ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ಸರಿದಾರಿ ಯಾವುದು?

ಸ್ವಾಮಿ, ನಮ್ಮ ಹೆಂಗಳೆಯರ ಅಭಿವೃದ್ಧಿಯ ಕಲ್ಪನೆ ಬೇರೆಯೇ ಇದೆ
Last Updated 28 ನವೆಂಬರ್ 2019, 20:03 IST
ಅಕ್ಷರ ಗಾತ್ರ

ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆ! ಅಭಿವೃದ್ಧಿಯತ್ತ ಒಂದು ದಿಟ್ಟ ಹೆಜ್ಜೆ! ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಕಂಗೊಳಿಸಿದ ಜಾಹೀರಾತು
ಗಳನ್ನೂ, ಮಂತ್ರಿವರ್ಯರ ಮಾತುಗಳ ವರ್ಣನೆಯನ್ನೂ ನೋಡಿದಾಗಿನಿಂದ ಅಭಿವೃದ್ಧಿಯ ಬಗ್ಗೆ ಮತ್ತೆ ಬಹಳ ಪ್ರಶ್ನೆಗಳು ಏಳತೊಡಗಿವೆ. ಸಾರ್ವಜನಿಕವಾಗಿ ಈ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಲೇಬೇಕಾಗಿದೆ.

ಕಲಬುರ್ಗಿಯು ಹೈದರಾಬಾದ್ ಕರ್ನಾಟಕದ (ಈಗ ಕಲ್ಯಾಣ ಕರ್ನಾಟಕ) ಒಂದು ಮುಖ್ಯ ನಗರ. ಹೈದರಾಬಾದ್ ಕರ್ನಾಟಕವೆಂದರೆ ಹಿಂದೆ ಓದಿದ್ದ ನಿಜಾಮರ ಆಡಳಿತವೂ, ನಿಜಾಮರು ಮಾಡಿದ್ದರು ಎನ್ನಲಾದ ದೌರ್ಜನ್ಯಗಳೂ, ಅವರ ಕಂಜೂಸಿತನವೂ ನೆನಪಿನಲ್ಲಿ ಸುಳಿದಾಡುತ್ತವೆ. ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದ ನಿಜಾಮರು ಪಾಕಿಸ್ತಾನಕ್ಕೆ ಸೇರಲು ಹುನ್ನಾರ ನಡೆಸಿದ್ದಾಗಲೇ, ಅಂದಿನ ಗೃಹಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲರು ಅಲ್ಲಿಗೆ ಸ್ವತಂತ್ರ ಭಾರತದ ಸೈನ್ಯವನ್ನು ಕಳುಹಿಸಿ ಸಂಸ್ಥಾನವನ್ನು ವಶಪಡಿಸಿಕೊಂಡು ಭಾರತಕ್ಕೆ ಸೇರಿಸಿದ್ದು ಇತಿಹಾಸ. ತನ್ನ ಆಡಳಿತದಲ್ಲಿ ಇದ್ದಷ್ಟು ಕಾಲ ಕೇವಲ ತನ್ನ ಖಜಾನೆ ತುಂಬುವುದರಲ್ಲಿಯೇ ನಿರತನಾಗಿದ್ದ ದೊರೆ, ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿ
ಸಿದ್ದರಿಂದ, ಒಕ್ಕೂಟದೊಳಗೆ ಸೇರುವ ವೇಳೆಗಾಗಲೇ ಆ ಭಾಗವು ಬಹಳ ಹಿಂದುಳಿದ ಪ್ರದೇಶವೆನಿಸಿಬಿಟ್ಟಿತ್ತು.

ಇಂದು, ಕರ್ನಾಟಕದ ಸಾಮಾಜಿಕ ಅಭಿವೃದ್ಧಿಯ ನಕಾಶೆಯನ್ನು ರೂಪಿಸಿದರೆ, ಮೈಸೂರು ಮಹಾರಾಜರು ಆಳಿದ್ದ ದಕ್ಷಿಣ ಕರ್ನಾಟಕದ ಭಾಗ, ಮಧ್ಯ ಕರ್ನಾಟಕದ ಭಾಗ ಮತ್ತು ನಿಜಾಮರ ಆಡಳಿತವಿದ್ದ ಹೈದರಾಬಾದ್ ಕರ್ನಾಟಕದ ಭಾಗ ಯಾವುದು ಎಂದು ಕರಾರುವಾಕ್ಕಾಗಿ ಗುರುತಿಸಬಹುದು. ಮಾನವಾಭಿವೃದ್ಧಿ ಸೂಚ್ಯಂಕಗಳಾದ ಶಿಕ್ಷಣ, ಆರೋಗ್ಯ, ತಾಯಿಮರಣ, ಶಿಶುಮರಣ, ಗಂಡು– ಹೆಣ್ಣಿನ ಅನುಪಾತ, ಇವೆಲ್ಲದರಲ್ಲಿಯೂ ಈ ಮೂರು ಕರ್ನಾಟಕಗಳು ಬೇರೆ ಬೇರೆಯ ಬಣ್ಣಗಳನ್ನೇ ತೋರಿಸುತ್ತವೆ. ಸಾಮಾಜಿಕ ಅರಿವು, ಜೀವನಮಟ್ಟ ಇವೆಲ್ಲ
ದರಲ್ಲೂ ಈ ವ್ಯತ್ಯಾಸ ಮತ್ತೆ ಮತ್ತೆ ಕಣ್ಣಿಗೆ ರಾಚುತ್ತದೆ. ಬಾಲ್ಯವಿವಾಹ, ದೇವದಾಸಿ ಪದ್ಧತಿಯು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇನ್ನೂ ಜೀವಂತವಾಗಿವೆ. ಅಷ್ಟೇ ಅಲ್ಲ, ತೊಡೆದುಹಾಕಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಗಟ್ಟಿಯಾಗಿವೆ. ದೇವದಾಸಿ ಪದ್ಧತಿಯನ್ನು ನಿಲ್ಲಿಸಿದರೆ ಅಲ್ಲಿ ಹೆಣ್ಣುಮಗಳು ಗುಜ್ಜರ್ ಮದುವೆಯ ರೂಪದಲ್ಲಿ ಬಿಕರಿಯಾಗುತ್ತಾಳೆ, ಇಲ್ಲವೇ ಮುಂಬೈನ ಕೆಂಪುದೀಪಕ್ಕೆ ಸದ್ದಿಲ್ಲದೆ ಮಾರಾಟವಾಗುತ್ತಾಳೆ. ಬಾಲ್ಯ
ವಿವಾಹವನ್ನು ತಡೆದರೆ ರಾತ್ರೋರಾತ್ರಿ ಕತ್ತಲೆಯಲ್ಲಾದರೂ ಮದುವೆ ಮಾಡಿ ಕಳಿಸಿಯಾಗಿರುತ್ತದೆ.

ಹಿಂದುಳಿದ ಜಿಲ್ಲೆ, ತಾಲ್ಲೂಕುಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದನ್ನು ನಂಜುಂಡಪ್ಪ ವರದಿಯು ಅತ್ಯಂತ ನಿಖರವಾಗಿ ಹೇಳುತ್ತದೆ. ಅಭಿವೃದ್ಧಿ ಎಂದರೆ ಮಾನವಾಭಿವೃದ್ಧಿ ಹೊರತು, ಬಹುಮಹಡಿ ಕಟ್ಟಡ, ಮೇಲ್ಸೇತುವೆಗಳಲ್ಲ ಎಂದು ವರದಿ ಸ್ಪಷ್ಟವಾಗಿ ಹೇಳಿದೆ. ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಮುಖ್ಯವಾದುದು ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆ. ಇಲ್ಲಿನ ಮಾನವಾಭಿವೃದ್ಧಿ, ಎಂದರೆ ಆಹಾರ, ಸುರಕ್ಷಿತ ಕುಡಿಯುವ ನೀರು, ಶಿಕ್ಷಣ ಮತ್ತು ಉದ್ಯೋಗಗಳಿಗೆ ಹೆಚ್ಚಿನ ಮೊತ್ತವನ್ನು ತೆಗೆದಿರಿಸಿ, ಅದಕ್ಕೆಂದೇ ವರ್ಷವರ್ಷವೂ ಖರ್ಚು ಮಾಡುತ್ತಾ ಕರ್ನಾಟಕದ ಉಳಿದ ಭಾಗಕ್ಕೆ ಸಮ ಮಾಡಬೇಕೆಂಬುದು ವರದಿಯ ಆಶಯವಾಗಿತ್ತು.

ಆದರೆ ಸರ್ಕಾರಕ್ಕೆ ದೊಡ್ಡ ಬಂಡವಾಳದ, ಹೆಚ್ಚು ಸಿಮೆಂಟಿನ, ಬಹಳಷ್ಟು ನೀರು ಬೇಡುವ ಗುತ್ತಿಗೆ ಕೆಲಸಗಳೇ ಅಭಿವೃದ್ಧಿಯ ಸಂಕೇತಗಳಾಗಿದ್ದು ಅವು ಮಾನವಾಭಿವೃದ್ಧಿಯನ್ನು ಹಿಮ್ಮುಖವಾಗಿ ಎಳೆಯುತ್ತವೆ. ಅಗ್ಗದ ಕೂಲಿಕಾರರನ್ನು ಬೇಡುತ್ತವೆ. ಯಾವುದೇ ಜವಾಬ್ದಾರಿ ಇಲ್ಲದ ಇಂಥ ಕೆಲಸಕ್ಕೆ ಅನಕ್ಷರಸ್ಥ, ಗ್ರಾಮೀಣ ಯುವಜನ ಬಲುಬೇಗ ಆಕರ್ಷಿತರಾಗುತ್ತಾರೆ. ಹಳ್ಳಿ ಬಿಟ್ಟು ಪಟ್ಟಣಕ್ಕೆ ಜಿಗಿಯುತ್ತಾರೆ. ಅನಾರೋಗ್ಯಕರ ವಾತಾವರಣದಲ್ಲಿ ಕೆಲಸದ ಯಾವುದೇ ಭದ್ರತೆ ಇಲ್ಲದೆ, ತಮ್ಮ ಶ್ರಮಕ್ಕೆ ಸರಿಯಾದ ಕೂಲಿಯೂ ಸಿಗುತ್ತಿಲ್ಲವೆಂಬ ಪರಿವೆ ಇಲ್ಲದೆ ದುಡಿಯುತ್ತಾರೆ. ತಮಗಾಗುತ್ತಿರುವ ಶೋಷಣೆಯನ್ನು ಮರೆಯಲು ದುಶ್ಚಟಗಳ ಮೊರೆ ಹೋಗುತ್ತಾರೆ.

ಇಂಥ ಯುವಕನನ್ನು ಮದುವೆಯಾಗಿ ಪಟ್ಟಣ ಸೇರುವ ಎಳೆವಯಸ್ಸಿನ ಬಾಲೆ ಇನ್ನೂ ಹೆಚ್ಚು ಶೋಷಣೆಗೆ ತನ್ನನ್ನು ಒಡ್ಡಿಕೊಳ್ಳುತ್ತಾಳೆ. ಸರಿಯಾದ ಸೂರಿಲ್ಲ, ಸಾಕಷ್ಟು ನೀರಿಲ್ಲ, ಕಾಲು ಚಾಚಲು ಜಾಗವಿಲ್ಲ. ಅಂಥಲ್ಲೇ ಮುಟ್ಟು, ಮೈಲಿಗೆ, ಹೆರಿಗೆಗಳೆಲ್ಲವನ್ನೂ ನಿಭಾಯಿಸಿ
ಕೊಳ್ಳಬೇಕು. ಗಂಡನ ಗಳಿಕೆಯನ್ನೆಲ್ಲ ಕುಡಿತವೇ ನುಂಗಿದಾಗ ಜೀವನವನ್ನು ನಿಭಾಯಿಸಿಕೊಳ್ಳಲು ಆ ಬಡಕಲು ಶರೀರ ಸಿಕ್ಕ ಸಿಕ್ಕ ಕೆಲಸಗಳಿಗೆ ಮುಂದಾಗುತ್ತದೆ. ಅವಳ ಆರೋಗ್ಯ, ಆಹಾರ, ಮಕ್ಕಳ ಶಿಕ್ಷಣ ಎಲ್ಲವನ್ನೂ ಶಹರಕೇಂದ್ರಿತ ಅಭಿವೃದ್ಧಿಯು ನುಂಗಿ ನೊಣೆಯುತ್ತದೆ.

ಬಹುಶಃ ಕಲಬುರ್ಗಿಯ ವಿಮಾನ ನಿಲ್ದಾಣದ ನುಣುಪು ನೆಲಹಾಸು, ಶಿಸ್ತಾದ ರನ್‌ವೇ ಮೇಲೆ ಆಕೆಯ ಗಂಡನ ಬೆವರ ಹನಿಯಿರಬಹುದು. ಫಳಫಳಹೊಳೆಯುವ ಅಲ್ಲಿನ ಟಾಯ್ಲೆಟ್‌ಗಳನ್ನು ಇವಳೇ
ಒರೆಸುತ್ತಿರಬಹುದು. ಆದರೆ ವಿಮಾನ ನಿಲ್ದಾಣಕ್ಕೆ ಹೆಚ್ಚು ಹಣ ಕೊಟ್ಟು ಏರ್‌ಪೋರ್ಟ್‌ ಟ್ಯಾಕ್ಸಿಯಲ್ಲೋ, ದುಬಾರಿ ಬಸ್ಸಿನಲ್ಲೋ ನೀವು ಹೋಗುವಾಗ ಅವಳ ಗುಡಿಸಲು ಕಾಣುವುದಿಲ್ಲ.

ವಿಮಾನ ನಿಲ್ದಾಣದತ್ತ ಮುಖ ಮಾಡಿದವರಿಗೆ ಕಾಣಲಿ, ಕಾಣದಿರಲಿ, ಇವನ್ನೆಲ್ಲ ಸದಾ ಗಮನಿ
ಸುತ್ತಿರುವ ಅಧ್ಯಯನಕಾರರು ಭಾರತವನ್ನು, ಜಗತ್ತನ್ನು ಮತ್ತೆ ಮತ್ತೆ ಎಚ್ಚರಿಸುತ್ತಲೇ ಇದ್ದಾರೆ. ಭಾರತದಲ್ಲಿ ಬಡ ಮಹಿಳೆಯರಿಗೆ, ಅವರಿಂದ ಹುಟ್ಟುವ ಮಕ್ಕಳ ಪೌಷ್ಟಿಕತೆಗೆ ಕೊಡುತ್ತಿರುವ ಆದ್ಯತೆ ಎಷ್ಟು ಎಂಬುದನ್ನು ಈ ಅಧ್ಯಯನಗಳು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಹೇಳಿವೆ. ದೇಶದಲ್ಲಿ ಬರೀ ಶೇ 9.6ರಷ್ಟು ಮಕ್ಕಳಿಗೆ ಅಗತ್ಯವಾದ ಪೌಷ್ಟಿಕ ಆಹಾರ ಸಿಗುತ್ತಿದೆ ಎಂದರೆ, ನಮ್ಮ ಆದ್ಯತೆಯನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಶೇ 37.8ರಷ್ಟು ಇರುವ ಕುಂಠಿತ ಬೆಳವಣಿಗೆಯ ಮಕ್ಕಳು, ಶೇ 20.8ರಷ್ಟಿರುವ ಕಡಿಮೆ ತೂಕದ ಮಕ್ಕಳು ಅಗತ್ಯವಾದ ಎತ್ತರವನ್ನು, ಬೇಕಾದ ತೂಕವನ್ನು ಎಂದಾದರೂ ಪಡೆದಾವೇ?

ನಾಳಿನ ಭಾರತ ಉಜ್ವಲವೆನಿಸಬೇಕಾದರೆ, ದೇಶದ ಭವಿಷ್ಯವೆನಿಸಿದ ನಮ್ಮ ಮಕ್ಕಳು ಪೌಷ್ಟಿಕವಾಗಿ ಬೆಳೆಯ
ಬೇಕೆಂದರೆ, ಹುಟ್ಟಿಸುವ ತಾಯಿ ಪೌಷ್ಟಿಕವಾಗಿರಬೇಕು, ನೆಮ್ಮದಿಯಾಗಿರಬೇಕು. ಅವರ ತಂದೆಗೆ ಸುಭದ್ರವಾದ, ಘನತೆಯ ಉದ್ಯೋಗ ಇರಬೇಕು. ಅವರು ಮಕ್ಕಳಿಗೆ ಉತ್ತಮ ಆಹಾರ ಮತ್ತು ಶಿಕ್ಷಣವನ್ನು ಕೊಡಿಸುವ ಸಾಮರ್ಥ್ಯ ಉಳ್ಳವರಾಗಿರಬೇಕು. ಅಂದಾಗ ಮಾತ್ರ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎನ್ನಬಹುದು. ಅದುಬಿಟ್ಟು ಕೆಲವೇ ಜನರಿಗೆ ಅನುಕೂಲವಾಗುವಂಥ ಹೈವೇಗಳು, ವಿಮಾನ ನಿಲ್ದಾಣಗಳು, ಬುಲೆಟ್ ಟ್ರೇನ್‍ಗಳು ಇವುಗಳನ್ನೇ ಹೆಚ್ಚೆಚ್ಚು ನಿರ್ಮಿಸುತ್ತ ಹೋದರೆ, ನಾಳೆ ಖಾಲಿ ಟಾರ್ ರಸ್ತೆಗಳನ್ನೇ ನೋಡುತ್ತಿರಬೇಕಾದೀತು.

ಪರಿಸರಕ್ಕೆ ಹಾನಿಕಾರಕವಾದ ನಮ್ಮ ಅಭಿವೃದ್ಧಿಯ ಮಾದರಿಯನ್ನೇ ಪ್ರಶ್ನಿಸುತ್ತಿರುವ ಸ್ವೀಡನ್ನಿನ ಗ್ರೇಟಾ ಥನ್‌
ಬರ್ಗ್, ವಿಮಾನ ಪ್ರಯಾಣವನ್ನೇ ಖಂಡಿಸುತ್ತಾಳೆ. ಸ್ವೀಡನ್‌ನಿಂದ ಅಮೆರಿಕಕ್ಕೂ ಅವಳು ಕಡಿಮೆ ಇಂಧನ
ವನ್ನು ವ್ಯಯಿಸುವ ಹಡಗಿನ ಮೂಲಕ ಹೋಗಬಯಸುತ್ತಾಳೆ. ಆದರೆ ನಮ್ಮಲ್ಲಿಂದು ವಿಮಾನ ಏರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವವರೆಲ್ಲ ಪ್ರಯಾಣಕ್ಕೆ ವಿಮಾನಗಳನ್ನೇ ಬಳಸುತ್ತಿದ್ದಾರೆ, ಅವರಿಗೆಲ್ಲ ಏರ್‌ಪೋರ್ಟ್ ಅತಿ ಅವಶ್ಯಕ ಎನಿಸಬಹುದು. ಅದು ಅಭಿವೃದ್ಧಿಯ ಸಂಕೇತವಾಗಿಯೂ ಕಾಣಬಹುದು.

ಆದರೆ ಇಲ್ಲಿ ಕಳವಳಕ್ಕೆ ಕಾರಣವಾಗಿರುವುದು ಒಂದೊಂದು ವಿಮಾನ ನಿಲ್ದಾಣವೂ ಹಿಗ್ಗಿಸುವ ಬಡವ– ಶ್ರೀಮಂತರ ನಡುವಿನ ಕಂದರ. ಇಂದು ಸಮಾಜದ ಹಿತಚಿಂತಕರೆಲ್ಲ ಮತ್ತೆ ಮತ್ತೆ ಎಚ್ಚರಿಸುತ್ತಿದ್ದರೂ ಸರ್ಕಾರಗಳು ಹಿಡಿದಿರುವ ಅಭಿವೃದ್ಧಿಯ ಪಥ ಕೊರೆಯುತ್ತಿರುವ ಕಂದರವು ಅದೆಂಥ ಪ್ರಪಾತವನ್ನು ಸೃಷ್ಟಿಸುವುದೋ! ಉದ್ಯೋಗ ಅರಸಿ ಪಟ್ಟಣದತ್ತ ಗುಳೆ ಬರುತ್ತಿರುವ ಯುವಪಡೆಗಾಗಲೀ ಸಂಸಾರಸ್ಥರಿಗಾಗಲೀ ಯಾವುದೇ ಸಾಮಾಜಿಕ ಸುರಕ್ಷತೆ ಇಲ್ಲ, ಉದ್ಯೋಗದ ಭದ್ರತೆ ಇಲ್ಲ, ಕೈತುಂಬುವ ಸಂಬಳವೂ ಇಲ್ಲ. ಅವರಿಂದ ಹುಟ್ಟುವ ಮಕ್ಕಳಿಗೆ ಸರಿಯಾದ ಶಿಕ್ಷಣ ಅಂತಿರಲಿ, ನೆಟ್ಟಗೆ ಭಾಷೆ, ಗಣಿತದ ಕಲಿಕೆ ಕೂಡ ಕೈಗೆಟಕುವುದಿಲ್ಲ. ಅದೆಂಥ ಭಾರತವನ್ನು ನಿರ್ಮಿಸುತ್ತಿದ್ದೇವೆ ನಾವು? ಇದು ಅಭಿವೃದ್ಧಿಯ ದಾರಿಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT