ಮಂಗಳವಾರ, 9–7–1968

7

ಮಂಗಳವಾರ, 9–7–1968

Published:
Updated:

ಪಕ್ಷಾಂತರ ತಡೆಗಟ್ಟಲು ರಾಜ್ಯಾಂಗಕ್ಕೆ ತಿದ್ದುಪಡಿ: ನ್ಯಾಯವಾದಿಗಳ ಸಲಹೆ

ನವದೆಹಲಿ, ಜು. 8– ಕೇಂದ್ರ ಮತ್ತು ರಾಜ್ಯಗಳಲ್ಲಿ ಸಚಿವ ಸಂಪುಟದ ಗಾತ್ರವನ್ನು ಮಿತಿಗೊಳಿಸಲು ರಾಜ್ಯಾಂಗಕ್ಕೆ ತಿದ್ದುಪಡಿ ತರಬೇಕೆಂದು ನ್ಯಾಯವಾದಿಗಳ ಒಂದು ತಂಡ ಸಲಹೆ ಮಾಡಿದೆ. ಸಮಯ ಸಾಧಕ ಪಕ್ಷಾಂತರವಾದಿಗಳಿಗೆ ನಿರುತ್ತೇಜನವನ್ನುಂಟು ಮಾಡುವುದೇ ಈ ಕ್ರಮದ ಉದ್ದೇಶ.

ಮಂತ್ರಿಗಳ ಸಂಖ್ಯೆಯನ್ನು ಹತ್ತಕ್ಕೆ ಅಥವಾ ರಾಜ್ಯ ವಿಧಾನ ಸಭೆ ಸದಸ್ಯ ಬಲದ ಹತ್ತನೇ ಒಂದಕ್ಕೆ ಮಿತಿಗೊಳಿಸಬೇಕೆಂದು ಸಲಹೆ ಮಾಡಲಾಗಿದೆ.

ರಾಜರಿಂದ ಕೋರ್ಟು ಕ್ರಮ?

ನವದೆಹಲಿ, ಜು. 7– ರಾಜಧನ ರದ್ದು, ವಿಶೇಷ ಸವಲತ್ತನ್ನು ಮೊಟಕುಗೊಳಿಸುವ ಅಥವಾ ತೆಗೆದು ಹಾಕಲು ಕೇಂದ್ರ ಸರ್ಕಾರವು ಕೈಗೊಳ್ಳಬಹುದಾದ ಕ್ರಮಗಳ ಕ್ರಮಬದ್ಧತೆಯನ್ನು ಮಾಜಿ ರಾಜರುಗಳು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ಸಂಭವವಿದೆ. ದೆಹಲಿಯಲ್ಲಿ ವಾಸವಾಗಿರುವ ಅನೇಕ ರಾಜರು ಈಗಾಗಲೇ ನ್ಯಾಯವಾದಿಗಳ ಅಭಿಪ್ರಾಯವನ್ನು ಈ ವಿಚಾರದಲ್ಲಿ ಸಂಗ್ರಹಿಸಿದ್ದಾರೆ. ಮಾಜಿ ಶಿಕ್ಷಣ ಸಚಿವ ಎಂ.ಸಿ. ಚಾಗಲಾ ಮತ್ತು ಸುಪ್ರೀಂ  ಕೋರ್ಟಿನ ಮಾಜಿ ಶ್ರೇಷ್ಠ ನ್ಯಾಯಾಧೀಶ ಶ್ರೀ ಕೆ. ಸುಬ್ಬರಾವ್ ಅವರೊಡನೆಯೂ ಅವರು ಸಮಾಲೋಚಿಸಿದ್ದಾರೆ. ಕೇಂದ್ರ ಸರ್ಕಾರವು ಕೈಗೊಳ್ಳಬೇಕೆಂದಿರುವ ಕ್ರಮಗಳು ವಿಶ್ವಾಸ ಭಂಗವಾಗಿರುವುದರಿಂದ ರಾಜರುಗಳ ವಾದದಲ್ಲಿ ಬಲವಿದೆಯೆಂದು ಇವರಿಬ್ಬರ ಅಭಿಪ್ರಾಯವಾಗಿದೆಯೆಂದು ಹೇಳಲಾಗಿದೆ.

ಯಾವುದೇ ಪ್ರದೇಶದ ಬಗ್ಗೆ ತಾರತಮ್ಯವಿಲ್ಲ– ಇಂದಿರಾ

ಗೌಹಾಟಿ, ಜು. 8– ಕೇಂದ್ರ ಸರ್ಕಾರವು ದೇಶದ ಕೆಲವು ಪ್ರದೇಶಗಳ ಬಗ್ಗೆ ಆಸಕ್ತಿ ಹೊಂದಿದ್ದು ಮತ್ತೆ ಕೆಲವು ಪ್ರದೇಶಗಳನ್ನು ಉಪೇಕ್ಷಿಸಿದೆಯೆಂಬ ಆಪಾದನೆಗಳನ್ನು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ನಿರಾಕರಿಸಿದರು.

‘ಕೇಂದ್ರ ಸರ್ಕಾರಕ್ಕೆ ಎಲ್ಲ ಪ್ರದೇಶಗಳೂ ಒಂದೇ, ಯಾವುದಕ್ಕೇ ಆಗಲಿ ಪ್ರಾಶಸ್ತ್ಯವೂ ಇಲ್ಲ, ಉಪೇಕ್ಷೆಯೂ ಇಲ್ಲ. ದೆಹಲಿಯಿಂದ ಎಲ್ಲವೂ ಸಮಾನ ದೂರದಲ್ಲಿದ್ದಂತೆಯೇ’ ಎಂದು ಶ್ರೀಮತಿ ಗಾಂಧಿ ಅವರು ಉತ್ತರ ಅಸ್ಸಾಮಿನ ಲಖಿಂಪುರದಲ್ಲಿ ಭಾರಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !