ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪಶ್ಚಿಮ ಬಂಗಾಳ: ಬೀದಿ ಬಡಿದಾಟ ಪ್ರಜಾಪ್ರಭುತ್ವದ ಲಕ್ಷಣವೇ ಅಲ್ಲ

Last Updated 15 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ರಾಜಕೀಯ ಹಿಂಸಾಚಾರಕ್ಕೆಬಹಳ ಹಿಂದಿನಿಂದಲೂ ಕುಖ್ಯಾತವಾಗಿರುವ ಪಶ್ಚಿಮ ಬಂಗಾಳದ ಈಗಿನ ಪರಿಸ್ಥಿತಿ ಆತಂಕಕಾರಿಯಾಗಿದೆ. ರಾಜ್ಯದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂಬುದು ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಕಾರಣಕ್ಕಾಗಿ ಹತ್ಯೆ, ಹಲ್ಲೆಯಂತಹ ಕೃತ್ಯಗಳು ಹೆಚ್ಚಾಗಿವೆ. ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಈ ಸಂಖ್ಯೆ ಭಯ ಹುಟ್ಟಿಸುವ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ದೇಶದಲ್ಲಿ 2018ರಲ್ಲಿ ನಡೆದ 18 ರಾಜಕೀಯ ಹತ್ಯೆಗಳ ‍ಪೈಕಿ 12 ಪಶ್ಚಿಮ ಬಂಗಾಳದಲ್ಲಿ ಆಗಿದ್ದು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ 2019ರ ವರದಿಯಲ್ಲಿ ಹೇಳಲಾಗಿದೆ. ಈ ವರ್ಷ ಜನವರಿಯಿಂದ ಅಕ್ಟೋಬರ್‌ವರೆಗೆ ರಾಜಕೀಯ ದ್ವೇಷದ 43 ಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಹತ್ಯೆಗೆ ಒಳಗಾದವರಲ್ಲಿ 20 ಮಂದಿ ತನ್ನ ಕಾರ್ಯಕರ್ತರು ಎಂದು ಬಿಜೆಪಿ ಹೇಳುತ್ತಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ)‌ ಪಕ್ಷವು ಅಧಿಕಾರಕ್ಕೆ ಬಂದ ನಂತರದ ಒಂಬತ್ತು ವರ್ಷಗಳಲ್ಲಿ ತಮ್ಮ ಪಕ್ಷದ 250 ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಸಿಪಿಎಂ ಹೇಳುತ್ತಿದೆ. 1977ರಿಂದ 2009ರ ಅವಧಿಯಲ್ಲಿ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾರೆ ಎಂಬ ಲೆಕ್ಕಾಚಾರವೂ ಇದೆ. ಪಶ್ಚಿಮ ಬಂಗಾಳವು ರಾಜಕೀಯ ಜಾಗೃತಿಯು ಹೆಚ್ಚಾಗಿ ಇರುವ ರಾಜ್ಯ ಎಂದು ಹೇಳಲಾಗುತ್ತಿದೆ. ಆದರೆ, ಜಾಗೃತಿಗೆ ನೆತ್ತರ ಬಣ್ಣವೂ ಅಂಟಿಕೊಂಡಿದೆ ಎಂಬುದನ್ನು ಈ ಅಂಕಿ ಅಂಶಗಳು ಹೇಳುತ್ತವೆ. ಅಧಿಕಾರದಲ್ಲಿ ಇರುವ ಪಕ್ಷವು ಪ್ರಮುಖ ವಿರೋಧ ಪಕ್ಷದ ಕಾರ್ಯಕರ್ತರನ್ನು ಹಿಂಸೆಯ ಮೂಲಕ ಬೆದರಿಸುತ್ತಲೇ ಬಂದಿದೆ ಎಂಬ ಆರೋಪ ಅಲ್ಲಿ ಹೊಸದೇನೂ ಅಲ್ಲ. ಆರಂಭದಲ್ಲಿ ಇದು ಕಾಂಗ್ರೆಸ್‌–ಸಿಪಿಎಂ, ನಂತರ ಸಿಪಿಎಂ–ಟಿಎಂಸಿ‌ ಮತ್ತು ಈಗ, ಟಿಎಂಸಿ–ಬಿಜೆಪಿ ನಡುವಣ ಸಂಘರ್ಷವಾಗಿ ಮಾರ್ಪಟ್ಟಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 42 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ಜಯ ಗಳಿಸಿದೆ. ದೇಶದ ಪೂರ್ವಭಾಗದಲ್ಲಿ ತನ್ನ ಪ್ರಾಬಲ್ಯ ಗಟ್ಟಿಗೊಳಿಸಲು ಯೋಜನೆ ರೂಪಿಸುತ್ತಿದ್ದ ಕೇಂದ್ರದ ಆಡಳಿತಾರೂಢ ಪಕ್ಷಕ್ಕೆ ಈ ಗೆಲುವು ಬಹುದೊಡ್ಡ ಉಮೇದು ತುಂಬಿದೆ. ತಳಮಟ್ಟದಲ್ಲಿ ಹೇಳಿಕೊಳ್ಳುವಂತಹ ನೆಲೆ ಇಲ್ಲದ ರಾಜ್ಯದಲ್ಲಿಯೂ ಈ ಮಟ್ಟದ ಗೆಲುವು ಆ ರಾಜ್ಯದ ಅಧಿಕಾರವನ್ನು ಟಿಎಂಸಿಯಿಂದ ಕಸಿದುಕೊಳ್ಳುವ ಉತ್ಸಾಹ ಮೂಡಿಸಿದೆ. ಅಧಿಕಾರ ಕೈಗೆಟುಕುವ ದೂರದಲ್ಲಿದೆ ಎಂದು ಭಾವಿಸಿರುವ ಬಿಜೆಪಿ, ಅದನ್ನು ಕೈವಶ ಮಾಡಿಕೊಳ್ಳಲು ಇನ್ನಿಲ್ಲದ ಯತ್ನ ನಡೆಸುತ್ತಿದೆ. ಎರಡನೇ ಅವಧಿಯನ್ನು ಇನ್ನೇನು ಪೂರ್ಣಗೊಳಿಸಲಿರುವ ಟಿಎಂಸಿ, ಅಧಿಕಾರ ಉಳಿಸಿಕೊಳ್ಳಲು ಶತಾಯಗತಾಯ ಯತ್ನಿಸುತ್ತಿದೆ.

ಈ ಮಧ್ಯೆ, ನೆಲೆ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಟಿಎಂಸಿಯ ಕೆಲವು ಮುಖಂಡರನ್ನು ಸೆಳೆದುಕೊಂಡಿದೆ. ಮೊದಲೇ ಇದ್ದ ಸಂಘರ್ಷದ ವಾತಾವರಣವನ್ನು ಈ ಜಿದ್ದಾಜಿದ್ದಿ ಇನ್ನಷ್ಟು ಉತ್ಕಟವಾಗಿಸಿದೆ. ಬಿಜೆಪಿ ಅಧ್ಯಕ್ಷ ಜೆ.‍ಪಿ.ನಡ್ಡಾ ಮತ್ತು ಮುಖಂಡರು ಸಂಚರಿಸುತ್ತಿದ್ದ ವಾಹನಗಳ ಸಾಲಿನ ಮೇಲೆ ಕೋಲ್ಕತ್ತದ ಡೈಮಂಡ್‌ ಹಾರ್ಬರ್‌ ಪ‍್ರದೇಶದಲ್ಲಿ ನಡೆದ ಕಲ್ಲೆಸೆತದ ದಾಳಿ ಅದಕ್ಕೆ ಉದಾಹರಣೆ. ಈ ದಾಳಿಯ ನಂತರದ ಕೆಲವು ಬೆಳವಣಿಗೆಗಳು ಸಂಘರ್ಷವು ಕೇಂದ್ರ ಮತ್ತು ರಾಜ್ಯದ ನಡುವೆ ನಡೆಯುತ್ತಿದೆ ಎಂದು ಭಾಸವಾಗುವಂತೆ ಮಾಡಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸಾ ರಾಜಕಾರಣಕ್ಕೆ ಆಸ್ಪದ ಇಲ್ಲ; ಜನರಿಂದ ಆಯ್ಕೆಯಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಬಡಿದಾಡಿಕೊಳ್ಳುವುದಕ್ಕೂ ಅವಕಾಶ ಇಲ್ಲ ಎಂಬುದನ್ನು ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಬಡಿಗೆ ಹಿಡಿದು ಬಡಿದಾಡುವುದು ಪ್ರಜಾಪ್ರಭುತ್ವವೂ ಅಲ್ಲ, ನಾಗರಿಕತೆಯೂ ಅಲ್ಲ ಎಂಬುದು ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ಈ ಪಕ್ಷಗಳ ನಾಯಕರಿಗೆ ಅರಿವಾಗಬೇಕು. ಕಾರ್ಯಕರ್ತನೊಬ್ಬನ ಹತ್ಯೆಯಾದರೆ, ಅದು ಆತನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ದೊಡ್ಡ ನಷ್ಟ.

‘ಹುತಾತ್ಮ’ ಎಂದು ಪಕ್ಷಗಳು ಹೊಗಳಿದರೂ ಆತನ ಕುಟುಂಬಕ್ಕೆ ಆಗುವ ನಷ್ಟವನ್ನು ತುಂಬಿಕೊಡಲು ಯಾರೂ ಇರುವುದಿಲ್ಲ. ಅಧಿಕಾರ ಉಳಿಸಿಕೊಳ್ಳಲು ಅಥವಾ ಅಧಿಕಾರ ಪಡೆದುಕೊಳ್ಳಲು ಏನು ಬೇಕಾದರೂ ಮಾಡುತ್ತೇವೆ ಎಂಬುದು ಜನತಂತ್ರದ ಲಕ್ಷಣವೇ ಅಲ್ಲ; ಜನಪರವಾದ ಪ್ರಣಾಳಿಕೆ ಮತ್ತು ಕಾರ್ಯಕ್ರಮಗಳ ಮೂಲಕ ಜನರನ್ನು ಆಕರ್ಷಿಸಿ, ಚುನಾವಣೆ ಗೆಲ್ಲಬೇಕೇ ವಿನಾ ಬೀದಿ ಬಡಿದಾಟದ ಮೂಲಕ ಅಲ್ಲ ಎಂಬುದು ಸ್ವಾತಂತ್ರ್ಯ ದೊರೆತು ಏಳು ದಶಕಗಳ ಬಳಿಕವೂ ರಾಜಕೀಯ ಪಕ್ಷಗಳಿಗೆ ಮನವರಿಕೆ ಆಗಿಲ್ಲ ಎಂಬುದು ವಿಷಾದನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT