ಮಂಗಳವಾರ, ಜೂನ್ 2, 2020
27 °C
ಮನೆಯಲ್ಲಿ ಬಂದಿಯಾಗಿರುವ ಮಕ್ಕಳ ಅಭ್ಯಾಸದ ನಿರ್ವಹಣೆ ಹೇಗೆ?

ಪರೀಕ್ಷೆಯ ನಿರೀಕ್ಷೆಯಲ್ಲಿ...

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

Prajavani

ಎಸ್ಎಸ್ಎಲ್‌ಸಿಯ ಎಲ್ಲ ಪರೀಕ್ಷೆಗಳು‌ ಮತ್ತು ಪಿಯುಸಿಯ ಒಂದು ಪರೀಕ್ಷೆಯನ್ನು ಮಾತ್ರ ಬರೆಯಬೇಕಾಗಿರುವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ನಿರೀಕ್ಷಿಸುತ್ತಾ ಮನೆಯಲ್ಲಿದ್ದಾರೆ. ಈ ರೀತಿಯ ಸ್ಥಿತಿ ಎಲ್ಲರಿಗೂ ಹೊಸ ಅನುಭವವೇ ಆಗಿದೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಕರೆ ಮಾಡಿ ವಿಚಾರಿಸುವುದು, ಏನು ಸಮಸ್ಯೆ ಇದೆ ಎಂದು ಕೇಳುವುದು ಸಹಜ. ಈ ರೀತಿ ಪ್ರತಿದಿನ ಶಿಕ್ಷಕರು ಕರೆ ಮಾಡುವುದು ಕೆಲವು ವಿದ್ಯಾರ್ಥಿಗಳಿಗೆ ಕಿರುಕುಳದಂತೆ ಭಾಸವಾಗಿ, ಕರೆಯನ್ನು ತಪ್ಪಿಸಿಕೊಳ್ಳುವಂತಹ ಚಟುವಟಿಕೆಗಳೂ ನಡೆಯುತ್ತವೆ. ವಿದ್ಯಾರ್ಥಿಗಳು ಪರೀಕ್ಷೆಯನ್ನೆಲ್ಲ ಮುಗಿಸಿ ರಜೆಯನ್ನು ಅನುಭವಿಸುವ ನಿರೀಕ್ಷೆಯಲ್ಲಿದ್ದಾಗ ಪರೀಕ್ಷೆ ಮುಂದೆ ಹೋದದ್ದು ಕಿರುಕುಳವೆನಿಸಿ ಈ ರೀತಿ ವರ್ತಿಸುವುದು ಸಹಜ ಎಂಬ ಅರಿವು ಶಿಕ್ಷಕರಿಗೆ ಮತ್ತು ಪಾಲಕರಿಗೆ ಅಗತ್ಯ. ಶಿಕ್ಷಕರ ಸಂಪರ್ಕವಿದ್ದಾಗ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಸಿದ್ಧತೆಯ ಎಚ್ಚರ ಚೆನ್ನಾಗಿ ಉಳಿದಿರುತ್ತದೆ. ಶಿಕ್ಷಕರೊಂದಿಗೆ ಸಂಪರ್ಕವನ್ನಿಟ್ಟು
ಕೊಳ್ಳಲು ಪಾಲಕರು ಉತ್ತೇಜಿಸಬೇಕು.

ಈ ರೀತಿಯ ಮನಃಸ್ಥಿತಿ ರೂಪುಗೊಳ್ಳಲು ಮುಖ್ಯ ಕಾರಣ, ಕಲಿಕೆಯನ್ನು ನಾವು ಪರೀಕ್ಷೆ ನಿರ್ದೇಶಿತವಾಗಿ ನಡೆಸುವುದು. ಹಾಗಾಗಿ, ಒಮ್ಮೆ ಪರೀಕ್ಷೆ ಮುಗಿದುಬಿಡಬೇಕಿತ್ತು ಎಂದು ಅನಿಸುವುದು ಸಹಜ. ಆದರೆ ನಿಜವಾಗಿ ಕಲಿಕೆಯ ಉದ್ದೇಶ ಜ್ಞಾನಾರ್ಜನೆಯೇ ಆಗಿರುತ್ತದೆ. ಇದರ ಅರಿವಿರುವ ವಿದ್ಯಾರ್ಥಿಗಳಿಗೆ ಈ ರೀತಿಯ ಯಾವ ಸಮಸ್ಯೆಯೂ ಆಗುವುದಿಲ್ಲ. ಯಾವ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಂದೆ ಹೋಗಿರುವುದು ಮನಸ್ಸಿಗೆ ಕಿರಿಕಿರಿ ಎನಿಸುತ್ತದೆಯೋ ಅಂತಹವರು ಕಲಿಕೆಯ ಕುರಿತ ತಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಲು ಇದು ಸಕಾಲ.

ವಿದ್ಯಾರ್ಥಿಗಳು ಈಗ ನೇರವಾಗಿ ಪಾಲಕರ ಜವಾಬ್ದಾರಿಯಲ್ಲಿದ್ದಾರೆ. ಎರಡು ದಶಕಗಳ ಹಿಂದೆ, ಮಕ್ಕಳು ಪರೀಕ್ಷೆ ಮುಗಿಸಿ ಬಂದಾಗ ಪಾಲಕರು ಪ್ರಶ್ನೆಪತ್ರಿಕೆಗಳನ್ನು ಇರಿಸಿಕೊಂಡು ಪ್ರಶ್ನೆ ಕೇಳಿ ಉತ್ತರ ಪಡೆಯುವ ಪದ್ಧತಿಯನ್ನು ಇಟ್ಟುಕೊಂಡಿದ್ದರು. ನಂತರದ ದಿನಗಳಲ್ಲಿ ಪಾಲಕರಿಗೆ ಆರ್ಥಿಕ ಒತ್ತಡ ಹೆಚ್ಚಾಗಿ, ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷವಾಗಿ ಚಿಂತಿಸಲು ಪುರಸತ್ತಿಲ್ಲದಂತಾಗಿ, ವಿದ್ಯಾರ್ಥಿಗಳ ಕಲಿಕಾ ಜವಾಬ್ದಾರಿ ಬಹುಮಟ್ಟಿಗೆ ಶಿಕ್ಷಕರ ಹೆಗಲಿಗೆ ವರ್ಗಾವಣೆಯಾಗುತ್ತಾ ಹೋಯಿತು. ಆದರೆ, ಇಂದಿನ ಪರಿಸ್ಥಿತಿ ಬಹಳ ಭಿನ್ನವಾಗಿದೆ. ಪಾಲಕರಿಗೂ ಮಕ್ಕಳೊಂದಿಗೆ ಯಥೇಷ್ಟವಾಗಿ ಸಮಯವನ್ನು ಕಳೆಯಲು ಅವಕಾಶವಿದೆ. ಆದರೆ ಮಕ್ಕಳ ಕಲಿಕಾ ಪ್ರಕ್ರಿಯೆಯೊಂದಿಗೆ ತೊಡಗಿಕೊಳ್ಳುವ ಪದ್ಧತಿ ರೂಢಿಯಾಗಿಲ್ಲ ಅಷ್ಟೆ. ಅದನ್ನು ರೂಢಿಸಿಕೊಳ್ಳುವುದಕ್ಕೂ ಇದು ಸಕಾಲ.

ಪಾಲಕರು ಮಕ್ಕಳನ್ನು ಹೇಗೆ ಅಭ್ಯಾಸದಲ್ಲಿ ತೊಡಗಿಸಬೇಕು ಎನ್ನುವುದು ಒಬ್ಬೊಬ್ಬ ವಿದ್ಯಾರ್ಥಿಯ ಗುಣ ಸ್ವಭಾವಕ್ಕನುಗುಣವಾಗಿ ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ, ಕೆಲವು ವಿದ್ಯಾರ್ಥಿಗಳಿಗೆ ಪಾಲಕರು ತಮ್ಮೆದುರೇ ಇದ್ದರೆ ಓದಲು ಕಷ್ಟವೆನಿಸುತ್ತದೆ. ಇನ್ನು ಕೆಲವು ವಿದ್ಯಾರ್ಥಿಗಳು, ಪಾಲಕರು ಎದುರಿಗಿದ್ದರೆ ಮಾತ್ರ ಅಭ್ಯಾಸ ಮಾಡುತ್ತಾರೆ. ಇನ್ನೂ ಕೆಲವರು ವಿಶಿಷ್ಟ ರೀತಿಯವರಿರುತ್ತಾರೆ. ಪಾಲಕರು ಎದುರಿಗಿದ್ದರೆ ಓದುವುದು ಅವರಿಗೆ ಕಷ್ಟವಾಗುತ್ತದೆ. ಆದರೆ, ಪಾಲಕರು ಎದ್ದುಹೋದ ಕೂಡಲೇ ಅಧ್ಯಯನವನ್ನು ನಿಲ್ಲಿಸಿಯೇ
ಬಿಡುತ್ತಾರೆ! ಇಂತಹ ಸ್ವಭಾವದವರೊಂದಿಗೆ ಅಧ್ಯಯನದಲ್ಲಿ ಪಾಲಕರು ಜೊತೆಯಾಗಿ ಇರಬೇಕಾಗುತ್ತದೆ.

ಪಾಲಕರು ವಿದ್ಯಾರ್ಥಿಗಳೊಂದಿಗೆ ಕಲಿಕಾ ಸಹವರ್ತಿಗಳಾಗಿ ಇರುವುದು ಹೇಗೆ? ಅಕ್ಷರಜ್ಞಾನ ಇರುವ ಪಾಲಕರು, ಮಕ್ಕಳು ಯಾವ ಭಾಗವನ್ನು ಅಭ್ಯಾಸ ಮಾಡಿದೆವೆಂದು ಹೇಳುತ್ತಾರೆಯೋ ಅದರಿಂದ ಎರಡೋ ಮೂರೋ ಪ್ರಶ್ನೆಗಳನ್ನು ಕೇಳಿದರೆ ಸಾಕು; ಮಕ್ಕಳ ಅಭ್ಯಾಸ ಸಮರ್ಪಕವಾಗಿ ನಡೆದಿದೆಯೋ ಇಲ್ಲವೋ ಎಂದು ಗೊತ್ತಾಗುತ್ತದೆ. ಅಕ್ಷರಜ್ಞಾನ ಇಲ್ಲದ ಪಾಲಕರೂ ಚಿಂತಿಸಬೇಕಾಗಿಲ್ಲ. ಮಕ್ಕಳು ಅಭ್ಯಾಸ ಮಾಡಿದ ಭಾಗದಲ್ಲಿ ಬರುವ ಪ್ರಶ್ನೆಗಳೇನು, ಅದಕ್ಕೆ ಉತ್ತರವೇನು ಎಂದು ಮಕ್ಕಳ ಬಳಿಯೇ ಕೇಳಿದರೆ ಅವರೇ ಉತ್ತರಿಸುತ್ತಾರೆ.

ಆದರೆ, ಇಂಗ್ಲಿಷ್ ಮಾಧ್ಯಮವಾದಾಗ ಅಥವಾ ಕೆಲವೊಮ್ಮೆ ಕನ್ನಡ ಮಾಧ್ಯಮದಲ್ಲಿ ಕೂಡ ಪರೀಕ್ಷೆಗಾಗಿ ನಡೆಸುವ ಅಭ್ಯಾಸದಲ್ಲಿ ಒಂದು ಮುಖ್ಯ ಸಮಸ್ಯೆ ಬರುತ್ತದೆ. ವಿದ್ಯಾರ್ಥಿಗಳಿಗೆ ವಿಷಯಜ್ಞಾನ ಇರುತ್ತದೆ. ಆದರೆ ಓದಿದ ವಾಕ್ಯಗಳೇನಾದರೂ ನೆನಪಿನಿಂದ ಹೊರಟುಹೋದರೆ ಸ್ವತಃ ತಾವೇ ವಾಕ್ಯ ರಚಿಸಿ ಬರೆಯಲು ಸಾಧ್ಯವಾಗದೆ, ಪರೀಕ್ಷೆಯಲ್ಲಿ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಶಾಲಾ ಪರಿಸರ, ಮನೆಯ ಪರಿಸರ ಎಲ್ಲವೂ ಕನ್ನಡ ಮಾಧ್ಯಮದಲ್ಲಿದ್ದು, ಪರೀಕ್ಷೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರಿಸಬೇಕಾದ ವಿದ್ಯಾರ್ಥಿಗಳಲ್ಲಿ ಕೆಲವರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಇದು ನಿವಾರಣೆಯಾಗಬೇಕಾದರೆ ವಿದ್ಯಾರ್ಥಿಗಳು ಪ್ರತಿದಿನ ಮಾಡಿದ ಅಭ್ಯಾಸದ ಕೆಲವು ಪರಿಕಲ್ಪನೆಗಳನ್ನು ಒಂದು ಅಥವಾ ಎರಡು ಪ್ಯಾರಾದಷ್ಟು ಸ್ವಂತ ವಾಕ್ಯದಲ್ಲಿ ಬರೆಯಬೇಕು. ಆಗ ವಿಷಯವನ್ನು ವಾಕ್ಯಗಳಾಗಿ ಬರೆದು ಹೇಳುವ ಸಾಮರ್ಥ್ಯ ಬರುತ್ತದೆ. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳಲು ಈ ಕೌಶಲವು ಬಹಳ ಸಹಾಯ ಮಾಡುತ್ತದೆ.

ಒಟ್ಟಾರೆಯಾಗಿ, ಮಕ್ಕಳಲ್ಲಿ ಇರುವ ಅಭ್ಯಾಸದ ಮನಃಸ್ಥಿತಿ ಹೊರಟುಹೋಗದ ಹಾಗೆ ಪಾಲಕರು ನೋಡಿಕೊಳ್ಳಬೇಕು. ಆದರೆ ಮಕ್ಕಳನ್ನು ಬೈಯ್ಯಬಾರದು. ಬೈದರೆ ‘ನಾನು ಪರೀಕ್ಷೆಯನ್ನು ನಡೆಸಬಾರದೆಂದು ಹೇಳಿದ್ದೇನಾ?’ ಎನ್ನುವ ಹದಿಹರೆಯದ ಬಂಡಾಯದ ಮನಃಸ್ಥಿತಿಯು ಮಕ್ಕಳು ಸಿಟ್ಟಿಗೇಳುವಂತಹ ಅವಕಾಶ ನೀಡುತ್ತದೆ. ಓದಿನ ನಡುವೆ ನಿರಾಳತೆಯನ್ನೂ ಒದಗಿಸಬೇಕು. ಪಾಲಕರು ಮನರಂಜನಾ ಕಾರ್ಯಕ್ರಮಗಳನ್ನು ನೋಡಿಕೊಂಡು, ಮಕ್ಕಳಿಗೆ ಓದಲು ಹೇಳಿದರೆ ಉಪಯೋಗವಾಗಲಾರದು. ಮನರಂಜನೆ ಮಕ್ಕಳಿಗೂ ಇರಲಿ. ಆದರೆ ಮಕ್ಕಳು ಮನರಂಜನೆಯಲ್ಲೇ ಮುಳುಗಿಹೋಗದೆ ಕಲಿಕಾ ಎಚ್ಚರವನ್ನು ಉಳಿಸಿಕೊಳ್ಳಬೇಕು.

ಕೆಲವೊಮ್ಮೆ ಕೆಲವು ವಿಚಾರಗಳು ಮಕ್ಕಳಿಗೆ ಅರ್ಥವಾಗದಿರಲು ಸಾಧ್ಯತೆ ಇದೆ. ಆಗ ಪಾಲಕರು ಸಂಬಂಧಿಸಿದ ವಿಷಯಶಿಕ್ಷಕರಿಗೆ ಫೋನ್ ಮಾಡಿ, ಮಕ್ಕಳನ್ನು ಶಿಕ್ಷಕರೊಂದಿಗೆ ಸಂವಾದದಲ್ಲಿ ತೊಡಗಿಸಬೇಕು. ಶಿಕ್ಷಕರೊಂದಿಗೆ ಪಾಲಕರೂ ನಿರಂತರ ಸಂಪರ್ಕ
ದಲ್ಲಿರಬೇಕು. ತನ್ನ ಯಾವ ವಿದ್ಯಾರ್ಥಿ ಹೇಗೆ ಎಂದು ಗೊತ್ತಿದ್ದು, ಯಾವ ರೀತಿ ಅಭ್ಯಾಸ ಮಾಡಿಸಬೇಕು ಎಂದು ಸಂಬಂಧಿಸಿದ ಶಿಕ್ಷಕರಿಗೆ ಗೊತ್ತಿರುವಷ್ಟು ಚೆನ್ನಾಗಿ ಬೇರೆ ಯಾರಿಗೂ ಗೊತ್ತಿರುವುದಿಲ್ಲ.

ಇದರ ಜೊತೆಯಲ್ಲೇ ವಿದ್ಯಾರ್ಥಿಗಳು ಕೂಡ ಕೆಲವು ಆತಂಕಗಳನ್ನು ಅನುಭವಿಸುತ್ತಾರೆ. ಆಧುನಿಕ ಮಾಧ್ಯಮಗಳ ಪರಿಣಾಮ ವಿದ್ಯಾರ್ಥಿಗಳ ಮೇಲೂ ಆಗುತ್ತದೆ. ‘ಕೊರೊನಾ ವೈರಸ್ ವಯಸ್ಸಾದವರನ್ನೇ ಹೆಚ್ಚು ಬಾಧಿಸುತ್ತದೆ’ ಎಂದು ಮಾಧ್ಯಮಗಳಲ್ಲಿ ಪದೇ ಪದೇ ಬಂದಾಗ, ಒಬ್ಬ ಹದಿಹರೆಯದ ಹುಡುಗನಿಗೆ ತನ್ನ ಮುದ್ದಿನ ಅಜ್ಜಿಗೆ ಏನಾಗುತ್ತದೆಯೋ ಎಂಬ ಚಿಂತೆಯೇ ಶುರುವಾಗಿಬಿಡುತ್ತದೆ. ನಮ್ಮಲ್ಲಿ ಮಾಧ್ಯಮಗಳು ತಾವು ಕೊಡುವ ಸುದ್ದಿಗಳು ಭವಿಷ್ಯದ ತಲೆಮಾರಿನ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಹುದು ಎಂಬ ಎಚ್ಚರದಿಂದ ಹೇಳುವ ವಿಧಾನವನ್ನು ರೂಪಿಸಿಕೊಂಡಿರುವುದು ತುಂಬಾ ಕಡಿಮೆ. ಆಗ ಶಿಕ್ಷಕರು ಮತ್ತು ಪಾಲಕರೇ ಈ ಸಮಸ್ಯೆಯನ್ನು ನಿರ್ವಹಿಸಬೇಕಾಗುತ್ತದೆ. ಈ ರೀತಿಯ ಪರಿಣಾಮಕ್ಕೆ ಒಳಗಾದ ಮಕ್ಕಳು, ಒಂದೋ ಏನನ್ನೂ ಮಾತನಾಡದೆ ಮೌನಿಗಳಾಗಿ ಚಿಂತೆಗೊಳಗಾದವರಂತೆ ಇರುತ್ತಾರೆ ಅಥವಾ ತಮ್ಮನ್ನು ಕಾಡುವ ವಿಷಯವನ್ನು ಮತ್ತೆ ಮತ್ತೆ ಕೇಳುತ್ತಿರುತ್ತಾರೆ. ಆಗ ಮಕ್ಕಳಲ್ಲಿ ಧೈರ್ಯ ತುಂಬಿ ಅಧ್ಯಯನದ ಕಡೆಗೆ ಸೆಳೆದು ತರಬೇಕಾಗುತ್ತದೆ.

ಮಕ್ಕಳನ್ನು ನಿರ್ವಹಿಸುವ ಪಾಲಕರು ಮತ್ತು ಶಿಕ್ಷಕರು ಕೇವಲ ಅಭ್ಯಾಸವನ್ನಷ್ಟೇ ನಿರ್ವಹಿಸುವುದಲ್ಲ. ಅವರ ಮನಃಸ್ಥಿತಿಯು ಹಿತಕಾರಿಯಾಗಿ ಉಳಿಯುವಂತೆಯೂ ನೋಡಿಕೊಳ್ಳಬೇಕು. ಪಾಠದ ವಿಚಾರದ ಆಚೆಗೂ ಮಕ್ಕಳ ಆಸಕ್ತಿಯ ವಿಷಯಗಳ ಬಗ್ಗೆ ಮಾತನಾಡುತ್ತಿರಬೇಕು. ಮಕ್ಕಳೊಂದಿಗಿನ ಈ ಅವಧಿಯನ್ನು ಕೌಟುಂಬಿಕ ಸಂಬಂಧದ ವೃದ್ಧಿಗೂ ಸಹಾಯಕವಾಗುವಂತೆ
ರೂಪಿಸಿಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು