ಶನಿವಾರ, ಆಗಸ್ಟ್ 24, 2019
23 °C

ತೂಗುಗತ್ತಿ ಸರಿದಿದೆ; ಮುಂದೆ...?

Published:
Updated:
Prajavani

ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮುಂದಿದ್ದ ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಭಾರತದಲ್ಲಿ ನಿರಾಳ ಭಾವ ಮೂಡಿಸಿದೆ. ಬೇಹುಗಾರಿಕೆ ಆರೋಪದಡಿ ಬಂಧನಕ್ಕೊಳಗಾಗಿ, ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಜಾಧವ್‌, ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರಿಗೆ ನ್ಯಾಯ ದೊರಕಿಸಿಕೊಡಲು ಭಾರತವು ರಾಜತಾಂತ್ರಿಕವಾಗಿ ಅವಿರತ ಹೋರಾಡಿ, ಅಂತಿಮವಾಗಿ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಇದೀಗ, 16 ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಾಲಯವು 15- 1ರ ಬಹುಮತದ ತೀರ್ಪು ನೀಡಿದೆ.

ಭಾರತಕ್ಕೆ ಈ ತೀರ್ಪಿನಿಂದಾಗುವ ಪ್ರಯೋಜನಗಳೇನು? ಜಾಧವ್ ಅವರಿಗೆ ಆಗುವ ಅನುಕೂಲಗಳೇನು? ಹಾಗೆಯೇ, ಈ ತೀರ್ಪಿನ ಪಾಲನೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳೂ ನಮ್ಮನ್ನು ಕಾಡುತ್ತಿವೆ.

ಭಾರತದ ನೌಕಾಪಡೆಯ ಮಾಜಿ ಅಧಿಕಾರಿ, 49 ವರ್ಷದ ಜಾಧವ್ ಅವರನ್ನು 2016ರ ಮಾರ್ಚ್‌ನಲ್ಲಿ ಇರಾನ್‌ನ ಗಡಿಯಲ್ಲಿ ಬಂಧಿಸಿದ್ದ ಪಾಕಿಸ್ತಾನ, ಅವರ ಮೇಲೆ ಭಯೋತ್ಪಾದನೆ ಹಾಗೂ ಗೂಢಚರ್ಯೆಯ ಆರೋಪ ಹೊರಿಸಿ ಜೈಲಿನಲ್ಲಿಟ್ಟಿತ್ತು. ಇದಾದ 23 ದಿನಗಳ ನಂತರ, ಇಸ್ಲಾಮಾಬಾದ್‌ನಲ್ಲಿನ ಭಾರತದ ರಾಯಭಾರ ಕಚೇರಿಗೆ ಅವರ ಬಂಧನದ ಮಾಹಿತಿ ನೀಡಿತು. ‘ನಾನು ಭಾರತದ ಗೂಢಚಾರಿ, ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳನ್ನೆಸಗುವ ಉದ್ದೇಶದಿಂದ ನನ್ನನ್ನು ಭಾರತದ ಗುಪ್ತಚರ ಸಂಸ್ಥೆ ‘ರಾ’ ಕಳಿಸಿದೆ’ ಎಂದು ‘ತಪ್ಪೊಪ್ಪಿಕೊಂಡ’ ವಿಡಿಯೊವನ್ನೂ ಕಳುಹಿಸಿಕೊಟ್ಟಿತ್ತು.

ಆ ದಿನದಿಂದ ಭಾರತದ ರಾಯಭಾರಿಗಳು ಅವರನ್ನು ಭೇಟಿಯಾಗಲು 15ಕ್ಕೂ ಹೆಚ್ಚು ಬಾರಿ ಪಾಕಿಸ್ತಾನದ ಅನುಮತಿ ಕೋರಿದ್ದರು. ಆದರೆ ಇದಕ್ಕೆ ಆ ದೇಶ ಸೊಪ್ಪು ಹಾಕಲಿಲ್ಲ. ತನ್ನ ಮಿಲಿಟರಿ ನ್ಯಾಯಾಲಯದಲ್ಲಿ ಜಾಧವ್‌ ಅವರ ವಿಚಾರಣೆ ನಡೆಸಿ, ಅಪರಾಧಿ ಎಂದು ಪರಿಗಣಿಸಿ ನೇಣುಗಂಬಕ್ಕೇರಿಸಲು ತಯಾರಿ ನಡೆಸಿತ್ತು. ಪಾಕಿಸ್ತಾನದ ಈ ನಡೆ ಮಾನವ ಹಕ್ಕುಗಳು ಹಾಗೂ ಅಂತರರಾಷ್ಟ್ರೀಯ ಕಾನೂನಿನ ಘೋರ ಉಲ್ಲಂಘನೆ ಎಂದು ಹೇಳಿದ್ದ ಭಾರತ, ವಿವಾದದ ಶಾಂತಿಯುತ ಪರಿಹಾರಕ್ಕಾಗಿ 2017ರ ಮೇ 8ರಂದು ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಜಾಧವ್ ಅವರನ್ನು ಯಾವುದೇ ಕ್ಷಣ ಗಲ್ಲಿಗೇರಿಸಬಹುದಾದ ಸಾಧ್ಯತೆ ಇತ್ತು. ಹಾಗಾಗಿ ಅದನ್ನು  ತಕ್ಷಣವೇ ತಡೆಯಬೇಕಾದ ತುರ್ತು ಇತ್ತು. ಭಾರತದ ಮನವಿಗೆ ಕ್ಷಿಪ್ರವಾಗಿ ಸ್ಪಂದಿಸಿದ ನ್ಯಾಯಾಲಯವು ಕೇವಲ ಹತ್ತು ದಿನಗಳಲ್ಲಿ, ಅಂದರೆ ಮೇ 18ರಂದು ಮಧ್ಯಂತರ ಆದೇಶ ಹೊರಡಿಸಿ, ಈ ಪ್ರಕರಣದ ತೀರ್ಮಾನ ಆಗುವವರೆಗೂ ಜಾಧವ್ ಅವರನ್ನು ಗಲ್ಲಿಗೇರಿಸಬಾರದೆಂದು ಹೇಳಿತು. ಆನಂತರ ಎರಡೂ ದೇಶಗಳ ಅಹವಾಲುಗಳನ್ನು ಸವಿಸ್ತಾರವಾಗಿ ಆಲಿಸಿ, ಜುಲೈ 17ರಂದು ತನ್ನ ಮಹತ್ವದ ತೀರ್ಪನ್ನು ನೀಡಿದೆ. ಅದರ ಪ್ರಕಾರ, ಭಾರತದ ರಾಜತಾಂತ್ರಿಕರಿಗೆ ಜಾಧವ್ ಅವರನ್ನು ಭೇಟಿ ಯಾಗಲು ಅನುವು ಮಾಡಿಕೊಡಬೇಕು, ಅವರಿಗೆ ವಿಧಿಸಿ ರುವ ಮರಣದಂಡನೆಯನ್ನು ಮರುಪರಿಶೀಲಿಸಬೇಕು.

ಭಾರತವು ಜಾಧವ್ ಅವರನ್ನು ಭೇಟಿ ಮಾಡಿ ಕಾನೂನಿನ ನೆರವು ಒದಗಿಸಲು ಮಾಡಿದ ಪ್ರಯತ್ನಕ್ಕೆ ಪಾಕಿಸ್ತಾನ ಮನ್ನಣೆ ಕೊಡದಿದ್ದುದು, ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿದ 1963ರ ವಿಯೆನ್ನಾ ಒಪ್ಪಂದದ (ವಿಧಿ 36 ಬಿ) ಉಲ್ಲಂಘನೆ ಎಂದು ನ್ಯಾಯಾಲಯ ಹೇಳಿದೆ. ವಿಯೆನ್ನಾ ಒಪ್ಪಂದದ ಪ್ರಕಾರ, ಯಾವುದೇ ರಾಷ್ಟ್ರದ ಪ್ರಜೆಯು ಬೇರೊಂದು ರಾಷ್ಟ್ರದಲ್ಲಿ ಬಂಧನಕ್ಕೊಳಗಾಗಿದ್ದರೆ ಸ್ವಲ್ಪವೂ ತಡಮಾಡದೆ, ಆ ಪ್ರಜೆಯ ದೇಶದ ರಾಜತಾಂತ್ರಿಕ ಕಚೇರಿಗೆ ಬಂಧನದ ಮಾಹಿತಿ ನೀಡಬೇಕು. ಬಂಧಿತನನ್ನು ಭೇಟಿ ಮಾಡುವ ಮತ್ತು ಅಗತ್ಯ ಕಾನೂನು ನೆರವು ನೀಡುವ ಅಧಿಕಾರವು ರಾಜತಾಂತ್ರಿಕ ಅಧಿಕಾರಿಗಳಿಗೆ ಇರುತ್ತದೆ. ಗೂಢಚರ್ಯೆ ಆರೋಪ ಹೊತ್ತವರಿಗೆ ವಿಯೆನ್ನಾ ಒಪ್ಪಂದ ಅನ್ವಯವಾಗದೆಂಬ ಪಾಕಿಸ್ತಾನದ ವಾದವನ್ನು ತಳ್ಳಿಹಾಕಿದ ನ್ಯಾಯಾಲಯವು ರಾಜತಾಂತ್ರಿಕ ಭೇಟಿಯ ಹಕ್ಕು ಪ್ರತಿ ನಾಗರಿಕನಿಗೂ ಇದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಪಾಕಿಸ್ತಾನವು ಮಿಲಿಟರಿ ನ್ಯಾಯಾಲಯದಲ್ಲಿ ಜಾಧವ್‌ ಅವರ ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಒಬ್ಬ ಸಾಮಾನ್ಯ ಕೈದಿಗೆ ಸಿಗಬೇಕಾದ ಮೂಲ ಸೌಲಭ್ಯ ಗಳು, ಅಂದರೆ ಆತನನ್ನು ಪ್ರತಿನಿಧಿಸಲು ವಕೀಲರ ನಿಯೋಜನೆ, ಸಾಕ್ಷ್ಯಾಧಾರಗಳ ನಿಖರ ಪರೀಕ್ಷೆ, ಮುಕ್ತ ಹಾಗೂ ನ್ಯಾಯಸಮ್ಮತ ವಿಚಾರಣೆಯಂತಹ ಸೌಲಭ್ಯಗಳನ್ನು ನೀಡದೇ ಗಲ್ಲು ಶಿಕ್ಷೆ ವಿಧಿಸಿದ್ದನ್ನು ನ್ಯಾಯಾಲಯವು ಆಕ್ಷೇಪಿಸಿದೆ. ಇದು ಪಾಕಿಸ್ತಾನದ ನ್ಯಾಯ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿ. ಜಾಧವ್ ಅವರಿಗೆ ಸಿಕ್ಕ ಜಯ. ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿ ಅಪ ಖ್ಯಾತಿ ಹೊಂದಿರುವ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಮೂಲಕ ಮತ್ತೊಮ್ಮೆ ತಪರಾಕಿ ಬಿದ್ದಿದೆ.

ಜಾಧವ್ ಅವರನ್ನು ಬಿಡುಗಡೆ ಮಾಡಬೇಕೆಂಬುದು ಭಾರತದ ಕೋರಿಕೆಗಳಲ್ಲಿ ಒಂದಾಗಿತ್ತು. ಆದರೆ ಇದನ್ನು ಪುರಸ್ಕರಿಸದೇ ಇರುವುದಕ್ಕೆ ಕಾರಣವೆಂದರೆ, ಅಂತರ ರಾಷ್ಟ್ರೀಯ ನ್ಯಾಯಾಲಯವು ಮೇಲ್ಮನವಿಯ ನ್ಯಾಯಾಲಯವಲ್ಲ, ಇಂಥ ವಿಷಯಗಳು ಆಯಾ ದೇಶದ ಆಂತರಿಕ ಕಾನೂನಿನ ವ್ಯಾಪ್ತಿಗೆ ಒಳಪಡುತ್ತವೆ. ಆದ್ದರಿಂದ, ಜಾಧವ್ ಅವರು ಈಗ ಪಾಕಿಸ್ತಾನದ ಜೈಲಿನಲ್ಲೇ ಇರಬೇಕಾಗಿದೆ.

ಈ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿರುವುದರಿಂದ ಹಾಗೂ ಅಂತರರಾಷ್ಟ್ರೀಯ ನ್ಯಾಯಾಲಯವೂ ತನ್ನ ಕಳಕಳಿ ವ್ಯಕ್ತಪಡಿಸಿರುವ ಕಾರಣ, ಮರುವಿಚಾರಣೆಯಲ್ಲಿ ಪಾಕಿಸ್ತಾನವು ಜವಾಬ್ದಾರಿಯುತ ವಾಗಿ ನಡೆದುಕೊಳ್ಳಲೇಬೇಕಾಗಿದೆ. ಸದ್ಯದ ಆದೇಶದ ಪ್ರಕಾರ, ಜಾಧವ್ ಅವರ ಮೇಲಿನ ಆರೋಪಗಳ ಮರುವಿಚಾರಣೆಯು ಪಾರದರ್ಶಕ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಇರಬೇಕಾಗುತ್ತದೆ. ಇದರಿಂದ, ಪ್ರತಿ ದೇಶವೂ ಎಂಥ ಸಂದರ್ಭದಲ್ಲೂ ಅನ್ಯ ದೇಶದ ನಾಗರಿಕರಿಗೆ ರಾಜತಾಂತ್ರಿಕ ಸಂಪರ್ಕವನ್ನು ಮೊಟಕುಗೊಳಿಸುವಂತಿಲ್ಲ ಎಂಬ ತತ್ವಕ್ಕೆ ಮತ್ತಷ್ಟು ಬಲ ಸಿಕ್ಕಿದೆ.

ವಿಶ್ವಸಂಸ್ಥೆಯ ಸಂವಿಧಾನದ ಪ್ರಕಾರ, ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪುಗಳ ಪಾಲನೆ ಅನಿವಾರ್ಯ. ಒಂದುವೇಳೆ ಯಾವುದಾದರೂ ದೇಶವು ಆದೇಶವನ್ನು ಪಾಲಿಸದೇ ಇದ್ದಲ್ಲಿ, ನೊಂದ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂಲಕ ಒತ್ತಡ ಹಾಕಬಹುದು. ಆದರೆ ಭದ್ರತಾ ಮಂಡಳಿಯಲ್ಲಿ, ಅದರ ಕಾಯಂ ಸದಸ್ಯ ರಾಷ್ಟ್ರಗಳು ತಮ್ಮ ವಿಟೊ ಅಧಿಕಾರ ಬಳಸಿ ಇದನ್ನು ತಡೆಹಿಡಿಯಲೂ ಅವಕಾಶ ಇದೆ. ಅಮೆರಿಕ, ಚೀನಾ ತಮ್ಮ ವಿರುದ್ಧದ ಆದೇಶಗಳ ಜಾರಿಯನ್ನು ಈ ಹಿಂದೆ ತಡೆಹಿಡಿದ ಕೆಟ್ಟ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ ಜಾಧವ್ ಪ್ರಕರಣದಲ್ಲಿ, ಚೀನಾ ಸೇರಿದಂತೆ ಭದ್ರತಾ ಮಂಡಳಿಯ ಯಾವುದೇ ಕಾಯಂ ಸದಸ್ಯ ರಾಷ್ಟ್ರವು ಪಾಕಿಸ್ತಾನದ ಪರ ವಹಿಸುವ ಸಾಧ್ಯತೆ ಕಡಿಮೆ. ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸುವ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೆ ಗುರಿಯಾಗುತ್ತದೆ. ಹೀಗಾಗಿ ಪಾಕಿಸ್ತಾನವು ಆದೇಶವನ್ನು ಪಾಲಿಸದೇ ಇರುವ ಸಾಧ್ಯತೆಯೂ ಕಡಿಮೆ.

ಭಾರತಕ್ಕೆ ಸಂಬಂಧಿಸಿ ಈವರೆಗೆ ಆರು ಪ್ರಕರಣಗಳು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿವೆ. ಜಾಧವ್ ಪ್ರಕರಣವೂ ಸೇರಿದಂತೆ ನಾಲ್ಕರಲ್ಲಿ ಭಾರತ-ಪಾಕಿಸ್ತಾನ ಸೆಣಸಿವೆ. ಆ ಪೈಕಿ ಎರಡರಲ್ಲಿ ಭಾರತದ ಪರ ಮತ್ತು ಒಂದರಲ್ಲಿ (1971) ಪಾಕಿಸ್ತಾನದ ಪರ ತೀರ್ಪುಗಳು ಬಂದಿವೆ. ಮತ್ತೊಂದು ಪ್ರಕರಣವು ರಾಜಿ ಮೂಲಕ ಇತ್ಯರ್ಥಗೊಂಡಿದೆ.

ಜಾಧವ್ ಅವರನ್ನು ಪಾಕಿಸ್ತಾನದ ಸೆರೆಯಿಂದ ಪಾರು ಮಾಡಲು ಈ ತೀರ್ಪು ಮಹತ್ವದ್ದಾಗಿದ್ದು, ಭಾರತವು ರಾಜತಾಂತ್ರಿಕ ನೆರವಿನೊಂದಿಗೆ ಅವರ ಮೇಲಿನ ಆರೋಪಗಳನ್ನು ತೊಡೆದುಹಾಕಲು ಪ್ರಯತ್ನಿಸಲಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕವೂ (ಕೈದಿಗಳ ಹಸ್ತಾಂತರ ಇತ್ಯಾದಿ) ಪ್ರಯತ್ನಿಸಬಹುದು. ಆದರೆ, ಜಾಧವ್ ಅವರು ಯಾವಾಗ ತವರಿಗೆ ಮರಳಬಹುದು ಎಂಬ ಪ್ರಶ್ನೆಗೆ ಮಾತ್ರ ಕಾಲವೇ ಉತ್ತರಿಸಬೇಕಿದೆ.

ಲೇಖಕ: ಕಾನೂನು ಅಧಿಕಾರಿ, ವಿದೇಶಾಂಗ ಇಲಾಖೆ

Post Comments (+)