ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Analysis | ದೆಹಲಿ ಫಲಿತಾಂಶ: ಬಿಜೆಪಿಯ ಪ್ರಾಬಲ್ಯ ಸುಲಭಕ್ಕೆ ಕುಗ್ಗದೆಂಬ ಸೂಚನೆ

ದೆಹಲಿ ಫಲಿತಾಂಶ | ಸೇವಾಧಾರಿತ ರಾಜಕಾರಣ ಫಲ ನೀಡೀತೇ?
Last Updated 13 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ದೆಹಲಿ ವಿಧಾನಸಭೆಗೆ ನಡೆದ ತೀವ್ರ ಹಣಾಹಣಿಯ ಚುನಾವಣಾ ಅಭಿಯಾನದ ನಂತರ, ಆಮ್ ಆದ್ಮಿ ಪಕ್ಷವು (ಎಎಪಿ) ಅದ್ಭುತ ವಿಜಯ ಸಾಧಿಸಿದೆ. 2015ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ರಾಜಕೀಯವಾಗಿ ಅನುಭವ ಇಲ್ಲದಿದ್ದ ಎಎಪಿ ಸಾಧಿಸಿದ್ದ ವಿಜಯವು ಐತಿಹಾಸಿಕವಾಗಿತ್ತು. ಈಗ, ಈ ವರ್ಷದ ಚುನಾವಣೆಯಲ್ಲಿ 2015ರ ಫಲಿತಾಂಶವನ್ನು ಬಹುಮಟ್ಟಿಗೆ ಸರಿಗಟ್ಟಿರುವುದು ಇನ್ನೂ ಮಹತ್ವಪೂರ್ಣ. ಏಕೆಂದರೆ, 2015ರಲ್ಲಿ ಪಕ್ಷ ಸಾಧಿಸಿದ್ದ ಜಯವು ಆಕಸ್ಮಿಕವಲ್ಲ ಎಂಬುದನ್ನು ಈ ವರ್ಷದ ಚುನಾವಣೆಯು ಸಾಬೀತು ಮಾಡಿದೆ. ಅಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನ ಕೆಲವು ಗಹನ ವಿಚಾರಗಳನ್ನೂ ಇದು ಹೇಳುತ್ತಿದೆ.

2014ರ ಲೋಕಸಭಾ ಚುನಾವಣೆ ಮತ್ತು 2015ರ ದೆಹಲಿ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆ ಹಾಗೂ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಉದಾಹರಿಸಿ, ದೆಹಲಿಯ ಪ್ರಜ್ಞಾವಂತ ಮತದಾರರು ಹೇಗೆ ಭಿನ್ನವಾಗಿ ವರ್ತಿಸುತ್ತಾರೆ ಎಂಬುದನ್ನು ರಾಜಕೀಯ ವಿಶ್ಲೇಷಕರು ವಿವರಿಸಿದ್ದಾರೆ. 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ದೊಡ್ಡ ವರ್ಗವೊಂದು 2015 ಹಾಗೂ 2020ರ ವಿಧಾನಸಭಾ ಚುನಾವಣೆಗಳಲ್ಲಿ ಎಎಪಿ ಪರ ಮತ ಚಲಾಯಿಸಿದೆ. ಮತದಾರರ ರಾಜಕೀಯ ಜಾಣ್ಮೆಯನ್ನು ಮಾತ್ರವಲ್ಲದೆ, ದೆಹಲಿಯಲ್ಲಿ ಎಎಪಿ ತೋರಿದ ಅಜೇಯ ಗುಣವು ಇನ್ನೇನನ್ನು ಹೇಳುತ್ತದೆ? ಇದು ದೇಶದ ಬೇರೆ ರಾಜ್ಯಗಳಿಗೆ ಯಾವ ಬಗೆಯ ಸಂದೇಶ ರವಾನಿಸುತ್ತದೆ?

ಎಎಪಿಯ ವಿಜಯದ ಹಿಂದೆ ಇರುವ ಶಕ್ತಿಗಳನ್ನು ಗಮನಿಸಿದರೆ, ಹೊಸ ಬಗೆಯ ರಾಜಕಾರಣವೊಂದು ಕಾಣಿಸುತ್ತದೆ. ಅದು ಸೇವೆಗಳನ್ನು ಜನರಿಗೆ ತಲುಪಿಸುವ ರಾಜಕಾರಣ ಅಥವಾ ಕೇಜ್ರಿವಾಲ್ ಅವರು ಹೇಳಿರುವ ‘ಕಾಮ್‌ ಕಿ ರಾಜನೀತಿ’ (ಕೆಲಸದ ರಾಜಕಾರಣ). ಇದೇನೂ ತೀರಾ ಹೊಸಬಗೆಯ ರಾಜಕಾರಣ ಅಲ್ಲ. ಏಕೆಂದರೆ, ಕೆಲಸಗಳನ್ನು ಮಾಡಿಕೊಟ್ಟು ಇತರ ರಾಜ್ಯಗಳಲ್ಲಿ ಕೂಡ ಕೆಲವು ಪಕ್ಷಗಳು ಆಡಳಿತ ವಿರೋಧಿ ಅಲೆಯನ್ನು ಮೀರಿ ನಿಂತಿವೆ. ಆದರೆ, ಬೇರೆ ರಾಜ್ಯಗಳಲ್ಲಿನ ಚುನಾವಣಾ ಗೆಲುವು ಇಷ್ಟೊಂದು ವಿಸ್ತೃತ ನೆಲೆಯದ್ದಲ್ಲ ಹಾಗೂ ಅಲ್ಲಿ ‘ಸೇವೆಗಳನ್ನು ಒದಗಿಸುವುದು’ ಜಯಕ್ಕೆ ಕಾರಣವಾದ ಅಂಶಗಳಲ್ಲಿ ಒಂದು ಮಾತ್ರ ಆಗಿತ್ತು.

ದೆಹಲಿಯಲ್ಲಿ ಎಎಪಿ ಚುನಾವಣಾ ಅಭಿಯಾನದ ಸಂಕಥನವು ‘ಸೇವೆಗಳನ್ನು ಒದಗಿಸುವುದರ’ ಸುತ್ತವೇ ಇತ್ತು. ಎಷ್ಟರಮಟ್ಟಿಗೆ ಅಂದರೆ, ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ
ಗಳ ಬಗ್ಗೆ ಕೇಜ್ರಿವಾಲ್ ಅವರು ಅಸ್ಪಷ್ಟ ನಿಲುವು ತಾಳಿದ್ದರು ಎನ್ನುವುದು ಚುನಾವಣಾ ಪ್ರಚಾರದಲ್ಲಿ ಮುಖ್ಯ ವಿಷಯವೇ ಆಗಲಿಲ್ಲ. ಪ್ರಚಾರದಲ್ಲಿ ಮತ್ತೆ ಮತ್ತೆ ಮುನ್ನೆಲೆಗೆ ಬಂದದ್ದು ರಸ್ತೆ, ವಿದ್ಯುತ್, ನೀರು(ಸಡಕ್- ಬಿಜಿಲಿ- ಪಾನಿ), ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು. ಜನರಿಗೆ ಸೇವೆಗಳನ್ನು ಒದಗಿಸುವ ವಿಚಾರಗಳ ಮೇಲೆ ಏಕಮನಸ್ಸಿನಿಂದ ಗಮನ ಕೊಡುವುದು ಹಾಗೂ ಪ್ರಚಲಿತ ರಾಷ್ಟ್ರೀಯ ಚರ್ಚೆಗಳ ಬಗ್ಗೆ ರಾಜಕೀಯ ಕಾರ್ಯತಂತ್ರದ ಭಾಗವಾಗಿಯೇ ಮೌನ ತಾಳುವುದು ಸೈದ್ಧಾಂತಿಕ ರಾಜಕಾರಣದ ಮುಂದಿನ ಕಾಲಘಟ್ಟವೊಂದು ಕ್ರಿಯಾಶೀಲವಾಗಿದ್ದುದರ ಸೂಚನೆ.

ಧರ್ಮನಿಷ್ಠ ವ್ಯಕ್ತಿಯೊಬ್ಬ ಧಾರ್ಮಿಕ ಕೆಲಸಗಳನ್ನು ಮಾಡುವಲ್ಲಿ ತೋರುವ ಉತ್ಸಾಹವನ್ನು, ಜನರ ಕೆಲಸಗಳನ್ನು ಮಾಡಿಕೊಡಲು ತೋರುವ ರಾಜಕಾರಣ ಹೊಸದೇನೂ ಅಲ್ಲ. ಬ್ರಿಟನ್ನಿನಲ್ಲಿ ಟೋನಿ ಬ್ಲೇರ್ ನೇತೃತ್ವದ ಸರ್ಕಾರ ಇದ್ದಾಗ, ಸರ್ಕಾರದ ಸೇವೆಗಳು ಕಟ್ಟಕಡೆಯವನಿಗೂ ಸಿಗುವಂತೆ ನೋಡಿಕೊಳ್ಳುವ ವಿಭಾಗದ ಮುಖ್ಯಸ್ಥರಾಗಿ ಸರ್ ಮೈಕೆಲ್ ಬಾರ್ಬರ್ ಎನ್ನುವವರು ಇದ್ದರು. ಅವರು ‘ಡೆಲಿವರಾಲಜಿ’- ಸರ್ಕಾರದ ಗುರಿಗಳನ್ನು ಯಶಸ್ವಿಯಾಗಿ ಈಡೇರಿಸುವುದು-ಎಂಬ ಕಾರ್ಯವಿಧಾನಕ್ಕೆ ಜೀವ ನೀಡಿದ್ದರು. ಎಎಪಿ ತನ್ನ ಸರ್ಕಾರದೊಳಗೆ ಇಂತಹ ವ್ಯವಸ್ಥೆಯನ್ನು ಹೊಂದಿದ್ದಂತಿಲ್ಲ. ಆದರೆ, ಅದು ನಡೆಸಿದ ಚುನಾವಣಾ ಅಭಿಯಾನವು ಡೆಲಿವರಾಲಜಿ ತಾತ್ವಿಕತೆಯ ಹಿನ್ನೆಲೆಯಲ್ಲಿ ರೂಪ ಪಡೆದುಕೊಂಡಂತೆ ಇತ್ತು.

ಸೈದ್ಧಾಂತಿಕ ರಾಜಕಾರಣದ ನಂತರದ ಕಾಲಘಟ್ಟದ ಈ ರಾಜಕಾರಣದ ಶಕ್ತಿ, ವ್ಯಾಪ್ತಿ ಮತ್ತು ಮಿತಿಗಳು ಏನು? ಜಾಗತಿಕ ಮಟ್ಟದಲ್ಲಿ ಗಮನಿಸಿದಾಗ ಜನರಿಗೆ ಸೇವೆ ಒದಗಿಸುವುದನ್ನು ಆಧರಿಸಿದ ರಾಜಕಾರಣವು ನಗರಾಡಳಿತವನ್ನು ನೋಡಿಕೊಳ್ಳುವ ಸರ್ಕಾರಗಳ ಹಂತದಲ್ಲಿ ಮಾತ್ರ ಅತ್ಯಂತ ಚೆನ್ನಾಗಿ ಕೆಲಸ ಮಾಡುತ್ತಿದೆ. ‘ಮಹಾಶಯರೇ, ನನ್ನ ಮಟ್ಟಿಗೆ ನಿಮ್ಮ ಉಪದೇಶ ನಿಲ್ಲಿಸಿ. ನಾನು ನಿಮ್ಮಲ್ಲಿನ ಚರಂಡಿಗಳನ್ನು ಸರಿಪಡಿಸಿಕೊಡುತ್ತೇನೆ’ ಎಂದು ಜೆರುಸಲೇಂನ ಮೇಯರ್ ಆಗಿದ್ದ ಟೆಡ್ಡಿ ಕೊಲ್ಲೆಕ್ ಅವರು ತಮ್ಮೊಳಗೆ ಜಗಳ ಮಾಡಿಕೊಳ್ಳುತ್ತಿದ್ದ ಧಾರ್ಮಿಕ ಮುಖಂಡರನ್ನು ಉದ್ದೇಶಿಸಿ ಹೇಳಿದ್ದರು ಎಂಬ ಮಾತು ಇದೆ. ವಿಶ್ವದಲ್ಲಿ ಧಾರ್ಮಿಕವಾಗಿ ಅತ್ಯಂತ ಹೆಚ್ಚಿನ ಸಂಘರ್ಷಗಳನ್ನು ಕಂಡ ಈ ನಗರಕ್ಕೆ ಕೊಲ್ಲೆಕ್ ಅವರು 28 ವರ್ಷಗಳ ಕಾಲ ಮೇಯರ್ ಆಗಿದ್ದರು. ಉಪದೇಶಗಳಿಗಿಂತ ಹೆಚ್ಚಾಗಿ ಒಳಚರಂಡಿಗಳ ರಿಪೇರಿಗೆ ಆದ್ಯತೆ ನೀಡುವ ಮಾದರಿಯು ಎಎಪಿ ಕೂಡ ಅಳವಡಿಸಿಕೊಂಡಿರುವ ಸೈದ್ಧಾಂತಿಕವಲ್ಲದ, ಸೇವೆಗಳನ್ನು ಒದಗಿಸುವ ರಾಜಕಾರಣದ ಬಗೆಯನ್ನು ವಿವರಿಸುತ್ತದೆ.

ಈ ಮಾದರಿಯ ರಾಜಕಾರಣದ ಯಶಸ್ಸು ಅದರ ಮಿತಿಗಳನ್ನೂ ಹೇಳುತ್ತದೆ. ಈ ವಾಸ್ತವವಾದಿ ರಾಜ
ಕಾರಣಕ್ಕೆ ನಗರಗಳ ಗಡಿಯಾಚೆ ವ್ಯಾಪಿಸಿಕೊಳ್ಳುವುದು ಸುಲಭವಲ್ಲ. ಹಾಗಂತ, ದೆಹಲಿ ವಿಧಾನಸಭೆ
ಯಲ್ಲಿ ಎಎಪಿ ಸಾಧಿಸಿದ ಜಯವನ್ನು ‘ಇದೊಂದು ಮುನಿಸಿಪಲ್ ಚುನಾವಣೆ ಇದ್ದಂತೆ’ ಎಂದು ಲಘುವಾಗಿ ನೋಡುವುದು ಕೂಡ ತಪ್ಪಾಗುತ್ತದೆ. 2017ರಲ್ಲಿ ನಡೆದ ದೆಹಲಿ ಮುನಿಸಿಪಲ್ ಚುನಾವಣೆಗಳಲ್ಲಿ ಎಎಪಿ ಸಾಧನೆ ಚೆನ್ನಾಗಿರಲಿಲ್ಲ. ಮುನಿಸಿಪಲ್ ರಾಜಕಾರಣದ ಹಿಂದಿನ ಶಕ್ತಿಗಳು ತುಸು ಬೇರೆಯವೇ ಆಗಿರುತ್ತವೆ ಎಂಬುದನ್ನು ಇದು ಹೇಳುತ್ತದೆ. ಜನರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸುವ ಹೊಣೆ, ಜಾಗತಿಕ ಮಟ್ಟದಲ್ಲಿ ಮುನಿಸಿಪಲ್ ಸರ್ಕಾರಗಳದ್ದಾದರೂ ಭಾರತದಲ್ಲಿ ಬಹುತೇಕ ಸೇವೆಗಳನ್ನು ಒದಗಿಸುವ ಜವಾಬ್ದಾರಿಯು ರಾಜ್ಯ ಸರ್ಕಾರಗಳ ಕೈಯಲ್ಲಿದೆ. ಹಾಗಾಗಿ, ಸೇವೆ ಒದಗಿಸುವುದನ್ನು ಆಧರಿಸಿದ ರಾಜಕಾರಣವನ್ನು ನಡೆಸುವುದು ರಾಜ್ಯಗಳ ಮಟ್ಟದಲ್ಲಿ ಮಾತ್ರ ಸಾಧ್ಯ.

ಜನರಿಗೆ ಸೇವೆಗಳನ್ನು ಒದಗಿಸುವುದನ್ನೇ ಮುಖ್ಯವಾಗಿಸಿಕೊಂಡ ರಾಜಕಾರಣವು ದೆಹಲಿಯಂತಹ ನಗರ-ರಾಜ್ಯವನ್ನು ಮೀರಿ ಬೆಳೆಯುವುದು ಕಷ್ಟ. ಗ್ರಾಮೀಣ ಭಾರತದ ಆಕಾಂಕ್ಷೆಗಳಿಗೂ ಸ್ಪಂದಿಸುವ, ಗಟ್ಟಿ ಸೈದ್ಧಾಂತಿಕ ತಿರುಳನ್ನೂ ಹೊಂದಿರುವ ಈ ರಾಜಕಾರಣದ ಹೊಸದೊಂದು ರೂಪವು ರಾಜ್ಯ ಮಟ್ಟದಲ್ಲಿ ಉತ್ತಮ ಪರ್ಯಾಯವನ್ನು ನೀಡಬಲ್ಲದು. ಅತ್ಯವಶ್ಯಕ ಸೇವೆಗಳನ್ನು ಒದಗಿಸುವ ಹೊಣೆ ರಾಜ್ಯ ಸರ್ಕಾರಗಳದ್ದಾಗಿರುವ ಕಾರಣ, ಇಂತಹ ರಾಜಕಾರಣವು ರಾಜ್ಯಗಳ ಮಟ್ಟದಲ್ಲಿ ಹೆಚ್ಚು ಕಾರ್ಯಸಾಧು ಆಗುತ್ತದೆ.

ಆದರೆ, ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ‘ಅಸ್ಮಿತೆ ಆಧರಿಸಿದ ರಾಜಕಾರಣ’ದ ಸುಲಭದ ಹಾದಿ ಹಿಡಿಯುವುದೇ ಹೆಚ್ಚು. ಈ ರಾಜಕೀಯ ಪಕ್ಷಗಳು ಅವಲಂಬಿಸುವ ಅಭಿವೃದ್ಧಿ ರಾಜಕಾರಣವು ಸಂಪನ್ಮೂಲದ ಮರುಹಂಚಿಕೆಯ ಬಗ್ಗೆ ಗಮನ ನೀಡುತ್ತದೆಯೇ ವಿನಾ ಶಿಕ್ಷಣ, ಆರೋಗ್ಯದಂಥ ಸೇವೆಗಳ ಬಗ್ಗೆ ಗಮನ ನೀಡುವುದಿಲ್ಲ. ಕರ್ನಾಟಕದ ವಿಚಾರದಲ್ಲಿ ಹೇಳುವುದಾದರೆ, ಈಗಿನ ರಾಜಕೀಯ ಪಕ್ಷಗಳು ಹೊಸ ಹುಟ್ಟು ಪಡೆದುಕೊಂಡರೆ ಅಥವಾ ಹೊಸ ರಾಜಕೀಯ ಶಕ್ತಿಗೆ ದಾರಿ ಮಾಡಿಕೊಟ್ಟರೆ ಮಾತ್ರ ಇದು ಸಾಧ್ಯವಾದೀತು.

ಮ್ಯಾಥ್ಯು ಇಡಿಕ್ಕಳ

ಇವೆಲ್ಲವುಗಳ ಜತೆಗೆ ಭಾರತದ ಸೈದ್ಧಾಂತಿಕ ರಾಜಕಾರಣವು ಈಗ ಸ್ವಲ್ಪ ಬಲದ ಕಡೆ ಹೊರಳಿದೆ ಎನ್ನುವುದನ್ನು ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ತೋರಿಸಿದೆ. ದೆಹಲಿ ಚುನಾವಣೆಯಲ್ಲಿ ಬಿಜೆಪಿಯು ಕೆಲವೇ ಸೀಟುಗಳನ್ನು ಗೆದ್ದುಕೊಂಡಿದೆಯಾದರೂ ಆ ಪಕ್ಷವು ಶೇಕಡ 39ರಷ್ಟು ಮತಗಳನ್ನು ಸೆಳೆದಿರುವುದು, ಇತರ ಪಕ್ಷಗಳು ಕೂಡ ಹಿಂದೂ ಸಾಂಕೇತಿಕತೆಯನ್ನು ಅಪ್ಪಿಕೊಳ್ಳುವಂತೆ ಮಾಡಿರುವುದು ಆ ಪಕ್ಷದ ಸೈದ್ಧಾಂತಿಕ ಪ್ರಾಬಲ್ಯ ಸುಲಭಕ್ಕೆ ಕುಗ್ಗುವುದಿಲ್ಲ ಎಂಬುದರ ಸೂಚನೆ.

ಲೇಖಕ: ವಕೀಲ, ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT