ಶುಕ್ರವಾರ, ಮಾರ್ಚ್ 5, 2021
26 °C
ಸ್ವಾಯತ್ತತೆಯ ನಿರಾಕರಣೆಯಿಂದ ಜ್ಞಾನಕೇಂದ್ರಗಳಾಗದ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು

ವಿ.ವಿಗಳ ಉಸಿರುಗಟ್ಟಿಸುತ್ತಿರುವ ‘ಸೀಮಿತ ಹಿತಾಸಕ್ತಿ’

ಬಿ.ಕೆ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Deccan Herald

ಯೋಚಿಸಿ: ನಿಮಗೆ ಶಿಕ್ಷಣ ಬೇಕೋ? ಶಿಕ್ಷಣ ಸಂಸ್ಥೆ ಸಾಕೋ? –ಪ್ರೊ.ಹಾ.ಮಾ.ನಾಯಕ

***

ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಶೋಭೆ ತರದಂತಹ ಎರಡು ಇತ್ತೀಚಿನ ಸಂಗತಿಗಳು ಆತಂಕಕಾರಿಯಾಗಿವೆ. ಒಂದು, ಮೈಸೂರು ವಿಶ್ವವಿದ್ಯಾಲಯವು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಇತ್ತೀಚಿನ ಶ್ರೇಯಾಂಕ ಪಟ್ಟಿಯಲ್ಲಿ 126ನೇ ಸ್ಥಾನದಲ್ಲಿದೆ! ಅಲ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಿಂದ ಇಂದಿಗೂ ಅದರೊಂದಿಗೆ ಭಾವನಾತ್ಮಕ ಸಂಬಂಧವಿರುವ ನನಗೆ ಇದು ತೀರಾ ಬೇಸರ ಮೂಡಿಸಿದ ವಿಷಯ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) 148ನೇ ಸ್ಥಾನದಲ್ಲಿದೆ! ಕುವೆಂಪು ವಿ.ವಿ. 78ನೇ ಸ್ಥಾನದಲ್ಲಿರುವುದು ಸಮಾಧಾನಕರ.

ಎರಡನೆಯದು, ಉನ್ನತ ಶಿಕ್ಷಣ ಖಾತೆಯ ಮಾಜಿ ಸಚಿವ ರಾಯರಡ್ಡಿ ಅವರು ಹಾಲಿ ಸಚಿವ ಜಿ.ಟಿ. ದೇವೇಗೌಡ ಅವರಿಗೆ, ‘ಮುಕ್ತ ವಿ.ವಿ.ಯಿಂದ ಪದವಿ ಪಡೆದುಕೊಂಡು ‘ಕೀಳರಿಮೆ’ಯಿಂದ ಮುಕ್ತರಾಗಿ’ ಎಂದು ಉಪದೇಶ ಮಾಡಿ ಅದನ್ನು ಮಾಧ್ಯಮಕ್ಕೆ ಹೇಳಿದ್ದು ಅನುಚಿತವಾಗಿತ್ತು.ಮತ್ತೊಂದು ಬುದ್ಧಿಯುಕ್ತ ಮಾತು ಅವರಿಂದಲೇ ಬಂದಿದೆ: ‘ಕಲಿಕೆಗೆ ವಯಸ್ಸು ಅಡ್ಡಿಯಲ್ಲ’. ಈ ಒಳನೋಟವು ಎಲ್ಲರಲ್ಲೂ ಆಶಾಭಾವ ಮೂಡಿಸುವಂತಿದೆ! ಟೀಕೆ– ಟಿಪ್ಪಣಿ, ಮುಕ್ತ ಚಿಂತನೆಗೆ ವಿಶ್ವವಿದ್ಯಾಲಯವು ವಿಶೇಷವಾದ ವೇದಿಕೆ ಮಾತ್ರವಲ್ಲ, ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಂಸ್ಥೆ ಕೂಡಾ ಎಂದು ರಾಜಕಾರಣಿಗಳು ಗ್ರಹಿಸುವುದಿಲ್ಲವೇಕೆ?

ನಮ್ಮ ವಿ.ವಿ.ಗಳ ವರ್ಚಸ್ಸು ಕುಸಿದು ಬಿದ್ದಿರಲಿಕ್ಕೆ ವೈಸ್ ಚಾನ್ಸಲರ್, ಸರ್ಕಾರ, ಶಿಕ್ಷಕರು, ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಕಾರಣರೇ? ಅಥವಾ ರಾಯರಡ್ಡಿ ಅವರು ಸಚಿವ ಅವಧಿಯಲ್ಲಿ ಪದೇ ಪದೇ ಹೇಳುತ್ತಿದ್ದ ‘ವಿ.ವಿ.ಯೊಳಗಿನ ಭ್ರಷ್ಟಾಚಾರ’ವೇ? ವಿ.ವಿ.ಗಳ ವೈಫಲ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಪಿಮುಷ್ಟಿ ನಿಯಂತ್ರಣವೇ ಕಾರಣವೆಂಬ ವಿಶ್ಲೇಷಣೆಗೆ ದೇಶವ್ಯಾಪಿ ಮಾನ್ಯತೆ ಸಿಕ್ಕಿದೆ. ಉದಾ: ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಜಿ.ಪರಮೇಶ್ವರ ಅವರ ಸಲಹೆಯಂತೆ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ, 2002ರಲ್ಲಿ ರಚಿಸಿದ್ದ ಉನ್ನತ ಶಿಕ್ಷಣ ಕಾರ್ಯಪಡೆಯು 2004ರ ತನ್ನ ವರದಿಯಲ್ಲಿ ಹೀಗೆ ಹೇಳಿತ್ತು:

‘ಉನ್ನತ ಶಿಕ್ಷಣವೂ ಒಳಗೊಂಡಂತೆ ಇಡೀ ಶಿಕ್ಷಣ ಕ್ಷೇತ್ರ ದೇಶದ ಎಲ್ಲೆಡೆಯಂತೆ ಕರ್ನಾಟಕದಲ್ಲೂ ಸರ್ಕಾರಿ ಆಡಳಿತ ಯಂತ್ರದ ಕಠಿಣ ನಿಯಂತ್ರಣದಲ್ಲಿದೆ. ಸರ್ಕಾರ ಕೊಡುವ ಅನುದಾನವೇ ಇದಕ್ಕೆ ಆಧಾರ. ಶೈಕ್ಷಣಿಕ ವಿದ್ವಾಂಸರು ಬಹಳ ವರ್ಷಗಳಿಂದ ಈ ಬಗೆಯ ಅಧಿಕಾರಶಾಹಿ ಕೇಂದ್ರಿತ ವ್ಯವಸ್ಥೆಯನ್ನು ಖಂಡಿಸಿ ಕುಲಪತಿಗಳಿಗೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಅತ್ಯಂತ ಹೆಚ್ಚಿನ ಸ್ವಾಯತ್ತತೆ ಕೊಡುವ ಅಗತ್ಯವನ್ನು ಹೇಳುತ್ತಲೇ ಬಂದಿದ್ದಾರೆ; ಅಧ್ಯಾಪಕರ ಆಯ್ಕೆಯಲ್ಲಿ ಸ್ವಾತಂತ್ರ್ಯ, ವ್ಯಾಸಂಗಕ್ರಮ ಹಾಗೂ ಅಧ್ಯಯನಕ್ಕೆ ಹೊಸ ವಿಷಯದ ಅಳವಡಿಕೆ, ಅವುಗಳ ಯಶಸ್ವಿ ನಿರ್ವಹಣೆಯ ಹೊಣೆ ಸಂಪೂರ್ಣವಾಗಿ ಶಿಕ್ಷಕರದ್ದೇ ಆದಾಗ ಮಾತ್ರ ಇದು ಸಾಧ್ಯ... ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ತಾತ್ಕಾಲಿಕ (adhoc) ಮಧ್ಯಸ್ಥಿಕೆ ಕೂಡದು’ (ಪುಟ 6). ಈ 14 ವರ್ಷಗಳಲ್ಲಿ ಯಾವ ಪಕ್ಷದ ಸರ್ಕಾರವೂ ಪ್ರತಿಷ್ಠಿತ ವ್ಯಕ್ತಿಗಳಿದ್ದ ಕಾರ್ಯಪಡೆಯ ವರದಿಯನ್ನು ಗೌರವಿಸಿಲ್ಲ.

ವಿಶ್ವವಿದ್ಯಾಲಯಗಳು ಮೂರು ಮೂಲಗಳಿಂದ ನಿಯಂತ್ರಣಕ್ಕೆ ಒಳಗಾಗಿವೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯು.ಜಿ.ಸಿ) ವಿಶ್ವವಿದ್ಯಾಲಯದ ಸ್ಥಾಪನೆ ಒಳಗೊಂಡಂತೆ ಬೋಧನಾ ವಿಷಯಗಳು, ವ್ಯಾಸಂಗದ ಕ್ರಮ, ಶಿಕ್ಷಕರ ಅರ್ಹತೆ, ಪರೀಕ್ಷಾ ಪದ್ಧತಿ, ವಿದ್ಯಾರ್ಥಿಗಳು ಅರ್ಹತೆಗೆ ಗಳಿಸಬೇಕಾದ ಅಂಕಗಳು... ಎಲ್ಲವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ಸಂಸತ್ತು ರೂಪಿಸಿದ ಕಾಯ್ದೆಯಿಂದ ಸ್ವಾಯತ್ತತೆ ಪಡೆದು ಅಸ್ತಿತ್ವಕ್ಕೆ ಬಂದ ಯು.ಜಿ.ಸಿ., ನಂತರ ಪಳಗಿದ ಸಾಕುಪ್ರಾಣಿಯಂತೆ ಕೇಂದ್ರ ಸರ್ಕಾರದ ಸಮಗ್ರ ನಿಯಂತ್ರಣಕ್ಕೊಳಪಟ್ಟಿದೆ. ಅರ್ಥಾತ್ ಅದೊಂದು ಇಲಾಖೆಯಂತಾಗಿದೆ. ಇದರ ಪರಿಣಾಮವಾಗಿ ಪಾಠ–ಪ್ರವಚನ, ಸಂಶೋಧನೆ, ಆರ್ಥಿಕ– ಸಾಮಾಜಿಕ ವಿಶ್ಲೇಷಣೆ ಮಾಡುವಲ್ಲಿ ಮುಕ್ತ ಚಿಂತನೆಗೆ ಬೇಕಾದ ವಾತಾವರಣ ಇಲ್ಲವಾಗಿದೆ. ಯು.ಜಿ.ಸಿಯು ಸರ್ಕಾರಕ್ಕೂ ವಿ.ವಿ.ಗಳಿಗೂ ಮಧ್ಯಸ್ಥಾನದಲ್ಲಿದ್ದು ವಿ.ವಿ.ಗಳ ಸ್ವಾಯತ್ತತೆಯನ್ನು ರಕ್ಷಿಸುವ ಘನ ಉದ್ದೇಶದಿಂದ ವಿಮುಖವಾಗಿದೆ. ಇದೀಗ ಯು.ಜಿ.ಸಿ. ಬದಲು ‘ಭಾರತದ ಉನ್ನತ ಶಿಕ್ಷಣ ಆಯೋಗ’ವನ್ನು (Higher Education Commission of India) ಅಸ್ತಿತ್ವಕ್ಕೆ ತರಲು ಕೇಂದ್ರ ಸರ್ಕಾರ ಆಲೋಚಿಸಿದ್ದು ಈ ಆಯೋಗಕ್ಕೂ ಹಣ ವಿನಿಯೋಗಿಸುವ ಅಧಿಕಾರವಿಲ್ಲದಾಗಿ ಈ ಆಯೋಗವೂ ಕೇಂದ್ರದ ಹಿಡಿತದಲ್ಲಿದೆ.

ಎರಡನೆಯದು, ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯರು, ಅಧಿಕಾರಿಗಳು ಮತ್ತಿತರರ ನೇಮಕ, ಶೈಕ್ಷಣಿಕ ವಿಷಯಗಳಿಗೆ ಅನುಮತಿ... ಈ ಎಲ್ಲದಕ್ಕೂ ರಾಜ್ಯ ಸರ್ಕಾರದ ಆಣತಿ ಪಾಲಿಸಬೇಕು.

ಮೂರನೆಯದು, ಈ ರೀತಿಯ ನಿರ್ಬಂಧಗಳ ಪರಿಣಾಮ ಹಲವಾರು ಅಧ್ಯಾಪಕರು, ಆಡಳಿತಾಧಿಕಾರಿಗಳು, ವಿದ್ಯಾರ್ಥಿಗಳು ತಮ್ಮ ಕರ್ತವ್ಯದ ಮೂಲ ಉದ್ದೇಶ, ವೃತ್ತಿಪರತೆ ಮತ್ತು ಉತ್ತರದಾಯಿತ್ವ ಎಲ್ಲವನ್ನೂ ತಾವೇ ನಿರ್ವಹಣೆ ಮಾಡುವ ಬದಲು ಹೊರಗಿರುವ ‘ಪ್ರಭಾವಿ’ ವ್ಯಕ್ತಿಗಳಿಗೆ ವಹಿಸಿ ಅವರ ಪ್ರಾಬಲ್ಯವನ್ನು ಒಳತರುವ ಪರಿಪಾಟ ಬೆಳೆದು ಬಂದಿದೆ. ಜೊತೆಗೆ, ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಪದವೀಧರ ಕ್ಷೇತ್ರದ 6 ಮತ್ತು ಶಿಕ್ಷಕರ ಕ್ಷೇತ್ರದ 6 ಸದಸ್ಯರಿಂದ ಶಾಲೆಗಳ ಮತ್ತು ವಿ.ವಿ.ಗಳ ಸಾಮಾನ್ಯ ವಿಷಯಗಳ ಚರ್ಚೆಯು ರಾಜಕೀಯ ಸ್ವರೂಪ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ, ಶಿಕ್ಷಕರ ವೃತ್ತಿ ಜವಾಬ್ದಾರಿಯ ಒಂದು ಭಾಗ ಹಾಗೂ ವಿ.ವಿ. ಆಂತರಿಕ ವಿಷಯಗಳು ಕೂಡಾ ಆಡಳಿತ ವ್ಯಾಪ್ತಿಯಿಂದ ಹೊರಗಿರುವ ಅನಪೇಕ್ಷಣೀಯ ತಮಾಷೆಯಾಗಿರುತ್ತವೆ. ವಿದ್ಯಾರ್ಥಿಗಳ ಇಂದಿನ ಕಲಿಕೆಯ ನಿಷ್ಠೆಯನ್ನು ಮತ್ಯಾರೋ ನಿರ್ಧರಿಸುವಂತಾಗಿದೆ.

ಸಿಂಡಿಕೇಟ್‌ ಸದಸ್ಯರ ನಾಮನಿರ್ದೇಶನಕ್ಕೆ ವಿ.ವಿ.ಗಳ ಕಾಯ್ದೆಯ ಸೆಕ್ಷನ್ 28 (ಇ) ಮತ್ತು (ಜಿ) ಅವಕಾಶ ಕಲ್ಪಿಸಿದೆ. ಅದರಂತೆ ‘ಶಿಕ್ಷಣ ತಜ್ಞರು’ ಅಥವಾ ವಾಣಿಜ್ಯ, ಬ್ಯಾಂಕಿಂಗ್, ಕೈಗಾರಿಕೆ ಅಥವಾ ಇತರ ವೃತ್ತಿಪರ ವಲಯಗಳಿಂದ ಇಬ್ಬರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ಕುಲಾಧಿಪತಿಗೆ ಅವಕಾಶ ಇದೆ. ‘ಶ್ರೇಷ್ಠ’ ಶಿಕ್ಷಣ ತಜ್ಞರ ವರ್ಗದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದಿಂದ ಒಬ್ಬರು, ಹಿಂದುಳಿದ ವರ್ಗಗಳಿಂದ ಒಬ್ಬರು, ಒಬ್ಬ ಮಹಿಳೆ, ಅಲ್ಪಸಂಖ್ಯಾತ ಸಮುದಾಯದ ಒಬ್ಬರು ಮತ್ತು ‘ಇತರ ಇಬ್ಬರು’ ಒಳಗೊಂಡಂತೆ 6 ಜನರನ್ನು ‘ಸಾಮಾಜಿಕ ನ್ಯಾಯಕ್ಕೆ’ ಪೂರಕವಾಗಿರುವಂತೆ ನಾಮನಿರ್ದೇಶನ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ್ದು, ಆರೂ ವ್ಯಕ್ತಿಗಳು ‘ಶಿಕ್ಷಣ ತಜ್ಞ’ರಾಗಿರುವುದು ಕಡ್ಡಾಯ.

ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕತೆ ಎರಡನ್ನೂ ಗಮನದಲ್ಲಿಡಬೇಕು. ಆ ಮೂಲಕ ವಿ.ವಿ.ಗಳ ವಿಶ್ವಾಸಾರ್ಹತೆ ಹೆಚ್ಚಿಸಬೇಕು ಎಂಬ ಯೋಗ್ಯವಾದ ಶಿಫಾರಸನ್ನು ಡಾ.ಎಂ.ಆರ್. ಶ್ರೀನಿವಾಸನ್ ಸಮಿತಿ ಮಾಡಿತ್ತು. ಶಿಕ್ಷಣ ಸಚಿವರೇ ಸದಸ್ಯರನ್ನು ನೇಮಿಸುವ ಹಾಲಿ ಪದ್ಧತಿಯನ್ನು ಕೈಬಿಟ್ಟು, ಹೆಸರುಗಳನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ತು  ಶಿಫಾರಸು ಮಾಡಲಿ ಎಂದು ತಾಕೀತು ಮಾಡಿತ್ತು. ಈವರೆಗೂ ಯಾವ ಸರ್ಕಾರವೂ ಇದನ್ನು ಜಾರಿಗೆ ತರುವ ವಿವೇಕ ತೋರಿಲ್ಲ. ನೇಮಕಾತಿ ವಿಷಯದಲ್ಲಿ ವಿ.ವಿ.ಗಳನ್ನು ಲೋಕಸೇವಾ ಆಯೋಗ ಮತ್ತು ವಿವಿಧ ಮಂಡಳಿಗಳಂತೆಯೇ ಸರ್ಕಾರಗಳು ಪರಿಗಣಿಸಿವೆ. ಕಾಯ್ದೆಯ ಪ್ರಕಾರ ತಜ್ಞರು, ಶ್ರೇಷ್ಠ ಮಟ್ಟದ ಶೈಕ್ಷಣಿಕ ಸಾಧಕರು ಮಾತ್ರ ಅರ್ಹತೆ ಉಳ್ಳವರು ಎಂದು ತಿಳಿದೂ ತಿಳಿದೂ ಅಸಡ್ಡೆಯಿಂದ ಕಂಡಿವೆ. ಅಷ್ಟೇಕೆ, 2006ರಲ್ಲಿ ಪಕ್ಷ ರಾಜಕೀಯ ದೃಷ್ಟಿಯಿಂದ ‘ಶ್ರೇಷ್ಠ ಶಿಕ್ಷಣ ತಜ್ಞ’ ಎಂದಿರುವ ಷರತ್ತನ್ನೇ ತೆಗೆಯಲು ಸರ್ಕಾರ ‘ಸುಗ್ರೀವಾಜ್ಞೆ’ ಹೊರಡಿಸಿತ್ತು! ಅದು ಉನ್ನತ ಶಿಕ್ಷಣಕ್ಕೆ ಮಾರಕ ಎಂದು ಅಂದಿನ ರಾಜ್ಯಪಾಲ ಟಿ.ಎನ್. ಚತುರ್ವೇದಿ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದುಂಟು. 2017ರಲ್ಲಿ ಸರ್ಕಾರವು ನಾಮನಿರ್ದೇಶನ ಮಾಡಿದ ಸದಸ್ಯರ ಅರ್ಹತೆಯ ಪ್ರಶ್ನೆ ಕೋರ್ಟಿನ ಮೆಟ್ಟಿಲೇರಿದ್ದು, ಅವರೆಲ್ಲರೂ ‘ಶಿಕ್ಷಣ ತಜ್ಞರಲ್ಲವಾದರೂ ಪದವೀಧರರು’ ಎಂಬ ಕ್ಷಮೆ ಬೇಡುವ ವಾದವನ್ನು ಸರ್ಕಾರ ಮುಂದಿಟ್ಟಿತ್ತು!

ಇದೀಗ ಸಿಂಡಿಕೇಟ್ ಸದಸ್ಯತ್ವ ತರುವ ‘ಲಾಭ’ದಿಂದಾಗಿ 3,000 ಆಕಾಂಕ್ಷಿಗಳು ಈ ‘ಹುದ್ದೆ’ಗೆ ಅರ್ಜಿಯನ್ನು ಶಿಕ್ಷಣ ಸಚಿವರ ಕಚೇರಿಗೇ ತಲುಪಿಸಿದ್ದಾರೆ! ಆದರೆ ಸಚಿವ ಜಿ.ಟಿ. ದೇವೇಗೌಡರು ‘ಯಾವುದೇ ಒತ್ತಡಕ್ಕೂ ನಾನು ಮಣಿಯುವುದಿಲ್ಲ’ ಎಂದು ಘೋಷಿಸಿದ್ದು, ಅವರಿಗೆ ಸಮ್ಮಿಶ್ರ ಸರ್ಕಾರದ ಮತ್ತು ಎಲ್ಲ ರಾಜಕೀಯ ಪಕ್ಷಗಳ ಬೆಂಬಲವಿರಲಿ ಎಂಬುದು ನನ್ನ ಅಭಿಲಾಷೆ.

ಸ್ವಾಯತ್ತತೆಯ ಕಲ್ಪನೆಯು ಸೀಮಿತ ರಾಜಕೀಯ ಹಿತಾಸಕ್ತಿಗೆ ಅಡ್ಡಿಯಾಗಿದೆ. ವಿ.ವಿ.ಗಳಿಗೆ ಬೇಕಾದ ಹಣವನ್ನು ಸರ್ಕಾರವೇ ಭರಿಸುತ್ತಿರುವುದರಿಂದ ಸಚಿವರು ಮಾಡುವ ಪ್ರಮುಖ ನೇಮಕಾತಿಗಳು ‘ನಮ್ಮ ಹಕ್ಕು-ಅಧಿಕಾರ’ ಎನ್ನುವ ತಪ್ಪು ಅಭಿಪ್ರಾಯಕ್ಕೆ ಕಾರಣವಾಗಿವೆ. ನಿಜ, ಬಜೆಟ್ ಮೂಲಕ ಅನುದಾನ ಕೊಡುವುದರಿಂದ ಅದರ ಖರ್ಚುವೆಚ್ಚಗಳ ಪಟ್ಟಿಯನ್ನು ವಿಧಾನಮಂಡಲದ ಪರಿಶೀಲನೆಗೆ ಮಂಡಿಸಬೇಕು. ಇದು ವಿ.ವಿ.ಗಳ ಆದಾಯ ಮತ್ತು ವೆಚ್ಚಗಳ ವ್ಯವಹಾರಕ್ಕೆ ಸೀಮಿತವಾದ ಉತ್ತರದಾಯಿತ್ವ; ಶೈಕ್ಷಣಿಕ ಹೊಣೆತನದ ವಿಷಯಕ್ಕಲ್ಲ. ಖರ್ಚು ವೆಚ್ಚದಲ್ಲಿ ಭ್ರಷ್ಟಾಚಾರ ಕಂಡುಬಂದರೆ, ಜಾತಿ, ರಾಜಕೀಯ ಪ್ರಭಾವ ಬದಿಗಿಟ್ಟು ಸೂಕ್ತ ಕ್ರಮ ಜರುಗಿಸಲು ಕಾಯ್ದೆ ಅಧಿಕಾರ ಕೊಟ್ಟಿಲ್ಲವೇ? ಅದೇಕೆ ಸಾಧ್ಯವಾಗುತ್ತಿಲ್ಲ? ಇದಕ್ಕೂ ನೇಮಕಾತಿಗೂ ಸಂಬಂಧ ಕಲ್ಪಿಸುವುದು ಶುದ್ಧ ಅತಾರ್ಕಿಕವಲ್ಲವೇ?

ಸರ್ಕಾರವು ಶಿಕ್ಷಣಕ್ಕೆ ತೆಗೆದಿರಿಸುವ ಹಣವನ್ನು ಕೆಲವು ಖರ್ಚುಗಳಂತೆ ‘ದಾನ’ ಎಂದು ಪರಿಗಣಿಸದೆ ಕೌಶಲ ಮತ್ತು ಹೊಸ ಜ್ಞಾನವನ್ನು ಸೃಷ್ಟಿಸುವ ಕೆಲಸ ಹಾಗೂ ಶಿಕ್ಷಣ ಎಲ್ಲಾ ವರ್ಗಗಳಿಗೂ ಲಭ್ಯವಾಗುವ ಅಮೂಲ್ಯ ಸಂಪನ್ಮೂಲ ಎಂದು ಪರ್ಯಾಲೋಚಿಸುವುದು ಸರಿಯಾದ ಚಿಂತನೆ. ಆಧುನಿಕ ಆರ್ಥಿಕ ತಜ್ಞರ ಕಲ್ಪನೆಯಲ್ಲಿ ಶಿಕ್ಷಣವನ್ನು ‘ಸಮಾಜದ ಒಳಿತಿಗೆ ಪೂರಕವಾದ ಸೇವೆ’ ಎಂದೇ ಪರಿಗಣಿಸಲಾಗಿದೆ. ಸರ್ಕಾರವೂ ಇದರ ಫಲಾನುಭವಿಯಲ್ಲವೇ?

ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ಶೈಕ್ಷಣಿಕ ಸಾಧನೆಗೆ ಹೆಸರಾದವರನ್ನು ಕುಲಪತಿಗಳಾಗಿ ನೇಮಿಸುವುದು ಜಾಗತಿಕ ಜ್ಞಾನ ಪ್ರಪಂಚದ ಕನಿಷ್ಠ ಅಗತ್ಯವಾಗಿದೆ. ಅಂತಹ ವಿದ್ವಾಂಸರು ವಿವಾದಾತ್ಮಕ ವಿ.ವಿ.ಗಳ ವಾತಾವರಣದಲ್ಲೂ ತಮ್ಮ ನೈತಿಕ ಸಾಮರ್ಥ್ಯವನ್ನು ತೋರಬಲ್ಲರು ಹಾಗೂ ಶಿಕ್ಷಕ ಮತ್ತು ವಿದ್ಯಾರ್ಥಿ ಸಮೂಹಕ್ಕೆ ಮಾದರಿಯಾಗಬಲ್ಲರು. ಆರೇಳು ದಶಕಗಳ ಹಿಂದೆಯೇ ಹೆಸರಾಂತ ವಿದ್ವಾಂಸರು, ಸಾಹಿತಿಗಳು ಕುಲಪತಿಗಳಾಗಿರಲಿಲ್ಲವೇ? ಕುವೆಂಪು, ಡಿ.ಸಿ. ಪಾವಟೆ, ಕೆ.ಎನ್. ಪಣಿಕ್ಕರ್, ಕೆ.ಎಲ್. ಶ್ರೀಮಾಲಿ, ಡಿ.ಎಂ. ನಂಜುಂಡಪ್ಪ, ದೇಜಗೌ, ಎಂ.ಎಸ್.ತಿಮ್ಮಪ್ಪ, ಚಂದ್ರಶೇಖರ ಕಂಬಾರ, ಸುಧಾರಾವ್ ಇವರೆಲ್ಲ ಜ್ಞಾನ ಲೋಕಕ್ಕೆ ಮತ್ತು ನಮ್ಮ ನಾಡಿಗೆ ಗೌರವ ತಂದುಕೊಟ್ಟವರಲ್ಲವೇ? ಇವರ‍್ಯಾರೂ ತಮ್ಮ ಜಾತಿ ಅಥವಾ ರಾಜಕೀಯ ‘ಕರೆನ್ಸಿ’ಯನ್ನು ಒಪ್ಪಿದವರಲ್ಲ. ಮುಖ್ಯಮಂತ್ರಿಯ ಬಾಗಿಲು ಕಾಯಲಿಲ್ಲ. ಸಚಿವರಿಗೆ ತಲೆ ಬಾಗಿಸಲಿಲ್ಲ. ಈ ಸಂಪ್ರದಾಯಕ್ಕೆ ಪೂರಕವೆಂಬಂತೆ ಕಳೆದ 2-3 ದಶಕಗಳಲ್ಲಿ ಶಿಕ್ಷಣ ಸಚಿವರಾಗಿದ್ದ ಡಿ.ಮಂಜುನಾಥ್, ಜಿ. ಪರಮೇಶ್ವರ, ಡಿ.ಎಚ್. ಶಂಕರಮೂರ್ತಿ ಮತ್ತು ಆರ್.ವಿ. ದೇಶಪಾಂಡೆ ಇವರೆಲ್ಲ ವೈಸ್ ಚಾನ್ಸಲರ್‌ಗಳೊಡನೆ ವಿನಮ್ರ ಮತ್ತು ಗೌರವಪೂರ್ವಕ ಸಂಪರ್ಕವನ್ನಿಟ್ಟುಕೊಂಡಿದ್ದರು.

ಇತ್ತೀಚಿನ ದಶಕಗಳಲ್ಲಿ ಅಧಿಕಾರ ಹಿಡಿದಿದ್ದ ಬಹುತೇಕ ಸರ್ಕಾರಗಳು ವಿ.ವಿ.ಗಳನ್ನು ರಾಜಕೀಯ ಆಶ್ರಯತಾಣಗಳೆಂದು ಪರಿಗಣಿಸಿವೆ. ಇದರಿಂದ ಶಿಕ್ಷಣ ವ್ಯವಸ್ಥೆಗೆ ಹಿನ್ನಡೆ ಆಗಿದೆ. ಸಮರ್ಥ ಅಧ್ಯಾಪಕರು, ಸಂಶೋಧಕರಿದ್ದರೂ ಆ ಸಂಸ್ಥೆಗಳು ಜ್ಞಾನಕೇಂದ್ರಗಳಾಗಲು ಪೂರಕವಾದ ಸ್ವಾಯತ್ತತೆಯನ್ನು ನಿರಾಕರಿಸಲಾಗಿದೆ. ‘ಶೈಕ್ಷಣಿಕ ಸ್ವಾತಂತ್ರ್ಯ’ದ ವಿವರಗಳನ್ನು ಗುರುತಿಸುವ ಜವಾಬ್ದಾರಿಯನ್ನು ಕುಲಪತಿ ಹಾಗೂ ಶಿಕ್ಷಕ ವೃಂದಕ್ಕೇ ಬಿಡಬೇಕು ಮತ್ತು ಅದಕ್ಕೆ ಅವರೇ ಉತ್ತರದಾಯಿಗಳೂ ಆಗಿರಬೇಕು.

ಶೈಕ್ಷಣಿಕ ಸಾಧನೆಗೆ ಸ್ವಾಯತ್ತತೆಯಷ್ಟೇ ಸಾಲದು. ಆದರೆ ಅದು ಅಗತ್ಯ. ಅದು ಸರ್ಕಾರದ ಅಧಿಕಾರವನ್ನು ಪ್ರಶ್ನಿಸುವ ಕಲ್ಪನೆಯಲ್ಲ. ರಾಜ್ಯ ಸರ್ಕಾರವಾದರೂ ತನ್ನ ಹಿಡಿತ ಸಡಿಲಿಸಿ ದೇಶಕ್ಕೆ ಮಾದರಿಯಾಗಬಹುದೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು