ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಫರ್‌ ವಲಯ: ಎಚ್ಚರಿಕೆಯ ನಡೆ ಅಗತ್ಯ, ಪರಿಸರ ಸಂರಕ್ಷಣೆಯೇ ಆದ್ಯತೆಯಾಗಲಿ

Last Updated 6 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರಿನ ಕೆರೆಗಳ ಬಫರ್‌ (ಮೀಸಲು) ವಲಯದ ಮಿತಿಯನ್ನು 75 ಮೀಟರ್‌ಗೆ ಹೆಚ್ಚಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮೂರು ವರ್ಷಗಳ ಹಿಂದೆಯೇ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಇದೀಗ ರದ್ದುಗೊಳಿಸಿದೆ. ರಿಯಲ್‌ ಎಸ್ಟೇಟ್‌ನಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿರುವ ಉದ್ಯಮಿಗಳಿಗೆ ಈ ತೀರ್ಪು ಖುಷಿ ತಂದರೆ, ಪರಿಸರಪ್ರಿಯರ ಪಾಲಿಗೆ ಕಳವಳಕಾರಿ. ಬಫರ್‌ ವಲಯದ ಮಿತಿಯನ್ನು ಪುನಃ ಮೊದಲಿನ ಸ್ಥಿತಿಗೆ ತಂದಿರುವ ಈ ತೀರ್ಪಿನ ದೂರಗಾಮಿ ಪರಿಣಾಮಗಳು ಏನೇನು ಎಂಬುದನ್ನು ಬಲು ಎಚ್ಚರಿಕೆಯಿಂದ ಅವಲೋಕಿಸಬೇಕಿದೆ.

ಎನ್‌ಜಿಟಿ ಆದೇಶ ಪಾಲಿಸುವಾಗ ನಗರದಲ್ಲಿ 11 ಸಾವಿರ ಎಕರೆಯಷ್ಟು ಹೆಚ್ಚುವರಿ ಬಫರ್‌ ವಲಯವನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಈ ವಲಯದಲ್ಲಿ ನಿರ್ಮಾಣವಾಗಿದ್ದ ಸುಮಾರು 35 ಸಾವಿರ ಕಟ್ಟಡಗಳಿಗೆ ಬಿಬಿಎಂಪಿಯಿಂದ ಸ್ವಾಧೀನಾನುಭವ ಪತ್ರಗಳನ್ನು ನೀಡಲಾಗಿರಲಿಲ್ಲ. ಅಂದರೆ, ಕಾನೂನು ಪರಿಭಾಷೆಯಲ್ಲಿ ಅವುಗಳೆಲ್ಲ ಅಕ್ರಮ ಕಟ್ಟಡಗಳೇ ಆಗಿದ್ದವು. ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಈ ಕಟ್ಟಡಗಳ ಮಾಲೀಕರು ಈಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ. ಎನ್‌ಜಿಟಿ ಆದೇಶವೇನೋ ಇತ್ತೀಚಿನದು. ಅದಕ್ಕಿಂತ ಹಿಂದಿನಿಂದಲೂ ಜಾರಿಯಲ್ಲಿರುವ ನಗರ ಮಹಾಯೋಜನೆ ನಿಯಮದ ಪ್ರಕಾರ, ಕೆರೆಗಳ ಸುತ್ತ 30 ಮೀಟರ್‌ ಬಫರ್‌ ವಲಯ ಬಿಡಬೇಕು. ಭೂಗಳ್ಳರು ಆ ನಿಯಮವನ್ನೂ ಉಲ್ಲಂಘಿಸಿ ಮೀಸಲು ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವುದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಡೆಸಿದ ಅಧ್ಯಯನ ವರದಿಯಿಂದ ಸ್ಪಷ್ಟ. ಅಲ್ಲದೆ, ನಗರದ ಯಾವ ರಾಜಕಾಲುವೆಯೂ ಬಫರ್‌ ವಲಯವನ್ನು ಹೊಂದಿಲ್ಲ. ಕೆಲವೆಡೆ ಕಾಲುವೆಯೇ ಮಾಯವಾಗಿದೆ. ಕೆರೆ–ಕಾಲುವೆಗಳ ವಾರಸುದಾರರಾದ ಬಿಬಿಎಂಪಿ ಮತ್ತು ಬಿಡಿಎ ಸಂಸ್ಥೆಗಳು ತಮ್ಮ ಎದುರಿಗೆ ಅತಿಕ್ರಮಣನಡೆಯುತ್ತಿದ್ದರೂ ಕಣ್ಮುಚ್ಚಿಕೊಂಡು ಕುಳಿತಿರುವುದು ಕುಚೋದ್ಯ.

ಬಫರ್‌ ವಲಯವನ್ನು ಪ್ರವಾಹ ತಡೆಯುವ ನೈಸರ್ಗಿಕ ಬೋಗುಣಿ ಎಂದೇ ಗುರುತಿಸಲಾಗುತ್ತದೆ. ಈ ಭೂಭಾಗಗಳು ಒಡಲಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತವೆ. ನೈಸರ್ಗಿಕ ಸಂಸ್ಕರಣೆ ಮೂಲಕ ನೀರಿನ ಶುದ್ಧತೆಯನ್ನು ಹೆಚ್ಚಿಸುತ್ತವೆ. ಹಸಿರನ್ನೂ ವೃದ್ಧಿಸುತ್ತವೆ. ಕೆರೆಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಲಾಭ ಕೋರತನಕ್ಕೆ ಬಳಸಿಕೊಳ್ಳುವ ಸಂಸ್ಥೆಗಳು, ತಾವು ಪರಿಸರಕ್ಕೆ ಮಾಡಿದ ಹಾನಿ ಎಂತಹದ್ದು ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ. ಸೋಜಿಗವೆಂದರೆ ರಾಜ್ಯ ಸರ್ಕಾರ ಕೂಡ ರಿಯಲ್‌ ಎಸ್ಟೇಟ್‌ ಕಂಪನಿಗಳ ಜತೆ ಸೇರಿಕೊಂಡು ಬಫರ್‌ ವಲಯವನ್ನು ಕಡಿಮೆ ಮಾಡುವಂತೆ ಕಾನೂನುಸಮರ ನಡೆಸಿರುವುದು. ಬಿಬಿಎಂಪಿಗೆ ಈಗ ಎಷ್ಟೊಂದು ಆತುರವೆಂದರೆ, ಬಫರ್‌ ವಿವಾದಕ್ಕೆ ಸಿಲುಕಿದ್ದ ಕಟ್ಟಡಗಳಿಗೆಲ್ಲ ಕೋರ್ಟ್‌ನ ಆದೇಶದ ಪ್ರತಿ ಕೈಸೇರಿದ ತಕ್ಷಣವೇ ಅನುಮತಿ ನೀಡುವುದಾಗಿ ಹೇಳಿದೆ. ಶೇ 95ರಷ್ಟು ಕಾಂಕ್ರೀಟ್‌ಮಯವಾಗಿರುವ ನಗರ, ನೆಮ್ಮದಿಯಿಂದ ಉಸಿರಾಡುವಂತಾಗಲು ಬಫರ್‌ ವಲಯಗಳು ಉಳಿಯಲೇಬೇಕು.

ಈ ಮೊದಲೇ ನಿರ್ಮಾಣವಾಗಿರುವ ಕಟ್ಟಡಗಳಿಗೆ 75 ಮೀಟರ್‌ ಬಫರ್‌ ವಲಯದ ನಿಯಮದಿಂದ ವಿನಾಯಿತಿ ನೀಡುವ ಜತೆಗೆ, ಹೊಸ ನಿರ್ಮಾಣಗಳಿಗೆ ಎನ್‌ಜಿಟಿ ಆದೇಶವನ್ನು ಯಥಾವತ್ತಾಗಿ ಅನ್ವಯಿಸಬೇಕಾದ ಅಗತ್ಯವನ್ನು ಕೋರ್ಟ್‌ಗೆ ಸರ್ಕಾರ ಮನವರಿಕೆ ಮಾಡಿಕೊಟ್ಟಿದ್ದರೆ ಅದೊಂದು ಜಾಣ ನಡೆಯಾಗುತ್ತಿತ್ತು. ಏಕೆಂದರೆ, ಕಟ್ಟಡಗಳು ಮಾಲೀಕರ ಹಿತಕ್ಕಾದರೆ, ‘ಉಸಿರಾಟದ ಜಾಗ’ಗಳು ಇಡೀ ನಗರದ ಹಿತಕ್ಕೆ ಸಂಬಂಧಿಸಿದವು. ಕೆರೆಗಳ ಆಸುಪಾಸಿನಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣದಂತಹ ಯೋಜನೆ ಕೈಗೆತ್ತಿ
ಕೊಂಡಲ್ಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವ ನ್ಯಾಯಪೀಠದ ಅಭಿಪ್ರಾಯವು ಬಿಬಿಎಂಪಿ ಹಾಗೂ ಬಿಡಿಎಗೆ ಎಚ್ಚರಿಕೆ ಗಂಟೆಯಾಗಬೇಕು. ರಾಜಕಾಲುವೆಗಳ ಅತಿಕ್ರಮಣದಿಂದಲೇ ಮಹಾಪೂರದಂತಹ ಸಂಕಷ್ಟಕ್ಕೆ ಸಿಲುಕಿದ್ದ ನಗರವನ್ನು, ಅಂತಹ ಪ್ರಾಕೃತಿಕ ಸಂಕಷ್ಟಗಳಿಂದ ಕಾಪಾಡಲು ಬಫರ್‌ ವಲಯಗಳನ್ನು ಉಳಿಸಿಕೊಳ್ಳುವುದೊಂದೇ ಹಾದಿ ಎಂಬುದನ್ನು ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT