ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಟ್ಟ ಕ್ರಮ ಬೇಕು

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ದೇಶಿ ಅರ್ಥ ವ್ಯವಸ್ಥೆ ಕುಂಟುತ್ತಾ ಸಾಗಿದೆ ಎನ್ನುವುದಕ್ಕಿಂತ ದೇಶಿ ಕಾರಣಗಳೇ ಆರ್ಥಿಕ ಮುನ್ನಡೆಗೆ ತಡೆ ಒಡ್ಡಿವೆ ಎನ್ನುವ ವಾದವನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಡಿ. ಸುಬ್ಬರಾವ್ ಅವರು ಮುಂದಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಣಹೂಡಿಕೆ ಇಳಿಮುಖವಾಗಿದೆ. ಹಣದುಬ್ಬರ ಕಳವಳದ ಸಂಗತಿಯಾಗಿದೆ ಎಂಬ ಅವರ ಮಾತುಗಳು ಗಂಭೀರ ಪರಿಶೀಲನೆಗೆ ಅರ್ಹ. ರಫ್ತು ಕುಸಿತ ಹಾಗೂ ಆಮದು ಹೆಚ್ಚಳದಿಂದಾಗಿ ಪಾವತಿ ಸಮತೋಲನದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಚಾಲ್ತಿ ಖಾತೆ ಕೊರತೆಯು  (ಸಿಎಡಿ)  ದೇಶದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ  ಶೇಕಡ 5ಕ್ಕೆ ಏರಿಕೆ ಕಂಡಿರುವುದೂ ಕಳವಳಕಾರಿ ಸಂಗತಿ. ಇದೇ ಸಂದರ್ಭದಲ್ಲಿ, ಕಳೆದ ವಾರ ಭಾರತೀಯ ಕೈಗಾರಿಕೋದ್ಯಮ ಒಕ್ಕೂಟ (ಸಿಐಐ)ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಭಾರತದ ವೃದ್ಧಿ ದರ ಶೇ 5ಕ್ಕೆ ಕುಸಿತ ಕಂಡಿರುವ ಬಗ್ಗೆ  ವ್ಯಕ್ತ ಪಡಿಸಿದ್ದ ಆತಂಕವನ್ನು ಸ್ಮರಿಸಬಹುದು. ರಾಷ್ಟ್ರದ ಆರ್ಥಿಕತೆಯಲ್ಲಿ ಕಂಡು ಬರುತ್ತಿರುವ ಈ ಕುಸಿತ ತಾತ್ಕಾಲಿಕ ಎಂದು ಪ್ರಧಾನಿಯವರೇನೊ ಭರವಸೆ ನೀಡಿದ್ದಾರೆ. ಈ ಪರಿಸ್ಥಿತಿಯ ಸೃಷ್ಟಿ,  ಯುಪಿಎ ಸರ್ಕಾರದ ನಿಯಂತ್ರಣವನ್ನು ಮೀರಿದ್ದು ಎಂಬಂಥ ಸಮಜಾಯಿಷಿಯನ್ನೂ ಅವರು ನೀಡಿದ್ದಾರೆ. ಆದರೆ  ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರದ ಹಿಂಜರಿಕೆಗಳು, ಆರ್ಥಿಕ ಬೆಳವಣಿಗೆಗೆ ಅಡ್ಡಗಾಲಾಗಿವೆ ಎಂಬುದನ್ನು  ಆರ್ಥಿಕ ವಿಶ್ಲೇಷಕರು  ಪ್ರತಿಪಾದಿಸುತ್ತಲೇ ಬಂದಿದ್ದಾರೆ.

ರಾಷ್ಟ್ರದಲ್ಲಿ ಹಣಹೂಡಿಕೆಗೆ ಹೂಡಿಕೆದಾರರು ಮುಂದಾಗುತ್ತಿಲ್ಲ ಎಂದಲ್ಲಿ ಅದಕ್ಕೆ ಸ್ವರೂಪಾತ್ಮಕ ದೋಷಗಳು ಹಾಗೂ ನಿಯಂತ್ರಣಗಳ  ನಿಯಮಾವಳಿಗಳು ಕಾರಣವಾಗಿರುತ್ತವೆ.  ಈ ನಿಟ್ಟಿನಲ್ಲಿ ಸುಧಾರಣೆ ಕ್ರಮಗಳಿಗೆ ನಾಂದಿ ಹಾಡದಿದ್ದಲ್ಲಿ  ಶೇ 8 ರ ವೃದ್ಧಿದರದ ಭರವಸೆ ಕನಸಾಗಿಯೇ ಉಳಿಯುತ್ತದೆ.

ಹೀಗಾಗಿ ಆರ್ಥಿಕ ಬೆಳವಣಿಗೆಗೆ ಪೂರಕವಾಗಲು ಯೋಜನೆಗಳ ತ್ವರಿತ ಅನುಮೋದನೆ ಮುಖ್ಯ. ಇವು ಪಾರದರ್ಶಕ ನೆಲೆಯಲ್ಲಾಗಬೇಕು.  ಈ ನಿಟ್ಟಿನಲ್ಲಿ ಪ್ರಧಾನಿಯವರು ತಮ್ಮ ಅಧಿಕಾರವನ್ನು ಪ್ರತಿಪಾದಿಸಬೇಕು. ದಿಟ್ಟವಾದ ಕ್ರಮಗಳನ್ನು ಕೈಗೊಳ್ಳುವಂತಹ ನಾಯಕತ್ವವನ್ನು ಪ್ರದರ್ಶಿಸುವುದು ಅಗತ್ಯ.  ಇಂದಿನ ಹಣ  ಹೂಡಿಕೆಯು, ನಾಳಿನ ಆರ್ಥಿಕ ಬೆಳವಣಿಗೆಗೆ ಕಾರಣವಾಗುವ ಉತ್ಪಾದನಾ ಸಾಮರ್ಥ್ಯವಾಗಿರುತ್ತದೆ ಎಂಬುದನ್ನು ಮರೆಯಲಾಗದು. ಇಂತಹ ಸಂಕ್ರಮಣ ಕಾಲದಲ್ಲಿ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ನ ಚಿಂತನೆ, ಮುನ್ನೋಟಗಳ ಮಧ್ಯೆ ಸಹಮತ ಇದ್ದರೆ ಮಾತ್ರ ಆರ್ಥಿಕ ಚಟುವಟಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತವೆ ಎನ್ನುವುದನ್ನು ಅಧಿಕಾರಸ್ಥರು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT