ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೀರ್ಪು ಸಮಾಧಾನ ತಂದಿಲ್ಲ; ವಿವಾದ ಕೊನೆಗೊಳ್ಳಲಿ: ಮಸೀದಿಗಿಂತ ಭಾರತೀಯತೆ ದೊಡ್ಡದು’

Last Updated 10 ನವೆಂಬರ್ 2019, 2:07 IST
ಅಕ್ಷರ ಗಾತ್ರ

ಅಯೋಧ್ಯೆಯ ಭೂ ವಿವಾದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಮುಸ್ಲಿಂ ಸಮುದಾಯಕ್ಕೆ ಸಮಾಧಾನ ಆಗಿಲ್ಲ. ಆದರೂ ಸಮುದಾಯ ಇದನ್ನು ಗೌರವಿಸುತ್ತದೆ, ತೀರ್ಪಿಗೆ ತಲೆಬಾಗುತ್ತದೆ. ಅಧಿಕಾರ ಹಿಡಿಯುವುದಕ್ಕಾಗಿ ಯಾರಿಗೋ ಈ ವಿವಾದ ಇನ್ನೂ ಜೀವಂತವಾಗಿ ಬೇಕಾಗಿರಬಹುದು, ಮುಸ್ಲಿಂ ಸಮುದಾಯಕ್ಕಂತೂ ಅದು ಬೇಡ, ವಿವಾದ ಇಲ್ಲಿಗೇ ಕೊನೆಗೊಳ್ಳಲಿ.

ಅಯೋಧ್ಯೆ ವಿವಾದಹಿಂದೂ ಮತ್ತು ಮುಸ್ಲಿಮರ ಅಸ್ಮಿತೆಯ ಪ್ರಶ್ನೆಯಾಗಿತ್ತು. ನಂಬಿಕೆಯ ವಿಚಾರವಾಗಿತ್ತು. ಮಸೀದಿ ಎಂಬ ಈ ನಂಬಿಕೆಗಿಂತಲೂ ದೊಡ್ಡ ವಿಚಾರ ಭಾರತೀಯತೆ. ವಿವಿಧತೆಯಲ್ಲಿ ಏಕತೆ ಎಂಬುದು ಇಡೀ ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ಇರುವ ಸೌಂದರ್ಯ. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ನಿರೀಕ್ಷಿತ, ಅನಿರೀಕ್ಷಿತ: ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ನಿರೀಕ್ಷಿತ ಎಂದೂ ಹೇಳಬಹುದು, ಅನಿರೀಕ್ಷಿತ ಎಂದೂ ಹೇಳಬಹುದು. ವಿವಾದಿತ 2.77 ಎಕರೆ ಪ್ರದೇಶವನ್ನು ಹಿಂದೂ ಸಹೋದರರಿಗೆ ಬಿಟ್ಟುಕೊಡಬೇಕು, ಅದಕ್ಕೆ ಪ್ರತಿಯಾಗಿ ಬೇರೆಡೆ5 ಎಕರೆ ಜಾಗವವನ್ನು ಮಸೀದಿ ನಿರ್ಮಾಣಕ್ಕಾಗಿ ಕೊಡಲು ತಿಳಿಸಲಾಗಿದೆ. ಈ 5 ಎಕರೆ ಜಾಗಕ್ಕಾಗಿ ಯಾರೂ ಅರ್ಜಿಯನ್ನೇ ಹಾಕಿಲ್ಲವಲ್ಲ, ಮತ್ತೇಕೆ ಇದನ್ನು ಸುಪ್ರೀಂ ಕೋರ್ಟ್‌ ಕೊಟ್ಟಿತು ಎಂಬುದು ನನಗೆ ಗೊತ್ತಿಲ್ಲ.

ಅಯೋಧ್ಯೆ ರಾಮನ ಜನ್ಮಭೂಮಿ ಎಂಬುದಕ್ಕೆ ಮುಸ್ಲಿಮರ ತಕರಾರಿಲ್ಲ.ಅಲ್ಲಿನ ಗಲ್ಲಿ ಗಲ್ಲಿಗಳಲ್ಲೂ ಇದಕ್ಕೆ ಕುರುಹುಗಳು ಸಿಗುತ್ತವೆ. ವಿವಾದ ಇರುವುದು ಈ ವಿವಾದಿತ ಸ್ಥಳದ ಬಗ್ಗೆ ಮಾತ್ರ. ಅಯೋಧ್ಯೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸೌಹಾರ್ದದಿಂದ ಇದ್ದಾರೆ. ವಿವಾದಿತ ಸ್ಥಳದಲ್ಲೇ ರಾಮಮಂದಿರ ಮತ್ತು ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬಹುದಿತ್ತು.

ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ನೇತೃತ್ವದ ಸಂಧಾನದ ವೇಳೆ ವಿವಾದಿತ ಸ್ಥಳವನ್ನು ಮುಸ್ಲಿಮರು ಬಿಟ್ಟುಕೊಟ್ಟರೆ ದೇಶದ ಇತರ ಎಲ್ಲಾ ಮಸೀದಿಗಳಿಗೂ ಸುಪ್ರೀಂ ಕೋರ್ಟ್‌ ಮೂಲಕವೇ ರಕ್ಷಣೆ ಕೊಡಿಸುವುದಾಗಿ ತಿಳಿಸಲಾಗಿತ್ತು. ಆ ಸಂಧಾನ ಮುರಿದು ಬಿದ್ದಿತ್ತು ನಿಜ, ಆದರೆ ತೀರ್ಪಿನಲ್ಲಿ ಅದರ ಉಲ್ಲೇಖವೇ ಇಲ್ಲ ಎಂಬುದನ್ನು ಗಮನಿಸಬೇಕು.

ಶ್ರೀ ಶ್ರೀ ಅವರ ಸಂಧಾನ ಸಭೆಯಲ್ಲಿ ಇದು ಭಾವನಾತ್ಮಕ ವಿಚಾರ, ಕೊಡು ಕೊಳ್ಳುವ ವಿಚಾರ ಅಲ್ಲ ಎಂದು ನಾವು ಹೇಳಿದ್ದೆವು. ಹಿಂದೂಗಳ ನಂಬಿಕೆಯಂತೆ ಇದು ರಾಮ ಹುಟ್ಟಿದ ಸ್ಥಳ, ಮುಸ್ಲಿಮರ ನಂಬಿಕೆಯಂತೆ ಇದು ಬಾಬರಿ ಮಸೀದಿ ಇದ್ದ ಸ್ಥಳ. ನಮ್ಮ ನಂಬಿಕೆಯ ಬಾಬರಿ ಮಸೀದಿ ಅಲ್ಲಿ ಇರಲಿಲ್ಲ ಎಂದು ಪುರಾವೆ ಸಹಿತ ಸುಪ್ರೀಂ ಕೋರ್ಟ್‌ಹೇಳಿದಾಗ ಅದು ಮಸೀದಿಯೇ ಅಲ್ಲವಾಗುತ್ತದೆ. ಇದಕ್ಕಾಗಿ 5 ಎಕರೆ ಅಲ್ಲ, 500 ಎಕರೆ ಕೊಟ್ಟರೂ ನಮಗೆ ಸಮಾಧಾನ ಆಗಲು ಸಾಧ್ಯವಿಲ್ಲ. ಸಮಾಧಾನ ಹೃದಯಾಂತರಾಳದಿಂದ ಬರಬೇಕು.

ಭವಿಷ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ನಾಯಕರು ಏಕತೆಗಾಗಿ ಒಂದೆಡೆ ಕುಳಿತು ಚರ್ಚೆ ನಡೆಸುವುದಿದ್ದರೆ ಅದಕ್ಕೆನಾವು ಸಿದ್ಧರಿದ್ದೇವೆ.

(ಲೇಖಕರು: ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್‌)

ಎಲ್ಲ ಮಸೀದಿಗಳಲ್ಲೂ ಶಾಂತಿ ಮಂತ್ರ
ಕಳೆದ 10 ದಿನಗಳಿಂದ ಮುಸ್ಲಿಂ ಸಮುದಾಯದ ವಿದ್ವಾಂಸರು, ಧಾರ್ಮಿಕ ನಾಯಕರು ನೀಡುತ್ತಿದ್ದ ಪ್ರವಚನದ ಸಾರ ಶಾಂತಿ ಮಂತ್ರವಾಗಿತ್ತು. ಶುಕ್ರವಾರದ ಪ್ರಾರ್ಥನೆ ವೇಳೆ ರಾಜ್ಯದ 10 ಸಾವಿರಕ್ಕೂ ಅಧಿಕ ಮಸೀದಿಗಳಲ್ಲಿ ನಾವು ಸಾರಿದ ಸಂದೇಶವೆಂದರೆ ಶಾಂತಿ ಮಾತ್ರ. ಭಾನುವಾರ ಮೊಹಮ್ಮದ್‌ ಪೈಗಂಬರರ ಜನ್ಮದಿನವಾಗಿದ್ದು, ಮಾನವೀಯತೆ, ಸಹಬಾಳ್ವೆಯ ಮಹಾನ್‌ ಸಂದೇಶ ಸಾರಿದ ಅವರ ಸಂದೇಶವನ್ನು ಜೀವನದಲ್ಲಿ ಪಾಲಿಸಲು ನಾವೆಲ್ಲರೂಬದ್ಧರಾಗಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT