ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಜೈರಾಂ ರಮೇಶ್– ‘ಗೋಯಲ್ ನಿಲುವಿನಿಂದ ಬಿಕ್ಕಟ್ಟು ಬಗೆಹರಿಯುತ್ತಿಲ್ಲ’

ಸಂಸದರ ಅಮಾನತು ಪ್ರಸಂಗ
Last Updated 9 ಡಿಸೆಂಬರ್ 2021, 19:39 IST
ಅಕ್ಷರ ಗಾತ್ರ

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ, ಅಧಿವೇಶನದ ಉಳಿದ ಅವಧಿಯವರೆಗೆ ವಿರೋಧ ಪಕ್ಷಗಳ 12 ಸಂಸದರನ್ನು ಅಮಾನತು ಮಾಡಲಾಗಿದೆ. ಈ ಅಮಾನತು ಆದೇಶವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಮತ್ತು ಸಂಪೂರ್ಣ ಕಾನೂನುಬಾಹಿರ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸುತ್ತಿದ್ದು, ಅಮಾನತನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸುತ್ತಿವೆ. ಅಮಾನತು ಆದೇಶದ ವಿರುದ್ಧ ಸಂಸತ್ತಿನ ಒಳಗೂ ಹೊರಗೂ ಪ್ರತಿಭಟನೆ ನಡೆಸುತ್ತಿವೆ. ಆದರೆ ಸರ್ಕಾರವು, ‘ಸಂಸದರು ಕ್ಷಮೆಯಾಚಿಸಿದರೆ ಮಾತ್ರ ಅಮಾನತು ರದ್ದುಮಾಡುತ್ತೇವೆ’ ಎಂದು ಹೇಳಿದೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂಬುದು ವಿರೋಧಪಕ್ಷಗಳ ಪಟ್ಟು. ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿರುವ ಜೈರಾಂ ರಮೇಶ್ ಅವರು ಈ ಕುರಿತು ‘ಪ್ರಜಾವಾಣಿ’ ಜತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

– ಅಮಾನತಾಗಿರುವ ಸಂಸದರು ಧರಣಿ ಕೂತು ಒಂದು ವಾರ ಕಳೆದಿದೆ. ಇದಕ್ಕೆ ಪರಿಹಾರ ಕಾಣುತ್ತಿದೆಯೇ?

ಇದಕ್ಕೆ ಪರಿಹಾರ ಕಂಡುಕೊಳ್ಳಿ ಎಂದು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸದನದ ನಾಯಕ ಪೀಯೂಷ್ ಗೋಯಲ್, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎಲ್ಲಾ ಪಕ್ಷಗಳ ನಾಯಕರಿಗೆ ಹೇಳಿದ್ದಾರೆ. ಪರಿಹಾರಕ್ಕೆ ಇರುವ ವಿವಿಧ ಆಯ್ಕೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಸಭಾಪತಿಯು ಹೊಂದಾಣಿಕೆಗೆ ತಯಾರಿದ್ದಾರೆ. ಆದರೆ, ಪೀಯೂಷ್ ಗೋಯಲ್ ಅವರ ನಿಲುವು ಸಂಪೂರ್ಣ ಮೂಲಭೂತವಾದುದು. ಅವರ ನಿಲುವಿನ ಕಾರಣದಿಂದ ಯಾವುದೇ ಹೊಂದಾಣಿಕೆಗೆ ಅವಕಾಶವೇ ಇಲ್ಲದಂತಾಗಿದೆ. ಅಮಾನತಾಗಿರುವ ಪ್ರತಿಯೊಬ್ಬ ಸಂಸದ ಸದನದಲ್ಲಿ ಕ್ಷಮೆ ಕೇಳಲೇಬೇಕು ಎಂದು ಗೋಯಲ್ ಹೇಳುತ್ತಿದ್ದಾರೆ. ಈ ಅಮಾನತು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನಾವು ಮೊದಲ ದಿನದಿಂದಲೇ ಹೇಳುತ್ತಿದ್ದೇವೆ. ಸಭಾಪತಿಗೆ ಬರೆದ ಪತ್ರದಲ್ಲಿ ಖರ್ಗೆ ಅವರು ಇದನ್ನು ವಿವರಿಸಿ ಹೇಳಿದ್ದಾರೆ.

– ಹಾಗಿದ್ದರೆ, ಬಿಕ್ಕಟ್ಟು ಮುಂದುವರಿಯುತ್ತದೆ?

ಬಿಕ್ಕಟ್ಟು ಪರಿಹಾರವಾಗಬೇಕು ಎಂದು ವಿರೋಧ ಪಕ್ಷಗಳು ಬಯಸುತ್ತವೆ. ಸಭಾಪತಿ ಸಹ ಇದನ್ನೇ ಬಯಸುತ್ತಾರೆ. ನಾನು ಬಿಜೆಪಿಯ ಹಲವರೊಂದಿಗೆ ಮಾತನಾಡಿದ್ದೇನೆ. ಅವರೆಲ್ಲರೂ, ಕೂತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೆ, ಸದನದಲ್ಲಿ ಆಡಳಿತ ಪಕ್ಷದ ನಾಯಕರಾದ ಪೀಯೂಷ್ ಗೋಯಲ್ ಮಾತ್ರ ಯಾವ ಹೊಂದಾಣಿಕೆಗೂ ತಯಾರಿಲ್ಲ. ಬೇರೆ–ಬೇರೆ ನಾಯಕರೊಂದಿಗೆ ಚರ್ಚಿಸಿದ ನಂತರ ನಾನು, ಸಭಾಪತಿ ನಾಯ್ಡು ಅವರಿಗೆ ಹಲವು ಪರ್ಯಾಯಗಳನ್ನು ಸೂಚಿಸಿದ್ದೇನೆ. ವಿರೋಧ ಪಕ್ಷಗಳ ನಾಯಕರ ಮನೆಗೆ ಹೋಗಿದ್ದೇನೆ. ಆದರೆ ಇದು ನನ್ನ ಕರ್ತವ್ಯ ಅಲ್ಲ. ಬದಲಿಗೆ ಪರಿಹಾರ ಕಂಡುಹಿಡಿಯುವುದು ಸದನದ ನಾಯಕನ ಕರ್ತವ್ಯ.

– ಕಾಂಗ್ರೆಸ್‌ ಮತ್ತು ಉಳಿದ ವಿರೋಧ ಪಕ್ಷಗಳು ಸಾಮೂಹಿಕವಾಗಿ ವಿಷಾದ ವ್ಯಕ್ತಪಡಿಸುವ ಮೂಲಕ ಅಮಾನತು ರದ್ದಾಗುವಂತೆ ಮಾಡುವ ಯೋಚನೆಯಲ್ಲಿವೆಯೇ?

ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ನಾವು ಬೇರೆ ಬೇರೆ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಆದರೆ ಅಗತ್ಯವೇ ಇಲ್ಲದ ಕ್ಷಮೆಯನ್ನು ಕೇಳುವ ಪ್ರಶ್ನೆ ಉದ್ಭವಿಸುವುದಿಲ್ಲ.

– ವಿಷಾದ ವ್ಯಕ್ತಪಡಿಸುವುದು ಒಂದು ಆಯ್ಕೆಯೇ?

ಕೆಲವು ಆಯ್ಕೆಗಳಿವೆ. ಈ ಬಗ್ಗೆ ಸಭಾಪತಿ ಜತೆಗೆ ಚರ್ಚಿಸಿದ್ದೇನೆ. ವಿರೋಧ ಪಕ್ಷಗಳ ನಾಯಕರ ಜತೆಗೂ ಚರ್ಚಿಸಿದ್ದೇನೆ. ಇದು ನನ್ನ ನಿರ್ಧಾರವೂ ಅಲ್ಲ, ಕಾಂಗ್ರೆಸ್‌ನ ನಿರ್ಧಾರವೂ ಅಲ್ಲ. ಎಲ್ಲರೂ ಸೇರಿ ನಿರ್ಧಾರ ತೆಗೆದುಕೊಳ್ಳಬೇಕು. ಎಎಪಿ, ಸಮಾಜವಾದಿ ಪಕ್ಷ ಮತ್ತು ಇತರರ ಜತೆಗೆ ಚರ್ಚಿಸುತ್ತಿದ್ದೇವೆ. ಸದ್ಯಕ್ಕೆ ಟಿಎಂಸಿ ನಮ್ಮೊಟ್ಟಿಗೆ ಇದೆ. ಆದರೆ ಅದು ವಿಪಕ್ಷಗಳ ಒಕ್ಕೂಟದಿಂದ ಹೊರಗಿದೆ ಎಂಬುದನ್ನು ಘೋಷಿಸಿಕೊಂಡಿದೆ. ಆ ಪಕ್ಷದ ಪರವಾಗಿ ನಾನು, ಏನು ಹೇಳಲೂ ಸಾಧ್ಯವಿಲ್ಲ.

– ಹಾಗಿದ್ದರೆ, ಇದಕ್ಕೆ ಪರಿಹಾರವೇನು?

ಸದನದ ನಾಯಕ ಎಲ್ಲಾ ಪಕ್ಷಗಳ ನಾಯಕರನ್ನು ಮಾತುಕತೆಗೆ ಕರೆಯಬೇಕು. ಅದು ಪರಿಹಾರದ ಮೊದಲ ಹೆಜ್ಜೆ. ಸದನದ ನಾಯಕ ಕರೆಯಲು ಸಿದ್ಧವಿಲ್ಲದೇ ಇದ್ದರೆ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯ ಅಧ್ಯಕ್ಷರಾಗಿರುವ ರಾಜನಾಥ್ ಸಿಂಗ್ ಅವರು ಕರೆಯಲಿ. ಆಗ ಅದು ಮೊದಲ ಹೆಜ್ಜೆಯಾಗುತ್ತದೆ. ಇದು ಆಗದೇ ಇದ್ದರೆ ಅದು ಸದನದ ನಾಯಕನ ವೈಫಲ್ಯವೇ ಹೊರತು, ವಿರೋಧ ಪಕ್ಷಗಳ ನಾಯಕರ ವೈಫಲ್ಯವಲ್ಲ. ಇದೆಲ್ಲಾ ಸದನದ ನಾಯಕನ ಮಿತಿಯಿಲ್ಲದ ದುರಹಂಕಾರವಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT