ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಂಡ ಚುನಾವಣಾ ಪ್ರಕ್ರಿಯೆ

ಬಿ. ರಮಾನಾಥ ರೈ, ಅಭಯಚಂದ್ರ, ರಘು, ಮುನೀರ್‌ ಕಣಕ್ಕೆ
Last Updated 20 ಏಪ್ರಿಲ್ 2018, 9:24 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮೂಡುಬಿದಿರೆಯಿಂದ ಶಾಸಕ ಕೆ.ಅಭಯಚಂದ್ರ ಜೈನ್‌, ಸುಳ್ಯದಲ್ಲಿ ಡಾ.ಬಿ.ರಘು ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಹಾಗೂ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಗಳಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಚುರುಕಾಗಿದೆ.

ಬಂಟ್ವಾಳದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ಬಿ.ರಮಾನಾಥ ರೈ, ಎಂಟನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಏಳನೇ ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಲು ಬೆಂಬಲ ನೀಡುವಂತೆ ಮನವಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಸೇರಿದಂತೆ ಪಕ್ಷದ ಹಲವು ಹಿರಿಯ ಮುಖಂಡರು ನಾಮಪತ್ರ ಸಲ್ಲಿಸುವ ವೇಳೆ ರೈ ಅವರೊಂದಿಗೆ ಇದ್ದರು.

ಐದನೇ ಬಾರಿ ಕಣಕ್ಕೆ: 1999ರಿಂದ ಸತತವಾಗಿ ಮೂಡು ಬಿದಿರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಅಭಯಚಂದ್ರ ಜೈನ್‌, ಐದನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮೂಡುಬಿದಿರೆಯ ಸುವರ್ಣ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಯಲ್ಲಿ ಸಾಗಿ ಬಂದ ಅವರು, ಬಳಿಕ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಧನಂಜಯ ಮಟ್ಟು, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಲೇರಿಯನ್‌ ಸಿಕ್ವೇರಾ, ಕಾಂಗ್ರೆಸ್‌ ಮುಖಂಡ ರತ್ನಾಕರ ಸಿ.ಮೊಯಿಲಿ ನಾಮಪತ್ರ ಸಲ್ಲಿಸುವಾಗ ಜೊತೆಗಿದ್ದರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅಭಯಚಂದ್ರ, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ನನಗೆ ಈ ಬಾರಿ ಬೆಂಬಲ ನೀಡಿ’ ಎಂದು ವಿನಂತಿಸಿಕೊಂಡರು.

ಕೆಪಿಸಿಸಿ ‍ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಸುಳ್ಯ ತಾಲ್ಲೂಕು ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಬಂದ ಡಾ.ರಘು ಮೂರನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ರಘು ಕಾಂಗ್ರೆಸ್‌ನಿಂದ ಕಣಕ್ಕಿಳಿದು ಸೋಲು ಕಂಡಿದ್ದರು.

ಕೆಂಪು, ಕೆಂಪು ಮೆರವಣಿಗೆ: ಬೆಳಿಗ್ಗೆ 10 ಗಂಟೆಗೆ ಸಿಪಿಎಂನ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಪಿವಿಎಸ್‌ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿಬಂದ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ 11 ಗಂಟೆ ಸುಮಾರಿಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ಬಿ.ಕೆ.ಇಮ್ತಿಯಾಝ್, ಗಂಗಯ್ಯ ಅಮೀನ್, ಯು.ಬಿ.ಲೋಕಯ್ಯ ಮತ್ತು ಸುನಂದಾ ಕೊಂಚಾಡಿ ನಾಮಪತ್ರ ಸಲ್ಲಿಸುವಾಗ ಜೊತೆಗಿದ್ದರು.

ಮುನೀರ್‌ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಬಂದಿದ್ದ ಬಹುತೇಕರು ಕೆಂಪು ವಸ್ತ್ರಧಾರಿಗಳಾಗಿದ್ದರು. ಪಿವಿಎಸ್‌ ವೃತ್ತದಿಂದ ಪಾಲಿಕೆ ಕಚೇರಿಯುದ್ದಕ್ಕೂ ಹಬ್ಬಿದ್ದ ಕೆಂಪು ಮೆರವಣಿಗೆ ನಾಮಪತ್ರ ಸಲ್ಲಿಕೆಗೆ ಹೊಸ ರಂಗು ತಂದಿತ್ತು. ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಸಾಗಿದ ಸಿಪಿಎಂ ಕಾರ್ಯಕರ್ತರು, ಪಾಲಿಕೆ ಕಚೇರಿ ಎದುರು ಸಮಾವೇಶಗೊಂಡರು.

ಎರಡೇ ನಾಮಪತ್ರ: ರಾಜ್ಯ ವಿಧಾನಸಭಾ ಚುನಾವಣೆಗೆ ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಬಾಲಕೃಷ್ಣ ಪೂಜಾರಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಗುರುವಾರ ನಾಲ್ವರು ನಾಮಪತ್ರ ಸಲ್ಲಿಸಿದ್ದು, ಒಟ್ಟು ನಾಮಪತ್ರಗಳ ಸಂಖ್ಯೆ ಐದಕ್ಕೇರಿದೆ.

ಉಡುಪಿ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆ ಇನ್ನೂ ಚುರುಕುಗೊಂಡಿಲ್ಲ. ಗುರುವಾರ ಎರಡು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ. ಶಾಸಕ ಸುನೀಲ್‌ಕುಮಾರ್‌ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಅವರು ಸೋಮವಾರ ಅಧಿಕೃತವಾಗಿ ಮತ್ತೆ ನಾಮಪತ್ರ ಸಲ್ಲಿಸಲಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಕುಂದಾಪುರ ನಿವಾಸಿ ಸುಧೀರ್ ಕಂಚನ್‌ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ನಾಮಪತ್ರವೇ ಇಲ್ಲ

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಯು ಮತ್ತು ಸಿಪಿಎಂನ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಐದು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರೂ, ಯಾವ ಅಭ್ಯರ್ಥಿಯೂ ಈವರೆಗೆ ನಾಮಪತ್ರ ಸಲ್ಲಿಸಿಲ್ಲ.

ಬಿ.ರಮಾನಾಥ ರೈ

ಬಂಟ್ವಾಳ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಅಭ್ಯರ್ಥಿ

ವಯಸ್ಸು– 66 ವರ್ಷ

ವಿದ್ಯಾರ್ಹತೆ– ಬಿ.ಎ ಪದವಿ

ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ ₹ 6.46 ಕೋಟಿ. ಸಚಿವರ ಕುಟುಂಬ ₹ 72.48 ಲಕ್ಷದಷ್ಟು ಸಾಲವನ್ನೂ ಹೊಂದಿದೆ.

ಎಂಟನೇ ಬಾರಿ ವಿಧಾನಸಭಾ ಚುನಾವಣೆ ಎದುರಿಸಲು ಗುರುವಾರ ನಾಮಪತ್ರ ಸಲ್ಲಿಸಿರುವ ರಮಾನಾಥ ರೈ, ಅದರೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ರೈ ಅವರ ಬಳಿ ₹ 3.80 ಕೋಟಿ ಮೌಲ್ಯದ ಆಸ್ತಿ ಇದೆ. ಇದರಲ್ಲಿ ₹ 3.26 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ₹ 53.87 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಕೈಯಲ್ಲಿರುವ ₹ 2 ಲಕ್ಷ ನಗದು, 12 ವಿವಿಧ ಬ್ಯಾಂಕ್‌ ಖಾತೆಗಳಲ್ಲಿರುವ ಹಣ, ಎರಡು ಕಾರು, 100 ಗ್ರಾಂ. ಚಿನ್ನ ಸೇರಿದಂತೆ ₹ 53.87 ಲಕ್ಷ ಮೌಲ್ಯದ ಚರಾಸ್ತಿಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಬಂಟ್ವಾಳ ತಾಲ್ಲೂಕಿನ ವಿವಿಧೆಡೆ 15 ಎಕರೆ 22 ಸೆಂಟ್ಸ್‌ ಕೃಷಿ ಜಮೀನು, 1 ಎಕರೆ 81 ಸೆಂಟ್ಸ್‌ ಕೃಷಿಯೇತರ ಜಮೀನು ರೈ ಬಳಿ ಇದೆ. ₹ 34.59 ಲಕ್ಷ ಮೊತ್ತದ ಸಾಲವನ್ನು ಸಚಿವರು ಹೊಂದಿದ್ದಾರೆ.

ಸಚಿವರ ಪತ್ನಿ ಧನಭಾಗ್ಯ ರೈ ಅವರ ಬಳಿ ₹ 1.90 ಲಕ್ಷ ನಗದು, ಐದು ಬ್ಯಾಂಕ್‌ ಖಾತೆಗಳಲ್ಲಿರುವ ಹಣ, ಜೀವವಿಮಾ ಪಾಲಿಸಿ ಖರೀದಿ, ಒಂದು ಅಂಬಾಸಿಡರ್ ಕಾರು, 1.4 ಕೆ.ಜಿ. ಚಿನ್ನ ಸೇರಿದಂತೆ ₹ 86.63 ಲಕ್ಷ ಮೌಲ್ಯದ ಚರಾಸ್ತಿಗಳಿವೆ. 13 ಎಕರೆ 81 ಸೆಂಟ್ಸ್‌ ಕೃಷಿ ಜಮೀನು, 76 ಸೆಂಟ್ಸ್‌ ಕೃಷಿಯೇತರ ಜಮೀನು ಸೇರಿದಂತೆ ₹ 1.03 ಕೋಟಿ ಮೌಲ್ಯದ ಸ್ಥಿರಾಸ್ತಿಯ ಒಡೆತನವಿದ. ₹ 37.89 ಲಕ್ಷ ಸಾಲವನ್ನು ಧನಭಾಗ್ಯ ರೈ ಹೊಂದಿದ್ದಾರೆ.

ರೈ ಅವರ ಮಗಳು ಚರಿಷ್ಮಾ ರೈ ₹ 1.80 ಲಕ್ಷ ನಗದು, ನಾಲ್ಕು ಬ್ಯಾಂಕ್ ಖಾತೆಗಳಲ್ಲಿರುವ ಹಣ, ಅಂಬಾಸಿಡರ್ ಕಾರು, ಮಹಿಂದ್ರಾ ಪಿಕ್‌ ಅಪ್‌ ವಾಹನ, ಒಂದು ಸರಕು ಸಾಗಣೆ ವಾಹನ, 400 ಗ್ರಾಂ. ಚಿನ್ನ ಸೇರಿದಂತೆ ₹ 34.17 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇವರ ಬಳಿ ₹ 21 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ.

ಸಚಿವರ ಮಗ ಚೈತ್ರದೀಪ್‌ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. ವಾಹನವೂ ಇಲ್ಲ. ₹ 90,000 ನಗದು, ಮೂರು ಬ್ಯಾಂಕ್‌ ಖಾತೆಗಳಲ್ಲಿರುವ ಹಣ, ಜೀವವಿಮಾ ಪಾಲಿಸಿ ಖರೀದಿ ಸೇರಿದಂತೆ ₹ 21.82 ಲಕ್ಷ ಮೌಲ್ಯದ ಚರಾಸ್ತಿ ಮಾತ್ರ ಇದೆ.

ಕೆ.ಅಭಯಚಂದ್ರ

ಮೂಡುಬಿದಿರೆ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಅಭ್ಯರ್ಥಿ

ವಯಸ್ಸು– 69 ವರ್ಷ

ವಿದ್ಯಾರ್ಹತೆ– ಡಿಪ್ಲೊಮಾ

‌ಮೂಡುಬಿದಿರೆ ವಿಧಾನಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿರುವ ಕೆ.ಅಭಯಚಂದ್ರ ಜೈನ್‌, ಸ್ವತಃ ಸಾರಿಗೆ ಉದ್ಯಮಿ. ಅವರ ಬಳಿ ಆರು ಬಸ್ಸುಗಳಿದ್ದರೆ, ಪತ್ನಿ ಮಂಜುಳಾ ಬಳಿ 18 ಬಸ್‌ಗಳಿವೆ. ಒಟ್ಟು ₹ 7.31 ಕೋಟಿ ಆಸ್ತಿ ಕುಟುಂಬದ ಬಳಿ ಇದೆ ಎಂದು ಘೋಷಿಸಿರುವ ಅಭಯಚಂದ್ರ ಜೈನ್‌, ₹ 7.77 ಕೋಟಿ ಮೊತ್ತದ ಸಾಲವನ್ನೂ ಹೊಂದಿರುವುದಾಗಿ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

2016–17ನೇ ಆರ್ಥಿಕ ವರ್ಷ ದಲ್ಲಿ ತಮ್ಮ ಆದಾಯ ₹ 15.12 ಲಕ್ಷ ಇತ್ತು, ಆದರೆ ಅದೇ ವರ್ಷ ಪತ್ನಿ ₹ 77.56 ಲಕ್ಷ ನಷ್ಟ ಅನುಭವಿಸಿದ್ದರು ಎಂಬ ಮಾಹಿತಿಯನ್ನೂ ಉಲ್ಲೇಖಿ ಸಿದ್ದಾರೆ. ಅಭಯಚಂದ್ರ ಅವರ ಬಳಿ ₹30,056 ನಗದು, ಬ್ಯಾಂಕ್‌ ಖಾತೆಗಳಲ್ಲಿನ ಹಣ, ಮ್ಯೂಚುವಲ್‌ ಫಂಡ್‌ ಹೂಡಿಕೆ, ಕ್ರಿಸ್ಟಲ್‌ ಅಸೋಸಿ ಯೇಟ್ಸ್‌ನಲ್ಲಿ ಶೇಕಡ 10ರಷ್ಟು ಪಾಲು
ದಾರಿಕೆ, ಆರು ಬಸ್‌, ನಾಲ್ಕು ಕಾರು
ಗಳಿವೆ. 365 ಗ್ರಾಂ. ಚಿನ್ನ, 300 ಗ್ರಾಂ. ಬೆಳ್ಳಿ, ಸೇರಿದಂತೆ ಅವರ ಬಳಿ ಇರುವ ಚರಾಸ್ತಿಯ ಮೌಲ್ಯ ₹ 81.62 ಲಕ್ಷ.

20 ಎಕರೆ 18 ಸೆಂಟ್ಸ್ ಕೃಷಿ ಜಮೀನು, ಮಂಗಳೂರಿನಲ್ಲಿ ಕೃಷಿಯೇತರ ಜಮೀನು, ಬೆಂಗಳೂರಿನಲ್ಲಿ ಮೂರು ಮತ್ತು ಮಂಗಳೂರಿನಲ್ಲಿ ಒಂದು ಫ್ಲ್ಯಾಟ್, ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಜಮೀನು ಸೇರಿದಂತೆ ₹ 2.93 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ₹ 2.08 ಕೋಟಿ ಸಾಲ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಪತ್ನಿ ಮಂಜುಳಾ ಬಳಿ ₹ 3.59 ಲಕ್ಷ ನಗದು, ವಿವಿಧ ಬ್ಯಾಂಕ್‌ ಖಾತೆಗಳಲ್ಲಿರುವ ಹಣ, ಕ್ರಿಸ್ಟಲ್ ಅಸೋಸಿಯೇಟ್ಸ್‌ನಲ್ಲಿ ಶೇ 10ರ ಪಾಲುದಾರಿಕೆ, 18 ಬಸ್‌, ಎರಡು ಕಾರು, 300 ಗ್ರಾಂ. ಚಿನ್ನ, 200 ಗ್ರಾಂ. ಬೆಳ್ಳಿ ಸೇರಿದಂತೆ ₹ 2.15 ಕೋಟಿ ಮೌಲ್ಯದ ಚರಾಸ್ತಿಗಳಿವೆ. ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್‌, ಬೆಂಗಳೂರು ಮತ್ತು ಮಂಗಳೂರಿನಲ್ಲಿ ತಲಾ ಒಂದು ಆಸ್ತಿಯಲ್ಲಿ ಪಾಲುದಾರಿಕೆ ಸೇರಿದಂತೆ ₹ 1.41 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ನಿ ಬಳಿ ಇದೆ ಎಂದು ಅಭಯಚಂದ್ರ ತಿಳಿಸಿದ್ದಾರೆ.

ಶಾಸಕರ ಪತ್ನಿ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ 5.69 ಕೋಟಿ ಮೊತ್ತದ ಸಾಲ ಹೊಂದಿದ್ದಾರೆ. ಅವರ ಮಗಳು ಕ್ಷಮಾ ₹ 3 ಲಕ್ಷ ಮೌಲ್ಯದ 300 ಗ್ರಾಂ. ಚಿನ್ನವನ್ನು ಮಾತ್ರ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT