ಭಾನುವಾರ, ಜೂನ್ 26, 2022
29 °C
‘ಗಾಂಧಿ–150’ ವಿಶೇಷ

‘ಮಹಾತ್ಮ ಗಾಂಧೀಜಿ ಹಚ್ಚಿದ ಬೆಳಕಲ್ಲಿ...’: ಎಚ್.ಡಿ. ಕುಮಾರಸ್ವಾಮಿ ಲೇಖನ

ಎಚ್.ಡಿ. ಕುಮಾರಸ್ವಾಮಿ Updated:

ಅಕ್ಷರ ಗಾತ್ರ : | |

ಆಧುನಿಕ ಭಾರತದ ಸಂದರ್ಭದಲ್ಲಿ ಜನಮಾನಸವನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧಿಯವರು ನಿಸ್ಸಂದೇಹವಾಗಿ ಅಗ್ರಗಣ್ಯರು. ಕೇವಲ ಸ್ವಾತಂತ್ರ್ಯ ಹೋರಾಟದ ನಾಯಕತ್ವಕ್ಕೆ ಸೀಮಿತಗೊಳ್ಳಲಿಲ್ಲ. ಸಮಾಜದ ಅಸಮಾನತೆ, ಅನ್ಯಾಯಗಳ ವಿರುದ್ಧ ಜನಜಾಗೃತಿ ಮೂಡಿಸಿದವರು. ಸ್ವಾವಲಂಬನೆಯ ಪಾಠ ಹೇಳಿದವರು. ಸರ್ವೋದಯ ಮಂತ್ರ ಜಪಿಸಿದವರು. ಮಾತು ಮತ್ತು ಆಚರಣೆಯಲ್ಲಿ ಎಚ್ಚರ ತಪ್ಪದೇ ಬದುಕಿದವರು. ಧರ್ಮವನ್ನು ಆಧ್ಯಾತ್ಮಿಕ ಮಟ್ಟಕ್ಕೆ ಏರಿಸಿದ ದಾರ್ಶನಿಕರು.

ಇಂಥ ಮಹಾತ್ಮರ 150ನೇ ಜನ್ಮದಿನವನ್ನು ಆಚರಿಸಲು ನಾಡು ಈಗ ಸಜ್ಜಾಗಿದೆ. 'ಅಸಹಿಷ್ಣುತೆ, ಧರ್ಮಾಂಧತೆ ಮತ್ತು ಹಿಂಸಾಪಥಗಳು' ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಗಾಂಧೀಜಿಯವರ ಮೌಲ್ಯಗಳು ಎಷ್ಟು ಸಂಗತ? ಗಾಂಧೀಜಿಯವರ ಕನಸಿನ ಹಳ್ಳಿಗಳ ಸ್ವರೂಪ ಬದಲಾಗಿದೆ. ಸರಳಜೀವನ ಶೈಲಿಗೆ ಬದಲಾಗಿ ಉಪಭೋಗ ಸಂಸ್ಕೃತಿಯು ಸಮಾಜದ ಎಲ್ಲಾ ಸ್ತರಗಳಿಗೂ ಹರಡಿದೆ. ಗಾಂಧೀಜಿಯವರು ಬದುಕಿದ ಸಮಾಜ ಮತ್ತು ಸಂದರ್ಭ, ಪ್ರಸ್ತುತ ಕಾಲಘಟ್ಟದಲ್ಲಿ ಸಂಪೂರ್ಣ ವಿಭಿನ್ನವಾಗಿರುವುದರಿಂದ ಅವರು ಪ್ರತಿಪಾದಿಸಿದ ಮೌಲ್ಯಗಳು ಈಗಿನ ಕಾಲಕ್ಕೆ ಹೇಗೆ ಸಲ್ಲುತ್ತವೆ ಎಂಬ ಪ್ರಶ್ನೆಗಳು ಜನರನ್ನು ಕಾಡುವುದು ಸಹಜ.

ಮೇಲ್ನೋಟಕ್ಕೆ ಗಾಂಧೀಜಿಯವರ ಪ್ರಸ್ತುತತೆ ಬಗ್ಗೆ ಎತ್ತುತ್ತಿರುವ ಪ್ರಶ್ನೆಗಳಿಗೆ ಉತ್ತರ ಸುಲಭಸಾಧ್ಯವಿಲ್ಲವೆಂದು ಕಾಣುತ್ತದೆ. ಗಾಂಧೀಜಿಯವರು ಪ್ರಸ್ತುತತೆಯ ಬಗ್ಗೆ ತಾತ್ವಿಕವಾದ ಜಿಜ್ಞಾಸೆ ಬೆಳೆಸುವಷ್ಟು ನಾನು ದೊಡ್ಡವನಲ್ಲ ಎಂಬ ಅರಿವಿದೆ. ಆದರೆ ಅವರು ಎಲ್ಲ ಕಾಲಕ್ಕೂ, ಎಲ್ಲ ನಾಯಕರಿಗೆ, ಜನರಿಗೆ ದಾರಿದೀಪವಾಗಿ, ತೋರುಗಂಬವಾಗಿ ಮಾರ್ಗದರ್ಶನ ಮಾಡುವ ಹಲವಾರು ಆಚರಣೆಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರು ಆಚರಿಸಿದ ವಿಧಾನಗಳನ್ನು ಮತ್ತೆ ಪ್ರಸ್ತುತ ಸನ್ನಿವೇಶಗಳಲ್ಲಿ ಪ್ರಯೋಗಿಸುವ ಮೂಲಕ ಗಾಂಧೀಜಿಯ ಪ್ರಸ್ತುತತೆಯನ್ನು ಕಂಡುಕೊಳ್ಳಬಹುದೆಂದು ನನಗೆ ತೀವ್ರವಾಗಿ ಅನಿಸಿದೆ. ನನ್ನ ಎಲ್ಲ ಆಡಳಿತಾತ್ಮಕ ಕ್ರಿಯೆಗಳಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಗಾಂಧೀಜಿಯವರಿಂದ ಕಲಿತ ಪಾಠ ನೆರವಿಗೆ ಬಂದಿರುವುದು ಅನುಭವವಾಗಿದೆ.

ಜಗತ್ತಿನ ಶ್ರೇಷ್ಠ ಚಿಂತಕರು ಸಾಮಾಜಿಕ ಅಸಮಾನತೆ, ಶೋಷಣೆ, ಅನ್ಯಾಯ, ಮೌಢ್ಯದಿಂದ ಜನತೆಯನ್ನು ಮುಕ್ತಗೊಳಿಸುವ ದೃಷ್ಟಿಯಿಂದ ಆಳವಾಗಿ ಚಿಂತಿಸಿದರು. ತಮ್ಮ ಚಿಂತನೆಯ ತಪಸ್ಸಿನಲ್ಲಿ ಮನುಷ್ಯ ಸಮಾಜದ ವಿಮೋಚನೆಯ ಹಾದಿಯನ್ನು ಕಂಡುಕೊಂಡರು. ಆದರೆ ಹಾಗೆ ಜ್ಞಾನೋದಯವಾದವರೆಲ್ಲ ಸಾಧನೆಯನ್ನು ತೋರಿದವರಲ್ಲ. ಮನುಕುಲಕ್ಕೆ ಬೆಳಕು ನೀಡಿದ ಮಹನೀಯರಲ್ಲ. ಯಾರು ತಾವು ಕಂಡುಕೊಂಡ ಸತ್ಯಗಳನ್ನು, ಮಾರ್ಗಗಳನ್ನು ಜನರ ಜೊತೆಯಲ್ಲಿ ಬೆರೆತು ಆಚರಣೆಯಲ್ಲಿ ಪ್ರಯೋಗಿಸಿ ತಮ್ಮ ಸತ್ಯಗಳನ್ನು ನಿರಂತರವಾಗಿ ಒರೆಗೆ ಹಚ್ಚಿ ಶೋಧನೆ ಮಾಡಿ, ಜನತೆಯನ್ನು ಮುನ್ನಡೆಸಿದರೋ ಅಂಥವರು ಮಾತ್ರ ಯಶಸ್ವಿ ನಾಯಕರೆನಿಸಿಕೊಂಡರು.

ತಾವು ಕಂಡ ಸತ್ಯಗಳನ್ನು ಜನತಾ ಪ್ರಯೋಗಾಲಯದಲ್ಲಿ ನಿಕಷಕ್ಕೆ ಒಡ್ಡಿ ಯಶಸ್ವಿಯಾದವರಲ್ಲಿ ಬುದ್ಧ, ಏಸುಕ್ರಿಸ್ತ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಪ್ರಮುಖರು. ಜನರ ನಡುವೆ ಬೆರೆತು, ವಿಚಾರವನ್ನು ಒರೆಗೆ ಹಚ್ಚಿ, ಸಮಾಜಕ್ಕೆ ಪರಿಹಾರ ಹುಡುಕುವ ಕಾರ್ಯ ಒಮ್ಮೆ ನಡೆದು ನಿಲ್ಲುವಂಥದ್ದಲ್ಲ. ಚಲನಶೀಲ ಜಗತ್ತಿನಲ್ಲಿ ಅದು ನಿರಂತರವಾಗಿ ಸಂಘಟಿಸುತ್ತಿದ್ದಾಗಲೇ ಅದರ ನಿಜಸ್ವರೂಪವನ್ನು ಅರಿಯಲು ಸಾಧ್ಯ; ಹಾಗಾದಾಗ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂಬುದು ನನಗೆ ಮನವರಿಕೆಯಾಯಿತು. ಜನರೊಡನೆ ಬೆರೆಯುವ ಅವರ ಕಷ್ಟಕಾರ್ಪಣ್ಯಗಳನ್ನು ಹತ್ತಿರದಿಂದ ಅರಿಯುವ ನಿಟ್ಟಿನಲ್ಲಿ ನಾನು 2006 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ಅವು ನನ್ನ ದೃಷ್ಟಿಕೋನವ್ನೇ ಬದಲಿಸಿದವು. ಸಮಾಜದ ವಾಸ್ತವ ಸ್ಥಿತಿಯ ಬಗ್ಗೆ ಕಣ್ಣು ತೆರೆಸಿದವು.

ಸುಮಾರು ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ 47 ಗ್ರಾಮವಾಸ್ತವ್ಯದಲ್ಲಿ ಪಾಲ್ಗೊಂಡೆ. ರಾಜ್ಯದ ಗಡಿಭಾಗದ ಬೆಳಗಾವಿಯ ಒಂದು ತುದಿಯಿಂದ ಚಾಮರಾಜನಗರದ ಮತ್ತೊಂದು ತುದಿಯವರೆಗೆ, ಪರಿಶಿಷ್ಟರು, ಬುಡಕಟ್ಟು ಜನತೆಯಿಂದ ಹಿಡಿದು ಏಡ್ಸ್ ಪೀಡಿತ ಕುಟುಂಬದವರೆಗೆ ನನ್ನ ಗ್ರಾಮ ವಾಸ್ತವ್ಯದ ಪರಿಧಿ ವ್ಯಾಪಿಸಿತ್ತು. ಜನರೊಡನೆ ಬೆರೆತು ಅವರ ಕಷ್ಟಗಳನ್ನು ಅರಿತು ನೆರವಾಗುವ 
ಮಾರ್ಗವನ್ನು ಕಲಿಸಿಕೊಟ್ಟಿದ್ದೇ ಗಾಂಧೀಜಿಯ ನಡೆ ಎಂದು ಮಾತ್ರ ಹೇಳಬಲ್ಲೆ.

ಜನರ ಸಮಸ್ಯೆಗಳನ್ನು ನೇರವಾಗಿ ಅರಿಯಲು ನಾನು ಅನುಸರಿಸಿದ ಎರಡನೆಯ ಮಾರ್ಗವೆಂದರೆ 
ಜನತಾ ದರ್ಶನ ಕಾರ್ಯಕ್ರಮ. ಇದನ್ನು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಕಾಲದಲ್ಲಿಯೇ ಆರಂಭಿಸಿದೆ. ಎರಡನೇ ಬಾರಿಯೂ ಇದನ್ನು ಮುಂದುವರಿಸಿದ್ದೇನೆ. ಜನತಾ ಸಂದರ್ಶನದಲ್ಲಿ ಜನರ ನೋವು, ಅಸಹಾಯಕತೆ, ಸಂಕಷ್ಟ, ಅನ್ಯಾಯಗಳು ನನಗೆ ಯಾವ ವಿಶ್ವವಿದ್ಯಾಲಯವೂ ಕಲಿಸಲಾರದಷ್ಟು ಪಾಠಗಳನ್ನು ಕಲಿಸಿವೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ನಾನು ಸುಮಾರು ಹತ್ತು ಸಾವಿರ ಜನರ ದೂರನ್ನು ಆಲಿಸಿದ್ದೇನೆ. ಈ ಕಾರ್ಯಕ್ರಮದಲ್ಲಿ ಬರುವವರ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟನ್ನು ಬದಿಗಿಟ್ಟು ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಗ್ರಾಮೀಣ ಪುನಾರಚನೆ ಮತ್ತು ಗುಡಿ ಕೈಗಾರಿಕೆಗಳ ಅಭಿವೃದ್ಧಿಯ ಬಗೆಗಿನ ಗಾಂಧೀಜಿಯ ಚಿಂತನೆಗಳನ್ನು ನಾನಿಲ್ಲಿ ವಿವರಿಸಬೇಕಿಲ್ಲ. ಗಾಂಧೀಜಿ ತಮ್ಮ ಮೊದಲ ಸತ್ಯಾಗ್ರಹವನ್ನು ಆರಂಭಿಸಿದ್ದು, ಚಂಪಾರಣ್ಯದ ರೈತರ ಬವಣೆಯ ವಿರುದ್ಧ (1917ರಲ್ಲಿ). ಒಂದು ಶತಮಾನ ಕಳೆದರೂ ರೈತರ ಸಂಕಷ್ಟ ಹೆಚ್ಚು ಸಂಕೀರ್ಣವಾಗುತ್ತ ಸಾಗಿದೆ. ಈ ನಿಟ್ಟಿನಲ್ಲಿ ರೈತರ ಸಾಲದ ಹೊರೆಯನ್ನು ತಗ್ಗಿಸಲು ಸಾಲಮನ್ನಾ ಕಾರ್ಯಕ್ರಮ ಜಾರಿಗೆ ತಂದೆ.

ಗುಡಿ ಕೈಗಾರಿಕೆಗಳ ಮೂಲಕ ಸ್ಥಳೀಯ ಪ್ರಾದೇಶಿಕ, ಆರ್ಥಿಕ ಸ್ವಾವಲಂಬನೆಯನ್ನು ರೂಪಿಸುವ ಗಾಂಧೀಜಿಯ ಚಿಂತನೆಗಳು ಸಹ ಈಗ ನಮ್ಮ ನೆರವಿಗೆ ಬಂದಿದೆ. ಗುಡಿ ಕೈಗಾರಿಕೆಗಳು, ಚೀನಾದಲ್ಲಿ ಈಗ ಆಧುನಿಕ ರೂಪ ತಾಳಿ ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಅದೇ ರೀತಿಯಲ್ಲಿ ಗಾಂಧೀಜಿಯ ಚಿಂತನೆಗಳನ್ನು ಅನುಸರಿಸಿ, ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನು ಆಧರಿಸಿ ಗುಡಿ ಕೈಗಾರಿಕೆಗಳ ಸಮೂಹ (ಕ್ಲಸ್ಟರ್) ಗಳನ್ನು ಸ್ಥಾಪಿಸುವ ಪ್ರಯೋಗ ಕೈಗೊಳ್ಳಲಾಗಿದೆ.

ಅಂಗವಿಕಲರು ಮತ್ತು ಮಹಿಳಾ ಸಬಲೀಕರಣದ ಯೋಜನೆಗಳ ಹಿನ್ನೆಲೆಯಲ್ಲಿ ಗಾಂಧೀಜಿಯವರ ತತ್ವಗಳು ನೆರವಾಗಿವೆ. ಮಹಿಳೆಯರ ಆಗ್ರಹದಂತೆ ನಾನು 2006ರಲ್ಲಿಯೇ ರಾಜ್ಯದ ಬೊಕ್ಕಸಕ್ಕೆ ಆದಾಯವೆನಿಸಿದ್ದ ಸಾರಾಯಿ ಮಾರಾಟ ಮತ್ತು ಲಾಟರಿಗಳನ್ನು ನಿಷೇಧಿಸಿದೆ. ಅವು ಆದಾಯದ ಮೂಲಗಳಾಗಿ ಮಹತ್ವವೆನಿಸಿದರೂ ನೈತಿಕತೆಯ ದೃಷ್ಟಿಯಿಂದ ತಪ್ಪು ಎಂಬ ಕಾರಣಕ್ಕಾಗಿ ನಿಷೇಧ ಅನಿವಾರ್ಯವಾಗಿತ್ತು. ಆದರೆ ಇಂಥ ನಿರ್ಧಾರ ತೆಗೆದುಕೊಂಡ ನನ್ನ ಸರ್ಕಾರ ಈಗ ಸಾವಿರ ಮದ್ಯ ಅಂಗಡಿಗಳಿಗೆ ಪರವಾನಗಿ ನೀಡುತ್ತದೆಯೆಂಬ ಸುದ್ದಿ ಹಬ್ಬಿದೆ. ಸಂಪೂರ್ಣ ಪಾನ ನಿಷೇಧ ಹಲವಾರು ಕಾರಣಗಳಿಂದ ಸಾಧ್ಯವಾಗಿಲ್ಲ. ಆದರೆ ಮದ್ಯದಂಗಡಿ ಹೆಚ್ಚಿಸುವ ಮೂಲಕ ಆದಾಯ ಗಳಿಸುವ ಇಚ್ಛೆ ಸರ್ಕಾರಕ್ಕೆ ಇಲ್ಲ.

ಹೀಗೆ ನನ್ನ ವೈಯಕ್ತಿಕ ಚಿಂತನೆಗಳು ಮತ್ತು ಸರ್ಕಾರದ ಕಾರ್ಯಕ್ರಮಗಳು ಗಾಂಧೀಜಿಯವರ ಚಿಂತನೆಗಳಿಂದ ಹರಿತಗೊಳ್ಳುತ್ತಿವೆ. ಜನರ ಜೊತೆ ಬೆರೆತು, ಅವರ ದೂರುಗಳನ್ನು ಆಲಿಸಿ, ಪಾಠ ಕಲಿತು, ಸಮಾಜಮುಖಿಯಾಗಿ ಬೆಳೆಯುವ ಮಾರ್ಗವನ್ನು ಗಾಂಧೀಜಿಯ ಚಿಂತನೆಗಳು ತೋರಿವೆ. ಆ ಮಾರ್ಗದಲ್ಲಿ ಸದೃಢ ಹೆಜ್ಜೆಗಳನ್ನಿಡುವ ಸಂಕಲ್ಪ ನಮ್ಮದು. ಈ ನಿಟ್ಟಿನಲ್ಲಿ ಗಾಂಧೀಜಿಯವರ ಜನಮುಖಿ, ಸಮಾಜಮುಖಿ ತತ್ವಗಳು, ಚಿಂತನೆಗಳ ಹುಡುಕಾಟದಲ್ಲಿ ತೊಡಗಿಸಿಕೊಂಡು ಸಮಾಜದ ಉದ್ಧಾರಕ್ಕೆ ಹೊಸ ಗುರಿ ಮತ್ತು ಮಾರ್ಗಗಳನ್ನು ಕಂಡುಕೊಳ್ಳಲು ನಾಡಿನ ಚಿಂತಕರ ಮತ್ತು ತಜ್ಞರ ಸಹಕಾರ ಕೋರುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು