ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ, ಚಿಕೂನ್‌ಗುನ್ಯಾ ಹಾವಳಿ ನಿಯಂತ್ರಣಕ್ಕೆ ಬೇಕು ಇಚ್ಛಾಶಕ್ತಿ

Last Updated 28 ಜುಲೈ 2017, 19:30 IST
ಅಕ್ಷರ ಗಾತ್ರ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ವರದಿಯಾಗುತ್ತಿರುವುದು ಗಾಬರಿ ಮೂಡಿಸುವ ವಿದ್ಯಮಾನವಾಗಿದೆ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸೊಳ್ಳೆಗಳ ಸಂತತಿ ಹೆಚ್ಚಾಗಿ ಈ ಎರಡೂ ಕಾಯಿಲೆಗಳ ಹಾವಳಿಯೂ ಎಲ್ಲೆಡೆ ಹೆಚ್ಚುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇಡೀ ದೇಶವನ್ನೇ ಕಾಡುವ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯೂ ಇದಾಗಿದೆ. ಹಳ್ಳಿಯಿಂದ ದೆಹಲಿವರೆಗೂ ಇವುಗಳ ಕುಖ್ಯಾತಿ ಹಬ್ಬಿದೆ. ವಿಶ್ವ ಆರೋಗ್ಯ ಸಂಘಟನೆ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ವಿಶ್ವದಾದ್ಯಂತ ಡೆಂಗಿ ಹಾವಳಿ ಏರುಗತಿಯಲ್ಲಿ ಇದೆ.

ಜಾಗತಿಕ ಜನಸಂಖ್ಯೆಯ ಅರ್ಧದಷ್ಟು ಜನರು ಡೆಂಗಿ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರವೇ, ರಾಜ್ಯದಲ್ಲಿ ವರದಿಯಾಗಿರುವ 21,806 ಶಂಕಿತ ಡೆಂಗಿ ರೋಗಿಗಳ ಪೈಕಿ, ಮೂರು ಸಾವಿರಕ್ಕೂ ಹೆಚ್ಚು ಜನರಲ್ಲಿ ಡೆಂಗಿ ಪತ್ತೆಯಾಗಿದೆ. 8,151 ಶಂಕಿತ ಚಿಕೂನ್‌ಗುನ್ಯಾ ಪೀಡಿತರಲ್ಲಿ 706 ಮಂದಿ ಬಾಧಿತರಾಗಿರುವುದು ಖಚಿತಪಟ್ಟಿದೆ. ಇವೆಲ್ಲ ಮೇಲ್ನೋಟಕ್ಕೆ ಕಾಣುವ ಸರ್ಕಾರಿ ಅಂಕಿ ಅಂಶಗಳು. ಖಾಸಗಿ ಆಸ್ಪತ್ರೆಗೆ ದಾಖಲಾಗುವ– ದಾಖಲಾಗದ ಪ್ರಕರಣಗಳನ್ನೂ ಗಣನೆಗೆ ತೆಗೆದುಕೊಂಡರೆ ಪೀಡಿತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಡೆಂಗಿ ಪೀಡಿತರಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ (ಪ್ಲೇಟ್ಲೆಟ್‌ಗಳು) ಗಣನೀಯವಾಗಿ ಕಡಿಮೆಯಾಗಿ ಕಾಯಿಲೆಯು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆ ಇರುವುದು ಇನ್ನೂ ಹೆಚ್ಚಿನ ಕಳವಳಕಾರಿ ಸಂಗತಿ. ಕಾಯಿಲೆಯ ತೀವ್ರತೆಯೂ ಹೆಚ್ಚುತ್ತಿರುವುದರಿಂದ ವೈದ್ಯರ ಪಾಲಿಗೆ ಚಿಕಿತ್ಸೆಯೂ ಕಠಿಣಗೊಳ್ಳುತ್ತಿದೆ. ಸೊಳ್ಳೆ ಸಂತಾನ ನಿಯಂತ್ರಿಸದಿದ್ದರೆ, ಚಿಕಿತ್ಸೆಗೆ ಬರುವವರನ್ನು ನಿರ್ವಹಿಸುವುದೂ ಕಠಿಣವಾಗಿ ಪರಿಣಮಿಸಬಹುದು. ಈ ಎರಡೂ ಕಾಯಿಲೆಗಳಿಗೆ ನಿರ್ದಿಷ್ಟ ಔಷಧಿ ಇಲ್ಲದಿರುವುದು, ಇವುಗಳ ನಿಯಂತ್ರಣಕ್ಕೆ ಪ್ರಮುಖ ಅಡ್ಡಿಯಾಗಿದೆ.

ಖಾಸಗಿ ಆಸ್ಪತ್ರೆ, ರಕ್ತ ಪರೀಕ್ಷೆ ಪ್ರಯೋಗಾಲಯಗಳು, ಎಲಿಸಾ ಮತ್ತು ಕಿಟ್‌ ವಿಧಾನ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಸುಲಿಗೆ ಮಾಡದಂತೆಯೂ, ಸುಳ್ಳು ವರದಿ ನೀಡಿ ವಂಚಿಸದಂತೆಯೂ ಆರೋಗ್ಯ ಇಲಾಖೆ ಎಚ್ಚರವಹಿಸಬೇಕಾಗಿದೆ. ಬೃಹತ್‌ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆದಿರುವ ನಿವೇಶನಗಳು, ಕೊಳೆಗೇರಿಗಳು ಹಾಗೂ ಕೊಳಚೆ ನೀರು ಹರಿಯದಂತೆ ಹೂಳು ತುಂಬಿಕೊಂಡ ಚರಂಡಿಗಳೆಲ್ಲ ಈಗ ಸೊಳ್ಳೆಗಳ ಆಶ್ರಯ ತಾಣಗಳಾಗಿ ಪರಿಣಮಿಸಿವೆ. ನಿರ್ಮಾಣ ಕಾಮಗಾರಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಪ್ರದೇಶದಲ್ಲಿ ಇವುಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತದೆ. ಇಲ್ಲೆಲ್ಲ ಸೊಳ್ಳೆಗಳಿಗೆ ಕಡಿವಾಣ ಹಾಕುವ ಹೊಣೆಗಾರಿಕೆಯನ್ನು ಕಟ್ಟಡ ನಿರ್ಮಾಣಗಾರರಿಗೆ ಒಪ್ಪಿಸಬೇಕು. 

ಫಾಗಿಂಗ್‌ ಮೂಲಕವೂ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಆದರೆ, ಪೌರಸಂಸ್ಥೆಗಳ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಫಾಗಿಂಗ್‌ ಯಂತ್ರಗಳು ಇಲ್ಲದಿರುವುದು ನಮ್ಮ ಆರೋಗ್ಯ ಇಲಾಖೆಯ ರೋಗಗ್ರಸ್ತ ಮನಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಒಡೆದ ಟೈರ್‌, ತೆಂಗಿನ ಚಿಪ್ಪು, ಸಿಮೆಂಟ್‌ ತೊಟ್ಟಿ, ಏರ್‌ ಕೂಲರ್‌, ಹೂವಿನ ಕುಂಡಗಳ ಕೆಳಗಿನ ತಟ್ಟೆ, ತೊಟ್ಟಿ, ಡ್ರಮ್‌ ಹಾಗೂ ಮಡಕೆಯಲ್ಲಿ ನೀರು ಶೇಖರಿಸಿ ಇಡುವುದನ್ನು ಕೈಬಿಡಬೇಕು. ಸಿಮೆಂಟ್‌ ತೊಟ್ಟಿ, ಡ್ರಮ್‌ ಮತ್ತು ಮಡಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೊಳ್ಳೆಗಳ ಸಂತಾನೋತ್ಪತ್ತಿಗೆ ಸಹಜವಾಗಿಯೇ ಕಡಿವಾಣ ಬೀಳುತ್ತದೆ.

ಸ್ಥಳೀಯ ಪೌರ ಸಂಸ್ಥೆಗಳೂ ಸ್ವಚ್ಛತೆ ಕಾಪಾಡಿಕೊಳ್ಳುವ ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತಿಲ್ಲ. ಹಗಲು ಹೊತ್ತಿನಲ್ಲಿ ಈಡಿಸ್‌ ಈಜಿಪ್ಟಿ (Aedes egypti ) ಸೊಳ್ಳೆಯ ಕಡಿತದಿಂದ ಡೆಂಗಿ ಹಾಗೂ ಚಿಕೂನ್‌ಗುನ್ಯಾ ಕಂಡು ಬರುತ್ತವೆ. ಕಾಯಿಲೆ ಲಕ್ಷಣಗಳು ಕಂಡು ಬಂದಾಗ ಅವುಗಳನ್ನು ನಿರ್ಲಕ್ಷಿಸಬಾರದು. ವೈದ್ಯರ ಬಳಿ ಚಿಕಿತ್ಸೆಗೆ ಧಾವಿಸಬೇಕು. ಅನೇಕ ಸಂದರ್ಭಗಳಲ್ಲಿ ಮಾರಣಾಂತಿಕವಾಗಿ ಪರಿಣಮಿಸುವ ಕಾಯಿಲೆ ಹರಡುವಿಕೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕು ಮತ್ತು ಈ ಸಂಬಂಧದ ಕೆಲಸಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು. ಜನರಲ್ಲಿ ಪೌರ ಪ್ರ‌ಜ್ಞೆಯೂ ಜಾಗೃತಗೊಳ್ಳಬೇಕು. ಆರೋಗ್ಯ ಇಲಾಖೆ ಮತ್ತು ಪೌರಸಂಸ್ಥೆಗಳು ತುರ್ತಾಗಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ಎಲ್ಲ ಪ್ರಯತ್ನಗಳು ಸಂಘಟಿತವಾಗಿ ನಡೆದರೆ ಮಾತ್ರ ಈ ಕಾಯಿಲೆಗಳನ್ನು ಸಮರ್ಥವಾಗಿ ನಿಯಂತ್ರಿಸಲು, ಸಾವಿನ ಸಂಖ್ಯೆಗೆ ಕಡಿವಾಣ ಹಾಕಲು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT