ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಪಿ ಸಂಸ್ಕೃತಿ ಹಾವಳಿ ತಡೆಗೆ ಸಕಾರಾತ್ಮಕ ಹೆಜ್ಜೆ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮುಂದಿನ ಮೇ1ರಿಂದ ಅತಿ ಗಣ್ಯ ವ್ಯಕ್ತಿಗಳು ಬಳಸುವ (ವಿಐಪಿ)  ವಾಹನಗಳ ಮೇಲಿನ ಕೆಂಪು ದೀಪ ಬಂದ್  ಮಾಡುವ ಬಗ್ಗೆ ಕೇಂದ್ರ ಸಂಪುಟ ಕೈಗೊಂಡಿರುವ ನಿರ್ಧಾರ ಮಹತ್ವದ್ದು. ಸಾಂಕೇತಿಕ ಮಟ್ಟದಲ್ಲಾದರೂ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವಂತಹ ಈ ಕ್ರಮ ಸಕಾರಾತ್ಮಕ.

ಸಮಾನತೆಯನ್ನು ಬೋಧಿಸುವ ಪ್ರಜಾಪ್ರಭುತ್ವದ ಆಶಯಕ್ಕೆ ಇದು ಅನುಗುಣವಾಗಿದೆ.  ರಾಷ್ಟ್ರದಾದ್ಯಂತ ಈ ನಿಷೇಧ ಜಾರಿಗೆ ಬರಲಿದ್ದು   ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಮುಖ್ಯಮಂತ್ರಿಗಳಿಗೂ ಯಾವುದೇ ವಿನಾಯಿತಿ ಇಲ್ಲ ಎಂಬುದು ಮುಖ್ಯ.
ತುರ್ತು ಸೇವೆ ಒದಗಿಸುವ ಆಂಬುಲೆನ್ಸ್, ಅಗ್ನಿ ಶಾಮಕ  ಹಾಗೂ ಪೊಲೀಸ್ ಮತ್ತು ಸೇನಾ ವಾಹನಗಳು ಮಾತ್ರ ಕೆಂಪು ದೀಪ ಬಳಸಬೇಕೆಂಬುದು ಜಾಗತಿಕ ನಿಯಮ. ಆದರೆ ಭಾರತದಲ್ಲಿ ಕೆಂಪು ದೀಪ ಹಾಗೂ ಸೈರನ್ ಹೊರಡಿಸುವ ಕಾರಿನಲ್ಲಿ ಓಡಾಡುವುದು ಅಧಿಕಾರ ಪ್ರತಿಷ್ಠೆ ಪ್ರದರ್ಶನದ ಸಂಕೇತವಾಗಿದೆ. ಅಧಿಕಾರ ಬಲದ  ಅಸಹ್ಯಕರ ಪ್ರದರ್ಶನದ ಸಂಕೇತವಾದ ಇಂತಹ ಕಾರುಗಳು ಓಡಾಡುವಾಗ ಟ್ರಾಫಿಕ್ ತಡೆಯುವುದರಿಂದ ಜನಸಾಮಾನ್ಯರು ಕಿರಿಕಿರಿ ಅನುಭವಿಸುವುದು ದೊಡ್ಡ ನಗರಗಳಲ್ಲಿ ಮಾಮೂಲು. ಸುರಕ್ಷತೆಯ ದೃಷ್ಟಿಯಿಂದ ಅತಿ ಗಣ್ಯರಿಗೆ ಇಂತಹ ಸೌಲಭ್ಯಗಳು ಅಗತ್ಯ ಎಂಬುದೂ ನಿಜ. ಆದರೆ  ಇಂತಹ ಅನೇಕ ಪ್ರತಿಷ್ಠೆಯ ಸವಲತ್ತುಗಳು ತಮಗೂ  ದಕ್ಕಬೇಕಾದದ್ದು ಎಂಬಂತಹ ಮನೋಭಾವ ನಮ್ಮ ರಾಜಕಾರಣಿಗಳಲ್ಲಿ ಅಂತರ್ಗತವಾಗಿಬಿಟ್ಟಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಈ  ವಿಐಪಿ ಸಂಸ್ಕೃತಿ ಅಂತ್ಯಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿರುವುದು ಶ್ಲಾಘನೀಯ ನಡೆ.

ಗಣ್ಯರು, ಹಾಗೂ ರಾಜಕಾರಣಿಗಳ ಕಾರುಗಳ ಮೇಲೆ ಮನಸೋಇಚ್ಛೆ ಕೆಂಪುದೀಪ ಅಳವಡಿಕೆ ಹಾಗೂ ಸೈರನ್ ಬಳಕೆಯ ವಿಚಾರವನ್ನು 2013ರಲ್ಲೇ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದು ವಸಾಹತುಶಾಹಿ ಸಂಸ್ಕೃತಿಯ ಪಳೆಯುಳಿಕೆ ಎಂದು ಕೋರ್ಟ್ ತೀವ್ರವಾಗಿ ಟೀಕಿಸಿತ್ತು. ಸಾರ್ವಜನಿಕರ ನಿರಾತಂಕ ಸಂಚಾರದ ಹಕ್ಕಿಗೆ ಚ್ಯುತಿ ತರುವ ಈ ವಿಐಪಿ ಸಂಸ್ಕೃತಿ ಕಾನೂನು ಬಾಹಿರ ಎಂದೂ  ಸುಪ್ರೀಂಕೋರ್ಟ್  ಹೇಳಿತ್ತು.

ಅನಿಷ್ಟ ಪದ್ಧತಿಯಾಗಿರುವ ಈ ವಿಐಪಿ ಸಂಸ್ಕೃತಿಯ ಅನೇಕ ಅಮಾನವೀಯ ಹಾಗೂ ಅನಾಗರಿಕ ಮುಖಗಳು ಸಾರ್ವಜನಿಕ ಬದುಕಲ್ಲಿ ಅನಾವರಣಗೊಳ್ಳುತ್ತಲೇ ಇರುತ್ತವೆ.  ತಡ ಮಾಡಿ ಬರುವ ರಾಜಕೀಯ ನೇತಾರರಿಗಾಗಿ ಕಾಯುತ್ತಾ ತನ್ನ ವಿಮಾನಗಳ ಹಾರಾಟವನ್ನೇ ಸರ್ಕಾರಿ ಒಡೆತನದ ಏರ್‌ ಇಂಡಿಯಾ ಅನೇಕ ಬಾರಿ ವಿಳಂಬ ಮಾಡಿದ ಪ್ರಸಂಗಗಳಿವೆ.  ಇಂತಹ ಅನಗತ್ಯ ವಿಳಂಬವನ್ನು ಇತರ ಪ್ರಯಾಣಿಕರು ಸಹಿಸಿಕೊಳ್ಳಬೇಕಾದುದಾದರೂ ಏಕೆ? ಕಳೆದ ವರ್ಷ, ಕೇಂದ್ರ ಸಚಿವ ಕಿರಣ್‌  ರಿಜಿಜು ಹಾಗೂ ಅವರ ಸಹಚರರು ಪ್ರಯಾಣಿಸಲು ಅನುವು ಮಾಡಿಕೊಡುವ ಸಲುವಾಗಿ ಮೂವರು ಪ್ರಯಾಣಿಕರನ್ನು ಏರ್‌ಇಂಡಿಯಾ ಸಂಸ್ಥೆ ಕೆಳಗಿಳಿಸಿದ ಪ್ರಕರಣ ವಿವಾದವಾಗಿತ್ತು.  ಇತ್ತೀಚೆಗೆ ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್‌ ಅವರು ಏರ್ ಇಂಡಿಯಾ ಸಿಬ್ಬಂದಿ ಮೇಲೆ ನಡೆಸಿದ ಹಲ್ಲೆ ಪ್ರಕರಣವೂ  ಈ ವಿಐಪಿ ಸಂಸ್ಕೃತಿಯ ಮತ್ತೊಂದು ಬಗೆಯ ವಿಕೃತಿ ಎನ್ನಬಹುದು. ಎಲ್ಲಾ ಸೌಲಭ್ಯಗಳಿಗೆ ತಾವು ಬಾಧ್ಯಸ್ತರು, ತಮಗೆ ದಕ್ಕಬೇಕು ಎಂಬ ಪ್ರತಿಷ್ಠೆಯ ಮನೋಭಾವ ರಾಜಕಾರಣಿಗಳಲ್ಲಿ ಮೊದಲು ತೊಲಗಬೇಕು. ಸಾಲಿನಲ್ಲಿ ನಿಲ್ಲುವುದು, ನಮ್ಮದೇ ಸಾಮಾನುಗಳನ್ನು ನಾವೇ ಹೊರುವುದು, ಭದ್ರತಾ ಪರಿಶೀಲನೆಗಳಿಗೆ ಒಳಪಡುವುದು ಅವಮಾನಕರವಲ್ಲ ಎಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಟೋಲ್ ಪ್ಲಾಜಾಗಳಲ್ಲಿ ಗಲಾಟೆ ಮಾಡುವುದಲ್ಲದೆ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ತನಗೆ ಅಧಿಕಾರವಿದೆ ಎಂದು ಭಾವಿಸಿಕೊಳ್ಳುವುದು ಮೊದಲು ತಪ್ಪಬೇಕು.

ವಿಐಪಿಗಳ ವಾಹನಗಳಲ್ಲಿ ಕೆಂಪು ದೀಪ ರದ್ದತಿಯನ್ನು ಆಮ್ ಆದ್ಮಿ ಪಕ್ಷ  ದೆಹಲಿಯಲ್ಲಿ ಈ ಮೊದಲೇ ಜಾರಿಗೆ ತಂದಿದೆ. ಇತ್ತೀಚೆಗೆ ಪಂಜಾಬ್‌ನ ಹೊಸ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರೂ ಕೆಂಪು ದೀಪ ಸಂಸ್ಕೃತಿ ಅಂತ್ಯಕ್ಕೆ ಮುಂದಾಗಿದ್ದಾರೆ.  ಹಾಗೆಯೇ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ ಅವರೂ ತಾವು ಕೆಂಪುಗೂಟದ ವಾಹನದಿಂದ ದೂರ ಇರುವುದಾಗಿ ಘೋಷಿಸಿದ್ದಾರೆ.
ಜನರ ಸೇವೆಯೇ ಜನಾರ್ದನ ಸೇವೆ ಎಂಬುದೊಂದು ಧ್ಯೇಯ ವಾಕ್ಯ. ಇದಕ್ಕೆ ಬದಲಾಗಿ ಜನರಿಂದ  ಅತಿಯಾದ ಉಪಚಾರದ ಸೇವೆಯನ್ನು ಪ್ರತಿಷ್ಠಿತರು ಬಯಸುವುದು ಜನತಂತ್ರಕ್ಕೆ ಭೂಷಣವಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಡಳಿತಗಾರ ಹಾಗೂ ಆಡಳಿತಕ್ಕೆ ಒಳಪಡುವವರ ಮಧ್ಯದ ಪ್ರತ್ಯೇಕತೆ ವಸಾಹತುಶಾಹಿ ಅಧಿಕಾರದ ಸಂಕೇತ. ಇದು ತಪ್ಪಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT