ವರದಿ ಹೇಳಿದೆ. ಪುರುಷರ ಪ್ರಮಾಣ ಶೇ 24ರಷ್ಟಿದೆ. ಅದರಲ್ಲೂ ಆತ್ಮಹತ್ಯೆ ಮಾಡಿಕೊಂಡ ಬಹುತೇಕ ಮಹಿಳೆಯರು ವಿವಾಹಿತರು. ಪಿತೃ ಪ್ರಧಾನ ವ್ಯವಸ್ಥೆ, ಹಿರಿಯರು ನಿಶ್ಚಯಿಸುವ ವಿವಾಹ, ಬಾಲ್ಯ ವಿವಾಹ, ವರದಕ್ಷಿಣೆಯ ಸಮಸ್ಯೆಗಳು, ದೈಹಿಕ ಹಾಗೂ ಮಾನಸಿಕ ಕಿರುಕುಳದಂತಹ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಆರ್ಥಿಕ ಪರಾವಲಂನೆಯಂತಹ ಅಂಶಗಳೂ ಮಹಿಳೆಯರಲ್ಲಿ ಆತ್ಮಹತ್ಯೆ ಪ್ರವೃತ್ತಿ ಪ್ರಚೋದನೆಗೆ ಕಾರಣವಾಗುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ವಿವಾಹ ಹಾಗೂ ಕೌಟುಂಬಿಕ ದೌರ್ಜನ್ಯಗಳು ಮಹಿಳೆಯರ ಆತ್ಮಹತ್ಯೆ ಪ್ರಮಾಣದ ಮೇಲೆ ಪರಿಣಾಮ ಬೀರಿದಂತೆ ಉದ್ಯೋಗವೂ ಪರಿಣಾಮ ಬೀರುವುದೇ ಎಂಬ ಬಗ್ಗೆ ಅಂಕಿಅಂಶಗಳು ಲಭ್ಯವಿಲ್ಲ.1990ರಲ್ಲಿ ಮಹಿಳೆಯರ ಆತ್ಮಹತ್ಯೆ ಪ್ರಮಾಣ ಶೇ 25.3ರಷ್ಟಿದ್ದದ್ದು 2016ರಲ್ಲಿ ಶೇ 36.6ಕ್ಕೆ ಏರಿದೆ. ಎಂದರೆ ಭಾರತ, ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬಂದ ವರ್ಷಗಳಲ್ಲಿ, ಮಹಿಳೆಯರ ಆತ್ಮಹತ್ಯೆಗಳ ಪ್ರಮಾಣವೂ ಹೆಚ್ಚಾಗಿದೆ ಎಂಬುದು ವಿಪರ್ಯಾಸ. ಹೆಚ್ಚಿನ ಮಹಿಳೆಯರು 40ಕ್ಕಿಂತ ಕಡಿಮೆ ವಯಸ್ಸಿನವರು. ದುಡಿಮೆ ಮಾಡುವ ಹಾಗೂ ಸಂಸಾರದ ನೊಗ ಹೊರುವ ವಯಸ್ಸು ಇದು. ದುಡಿಯುವ ಸ್ಥಳಗಳಲ್ಲೂ ಮಹಿಳೆ ಹೊಸ ಸವಾಲುಗಳನ್ನು ಎದುರುಗೊಳ್ಳುತ್ತಿದ್ದಾಳೆ. ಹೊಸ ಜವಾಬ್ದಾರಿಗಳನ್ನೂ ಹೊರುತ್ತಿದ್ದಾಳೆ. ಶಿಥಿಲವಾಗುತ್ತಿರುವ ಕೌಟುಂಬಿಕ ವ್ಯವಸ್ಥೆ, ಹೊರ ಜಗತ್ತಿನಲ್ಲಿ ಬೆಂಬಲ ವ್ಯವಸ್ಥೆಯ ಕೊರತೆಗಳು ಸೃಷ್ಟಿಸುವ ಒತ್ತಡಗಳು ಅಧಿಕ. ಇವುಗಳ ನಿರ್ವಹಣೆಗೆ ಸರ್ಕಾರದ ನೀತಿಗಳೂ ಸಂವೇದನಾಶೀಲತೆ ಪ್ರದರ್ಶಿಸಬೇಕು. ಸಾಮಾಜಿಕ ಸಮಸ್ಯೆಗಳ ನಿರ್ವಹಣೆ ಹಾಗೂ ಪರಿಹಾರಗಳಿಗೆ ಆದ್ಯತೆ ದೊರೆಯಬೇಕು. ಆತ್ಮಹತ್ಯೆ ಎಂಬುದು ಮಾನವ ಬಂಡವಾಳದ ನಷ್ಟ ಎಂದು ಭಾವಿಸಬೇಕು.

ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನ ನೀಡಿದ್ದೇವೆ. ಆದರೆ ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಅಷ್ಟಾಗಿ ಗಮನ ಸೆಳೆದುಕೊಂಡಿಲ್ಲ. ಜೊತೆಗೆ, ಆತ್ಮಹತ್ಯೆ ತಡೆ ಕಾರ್ಯಕ್ರಮಗಳು ಎಲ್ಲರಿಗೂ ಒಂದೇ ರೀತಿ ಇರಬಾರದು. ಇದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಪ್ರತ್ಯೇಕವಾದ ಸೂಕ್ಷ್ಮ ಸಂವೇದನೆಯ ನಿರ್ವಹಣೆ ಅಗತ್ಯ. ಆತ್ಮಹತ್ಯೆ ಪಿಡುಗನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಿ ಪರಿಹಾರ ಸೂತ್ರಗಳನ್ನು ರೂಪಿಸಬೇಕು. ­­­­ಮಾನಸಿಕ ಆರೋಗ್ಯ ಮಸೂದೆಯ ಮೂಲಕ ಆತ್ಮಹತ್ಯೆಯನ್ನು ಅಪರಾಧ ವ್ಯಾಖ್ಯೆಯಿಂದ ಕಳೆದ ವರ್ಷವೇನೋ ತೆಗೆದುಹಾಕಲಾಗಿದೆ. ಆದರೆ ಆತ್ಮಹತ್ಯೆಯನ್ನು ಅಪರಾಧ ಎಂದು ಪರಿಭಾವಿಸುವ ಐಪಿಸಿಯ ಸೆಕ್ಷನ್ 309 ಈಗಲೂ ಅಸ್ತಿತ್ವದಲ್ಲಿದೆ. ಇನ್ನೂ ಅದನ್ನು ತೆಗೆದುಹಾಕಿಲ್ಲ ಎಂಬುದನ್ನೂ ಗಮನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT