ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌ ಜೊತೆ ಬಿಜೆಪಿ ಸೆಣಸಾಟ

ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಖಾನಾಪುರದಲ್ಲಿ ಎಂಇಎಸ್‌ ಪ್ರಭಾವ ಇನ್ನೂ ಮುಂದು
ವರಿದಿದ್ದು, ಇದನ್ನು ಮುರಿಯಲು ಬಿಜೆಪಿ ಹರಸಾಹಸ ಪಡುತ್ತಿದೆ. ಎಂಇಎಸ್‌ನ ಒಂದು ಗುಂಪಿನಿಂದ ಹಾಲಿ ಶಾಸಕ ಅರವಿಂದ ಪಾಟೀಲ, ಇನ್ನೊಂದು ಗುಂಪಿನಿಂದ ವಿಲಾಸ ಬೆಳಗಾಂವಕರ ಸ್ಪರ್ಧೆಗೆ ಇಳಿದಿದ್ದರೆ, ಇವರ ಒಡಕಿನ ಲಾಭ ಪಡೆಯಲು ಬಿಜೆಪಿಯ ವಿಠ್ಠಲ ಹಲಗೇಕರ ಹವಣಿಸುತ್ತಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡುಬಂದಿದೆ.

ಹಾಲಿ ಶಾಸಕ ಅರವಿಂದ ಪಾಟೀಲ ಅವರ ಕಾರ್ಯವೈಖರಿ ಬಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಅಸಮಾಧಾನವಿದೆ. ಈ ಕಾರಣದಿಂದಾಗಿ ಅವರ ಜೊತೆ ಪಕ್ಷದ ಹಳೆ ತಲೆಮಾರಿನ ಮುಖಂಡರಾರೂ ಹೋಗುತ್ತಿಲ್ಲ. ಇವರ ಸಿಟ್ಟನ್ನು ಶಮನಗೊಳಿಸಲು ಪಕ್ಕದ ಮಹಾರಾಷ್ಟ್ರದ ಹಿರಿಯ ಮುಖಂಡ ಶರದ್‌ ಪವಾರ್‌ ಅವ
ರನ್ನು ಕರೆಸುವ ಪ್ರಯತ್ನವನ್ನು ಅರವಿಂದ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶರದ್‌ ಪವಾರ್‌ ಮಧ್ಯೆಪ್ರವೇಶಿಸುವವರೇ? ಅವರು ಹಿರಿಯ ಮುಖಂಡರ ಅಸಮಾಧಾನ ಶಮನಗೊಳಿಸುವಲ್ಲಿ ಸಫಲರಾಗುವವರೇ ಎನ್ನುವುದರ ಮೇಲೆ ಅರವಿಂದ ಪಾಟೀಲರ ಭವಿಷ್ಯ ಅವಲಂಬನೆಯಾಗಿದೆ.

ಕಳೆದ ಬಾರಿ ಅರವಿಂದ ಪಾಟೀಲ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲವೆಂದು ಎಂಇಎಸ್‌ನ ಇನ್ನೊಂದು ಗುಂಪು ವಿಲಾಸ ಬೆಳಗಾಂವಕರ ಅವರನ್ನು ಕಣಕ್ಕಿಳಿಸಿದೆ. ಎಂಇಎಸ್‌ನ ಮೂಲ ಕಾರ್ಯಕರ್ತರು ಇವರ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಎಂಇಎಸ್‌ನಲ್ಲಿ ಕಂಡು ಬಂದಿರುವ ಈ ಒಡಕಿನ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಇಲ್ಲಿನ ಮರಾಠಾ ಸಮು
ದಾಯದವರು ಮೊದಲಿನಿಂದಲೂ ಎಂಇಎಸ್‌ ಇಲ್ಲವೇ ಬಿಜೆಪಿಯತ್ತ ಒಲವು ಹೊಂದಿದ್ದಾರೆ. ಎಂಇಎಸ್‌ನ ಒಡಕಿ
ನಿಂದ ಬೇಸತ್ತು ಬಿಜೆಪಿಗೆ ಮತ ಚಲಾಯಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬಿಜೆಪಿಯಿಂದ ಸ್ಪರ್ಧಿಸಿರುವ ವಿಠ್ಠಲ ಹಲಗೇಕರ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯವಿದೆ. ಶಿಕ್ಷಕರಾಗಿರುವ ಇವರು, ಹಲವು ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದಾರೆ. ಈ ಭಾಗದ ಯುವಕರು ಹಿಂದುತ್ವದ ಕಡೆ ಒಲವು ಹೊಂದಿದ್ದಾರೆ. ಇದು ವಿಠ್ಠಲ ಅವರಿಗೆ ಸಹಕಾರಿಯಾಗಬಹುದು.

ಕಾಂಗ್ರೆಸ್ಸಿನಿಂದ ಸ್ಪರ್ಧಿಸಿರುವ ಅಂಜಲಿ ನಿಂಬಾಳ್ಕರ ಅವರ ಬಗ್ಗೆ ಕ್ಷೇತ್ರದಲ್ಲಿ ಸಹಾನುಭೂತಿ ಇದೆ. ಆದರೆ, ಇದು ಮತಗಳಾಗಿ ಪರಿವರ್ತನೆಯಾಗುವುದು ಕಷ್ಟ. ಮೇಲಾಗಿ ಇವರು ಸ್ಥಳೀಯರಲ್ಲ. ಆಯ್ಕೆಯಾದ ನಂತರ ಬೆಂಗಳೂರಿನ ಕಡೆ ಮುಖ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತವೆ. ಇದಲ್ಲದೇ, ಮುಖ್ಯವಾಗಿ ಇವರ ಜೊತೆ ಪಕ್ಷದ ಪ್ರಮುಖ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಯಾರೂ ಇಲ್ಲ.

ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸೋತಿದ್ದ ರಫೀಕ ಖಾನಾಪುರೆ ಈ ಸಲ ಜೆಡಿಎಸ್‌ನ ನಾಸಿರ ಬಾಗವಾನ ಅವರಿಗೆ ಬೆಂಬಲ ನೀಡಿದ್ದಾರೆ. ಇದರಿಂದ ಕಾಂಗ್ರೆಸ್‌ ಮತಗಳು ವಿಭಜನೆಯಾಗುವ ಸಾಧ್ಯತೆ ಇದ್ದು, ಅಂಜಲಿ ಅವರಿಗೆ ಹೊಡೆತ ಬೀಳುವ ಸಂಭವವಿದೆ.

ಈ ಸಲ ಚುನಾವಣಾ ಕಣದಲ್ಲಿ ಕನ್ನಡ ಭಾಷಿಕರಾರೂ ಇಲ್ಲ. ಎಲ್ಲ ಪಕ್ಷಗಳು ಮರಾಠಿ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಈ ಕ್ಷೇತ್ರದಲ್ಲಿರುವ ಕನ್ನಡ ಭಾಷಿಕರು ಯಾರತ್ತ ಒಲವು ತೋರುತ್ತಾರೆ ಎನ್ನುವುದು ಮಹತ್ವದ್ದಾಗಿದೆ. ರಾಷ್ಟ್ರೀಯ ಪಕ್ಷಗಳೆನ್ನುವ ಕಾರಣಕ್ಕೆ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಮತ ಚಲಾಯಿಸುವ ಸಾಧ್ಯತೆ ಇದೆ.

ಕಣದಲ್ಲಿರುವವರು

ಅಂಜಲಿ ನಿಂಬಾಳ್ಕರ (ಕಾಂಗ್ರೆಸ್‌), ವಿಠ್ಠಲ ಹಲಗೇಕರ (ಬಿಜೆಪಿ), ನಾಸೀರ ಬಾಗವಾನ (ಜೆಡಿಎಸ್‌), ಮೇಘನಾ ದೇಸಾಯಿ (ಎಂ.ಇ.ಪಿ), ಯಶವಂತ ನಿಪ್ಪಾಣಿಕರ (ಇಂಡಿಯನ್ ನ್ಯೂ ಕಾಂಗ್ರೆಸ್), ವಿಲಾಸ ಬೆಳಗಾಂವಕರ, ಅರವಿಂದ ಪಾಟೀಲ, ಜ್ಯೋತಿಬಾ ರೆಮಾನಿ, ಲಕ್ಷ್ಮಣ ಬನ್ನಾರ, ಕೆ.ಪಿ ಪಾಟೀಲ, ಶ್ರೀಕಾಂತ ಭಜಂತ್ರಿ, ಮಹಾದೇವ ಶಿಂಧೋಳಕರ (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT