ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್.) ಮುಖಂಡರು ತಮ್ಮ ಹಳೆ ಚಾಳಿಯನ್ನು ಪುನಃ ಪ್ರಕಟಪಡಿಸಿದ್ದಾರೆ. ಬೆಳಗಾವಿಗೆ ಹೊಂದಿಕೊಂಡಂತಿರುವ ಯಳ್ಳೂರ ಗ್ರಾಮದಲ್ಲಿ ಒಂದಷ್ಟು ಭಾಷಾಂಧರನ್ನು ಸೇರಿಸಿಕೊಂಡು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈ ಮೂಲಕ ಹೈಕೋರ್ಟ್ ಆದೇಶಕ್ಕೆ ಮತ್ತು ಅದನ್ನು ಅನುಷ್ಠಾನಗೊಳಿಸಿದ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಇದು ಉದ್ಧಟತನವಲ್ಲದೆ ಮತ್ತೇನೂ ಅಲ್ಲ. ಇಂತಹ ವರ್ತನೆಯನ್ನು ಸಹಿಸಬಾರದು. ಈ ಗ್ರಾಮದ ಸಂಪರ್ಕ ರಸ್ತೆಯಲ್ಲಿ ‘ಮಹಾರಾಷ್ಟ್ರ ರಾಜ್ಯ, ಯಳ್ಳೂರ’ ಎಂಬ ನಾಮಫಲಕವಿದೆ. ಕರ್ನಾಟಕದ ಅವಿಭಾಜ್ಯ ಅಂಗವಾದ ಈ ಗ್ರಾಮವನ್ನು ಮಹಾರಾಷ್ಟ್ರಕ್ಕೆ ಸೇರಿದೆ ಎಂದು ಬಿಂಬಿಸುವ ಕೆಲವು ಪುಂಡರ ದುಸ್ಸಾಹಸವೇ ಈ ನಾಮಫಲಕ.

ಇಟ್ಟಿಗೆ, ಸಿಮೆಂಟ್ ಬಳಸಿ ನಿರ್ಮಿಸಿದ ಈ ಫಲಕ 28 ವರ್ಷಗಳಿಂದ ವಿವಾದದ ಹೊಗೆ ಎಬ್ಬಿಸುತ್ತಲೇ ಇದೆ. ಇದರ ಔಚಿತ್ಯವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನಾಮಫಲಕ ತೆರವಿಗೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿತ್ತು. ಈ ಆದೇಶದ ಅನ್ವಯ ಸರ್ಕಾರ ಶುಕ್ರವಾರ ನಾಮಫಲಕ ತೆರವುಗೊಳಿಸಿತ್ತು. ಆದರೆ, ತೆರವುಗೊಳಿಸಿದ 24 ಗಂಟೆಯೊಳಗೆ ಫಲಕ ಅದೇ ಸ್ಥಳದಲ್ಲಿ ಪುನಃ ತಲೆಎತ್ತಿತ್ತು. ಅದನ್ನು ಭಾರಿ ಪೊಲೀಸ್ ಬಲದೊಂದಿಗೆ ಮತ್ತೆ ತೆಗೆಸಬೇಕಾಗಿ ಬಂತು. ಕಾನೂನು– ಕಟ್ಟಳೆಗಳಿಗೆ ಸೆಡ್ಡು ಹೊಡೆಯುವ ಪ್ರವೃತ್ತಿಯನ್ನು ಲಘುವಾಗಿ ಪರಿಗಣಿಸಬಾರದು.

ಅಭಿವೃದ್ಧಿಗೆ ಉದ್ದಕ್ಕೂ ಅಡ್ಡಗಾಲು ಹಾಕುತ್ತಿರುವ ಎಂ.ಇ.ಎಸ್. ತನ್ನ ಅಸ್ತಿತ್ವಕ್ಕಾಗಿ ಮುಗ್ಧ ಮರಾಠಿಗರನ್ನು ಭಾಷೆಯ ಹೆಸರಿನಲ್ಲಿ ಎತ್ತಿಕಟ್ಟುತ್ತಲೇ ಇದೆ. ಇದರ ಹುನ್ನಾರಗಳಿಗೆ ಶಿವಸೇನೆಯ ಬೆಂಬಲವೂ ಇದೆ. ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಸಮೀಪಿಸಿದೆ. ಈ ಹೊತ್ತಲ್ಲಿ ಗಡಿ ವಿಷಯ ಕೆದಕಿದರೆ ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ಲಾಭ ಸಿಗಬಹುದು ಎಂದು ಅಲ್ಲಿನ ಕೆಲವು ಮುಖಂಡರು ಚಿತಾವಣೆ ನಡೆಸಿರುವ ಸಾಧ್ಯತೆಯೂ ಇದೆ. ವಿವಾದಗಳಿಂದಲೇ ಉಸಿರಾಡುವ ಎಂ.ಇ.ಎಸ್, ಹಳೆಯ ಬೇಡಿಕೆಗೆ ಹೊಸ ಆಯಾಮ ಸಿಗಬಹುದು ಎಂದು ಭಾವಿಸಿದಂತಿದೆ. ಹಾಗೇನಾದರೂ ಭಾವಿಸಿದ್ದರೆ ಅದು ಬರೀ ಭ್ರಮೆ ಅಷ್ಟೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಜನರ ಭಾವನೆಗಳನ್ನು ಕೆರಳಿಸುವುದು ಅಕ್ಷಮ್ಯ.

ಗಡಿ ವಿವಾದ ಮುಗಿದ ಅಧ್ಯಾಯ ಎಂಬುದು ಮರಾಠಿ ಭಾಷಿಕ ಜನಸಾಮಾನ್ಯರಿಗೂ ಮನದಟ್ಟಾಗಿದೆ. ಆದರೂ ಮುಖಂಡರ ವರಸೆಗಳು ಬದಲಾಗಿಲ್ಲ ಎಂಬುದಕ್ಕೆ ಯಳ್ಳೂರ ಘಟನೆ ತಾಜಾ ನಿದರ್ಶನ. ಎಂ.ಇ.ಎಸ್. ಬೆಂಬಲದಿಂದ ಗೆದ್ದು ಬಂದಿರುವ ಇಬ್ಬರೂ ಶಾಸಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು. ಶಾಸಕರ ಮಾತಿನಿಂದ ಉತ್ತೇಜಿತರಾಗಿ ಖಾನಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲೂ ‘ಮಹಾರಾಷ್ಟ್ರ’ ಫಲಕಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ. ಇವುಗಳನ್ನೂ ಪೂರ್ತಿ ತೆರವುಗೊಳಿಸಬೇಕು. ಇಂತಹ ಪ್ರವೃತ್ತಿಯನ್ನು ತಕ್ಷಣ ಚಿವುಟಿ ಹಾಕಬೇಕು. ಕನ್ನಡ ಮತ್ತು ಮರಾಠಿ ಭಾಷಿಕರು ಹಿಂಸೆಗೆ ಅವಕಾಶ ನೀಡದೆ, ಎಂದಿನಂತೆ ಭಾಷಾ ಸೌಹಾರ್ದ ಕಾಪಾಡಬೇಕು. ವಿಕೃತ ಹುನ್ನಾರಗಳಿಗೆ ಅಲ್ಲಿನ ಜನರೇ ತಕ್ಕ ಪಾಠ ಕಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.