ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಯುತ ಚುನಾವಣೆ ಸವಾಲು ಎದುರಿಸಲು ಸಜ್ಜಾಗಿ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ರಾಷ್ಟ್ರದಲ್ಲಿ  ಮತ್ತೊಮ್ಮೆ ಚುನಾವಣೆಗಳ ಸದ್ದು. ರಾಜಕೀಯವಾಗಿ ಅತ್ಯಂತ ಮಹತ್ವದ  ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ, ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಫೆಬ್ರುವರಿ 4ರಿಂದ ಮಾರ್ಚ್ 8ರವರೆಗೆ ನಡೆಯಲಿವೆ.  ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸುವ ಸವಾಲು ಮತ್ತೊಮ್ಮೆ ಚುನಾವಣಾ ಆಯೋಗದ ಮುಂದಿದೆ. 

ಹಲವು ಅಡೆತಡೆಗಳ ನಡುವೆಯೂ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ  ಪ್ರತಿ ಐದು ವರ್ಷಕ್ಕೊಮ್ಮೆ ರಾಷ್ಟ್ರದಲ್ಲಿ  ವ್ಯವಸ್ಥಿತವಾಗಿ ಚುನಾವಣೆಗಳು ನಡೆಯುತ್ತಿವೆ ಎಂಬುದು ದೊಡ್ಡ ಹೆಗ್ಗಳಿಕೆ.  ಇಷ್ಟೊಂದು ದೊಡ್ಡ ರಾಷ್ಟ್ರದಲ್ಲಿ ನಿಯಮಿತವಾಗಿ  ಚುನಾವಣೆಗಳನ್ನು ನಡೆಸುತ್ತಾ  ಅನೇಕ ಚುನಾವಣಾ ಸುಧಾರಣೆಗಳನ್ನೂ ತರಲಾಗಿದೆ ಎಂಬುದು ಕಡಿಮೆ ಸಾಧನೆಯೇನಲ್ಲ.

ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ, ಪ್ರತಿ ಮತದಾರರಿಗೆ ಫೋಟೊ ಇರುವ ಗುರುತಿನ ಚೀಟಿ  ಇತ್ಯಾದಿ ಸುಧಾರಣೆಗಳು  ಚುನಾವಣಾ ಅಕ್ರಮಗಳನ್ನು ತಡೆಯಲು ಒಂದಷ್ಟು ಮಟ್ಟಿಗೆ ನೆರವಾಗಿವೆ. ಹೀಗಿದ್ದೂ  ರಾಜಕೀಯದ ಅಪರಾಧೀಕರಣವನ್ನು ತಡೆಯಲಾಗಿಲ್ಲ ಎಂಬುದೂ ವ್ಯವಸ್ಥೆಯಲ್ಲಿರುವ ಅನೇಕ ದೋಷಗಳತ್ತ ಬೊಟ್ಟು ಮಾಡುತ್ತದೆ. ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲಿನ ನಿಯಂತ್ರಣ ಕ್ರಮ ಸೀಮಿತವಾದುದಾಗಿದೆ.

ಈ ಬಾರಿ ಸಾಮಾಜಿಕ ಮಾಧ್ಯಮಗಳ ಮೇಲೆಯೂ ನಿಗಾ ಇರಿಸುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ. ಸಾಮಾಜಿಕ ಮಾಧ್ಯಮದ ವ್ಯಾಪ್ತಿ  ಹಾಗೂ  ಅನಾಮಧೇಯತೆಗೆ  ಇರುವ ಅವಕಾಶಗಳಿಂದಾಗಿ ಇದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಲಿದೆ. ಚುನಾವಣಾ ಪ್ರಚಾರ ಸಭೆಗಳು  ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಮಾತುಗಳನ್ನು ನಿಯಂತ್ರಿಸುವುದು ಕಠಿಣವಾದದ್ದು.

2015ರ ಅಂತ್ಯದಲ್ಲಿ ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಮುವಾದಿ ಹೇಳಿಕೆಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗ ಸಾಕಷ್ಟು ಶ್ರಮಪಟ್ಟಿತ್ತು ಎಂಬುದನ್ನು ಸ್ಮರಿಸಬಹುದು. ಹಾಗೆಯೇ, ಚುನಾವಣೆಗೆಂದು ಮಾಡುವ ವೆಚ್ಚಕ್ಕೆ ಒಂದು ಮಿತಿ ಇದೆ. ಆದರೆ ಅದು ನಿಯಮಿತವಾಗಿ ಉಲ್ಲಂಘನೆಯಾಗುತ್ತಲೇ ಇರುತ್ತದೆ ಎಂಬುದು ಕಹಿ ವಾಸ್ತವ.

ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಒಂದಲ್ಲ ಒಂದು ವಿಧದಲ್ಲಿ ಈ ಮಿತಿ ಮೀರಿ ಖರ್ಚು ಮಾಡುವ ದಾರಿಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಪ್ರಜಾಪ್ರತಿನಿಧಿ ಕಾಯ್ದೆ 10ಎ ಪ್ರಕಾರ, ಚುನಾವಣಾ ವೆಚ್ಚಗಳ ಬಗ್ಗೆ ತಪ್ಪು ಮಾಹಿತಿ ಸಲ್ಲಿಸಿದಲ್ಲಿ ಅಂತಹ ಅಭ್ಯರ್ಥಿಯನ್ನು ಅನರ್ಹಗೊಳಿಸುವುದು ಸಾಧ್ಯವಿದೆ. ಆದರೆ ಈ ಅಧಿಕಾರ ಸಾಮಾನ್ಯವಾಗಿ ಚಲಾವಣೆಯಾಗುವುದಿಲ್ಲ.

ಹೀಗಾಗಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿಗಳಿಗೆ ಮೊದಲು ಮನಗಾಣಿಸಬೇಕಾಗಿದೆ. ಪಾರದರ್ಶಕತೆ ಇಲ್ಲದ ಅತಿ ಹೆಚ್ಚಿನ ಚುನಾವಣಾ ವೆಚ್ಚ ಪ್ರಜಾಸತ್ತೆಯ  ಕಪ್ಪು ಚುಕ್ಕೆ ಎಂಬುದನ್ನೂ ಅರಿಯಬೇಕು. ಆಡಳಿತ ಯಂತ್ರದ ದುರುಪಯೋಗವಾಗದೇ  ನಿಷ್ಪಕ್ಷಪಾತ ರೀತಿಯಲ್ಲಿ ಚುನಾವಣೆ ನಡೆಯಬೇಕಾದುದು ಅಗತ್ಯ.

ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಆಯಾ ರಾಜ್ಯದ ಸ್ಥಳೀಯ ವಿಚಾರಗಳು ಪ್ರಾಶಸ್ತ್ಯ ಗಳಿಸಿಕೊಳ್ಳುತ್ತವೆ ಎಂಬುದು ಸಾಮಾನ್ಯ ಸಂಗತಿ. ಇದರ ಜೊತೆಗೇ ₹500 ಹಾಗೂ ₹1000 ಮೌಲ್ಯದ ನೋಟುಗಳ ರದ್ದತಿಯ ಬಗ್ಗೆ ಜನರ ನಿಲುವೇನು ಎಂಬುದಕ್ಕೆ ಈ ಚುನಾವಣೆಗಳು ನಿಕಷ ಒಡ್ಡುವವೇ ಎಂಬುದೂ ಕುತೂಹಲಕರ. ಹಾಗೆಯೇ ಜಾತಿ, ಧರ್ಮ, ಭಾಷೆ ಅಥವಾ ಸಮುದಾಯದ ಆಧಾರದಲ್ಲಿ ಮತ ಕೇಳಬಾರದು ಎಂಬಂಥ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ರಾಜಕೀಯ ಪಕ್ಷಗಳು ಹೇಗೆ ಅನ್ವಯಿಸಿಕೊಳ್ಳಲಿವೆ ಎಂಬುದನ್ನೂ ಬರಲಿರುವ ದಿನಗಳು ಹೇಳಲಿವೆ.

ರಾಜಕೀಯವಾಗಿಯೂ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಈ ಚುನಾವಣೆ ಮುಖ್ಯವಾಗಲಿದೆ. ಏಕೆಂದರೆ  ಎನ್‌ಡಿಎ  ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಅರ್ಧ ಅವಧಿ ಮುಗಿದುಹೋಗಿದೆ. ಈ ಮಧ್ಯೆ ಮತದಾನ ಆರಂಭಗೊಳ್ಳುವ ಮೂರು ದಿನ ಮೊದಲು, ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ‘ಬಜೆಟ್ ಮೂಲಕ ಯೋಜನೆಗಳನ್ನು ಪ್ರಕಟಿಸುವ ಅಧಿಕಾರದಿಂದ ಕೇಂದ್ರ ಸರ್ಕಾರದ ಆಡಳಿತ ಸೂತ್ರ ಹಿಡಿದ ಪಕ್ಷಕ್ಕೆ ಲಾಭವಾಗಬಹುದು.

ಇದು ನೀತಿಸಂಹಿತೆಯ ಉಲ್ಲಂಘನೆಯಾಗುವುದರಿಂದ ಬಜೆಟ್ ಮಂಡನೆ ಮುಂದೂಡಬೇಕು’ ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಬಜೆಟ್ ಮಂಡನೆ ಸಾಂವಿಧಾನಿಕ ಅಗತ್ಯ. 2014ರಲ್ಲೂ ಸಾರ್ವತ್ರಿಕ ಚುನಾವಣೆಗೆ ಮುಂಚೆ ಮಧ್ಯಂತರ ಬಜೆಟ್‌ಅನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಜೊತೆಗೆ ಹೊಸ ವರ್ಷದ ಮುನ್ನಾದಿನದ ತಮ್ಮ ಭಾಷಣದಲ್ಲೇ ಬಜೆಟ್ ಭಾಷಣದಲ್ಲಿ ಪ್ರಕಟಿಸುವಂತಹ ಅನೇಕ ಗಣನೀಯ ಯೋಜನೆಗಳನ್ನು ಪ್ರಧಾನಿ ಮೋದಿ ಈಗಾಗಲೇ ಪ್ರಕಟಿಸಿಬಿಟ್ಟಿದ್ದಾರೆ. ಇನ್ನೇನಿದ್ದರೂ ಜನಾದೇಶವನ್ನು ಸ್ವೀಕರಿಸಲು ಅಣಿಯಾಗಬೇಕಷ್ಟೆ ಎಂದು ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT