‘ವಿಮಾನ ಖರೀದಿಸದಿದ್ದರೆ ವಾಯುಪಡೆ ಶಕ್ತಿ ಕುಗ್ಗಲಿದೆ’

7
ಯುಪಿಎ ಅವಧಿಯ ರಫೇಲ್ ಖರೀದಿ ಪ್ರಕ್ರಿಯೆ ಬಗ್ಗೆ ವಾಯಪಡೆಯ ನಿವೃತ್ತ ಉಪಮುಖ್ಯಸ್ಥರರಿಂದ ಮಾಹಿತಿ

‘ವಿಮಾನ ಖರೀದಿಸದಿದ್ದರೆ ವಾಯುಪಡೆ ಶಕ್ತಿ ಕುಗ್ಗಲಿದೆ’

Published:
Updated:

* ಸರ್ಕಾರ ಈಗ ಖರೀದಿಸುತ್ತಿರುವ 36 ರಫೇಲ್‌ ಯುದ್ಧವಿಮಾನಗಳು ವಾಯುಪಡೆಗೆ ಅನಿವಾರ್ಯವೇ?

ವಾಯುಪಡೆ ಬಳಿ ಈಗ ಇರುವ ಹಲವು ಯುದ್ಧವಿಮಾನಗಳ ಆಯುಷ್ಯ ಮುಗಿದಿದೆ. ಅವು ಬಳಕೆಗೆ ಯೋಗ್ಯವಾಗಿಲ್ಲ. ಅವೆಲ್ಲವನ್ನೂ ಗಮನದಲ್ಲಿರಿಸಿಕೊಂಡೇ ‘ಎಂಎಂಆರ್‌ಸಿಎ 126’ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಹಳೆಯ ಯುದ್ಧವಿಮಾನಗಳ ಜಾಗದಲ್ಲಿ ಹೊಸವನ್ನು ತುಂಬಲೇಬೇಕು. ಇಲ್ಲದಿದ್ದಲ್ಲಿ ವಾಯುಪಡೆಯ ಸಾಮರ್ಥ್ಯವೇ ಕುಗ್ಗಿಹೋಗಲಿದೆ.

* ವಾಯುಪಡೆಗೆ ಅಗತ್ಯವಿದ್ದದ್ದು 126, ಈಗ ಖರೀದಿಸುತ್ತಿರುವುದು 36. ಹಾಗಿದ್ದಲ್ಲಿ ಕೊರತೆ ಹೆಚ್ಚಾಯಿತಲ್ಲವೇ?

ತನ್ನ ಬಜೆಟ್ ಮತ್ತು ತಕ್ಷಣಕ್ಕೆ ಏನು ಬೇಕು ಎಂಬುದರ ಮಧ್ಯೆ ಸರ್ಕಾರ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. 36 ವಿಮಾನಗಳಿಂದ ಎರಡು ತುಕಡಿಗಳಷ್ಟೇ ಯುದ್ಧ ಸನ್ನಧವಾಗುತ್ತವೆ. 126 ವಿಮಾನಗಳು ಆರು ತುಕಡಿಗಳಿಗೆ ಸಮ. ಈ ಭಾರಿ ಕೊರತೆಯನ್ನು ತುಂಬಲು ರಕ್ಷಣಾ ಸಚಿವಾಲಯ ಮತ್ತು ವಾಯುಪಡೆ ಪರಿಹಾರವೊಂದನ್ನು ಕಂಡುಕೊಳ್ಳಬೇಕು.

* ಮತ್ತೆ ಹೊಸದಾಗಿ 110 ವಿಮಾನಗಳ ಖರೀದಿಗೆ ಸರ್ಕಾರ ಮುಂದಾಗಿದೆ ಇದೂ ಎಂಎಂಆರ್‌ಸಿಎ 126ನಂತೆಯೇ ದೀರ್ಘಾವಧಿ ಪ್ರಕ್ರಿಯೆಯಾಗಲಿದೆಯೇ?

ಎಂಎಂಆರ್‌ಸಿಎ 2006ರಲ್ಲಿ ಆರಂಭವಾಗಿ 2012–13ರವರೆಗೂ ಜೀವಂತವಾಗಿತ್ತು. ಆನಂತರ ಅದನ್ನು ರದ್ದುಪಡಿಸಲಾಯಿತು. ಆದರೆ ಹೊಸ ವಿಮಾನಗಳ ಖರೀದಿಗೆ ಅಷ್ಟು ಸಮಯ ಬೇಕಾಗುವುದಿಲ್ಲ. ಏಕೆಂದರೆ ಎಂತಹ ವಿಮಾನಗಳು ಬೇಕು ಎಂಬುದನ್ನು ಈಗಾಗಲೇ ನಾವು ನಿರ್ಧರಿಸಿಯಾಗಿದೆ. ಆದರೆ ವಿಮಾನಗಳ ತಾಂತ್ರಿಕತೆ ಪರಿಶೀಲನೆಗೆ ಸಮಯ ಬೇಕಾಗುತ್ತದೆ. ಈಗ ವಿಮಾನಗಳ ಬಗ್ಗೆ ಮಾಹಿತಿ ನೀಡಿ ಎಂದಷ್ಟೇ ನಾವು ಮನವಿ ಮಾಡಿದ್ದೇವೆ. ಮಾಹಿತಿಯ ಪರಿಶೀಲನೆ ನಂತರ ಪ್ರಸ್ತಾವನೆಗಾಗಿ ಮನವಿ ಸಲ್ಲಿಸಬೇಕಾಗುತ್ತದೆ. ಪ್ರಸ್ತಾವನೆಯನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಬೇಕು. ಈ ಪ್ರಕ್ರಿಯೆಗಳಿಗೇ 2ರಿಂದ 3 ವರ್ಷ ಬೇಕಾಗುತ್ತದೆ. ನಂತರ ಒಪ್ಪಂದವನ್ನು ರೂಪಿಸಲು, ಚೌಕಾಶಿ ನಡೆಸಲು ಮತ್ತಷ್ಟು ಸಮಯ ಬೇಕಾಗುತ್ತದೆ. ಹೀಗೆ ಒಪ್ಪಂದ ಅಂತಿಮಗೊಳ್ಳಲೇ 4ರಿಂದ 5 ವರ್ಷ ಬೇಕಾಗುತ್ತದೆ.

* ಎಂಎಂಆರ್‌ಸಿಎ 126 ಕಾರ್ಯಕ್ರಮದಲ್ಲೇ ಈ ಎಲ್ಲಾ ವಿಮಾನಗಳನ್ನು ಪರೀಕ್ಷಿಸಲಾಗಿತ್ತು. ಈಗ ಮತ್ತೆ ಅವನ್ನು ಪರೀಕ್ಷಿಸಬೇಕೇ?

ಆ ವಿಮಾನಗಳನ್ನು 650 ಮಾನದಂಡಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ವಿಮಾನಗಳಲ್ಲಿ ಹಲವನ್ನು ಈಗಾಗಲೇ ಮೇಲ್ದರ್ಜೆಗೆ ಏರಿಸಲಾಗಿದೆ. ಹೀಗಾಗಿ ಮತ್ತೆ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಆದರೆ ಇದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ.

* ಹಾಗಿದ್ದಲ್ಲಿ ಎಂಎಂಆರ್‌ಸಿಎ 126ನಲ್ಲಿ ಪರೀಕ್ಷೆಗೆ ಒಳಪಡಿಸಿದ್ದ ಆರೂ ವಿಮಾನಗಳ ಶಸ್ತ್ರಾಸ್ತ್ರಗಳನ್ನೂ ನೀವು ಪರೀಕ್ಷಿಸಿದ್ದಿರಾ?

ಶಸ್ತ್ರಾಸ್ತ್ರವನ್ನೂ ಪರೀಕ್ಷೆಗೆ ಒಳಪಡಿಸುವುದಾದರೆ ಪರೀಕ್ಷಾ ವೆಚ್ಚವೇ ತೀರಾ ದುಬಾರಿಯಾಗುತ್ತದೆ. ಶಸ್ತ್ರಾಸ್ತ್ರಗಳನ್ನು ಪ್ರತ್ಯೇಕವಾಗಿಯೇ ಖರೀದಿಸಬೇಕಾಗುತ್ತದೆ. ಆಯಾ ವಿಮಾನಕ್ಕೆ ಯಾವೆಲ್ಲಾ ಶಸ್ತ್ರಾಸ್ತ್ರಗಳು ಬೇಕಾಗುತ್ತವೆ ಎಂದು ವಿಮಾನದ ತಯಾರಕ ಕಂಪನಿ ಹೇಳಿದ್ದನ್ನು ಮಾತ್ರ ಖರೀದಿಸಲಾಗುತ್ತದೆ.

* ಎಂಎಂಆರ್‌ಸಿಎ 126ನಲ್ಲಿ ವಿಮಾನಗಳ ಖರೀದಿಗೆ ಮಾತ್ರ ಮಾತುಕತೆ ನಡೆದಿತ್ತೇ? ಅಥವಾ ಶಸ್ತ್ರಾಸ್ತ್ರ ಪ್ಯಾಕೇಜ್‌ ಖರೀದಿಗೂ ಚರ್ಚೆ ನಡೆದಿತ್ತೇ?

ಯುದ್ಧವಿಮಾನ ಖರೀದಿಯಲ್ಲಿ ಶಸ್ತ್ರಾಸ್ತ್ರಗಳೂ ಸೇರಿರುತ್ತವೆ. ಎಂಎಂಆರ್‌ಸಿಎ 126ನಲ್ಲಿ ಹೀಗೇ ಆಗಿತ್ತು ಎಂದು ನಿಖರವಾಗಿ ಹೇಳಲಾಗದು. ಆದರೆ ಆ ವಿಮಾನಗಳ ಜತೆಗೆ ಕೆಲವು ಶಸ್ತ್ರಾಸ್ತ್ರಗಳೂ ಇದ್ದವು. ಒಂದು ವಿಮಾನದ ಸಾಮರ್ಥ್ಯವನ್ನು ಪರಿಗಣಿಸುವಾಗ, ಅದರಲ್ಲಿ ಅದರ ಶಸ್ತ್ರಾಸ್ತ್ರಗಳೂ ಸೇರಿರುತ್ತವೆ. ಒಂದು ಯುದ್ಧವಿಮಾನವನ್ನು ಖರೀದಿಸುವಾಗ, ಯಾವ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಅದಕ್ಕಿದೆ ಎಂಬುದೂ ನಿಮಗೆ ಗೊತ್ತಿರಬೇಕು. ‘ನಮ್ಮ ಬಳಿ ಯಾವುದೋ ಕ್ಷಿಪಣಿ ಇದೆ, ಅದನ್ನೇ ವಿಮಾನದಲ್ಲಿ ಬಳಸುತ್ತೇವೆ’ ಎನ್ನುವುದಕ್ಕಾಗುವುದಿಲ್ಲ. ಕ್ಷಿಪಣಿಯಲ್ಲಿರುವ ಕಂಪ್ಯೂಟರ್, ವಿಮಾನದಲ್ಲಿರುವ ಕಂಪ್ಯೂಟರ್‌ಗೆ ಹೊಂದಿಕೆಯಾಗಬೇಕು. ಆಗ ಮಾತ್ರ ಅವನ್ನು ವಿಮಾನದಿಂದ ಉಡಾಯಿಸಲು ಸಾಧ್ಯವಾಗುತ್ತದೆ. 

* ಹಾಗಾದರೆ ಎಂಎಂಆರ್‌ಸಿಎ 126ನಲ್ಲಿದ್ದ ಶಸ್ತ್ರಾಸ್ತ್ರಗಳಿಗಿಂತ ಈಗಿನ ರಫೇಲ್‌ ಪ್ಯಾಕೇಜ್‌ನಲ್ಲಿ ಉತ್ತಮ ಶಸ್ತ್ರಾಸ್ತ್ರಗಳಿರುತ್ತವೆಯೇ?

ಶಸ್ತ್ರಾಸ್ತ್ರಗಳು ಖಂಡಿತಾ ಬದಲಾಗಿವೆ. ಈಗಿನ ಪ್ಯಾಕೇಜ್‌ನಲ್ಲಿರುವ ಶಸ್ತ್ರಾಸ್ತ್ರಗಳೇ ಬೇರೆ. ಒಪ್ಪಂದದಲ್ಲಿ ಆ ಶಸ್ತ್ರಾಸ್ತ್ರಗಳ ಬೆಲೆಯೂ ಸೇರಿರಬೇಕು.

* ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಯಾಗುವಂತಹ ಶಸ್ತ್ರಾಸ್ತ್ರಗಳನ್ನು ಖರೀದಿ ಸಲಾಗುತ್ತಿದೆಯೇ?

ಈ ಬಗ್ಗೆ ನನಗೇನೂ ಗೊತ್ತಿಲ್ಲ. ಯಾವ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗುತ್ತಿದೆ ಮತ್ತು ಅವುಗಳ ಬೆಲೆ ಎಷ್ಟು ಎಂಬುದನ್ನು ಸರ್ಕಾರವೇ ಬಹಿರಂಗಪಡಿಸಬೇಕು. ಭಾರತ ಈಗ ನೀಡುತ್ತಿರುವ ಹೆಚ್ಚುವರಿ ಹಣಕ್ಕೆ ಪ್ರತಿಯಾಗಿ ಏನನ್ನು ಪಡೆಯುತ್ತದೆ ಎಂಬುದನ್ನು ಸರ್ಕಾರವೇ ಹೇಳಬೇಕು.

**

ವಾಯುಪಡೆಗೆ ಅಗತ್ಯವಿರುವ ಇನ್ನೂ 110 ‘ಮಧ್ಯಮ ಬಹುಪಯೋಗಿ ಯುದ್ಧ ವಿಮಾನಗಳನ್ನು (ಎಂಎಂಆರ್‌ಸಿಎ)’ ಖರೀದಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ವಾಯುಪಡೆಗೆ 126 ಯುದ್ಧವಿಮಾನಗಳು ಬೇಕಿವೆ ಎಂದೇ ಯುಪಿಎ ಸರ್ಕಾರ ‘ಎಂಎಂಆರ್‌ಸಿಎ’ ಕಾರ್ಯಕ್ರಮವನ್ನು ರೂಪಿಸಿತ್ತು.

ಆ ಕಾರ್ಯಕ್ರಮದ ರೂಪುರೇಷೆ ರೂಪಿಸುವವರಲ್ಲಿ ಒಬ್ಬರಾಗಿದ್ದ ವಾಯುಪಡೆಯ ನಿವೃತ್ತ ಉಪ ಮುಖ್ಯಸ್ಥ ಏರ್‌ ಮಾರ್ಷಲ್ ಆರ್‌.ಕೆ.ಶರ್ಮಾ ಅವರು ಯುದ್ಧವಿಮಾನ ಖರೀದಿ ಪ್ರಕ್ರಿಯೆಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಯುಪಿಎ ಸರ್ಕಾರ ಸಿದ್ಧಪಡಿಸಿದ್ದ ‘ಎಂಎಂಆರ್‌ಸಿಎ 126’ ಕಾರ್ಯಕ್ರಮದ ಬಗ್ಗೆಯೂ ಅವರು ಮಾತನಾಡಿದ್ದಾರೆ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !