ತ್ರಿವಳಿ ತಲಾಖ್ ರಾಜಕೀಯ ಬೇಡ

7

ತ್ರಿವಳಿ ತಲಾಖ್ ರಾಜಕೀಯ ಬೇಡ

Published:
Updated:
Deccan Herald

ತ್ರಿವಳಿ ತಲಾಖ್‍ ಕುರಿತಾದ ಮಸೂದೆಯನ್ನು ಕಳೆದ ವಾರ ಮುಕ್ತಾಯವಾದ ಸಂಸತ್ ಅಧಿವೇಶನದಲ್ಲಿ ಮಂಡಿಸುವ ಕೇಂದ್ರ ಸರ್ಕಾರದ ಯತ್ನ ವಿಫಲವಾಗಿದೆ. ಸಂಸತ್‍ನ ಮುಂಗಾರು ಅಧಿವೇಶನದ ಕಡೆಯ ದಿನ (ಆ.10), ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ಸರ್ಕಾರ ಪ್ರಯತ್ನಿಸಿತು. ಆದರೆ ಈ ಮಸೂದೆ ಬಗ್ಗೆ ರಾಜ್ಯಸಭೆಯಲ್ಲಿ ಯಾವುದೇ ಅರ್ಥಪೂರ್ಣ ಚರ್ಚೆ ನಡೆಯಲಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿತ್ತು. ಆದರೆ, ತಲಾಖ್ ನೀಡಿದ ಪತಿಯ ಜಾಮೀನುರಹಿತ ಬಂಧನಕ್ಕೆ ಈ ಮಸೂದೆಯಲ್ಲಿ ಕಲ್ಪಿಸಲಾಗಿದ್ದ ಅವಕಾಶ ವಿವಾದದ ಕೇಂದ್ರಬಿಂದುವಾಗಿತ್ತು.

ಈ ಮಸೂದೆಯನ್ನು ಸಂಸತ್‌ನ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕೆಂಬುದು ಕಾಂಗ್ರೆಸ್ ಸೇರಿದಂತೆ ಪ್ರತಿ‍ಪಕ್ಷಗಳ ಆಗ್ರಹವಾಗಿತ್ತು. ಆದರೆ ಈ ಮಸೂದೆಗೆ ತಿದ್ದುಪಡಿಗಳನ್ನು ಕಳೆದ ವಾರ ಕೇಂದ್ರ ಸಂಪುಟ ತರಾತುರಿಯಲ್ಲಿ ಅಂಗೀಕರಿಸಿದೆ. ಈ ತಿದ್ದುಪಡಿಗಳ ಅನ್ವಯ, ಈಗ ಜಾಮೀನು ನೀಡಲು ಮ್ಯಾಜಿಸ್ಟ್ರೇಟ್‌ಗೆ ಅವಕಾಶ ಇದೆ. ಜೊತೆಗೆ ಪತ್ನಿ ಅಥವಾ ರಕ್ತಸಂಬಂಧಿಗಳು ದೂರು ನೀಡಿದಲ್ಲಿ ಮಾತ್ರ ಇದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಯಾರು ಬೇಕಾದರೂ ದೂರು ನೀಡಲು ಅವಕಾಶವಿತ್ತು. ಇದು ದುರ್ಬಳಕೆಯಾಗಬಹುದು ಎಂದು ಆಗ ವ್ಯಕ್ತವಾಗಿದ್ದ ಆತಂಕ ಸಹಜವಾದುದಾಗಿತ್ತು. ಹಾಗೆಯೇ ಪತಿ- ಪತ್ನಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದರೆ ರಾಜಿಸಂಧಾನದ ಇತ್ಯರ್ಥಕ್ಕೂ ಈಗ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಮಸೂದೆ ಕುರಿತಾದ ಎಲ್ಲಾ ವಿಮರ್ಶೆ, ಟೀಕೆಗಳಿಗೂ ಮಹಿಳಾ ಸಬಲೀಕರಣದ ವಾದವನ್ನು ಸರ್ಕಾರ ಗುರಾಣಿಯಾಗಿ ಬಳಸಿಕೊಂಡು ಬಂದಿರುವುದು ವಿಪರ್ಯಾಸದ ಸಂಗತಿ. ಮಹಿಳಾ ಸಬಲೀಕರಣ, ಸರ್ಕಾರದ ಪ್ರಮುಖ ಕಾಳಜಿ ಆಗಿರಲೇಬೇಕು. ಆದರೆ ಬಹುಸಂಖ್ಯಾತವಾದವನ್ನು ಎತ್ತಿ ಹಿಡಿಯುವಂತಹ ಸದ್ಯದ ಸಾಮಾಜಿಕ ವಾತಾವರಣದಲ್ಲಿ, ಈ ಮಸೂದೆಯ ದುರ್ಬಳಕೆಯ ಸಾಧ್ಯತೆಯ ಬಗ್ಗೆ ವ್ಯಕ್ತವಾದ ಕಾಳಜಿಗಳೂ ಅಷ್ಟೇ ಮುಖ್ಯವಾದದ್ದಾಗಿದ್ದವು. ಈಗ ಮಸೂದೆಯಲ್ಲಿ ಅಳವಡಿಸಿರುವ ತಿದ್ದುಪಡಿಗಳ ಬಗ್ಗೆ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನವೂ (ಬಿಎಂಎಂಎ) ಸಮಾಧಾನ ವ್ಯಕ್ತಪಡಿಸಿದೆ.

ಕಳೆದ ವಾರ ಮಸೂದೆಗೆ ತಿದ್ದುಪಡಿಗಳನ್ನು ಮಂಡಿಸುವಾಗ, ‘ಕಾನೂನು ದುರ್ಬಳಕೆಗೆ ಅವಕಾಶ ನೀಡುವುದಿಲ್ಲ. ನ್ಯಾಯ ದಕ್ಕಬೇಕಾದುದು ಮುಖ್ಯ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ. ಈ ಹೇಳಿಕೆಯಲ್ಲಿರುವ ಸಂದೇಶಕ್ಕೆ ಸರ್ಕಾರ ಬದ್ಧವಾಗಬೇಕು. ಮಸೂದೆ ಬಗ್ಗೆ ಪ್ರತಿಪಕ್ಷಗಳ ಟೀಕೆಗಳನ್ನೂ ಗಂಭೀರವಾಗಿ ಪರಿಗಣಿಸಿ ನಿರ್ವಹಿಸಬೇಕು. ತಿದ್ದುಪಡಿ ಮಸೂದೆಯಲ್ಲಿ ತಮಗೆ ಒಪ್ಪಿತವಾಗದ ಅಂಶಗಳ ಬಗ್ಗೆ ಪ್ರತಿಪಕ್ಷಗಳೂ ಸರಿಯಾಗಿ ವಾದಗಳನ್ನು ಮಂಡಿಸಬೇಕು. ತಿದ್ದುಪಡಿ ಮಸೂದೆಯನ್ನು ಮುಂಗಾರು ಅಧಿವೇಶನದ ಕಟ್ಟಕಡೆಯ ದಿನ ಮಂಡಿಸಿ ಆತುರಾತುರವಾಗಿ ಅಂಗೀಕಾರ ಪಡೆದುಕೊಳ್ಳುವ ವಿಚಾರಕ್ಕೆ ಪ್ರತಿ‍ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದಕ್ಕೆ ಪ್ರತಿಯಾಗಿ, ಮಹಿಳಾ ವಿಚಾರಗಳ ಬಗ್ಗೆ ಕಾಂಗ್ರೆಸ್ ಆಷಾಢಭೂತಿತನವನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಮಹಿಳಾ ಸಬಲೀಕರಣದ ವಿಚಾರ ರಾಜಕೀಯ ಪಕ್ಷಗಳ ನಡುವಿನ ವಾಕ್ಸಮರದ ಸಂಗತಿಯಾಗುವುದು ವಿಷಾದನೀಯ. ಅಧಿವೇಶನದ ಕಡೆಯ ದಿನ ಮಸೂದೆ ಮಂಡನೆಗೆ ಯತ್ನಿಸಿದ್ದು ಸರಿಯಲ್ಲ ಎಂಬ ವಾದದಲ್ಲೂ ಹುರುಳಿದೆ.

ಇಂತಹ ಪ್ರಮುಖ ಮಸೂದೆಯ ವಿವಿಧ ಆಯಾಮಗಳ ಬಗ್ಗೆ ಚರ್ಚೆ ಅವಶ್ಯ. ಇತರ ಮಸೂದೆಗಳ ವಿಚಾರದಲ್ಲಿ ಮಾಡಿದಂತೆ ಮಸೂದೆಯ ಬಗ್ಗೆ ವಿಸ್ತೃತ ಒಮ್ಮತ ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಆಡಳಿತ ಪಕ್ಷ ಮಾಡಿತೇ? ಎಂಬ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಿಳಾ ಸಬಲೀಕರಣದ ವಿಚಾರ, ರಾಜಕೀಯ ಲಾಭ ಗಳಿಕೆಯ ಅಸ್ತ್ರವಾಗಬಾರದು. ಕೆಲವು ತಿಂಗಳ ಹಿಂದಷ್ಟೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಘೋಷಣೆ ಹೊರಡಿಸಿದೆ. ಅಧಿಕಾರದ ಗದ್ದುಗೆಯಲ್ಲಿ ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲಿ ಹೊರಡಿಸಿದ ‘ಸಾಫ್ ನಿಯತ್, ಸಹೀ ವಿಕಾಸ್’ (ಸರಿಯಾದ ಉದ್ದೇಶ, ಸರಿಯಾದ ಅಭಿವೃದ್ಧಿ) ಆಶಯ, ಮಹಿಳಾ ಅಭಿವೃದ್ಧಿ ವಿಚಾರದಲ್ಲೂ ಅಂತರ್ಗತವಾಗಲಿ. ಮಹಿಳಾ ವಿಷಯವನ್ನು ರಾಜಕೀಯಗೊಳಿಸುವುದು ಸಲ್ಲದು. ಮುಸ್ಲಿಂ ಮಹಿಳೆಯರಿಗೂ ಎಲ್ಲಾ ಭಾರತೀಯ ಮಹಿಳೆಯರಂತೆ ಕಾನೂನಿನ ರಕ್ಷಣೆ ಸಿಗಬೇಕಾದುದು ಅಗತ್ಯ ಎಂಬ ಆಶಯ ಇಲ್ಲಿ ಪ್ರಧಾನವಾಗಿರಬೇಕು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 3

  Sad
 • 1

  Frustrated
 • 1

  Angry

Comments:

0 comments

Write the first review for this !