ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷೋತ್ತಮನ... ರೂಪು–ರೇಖೆ

ರಾಮನ ಸಮಸ್ತ ಚಾರಿತ್ರ್ಯವಿರುವುದು ಸ್ಥಾವರ ರೂಪದ ಮಂದಿರದಲ್ಲಲ್ಲ, ಅವನ ಜಂಗಮತ್ವದಲ್ಲಿ
Last Updated 1 ಏಪ್ರಿಲ್ 2020, 19:38 IST
ಅಕ್ಷರ ಗಾತ್ರ
ADVERTISEMENT
""

ಭಗವಂತನು ಮನುಷ್ಯನಾಗಿ ಅವತರಿಸಲು ಬಯಸಿದ್ದನೆಂದು ಪುರಾಣಗಳೇ ಹೇಳಿರುವಾಗ, ರಾಮನನ್ನು ಮಾನವೀಯವಾಗಿ ಪರಿಭಾವಿಸುವುದು ಅಪಚಾರ ಹೇಗಾಗುತ್ತದೆ? ರಾಮ ತನ್ನ ಬದುಕಿನ ಅತ್ಯಂತ ಫಲಪ್ರದವಾದ ಕಾಲಘಟ್ಟವನ್ನು ಪ್ರಜಾಹಿತಕ್ಕಾಗಿ ವನವಾಸದಲ್ಲಿ ಕಳೆದ.

ಇಷ್ಟು ದಿವಸ ನಮ್ಮ ರಾಜಕಾರಣಿಗಳು ಅಯೋಧ್ಯಾ ವಿವಾದವನ್ನು ತಮ್ಮ ಆಡುಂಬೊಲವಾಗಿ ಮಾಡಿಕೊಂಡಿದ್ದರಿಂದ ಶ್ರೀರಾಮಚಂದ್ರ ಈ ಕಲಿಯುಗದಲ್ಲೂ ಮತ್ತೊಮ್ಮೆ ವನವಾಸ ಅನುಭವಿಸಬೇಕಾಯಿತು. ಈಗ ಸುಪ್ರೀಂ ಕೋರ್ಟ್‌ ಈ ವಿವಾದಕ್ಕೊಂದು ಅಂತ್ಯ ಹಾಡಿದೆಯಾದರೂ ರಾಮನಿಗೆ ಸ್ಥಾವರವಾದ ಒಂದು ಮಂದಿರ ಕಟ್ಟಿಸಲು ಮತ್ತೆ ಇದೇ ರಾಜಕಾರಣಿಗಳ ಮರ್ಜಿಗಾಗಿ ನಾವು ಕಾಯಬೇಕಾಗಿದೆ.

ಆದರೆ, ರಾಮನ ಸಮಸ್ತ ಚಾರಿತ್ರ್ಯವಿರುವುದು ಸ್ಥಾವರ ರೂಪದ ಮಂದಿರದಲ್ಲಲ್ಲ, ಅವನ ಜಂಗಮತ್ವದಲ್ಲಿ. ಅದರ ಅನುಸಂಧಾನಕ್ಕಾಗಿ ನಾವು ಯಾರ ಮರ್ಜಿಗೂ ಕಾಯಬೇಕಿಲ್ಲ. ರಾಮಾಯಣ (ರಾಮ + ಅಯನ) ಎಂಬ ಪದದ ಅರ್ಥವೇ ‘ರಾಮನ ಜಂಗಮತ್ವ/ ಅಲೆದಾಟ’ ಎಂದು. ರಾಮ ಸಮಸ್ತ ಭಾರತೀಯರಿಗೆ ಪೂಜನೀಯನಾಗಿರುವುದು ಅವನು ಸ್ಥಾವರವಾದ ಅಯೋಧ್ಯಾ ಸಿಂಹಾಸನದ ಅಧಿಪತಿಯಾಗಿದ್ದ ಎಂಬ ಕಾರಣಕ್ಕಲ್ಲ, ಪ್ರಜಾಹಿತಕ್ಕಾಗಿ ಭಾರತದುದ್ದಗಲಕ್ಕೂ ಸಂಚರಿಸಿದನೆಂಬ ಕಾರಣಕ್ಕೆ.

ದಶರಥ ಒಂದು ರಾಜತಾಂತ್ರಿಕ ಎಡವಟ್ಟು ಮಾಡಿಕೊಂಡಿದ್ದನಾದರೂ ‘ಕೈಕೇಯಿಗೆ ಕೊಟ್ಟ ವಚನವನ್ನು ನಿರ್ಲಕ್ಷಿಸಿ ಸಿಂಹಾಸನವನ್ನೇರು’ ಎಂದು ರಾಮನಿಗೆ ಸೂಚಿಸಿದ್ದ. ಆದರೆ ರಾಮ ಹಾಗೆ ಮಾಡದೆ ವನವಾಸದ ಅವಕಾಶವನ್ನು ಪ್ರಜಾಹಿತಕ್ಕಾಗಿ ಉಪಯೋಗಿಸಿಕೊಂಡ. ತಪಸ್ಸು, ವನವಾಸಗಳೇ ಉದ್ದೇಶವಾಗಿದ್ದರೆ ಸರಯೂ ಗಂಗಾ ತೀರದ ಅರಣ್ಯಗಳಲ್ಲಿ ಅಸಂಖ್ಯ ಋಷ್ಯಾಶ್ರಮಗಳಿದ್ದವು ಅಥವಾ ಉತ್ತರದಲ್ಲಿ ಹಿಮಾಲಯವಿತ್ತು. ತಪಶ್ಚರ್ಯೆಗೆ ಹಿಮಾಲಯಕ್ಕಿಂತ ಪ್ರಶಸ್ತವಾದ ಮತ್ತೊಂದು ಸ್ಥಳವಿದೆಯೇ? ಆದರೆ ರಾಮ ಎಲ್ಲ ಬಿಟ್ಟು ಅಪಾಯಕಾರಿಯಾದ ದಂಡಕಾರಣ್ಯ ಏಕೆ ಹೊಕ್ಕ? ಈ ಪ್ರಶ್ನೆಗೆ ವಾಲ್ಮೀಕಿ ರಾಮಾಯಣದಲ್ಲೇ ಉತ್ತರ ಸಿಗುತ್ತದೆ.

ಸಾಮ್ರಾಜ್ಯ ವಿಸ್ತರಣೆ ಸಾಮಾನ್ಯವೆನಿಸಿದ್ದ ಆ ಕಾಲದಲ್ಲಿ ರಾಮ- ರಾವಣರ ನಡುವೆ ಸಹಜವಾಗಿಯೇ ಪೈಪೋಟಿ ಇತ್ತು. ರಾವಣನಂತೂ ಕಾಡಿನ ನಿರುಪದ್ರವಿ ಋಷಿಗಳನ್ನೂ ಬಿಡದೆ ಅಮಾಯಕ ಪ್ರಜೆಗಳನ್ನು ಹಿಂಸಿಸುತ್ತಿದ್ದ. ದಕ್ಷಿಣ ಭಾರತದಾದ್ಯಂತ ಸೇನಾನೆಲೆಗಳನ್ನು ಸ್ಥಾಪಿಸಿ, ಗಂಗಾ ನದಿಯ ತೀರದವರೆಗೂ ತನ್ನ ಪ್ರಭಾವವನ್ನು ವಿಸ್ತರಿಸಿದ್ದ. ಇಂತಹ ಅಮಾಯಕ ಪ್ರಜೆಗಳ, ತಪಸ್ವಿಗಳ ರಕ್ಷಣೆಗೆ ರಾಮ ಕಾಡಿಗೆ ಹೋಗಿದ್ದನೇ ವಿನಾ ತಪೋನಿರತನಾಗಲು ಅಲ್ಲ.

ರಾಮ ದಂಡಕಾರಣ್ಯದೊಳಗೆ ಪ್ರವೇಶಿಸಿದಾಗ ಅಲ್ಲಿದ್ದ ಋಷಿಮುನಿಗಳು, ರಾಕ್ಷಸರಿಂದ ತಮಗಾಗುತ್ತಿದ್ದ ದೌರ್ಜನ್ಯವನ್ನು ಅವನ ಮುಂದೆ ಹೇಳಿಕೊಂಡಿದ್ದರು. ಕೆಲವರಂತೂ ರಾಕ್ಷಸರಿಂದ ಬರ್ಬರವಾಗಿ ಹತ್ಯೆಯಾದ ತಪಸ್ವಿಗಳ ಮೂಳೆ, ತಲೆಬುರುಡೆ ಮತ್ತು ಕಳೇಬರದ ಅವಶೇಷಗಳನ್ನು ರಾಮನಿಗೆ ತೋರಿಸಿದ್ದರು (ಅಧ್ಯಾತ್ಮ ರಾಮಾಯಣ 3.2). ವಿಚಿತ್ರವೆಂದರೆ ರಾಮ ದಂಡಕಾರಣ್ಯದ ಋಷ್ಯಾಶ್ರಮಗಳಿಗೆ ಹೋದಾಗ ಅಲ್ಲಿದ್ದ ಋಷಿಗಳು ಅವನ ಬರವಿಗಾಗಿ ಹಲವು ವರ್ಷಗಳಿಂದಲೂ ಕಾಯುತ್ತಿದ್ದಂತೆ, ರಾಮನ ವನವಾಸದ ನಿಜ ಉದ್ದೇಶ ತಮಗೆ ಮೊದಲೇ ಗೊತ್ತಿದ್ದಂತೆ ವರ್ತಿಸುತ್ತಿದ್ದರು (ಅರಣ್ಯಕಾಂಡ 12).

ರಾವಣನ ಸಂಹಾರವೇ ರಾಮನ ಉದ್ದೇಶವಾಗಿದ್ದರೆ ಅವನು, ತನ್ನ ಪೂರ್ವಿಕನಾದ ರಘು ಮಹಾರಾಜನಂತೆ ದಿಗ್ವಿಜಯಕ್ಕೆ ಹೊರಡಬಹುದಿತ್ತಲ್ಲ! ವನವಾಸ ಏಕೆ ಮಾಡಬೇಕಿತ್ತು ಎಂಬ ಪ್ರಶ್ನೆ ಉದ್ಭವಿಸಬಹುದು. ಪ್ರಬಲನಾದ ರಾವಣನನ್ನು ನೇರವಾಗಿ ಎದುರಿಸಲು ಅವನಿಗಾಗುತ್ತಿರಲಿಲ್ಲ, ಕುಟಿಲೋಪಾಯ ಮಾಡಿ ಒಳಗಿನಿಂದಲೇ ದುರ್ಬಲಗೊಳಿಸಿ ಬಳಿಕ ಅವನ ಮೇಲೆ ದಾಳಿ ಮಾಡಬೇಕಿತ್ತು ಎಂದೇ ಈ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.

ನ್ಯಾಯಮಾರ್ಗದಲ್ಲಿ ನಡೆಯಲು ರಾಮ ಸಾಧ್ಯವಾದಷ್ಟೂ ಪ್ರಯತ್ನಿಸಿದ. ಆದರೆ ಪ್ರಜಾಹಿತಕ್ಕಾಗಿ ಕುಟಿಲ ಮಾರ್ಗ ಅನಿವಾರ್ಯವೆನಿಸಿದರೆ ಹಾಗೆ ಮಾಡಲು ಅವನೇನೂ ಹಿಂಜರಿಯುತ್ತಿರಲಿಲ್ಲ. ಇದಕ್ಕೆ ವಾಲಿವಧೆಗಿಂತ ಒಳ್ಳೆಯ ನಿದರ್ಶನ ಮತ್ತೊಂದಿಲ್ಲ. ವಾಲಿವಧೆಯನ್ನು ಸಮರ್ಥಿಸಿಕೊಂಡು ಅವನ ಭಕ್ತರು ಎಷ್ಟೇ ವಿತಂಡವಾದ ಮಾಡಿದರೂ ರಾಮನಿಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪವಿತ್ತು. ವಾಲಿ ಸತ್ತಾಗ ರಾಮ ಕಣ್ಣೀರಿಟ್ಟನಂತೆ (ಕಿಷ್ಕಿಂಧಾಕಾಂಡ 24). ಸುಗ್ರೀವನ ಪಟ್ಟಾಭಿಷೇಕ ಸಮಾರಂಭದಿಂದಲೂ ದೂರ ಉಳಿದನಂತೆ. ಯೋಗ್ಯನಾದ ದೊರೆಯೊಬ್ಬನ ಸಿಂಹಾಸನದ ಮೇಲೆ ಅಯೋಗ್ಯನಾದ ವ್ಯಕ್ತಿ ಕೂರುವುದನ್ನು ನೋಡಲು ಅವನಿಗೆ ಸಾಧ್ಯವಾಗಲಿಲ್ಲ ಎನಿಸುತ್ತದೆ.

ಭಗವಾನ್ ಶ್ರೀರಾಮ ಸರ್ವಶಕ್ತ, ಅವನಿಗೆ ಯಾವುದೂ ಅಸಾಧ್ಯವಲ್ಲ ಎಂದು ನಂಬಿರುವ ಭಕ್ತಜನಕ್ಕೆ ಇಂತಹ ವಾದಗಳು ಪಥ್ಯವೆನಿಸದಿರಬಹುದು. ಆದರೆ ರಾಮ ದೇವರಲ್ಲ, ಒಬ್ಬ ಮನುಷ್ಯನಾಗಿದ್ದ.ಸ್ವತಃ ರಾಮನೇ ತಾನೊಬ್ಬ ಹುಲುಮಾನವ (ಆತ್ಮಾನಂ ಮಾನುಷಂ ಮನ್ಯೇ) ಎಂದು ಹೇಳಿಕೊಂಡಿದ್ದಾನೆ. ಅವನನ್ನು ಮನುಷ್ಯನ ನೆಲೆಯಲ್ಲಿ ಕಂಡಾಗಲಷ್ಟೇ ಅವನು ನಮಗೆ ಇನ್ನಷ್ಟು ಸಮೀಪನಾಗುತ್ತಾನೆ.ರಾಮ, 13 ವರ್ಷಗಳ ಕಾಲ ಸುತ್ತಾಡಿ ಇಡೀ ದಕ್ಷಿಣ ಭಾರತವನ್ನು ವಶಪಡಿಸಿಕೊಂಡರೂ ತಾನು ಗೆದ್ದ ಯಾವ ಪ್ರಾಂತ್ಯವನ್ನೂ ಇತರ ಸಾಮಾನ್ಯ ದಾಳಿಕೋರರಂತೆ ಲೂಟಿ ಮಾಡಲಿಲ್ಲ, ವಸಾಹತುವನ್ನಾಗಿ ಮಾರ್ಪಡಿಸಿಕೊಳ್ಳಲಿಲ್ಲ.

ರಾವಣನ ತೋಳ್ಬಲಕ್ಕೆ ಸೋಲದಿದ್ದ ಕಿಷ್ಕಿಂಧೆಯ ವಾನರರು ರಾಮನ ಉದಾತ್ತ ಚಾರಿತ್ರ್ಯಕ್ಕೆ ಮನಸೋತರು, ತಮ್ಮ ಪ್ರಾಣವನ್ನೇ ಅವನಿಗೆ ಅರ್ಪಿಸಿದರು. ಸುಗ್ರೀವ, ಹನುಮಂತ, ವಿಭೀಷಣ ಮುಂತಾದವರು ಸ್ವ ಇಚ್ಛೆಯಿಂದ ಶರಣಾದರೂ ಅವರನ್ನು ತನ್ನ ಗುಲಾಮರಂತೆ, ಸಾಮಂತರಂತೆ ನಡೆಸಿಕೊಳ್ಳದೆ ಸ್ನೇಹಿತರೆಂದು ಅಪ್ಪಿಕೊಂಡ (ರಘುವಂಶ 13). ಇದರ ಪರಿಣಾಮವಾಗಿ ವಾನರ ಮತ್ತು ರಾಕ್ಷಸ ಜನಾಂಗಗಳೆರಡೂ ರಾಮನ ಆರ್ಯರ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡವು. ಇಂದು ರಾಮ/ಹನುಮರ ಗುಡಿ ಇಲ್ಲದ ಒಂದೇ ಒಂದು ಹಳ್ಳಿ ಭಾರತದಲ್ಲಿ ಕಾಣಸಿಗುವುದಿಲ್ಲ. ತಮ್ಮ ಧರ್ಮ, ನಂಬಿಕೆ, ಸಂಸ್ಕೃತಿಗಳನ್ನು ಸಮರೋಪಾದಿಯಲ್ಲಿ ಪ್ರಚಾರ ಮಾಡಲು ಹೊರಟಿರುವವರು ಶ್ರೀರಾಮನಿಂದ ಮುಖ್ಯವಾಗಿ ಇದನ್ನು ಕಲಿಯಬೇಕಾಗಿದೆ.

ಇನ್ನು ಜಗತ್ತಿನ ಇತಿಹಾಸವನ್ನು ಅವಲೋಕಿಸಿದರೆ, ರಾಷ್ಟ್ರಗಳ ಹಣೆಬರಹ ಬದಲಾಯಿಸಿದ ನಾಯಕರೆಲ್ಲರೂ ಹೆಚ್ಚು ಕಡಿಮೆ ದುರಂತಮಯವಾಗಿಯೇ ಅಂತ್ಯವಾಗಿದ್ದಾರೆ. ಇದಕ್ಕೆ ಶ್ರೀರಾಮನೂ ಹೊರತಲ್ಲ. ಅವನು ಪ್ರಜಾಹಿತಕ್ಕಾಗಿ ಸೀತಾಪರಿತ್ಯಾಗ ಮಾಡಿದ್ದು ಸರಿಯೇ ಅಲ್ಲವೇ ಎಂಬುದು ಬೇರೆಯದೇ ಚರ್ಚೆಯಾಗಿದೆ. ಆದರೆ ಸೀತೆ ಹೊರಟು ಹೋದ ಮೇಲೆ ಅವನ ಬದುಕು ಸುಖಕರವಾಗಿರಲಿಲ್ಲ. ಭವಭೂತಿಯು ರಾಮನ ಆ ದಿನಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾನೆ: ಸೀತೆಯನ್ನು ಕಾಡಿಗೆ ಕಳುಹಿಸಲು ನಿರ್ಧರಿಸಿದ ರಾತ್ರಿ ರಾಮ ವ್ಯಾಕುಲಗೊಂಡಿದ್ದ. ಸೀತೆ ಅವನ ತೋಳನ್ನೇ ದಿಂಬಾಗಿಸಿಕೊಂಡು ಹಾಯಾಗಿ ನಿದ್ರಿಸುತ್ತಿದ್ದಳು. ಮುಂದಿನ ಕರಾಳ ದಿನಗಳ ಅರಿವಿಲ್ಲದಂತೆ ಮಲಗಿದ್ದ ಸೀತೆಯನ್ನು ಕಂಡ ರಾಮ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾನೆ.

‘ಅಯ್ಯೋ ಮುಗ್ಧೆ, ನನ್ನಂತಹ ಚಾಂಡಾಲನನ್ನು ಏಕೆ ಆಶ್ರಯಿಸಿದೆ? ನನ್ನನ್ನು ಬಿಟ್ಟುಬಿಡು. ನಾನೊಂದು ವಿಷಪೂರಿತ ಮರ. ನನ್ನನ್ನು ಶ್ರೀಗಂಧದ ವೃಕ್ಷವೆಂದು ಆಲಿಂಗಿಸಿಕೊಂಡಿರುವೆಯಲ್ಲ!’ ಎನ್ನುತ್ತ ನಿಧಾನವಾಗಿ ದೂರ ಸರಿಯುತ್ತಾನೆ. ಅವಳ ಪಾದಗಳನ್ನು ತನ್ನೆದೆಗೆ ಸ್ಪರ್ಶಿಸಿಕೊಂಡು ಬಳಿಕ ತಲೆಯ ಮೇಲೆ ಇರಿಸಿಕೊಂಡು ಕ್ಷಮೆ ಯಾಚಿಸುತ್ತಾನೆ.

ಹಿಂದೂ ಸಮಾಜದಲ್ಲಿ ಇದು ಅಪರೂಪದಲ್ಲಿ ಅಪರೂಪದ ಸನ್ನಿವೇಶವಾಗಿದೆ. ಇದು, ರಾಮನ ಪಶ್ಚಾತ್ತಾಪವನ್ನು ತೋರಿಸುತ್ತದೆ, ಸೀತೆಯ ಪರಿಶುದ್ಧ ಆತ್ಮವನ್ನು ಅವನು ಅದೆಷ್ಟು ಗೌರವಿಸುತ್ತಿದ್ದ ಎಂಬುದನ್ನು ತೋರಿಸುತ್ತದೆ. ರಾಮ ತನ್ನ ದಿಗ್ವಿಜಯದ ಕಾರಣದಿಂದಲ್ಲ ತನ್ನ ಈ ಬಗೆಯ ಉದಾತ್ತ ಚಾರಿತ್ರ್ಯದ ಕಾರಣದಿಂದ ಅಖಂಡ ಭಾರತಕ್ಕೆ ಪರಮಪೂಜ್ಯ ಎನಿಸಿದ್ದಾನೆ.

ಟಿ.ಎನ್‌.ವಾಸುದೇವಮೂರ್ತಿ,ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT