ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಮ್ಸ್‌ನಲ್ಲಿ ‘ಮುಸುರೆ’ ಹಾವಳಿಗೆ ತಡೆ

Last Updated 26 ಫೆಬ್ರುವರಿ 2018, 8:44 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ವೈದ್ಯ ವಿಜ್ಞಾನ ಸಂಸ್ಥೆ (ರಿಮ್ಸ್‌) ಆಸ್ಪತ್ರೆಗೆ ಬರುವ ಜನರು ಊಟ ಮಾಡಿದ ಬಳಿಕ ಕಿಟಕಿಗಳಿಂದ ಮುಸುರೆ ಎತ್ತಿಹಾಕಿ ವಾತಾವರಣ ಹಾಳು ಮಾಡುತ್ತಿರುವುದಕ್ಕೆ ಆಡಳಿತಾಧಿಕಾರಿಗಳು ಕೊನೆಗೂ ತಡೆ ಹಾಕಿದ್ದಾರೆ.

ಮುಸುರೆ ನೀರು ಅಥವಾ ಆಹಾರ ತ್ಯಾಜ್ಯ ಹೊರಹಾಕಲು ಸಾಧ್ಯವಾಗದಂತೆ ಆಸ್ಪತ್ರೆಯ ಕಿಟಕಿಗಳಿಗೆ ಗ್ರಿಲ್‌ ಅಳವಡಿಸಿದ್ದಾರೆ. ತ್ಯಾಜ್ಯ ಹಾಕುವುದಕ್ಕೆ ಪ್ರತಿ ವಾರ್ಡ್‌ನಲ್ಲಿ ಡಬ್ಬಿಗಳನ್ನು ಇರಿಸಿದ್ದಲ್ಲದೆ, ಈ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಶೌಚಾಲಯಗಳು ಸೇರಿದಂತೆ ವಾರ್ಡ್‌ ಶುಚಿತ್ವ ಕಾಪಾಡುವ ಕೆಲಸವನ್ನು ಹೊರಗುತ್ತಿಗೆ ವಹಿಸಿದ್ದಾರೆ. ಹೊರಗುತ್ತಿಗೆ ಸಿಬ್ಬಂದಿ ದಿನಕ್ಕೆ ಮೂರು ಪಾಳಿಗಳಲ್ಲಿ ನಿರಂತರವಾಗಿ ಆಸ್ಪತ್ರೆಯ ಶುಚಿತ್ವ ನಿರ್ವಹಿಸುವ ಕೆಲಸ ಮಾಡುತ್ತಿದೆ.

ಪ್ರಮುಖವಾಗಿ, ಆಸ್ಪತ್ರೆಯ ಶುಚಿತ್ವ ಪರಿಸರ ಹಾಳಾಗುವುದಕ್ಕೆ ಕಾರಣವಾಗಿದ್ದ ಆಸ್ಪತ್ರೆ ಕಟ್ಟಡದ ಒಳಭಾಗದಲ್ಲಿದ್ದ ಕ್ಯಾಂಟಿನ್‌ ಅನ್ನು ಈಗ ಹೊರಗಡೆ ಹಾಕಲಾಗಿದೆ. ಕ್ಯಾಂಟಿನ್‌ಗಾಗಿ ಆಸ್ಪತ್ರೆ ಹೊರಗಡೆ ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಿರುವುದು ವಿಶೇಷ. ಆಸ್ಪತ್ರೆಗೆ ದಾಖಲಾದ ರೋಗಿಗಳ ಜೊತೆ ಉಳಿದುಕೊಳ್ಳುವ ಜನರು ಹಾಗೂ ರೋಗಿಗಳ ಯೋಗಕ್ಷೇಮ ವಿಚಾರಿಸಲು ಹೊರಗಡೆಯಿಂದ ಬರುವ ಜನರು ಈಗ ತಿಂಡಿ ಅಥವಾ ಊಟ ಸವಿಯುವುದಕ್ಕೆ ಇದೀಗ ಹೊರಗಡೆ ಇರುವ ಕ್ಯಾಂಟಿನ್‌ಗೆ ಬರಬೇಕು.

ಮೊದಲಿನಂತೆ ವಾರ್ಡ್‌ನಲ್ಲೆ ಕುಳಿತು ಊಟ ಮಾಡುವುದಕ್ಕೆ ಅವಕಾಶ ಇಲ್ಲ. ಆಸ್ಪತ್ರೆ ಕಟ್ಟಡದ ಒಳಭಾಗದಲ್ಲೆ ಸಿಗುತ್ತಿದ್ದ ಆಹಾರದ ಪೊಟ್ಟಣಗಳು ಈಗ ಸಿಗುತ್ತಿಲ್ಲ. ಆಹಾರ ಪದಾರ್ಥಗಳ ಖರೀದಿಗೆ ಹೊರಗಡೆ ಬರಬೇಕು.

ಕ್ಯಾಂಟಿನ್‌ ಇರುವ ಭಾಗದಿಂದ ಆಸ್ಪತ್ರೆ ಒಳಗೆ ಹೋಗುವ ಜನರು ಈ ಮೊದಲು ಮುಖ ಕಿವುಚಿ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇತ್ತು. ವಾರ್ಡ್‌ ಕಿಟಕಿಗಳಿಂದ ಮುಸುರೆ ನೀರು ಮೇಲಿಂದ ಮೇಲೆ ಬೀಳುತ್ತಿದ್ದ ದೃಶ್ಯ ಸಹ ಸಾಮಾನ್ಯವಾಗಿತ್ತು. ಆಸ್ಪತ್ರೆಗೆ ಬರುವ ಜನರು ನಿರಾತಂಕವಾಗಿ ಮುಸುರೆಯನ್ನು ಆಸ್ಪತ್ರೆಯೊಳಗಿನ ಅಂಗಳಕ್ಕೆ ಎಸೆಯುತ್ತಿದ್ದರು. ತ್ಯಾಜ್ಯ ಹಾಕುವುದಕ್ಕೆ ಸೂಕ್ತ ವ್ಯವಸ್ಥೆ ಇದ್ದರೂ ಜನರು ಅವುಗಳನ್ನು ಬಳಸುತ್ತಿಲ್ಲ ಎನ್ನುವ ಆಳಲು ಆಸ್ಪತ್ರೆ ಸಿಬ್ಬಂದಿಯದ್ದಾಗಿತ್ತು. ಇದೀಗ ಆಸ್ಪತ್ರೆ ವಾತಾವರಣ ಶುಚಿತ್ವ ಪಡೆದುಕೊಳ್ಳುತ್ತಿದೆ.

‘ಉಳಿಕೆ ಆಹಾರ ಚೆಲ್ಲುವುದು ಹಾಗೂ ಎಲ್ಲಿ ಬೇಕಾದಲ್ಲಿ ನೀರು ಚೆಲ್ಲುವುದಕ್ಕೆ ಕೊನೆಯೆ ಇಲ್ಲ ಎನ್ನುವ ಪರಿಸ್ಥಿತಿ ಇತ್ತು. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಸಾಕಷ್ಟು ತಿಳಿವಳಿಕೆ ನೀಡಿದರೂ ವಾಗ್ವಾದ ಮಾಡುತ್ತಿದ್ದರು. ಆಸ್ಪತ್ರೆಯಲ್ಲಿ ಈಗ ಸ್ವಚ್ಛತೆಗೆ ಹೆಚ್ಚು ಮುತುವರ್ಜಿ ವಹಿಸಿದ್ದೇವೆ. ಹಂತಹಂತವಾಗಿ ಕೆಲಸ ಮಾಡಿಸಲಾಗುತ್ತಿದೆ. ಕ್ಯಾಂಟಿನ್‌ ನಡೆಸುವುದಕ್ಕೆ ಹೊರಗಡೆ ಜಾಗ ಮಾಡಿಕೊಟ್ಟಿರುವುದರಿಂದ ಬಹಳಷ್ಟು ಬದಲಾವಣೆಗಳು ಬರುತ್ತಿವೆ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ರಮೇಶ ಬಿ.ಎಚ್‌. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಡಾ.ರಮೇಶ್ ಬಿ.ಎಚ್.
ವೈದ್ಯಕೀಯ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT