ಶನಿವಾರ, ಸೆಪ್ಟೆಂಬರ್ 19, 2020
21 °C
ರಾಜಕೀಯ ವಿಶ್ಲೇಷಣೆ

ರಾಜಕೀಯ ವಿಶ್ಲೇಷಣೆ | ಬಿಜೆಪಿ ಹೆಣೆದ ಉರುಳಿನತ್ತ ಓಡುತ್ತಿದ್ದಾರೆಯೇ ಮಮತಾ?

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಳದ ಹೆಸರನ್ನು ‘ಬಾಂಗ್ಲಾ’ ಎಂದು ಬದಲಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬುಧವಾರ (ಇಂದು) ಸ್ಪಷ್ಟಪಡಿಸಿದೆ. ಈ ಮೂಲಕ ಮೋದಿ–ದೀದಿ ಸಂಘರ್ಷ ಮತ್ತೊಂದು ಮಜಲಿಗೆ ಹೊರಳಿದಂತೆ ಆಗಿದೆ. ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಹೆಸರನ್ನು ಬದಲಿಸಬೇಕು ಎಂದು ಕೇಂದ್ರ ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದರು.

‘ರಾಜ್ಯವೊಂದರ ಹೆಸರು ಬದಲಿಸಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು’ ಎಂದು ಕೇಂದ್ರ ಸರ್ಕಾರ ಮಮತಾ ಬ್ಯಾನರ್ಜಿ ಅವರಿಗೆ ಸ್ಪಷ್ಟಪಡಿಸಿದೆ. ಪಶ್ಚಿಮ ಬಂಗಾಳ ವಿಧಾನಸಭೆಯು ಜುಲೈ 26, 2018ರಂದು ರಾಜ್ಯದ ಹೆಸರನ್ನು ‘ಬಾಂಗ್ಲಾ’ ಎಂದು ಬದಲಿಸಬೇಕು ಎಂಬ ನಿರ್ಣಯ ಅಂಗೀಕರಿಸಿತ್ತು. ನಿರ್ಣಯವನ್ನು ಕೇಂದ್ರ ಗೃಹ ಸಚಿವಾಲಯದ ಅನುಮೋದನೆಗಾಗಿ ಕಳಿಸಿತ್ತು.

ಇದನ್ನೂ ಓದಿ: ಬಂಗಾಳದ ಮಮತಾ ಬ್ಯಾನರ್ಜಿ ಹಾದಿಗೆ ಜಾರುತ್ತಿದ್ದಾರೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ

ಸಂಘರ್ಷ ಇದೇ ಮೊದಲಲ್ಲ

ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ಹಲವು ವಿಚಾರಗಳಿಗೆ ಸಂಘರ್ಷಗಳು ನಡೆದಿವೆ. ಈ ಹಿಂದೆ ಸಿಬಿಐ ಶಾರದಾ ಚಿಟ್‌ ಫಂಡ್ ಹಗರಣದಲ್ಲಿ ಕೊಲ್ಕತ್ತಾ ಪೊಲೀಸ್ ಕಮಿಷನರ್ ಆಗಿದ್ದ ರಾಜೀವ್ ಕುಮಾರ್ ವಿಚಾರಣೆಗೆ ಮುಂದಾದಾಗ ಸ್ವತಃ ಮಮತಾ ಬೀದಿಗಿಳಿದು ಪ್ರತಿಭಟಿಸಿದ್ದರು. ಮೋದಿ–ದೀದಿ ನಡುವೆ ಏಟು–ಎದಿರೇಟು ತೀರಾ ಸಾಮಾನ್ಯ ಎಂಬಂತೆ ಆಗಿದೆ.

ಇವತ್ತಿಗೆ (ಜುಲೈ) ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ಜೂನ್ 3ರಂದು ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ನೆಪವಾಗಿಸಿಕೊಂಡು ದೇಶದ ಮೇಲೆ ಹಿಂದಿ ಹೇರಲು ಯತ್ನಿಸಿದ್ದು ನಿಮಗೆ ನೆನಪಿರಬಹುದು. ಅದಾದ ನಂತರ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಂದು ಹೆಚ್ಚು ಸದ್ದಾಗದ ಮತ್ತು ಇಂದು ಗಮನ ಸೆಳೆಯುತ್ತಿರುವ ಸುದ್ದಿ ಎಂದರೆ ಪಶ್ಚಿಮ ಬಂಗಾಳದಲ್ಲಿ ವ್ಯಕ್ತವಾದ ಪ್ರತಿಭಟನೆ. ಅಂದು ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಗಳಿಗೆ ಹಿನ್ನೆಲೆಯಾಗಿ ನಿಂತಿದ್ದು ರಾಜಕೀಯ ಹಿತಾಸಕ್ತಿಗಳು.

ಇದನ್ನೂ ಓದಿ: ಮಮತಾ ವಿನಾಶಕಾರಿ, ಹಗೆ ಸಾಧಿಸುವವರು: ಐಪಿಎಸ್‌ ಅಧಿಕಾರಿ ಆತ್ಮಹತ್ಯೆ ಪತ್ರ ಬಹಿರಂಗ

ಹಿಂದಿ ವಿರೋಧಿ ಪ್ರತಿಭಟನೆ ಕೊಲ್ಕತ್ತಾದಲ್ಲಿಯೂ ಜೋರಾಗಿ ನಡೆಯಿತು. ಇಂಥ ಪ್ರತಿಭಟನೆಗಳಿಗೆ ಒತ್ತಾಸೆಯಾಗಿ ಆಡಳಿತಾರೂಢ ಸರ್ಕಾರವೇ ನಿಂತಿತ್ತು. ಪಶ್ಚಿಮ ಬಂಗಾಳದಲ್ಲಿ, ಅದರಲ್ಲೂ ಮುಖ್ಯವಾಗಿ ಕೊಲ್ಕತ್ತಾದಲ್ಲಿ ಕೇವಲ ಬೆಂಗಾಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರವೇ ಫಲಕಗಳು ಇರಬೇಕು ಎನ್ನುವುದು ಸರ್ಕಾರದ ನಿಲುವು. ಕೊಲ್ಕತ್ತಾದಲ್ಲಿ ಹಿಂದಿ ಮತ್ತು ಉರ್ದು ಫಲಕಗಳು ಅಪಚರಿತವಲ್ಲ. ಮುಸ್ಲಿಮರು ಮತ್ತು ಇತರ ರಾಜ್ಯಗಳಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಮೊದಲಿನಿಂದಲೂ ಈ ಎರಡೂ ಭಾಷೆಯಲ್ಲಿ ಫಲಕಗಳು ಕಾಣಿಸುತ್ತಿದ್ದವು. 

ಆದರೆ ಈಗ ಇವು ಬಂಗಾಲಿ ಅಸ್ಮಿತೆಗೆ ವಿರೋಧಿ ಎಂದು ಅಲ್ಲಿನವರಿಗೆ ಅನ್ನಿಸುತ್ತಿದೆ. ಪಶ್ಚಿಮ ಬಂಗಾಳದ ಈ ಬೆಳವಣಿಗೆಯು 80ರ ದಶಕದಲ್ಲಿ ನಡೆದ ‘ಬಂಗಾಲಿ’ ಚಳವಳಿಯನ್ನು ಹಲವರಿಗೆ ನೆನಪಿಗೆ ತಂದುಕೊಟ್ಟಿದೆ. ಆಗಲೂ ಕೊಲ್ಕತ್ತಾದಲ್ಲಿದ್ದ ಹಿಂದಿ ಮತ್ತು ಇಂಗ್ಲಿಷ್ ಫಲಕಗಳಿಗೆ ಟಾರು ಬಳಿಯಲಾಗಿತ್ತು.

ಇದನ್ನೂ ಓದಿ: ‘ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಆರ್‌ಎಸ್‌ಎಸ್ ಬೆಂಬಲ’ ಮಮತಾ ಬ್ಯಾನರ್ಜಿ ಆರೋಪ

ಹಿಂದಿ ವಿರೋಧಿ ಚಳವಳಿ ಕಾವೇರುವ ಕೆಲವೇ ದಿನಗಳ ಮೊದಲು ಅಂದರೆ ಮೇ 30ರಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೈ ಹಿಂದ್ ವಾಹಿನಿ (ಜೆಎಚ್‌ವಿ) ಮತ್ತು ಮಹಿಳೆಯರಿಗಾಗಿ ಜೈ ಬಂಗಾ ಜನನಿ (ಜೆಬಿಜೆ) ಸಂಘಟನೆಗಳನ್ನು ಆರಂಭಿಸಿದ್ದರು. ಈ ಎರಡೂ ಸಂಘಟನೆಗಳಿಗೆ ಶಕ್ತಿ ತುಂಬುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ಇರುವ ಬೇರುಮಟ್ಟದ ಸಂಪರ್ಕ ವ್ಯವಸ್ಥೆಗೆ ಸಡ್ಡು ಹೊಡೆಯುವುದು ಅವರ ಉದ್ದೇಶ. ಜೆಎಚ್‌ವಿ ಸಂಘಟನೆಗೆ ಅವರ ಸೋದರ ಸುಬ್ರತಾ (ಗಣೇಶ್) ಅಧ್ಯಕ್ಷರಾದರೆ, ಮತ್ತೋರ್ವ ಸೋದರ ಸಮೀರ್ (ಕಾರ್ತಿಕ್) ಸಂಯೋಜಕ.

‘ಈ ಸಂಘಟನೆಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಇವು ರಾಜಕೀಯೇತರ ಸಂಘಟನೆಗಳು’ ಎಂದೇ ಎಲ್ಲರೂ ನಂಬಬೇಕು ಎನ್ನುವುದು ಮಮತಾ ನಿರೀಕ್ಷೆ. ಆದರೆ ಸಂಘಟನೆಯಲ್ಲಿರುವ ಹಲವರು ಮಮತಾ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಹೀಗಿರುವಾಗ ಇದನ್ನು ರಾಜಕೀಯೇತರ ಎಂದುಕೊಳ್ಳುವುದು ಹೇಗೆ?

ಏನು ನಿಮಗೆ ಬಿಜೆಪಿ–ಆರ್‌ಎಸ್‌ಎಸ್ ಸಂಬಂಧ ನೆನಪಾಯಿತೆ? ಆರ್‌ಎಸ್‌ಎಸ್‌ ರಾಜಕೀಯೇತರ ಎಂದು ಹಲವರು ಹಲವು ಹೇಳಿದ್ದು ಮನಸಿಗೆ ಬಂತೆ? ಸ್ವಲ್ಪ ತಾಳಿ.

ದೀದಿ ಆತಂಕಕ್ಕೆ ಕಾರಣಗಳಿವೆ

ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ ದೀದಿಯನ್ನು ಅಕ್ಷರಶಃ ನಡುಗಿಸಿದೆ. ಮಮತಾ ಬ್ಯಾನರ್ಜಿಯ ಶಕ್ತಿಕೇಂದ್ರಗಳು ಎನಿಸಿಕೊಂಡಿದ್ದ ಕ್ಷೇತ್ರಗಳಲ್ಲಿಯೂ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ಜಯಗಳಿಸಿದೆ. ಬಿಜೆಪಿಯ ಮತಗಳಿಕೆ ಪ್ರಮಾಣವೂ (ಶೇ40) ಗಮನಾರ್ಹ ಪ್ರಮಾಣದಲ್ಲಿ ಸುಧಾರಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ತಾವು ಕಂಗಾಲಾಗಿರುವುದನ್ನು ದೀದಿ ಎಲ್ಲರಿಗೂ ಗೊತ್ತಾಗುವಂತೆ ತೋರ್ಪಡಿಸಿಕೊಳ್ಳುತ್ತಿದ್ದಾರೆ.

ಮೇ 30ರಂದು ಟಿಎಂಸಿ ಆಯೋಜಿಸಿದ್ದ ಧರಣಿಯಲ್ಲಿ ಪಾಲ್ಗೊಳ್ಳಲು ನೈಹಾತಿಗೆ ಹೊರಟಿದ್ದರು ಮಮತಾ ಬ್ಯಾನರ್ಜಿ. ದೀದಿ ಕಾರು ಕಂಡ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಕೆಂಡಾಮಂಡಲರಾಗಿ ಕಾರಿನಿಂದ ಇಳಿದ ಮಮತಾ, ತಾಳ್ಮೆ ಕಳೆದುಕೊಂಡು, ಕಾರಿನಿಂದ ಇಳಿದು ಕಾರ್ಯಕರ್ತರ ಮೇಲೆ ಹರಿಹಾಯ್ದಿದ್ದರು. ಈ ದೃಶ್ಯದ ವಿಡಿಯೊ ತುಣುಕು ವೈರಲ್ ಆಗಿತ್ತು. ಈ ಘಟನೆಯ ನಂತರ ಎಲ್ಲಿ ಮಮತಾ ಕಾರು ಕಂಡರೂ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿ ರೇಗಿಸುತ್ತಿದ್ದರು.

ಇದನ್ನೂ ಓದಿ: ಈಗ ಮಮತಾ ಬ್ಯಾನರ್ಜಿ ಮಾತ್ರ ಮಹಿಳಾ ಮುಖ್ಯಮಂತ್ರಿ

ಪಶ್ಚಿಮ ಬಂಗಾಳದ ಗ್ರಾಮೀಣ ಭಾಗದಲ್ಲಿ ವನವಾಸಿ ಕಲ್ಯಾಣ ಪರಿಷತ್‌ ಮತ್ತು ಇತರ ಪರಿವಾರ ಸಂಘಟನೆಗಳ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಹಿಂದುತ್ವದ ವಿಚಾರಧಾರೆ ಮುಂದಿಟ್ಟು ದೊಡ್ಡ ಮಟ್ಟದಲ್ಲಿ ಬಿಜೆಪಿ ಮತಬ್ಯಾಂಕ್ ವಿಸ್ತರಿಸುತ್ತಿದೆ. ಇದನ್ನು ಎದುರಿಸಲು ಮಮತಾ ಬಂಗಾಳಿ ಅಸ್ಮಿತೆಯ ಪ್ರಶ್ನೆ ಮುಂದಿಡುತ್ತಿದ್ದಾರೆ. ಈ ಮೂಲಕ ತಮ್ಮ ಮತಬ್ಯಾಂಕ್ ಕಾಪಾಡಿಕೊಳ್ಳಬಹುದು ಎನ್ನುವುದು ಅವರ ನಿರೀಕ್ಷೆ. ‘ಬಂಗಾಳಿಯಾನಾ’ ಪದವನ್ನು ಮುನ್ನೆಲೆಗೆ ತರುವ ಮೂಲಕ ಪಶ್ಚಿಮ ಬಂಗಾಳದಲ್ಲಿರುವ 4.2 ಕೋಟಿ ಬೆಂಗಾಲಿ ಮಾತನಾಡುವ ಹಿಂದೂ ಮತಗಳನ್ನು ಕ್ರೋಡೀಕರಿಸಲು ಮಮತಾ ಶ್ರಮಿಸುತ್ತಿದ್ದಾರೆ.

ಬಿಜೆಪಿ ತನ್ನ ಕಾರ್ಯಕ್ರಮಗಳಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳನ್ನು ಮೊಳಗಿಸಿದರೆ, ಅದಕ್ಕೆ ಪ್ರತಿಯಾಗಿ ಮಮತಾ ‘ಜೈ ಬಾಂಗ್ಲಾ’ ಎನ್ನುತ್ತಾರೆ. ‘ಬಿಜೆಪಿಯು ಹಿಂದಿ ಭಾಷಿಕರ ಪಕ್ಷ’ ಎನ್ನುವುದು ಮಮತಾ ವ್ಯಾಖ್ಯಾನ. ‘ಬಿಜೆಪಿಯ ಮುಂಚೂಣಿ ನಾಯಕರಿಗೆ ಬಂಗಾಳದ ಇತಿಹಾಸ, ಸಂಸ್ಕೃತಿ, ಭಾಷೆ, ಆಹಾರ ಮತ್ತು ಉಡುಪಿನ ಸರಿಯಾದ ಪರಿಚಯವಿಲ್ಲ’ ಎನ್ನುವುದು ಮಮತಾ ಭಾವನೆ. ಇದನ್ನು ಜನರಲ್ಲಿ ಮನಗಾಣಿಸಬೇಕು ಮತ್ತು ಬಂಗಾಳದ ಸಂಸ್ಕೃತಿ ರಕ್ಷಣೆ ಟಿಎಂಸಿಯಿಂದ ಮಾತ್ರ ಸಾಧ್ಯ ಎನ್ನುವುದನ್ನು ಸಾರಿ ಹೇಳಬೇಕು ಎನ್ನುವ ಕಾರಣಕ್ಕೆ ತಮ್ಮ ಸಂಘಟನೆಯ ಯುವತಿಯರಿಗೆ ಗಾಢ ಹಸಿರು ಅಂಚಿನ ಸೀರೆ ಮತ್ತು ಪುರುಷರಿಗೆ ಕುರ್ತಾ ಪೈಜಾಮ ಧರಿಸಲು ಮಮತಾ ಹೇಳುತ್ತಿದ್ದಾರೆ.

ಮಮತಾ ತಂತ್ರ ವರ್ಕೌಟ್ ಆಗುತ್ತಾ?

ಬಿಜೆಪಿ ಎದುರಿಸಲು ಮಮತಾ ಬಂಗಾಳಿ ಅಸ್ಮಿತೆಯ ತಂತ್ರ ಹೆಣೆಯುತ್ತಿದ್ದಾರೆ. ‘ಮಮತಾ ಹೀಗೆ ಮಾಡಲಿ ಎನ್ನುವುದೂ ಬಿಜೆಪಿಯ ತಂತ್ರ’ ಎನ್ನುವ ವಿಶ್ಲೇಷಣೆಗಳೂ ಚಾಲ್ತಿಯಲ್ಲಿವೆ. ಆನೆಯನ್ನು ನದಿಗೆ ಎಳೆಯಲು ಯತ್ನಿಸುವ ಮೊಸಳೆ, ಮೊಸಳೆಯನ್ನು ಕಾಡಿಗೆ ಎಳೆಯಲು ಯತ್ನಿಸುವ ಆನೆಯ ಪ್ರಸಿದ್ಧ ಕಥೆಯೊಂದು ಇದೆ. ಆನೆಗೆ ಕಾಡಿನಲ್ಲಿ ಶಕ್ತಿ ಹೆಚ್ಚು, ಮೊಸಳಗೆ ನದಿಯ ನೀರಿನಲ್ಲಿ ಶಕ್ತಿ ಹೆಚ್ಚು. ಯುದ್ಧ ಎಲ್ಲಿ ನಡೆಯುತ್ತದೆ ಎನ್ನುವುದು ಗೆಲುವು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೋದಿ vs ದೀದಿ ಸಂಘರ್ಷವನ್ನೂ ಈ ಕಥೆಯ ಹಿನ್ನೆಲೆಯಲ್ಲಿಯೇ ನಾವು ಅರ್ಥ ಮಾಡಿಕೊಳ್ಳಬೇಕು. ತಳಮಟ್ಟದ ಸಂಘಟನೆ, ಹಿಂದುತ್ವ, ರಾಷ್ಟ್ರೀಯತೆ ಉದ್ದೀಪಿಸುವ ರಾಜಕಾರಣದಲ್ಲಿ ಪಳಗಿರುವ ಬಿಜೆಪಿ ಮಮತಾ ಅವರನ್ನು ಇದೇ ಹಾದಿಗೆ ಎಳೆಯುತ್ತಿದೆ. ಬಿಜೆಪಿಯ ಹಾದಿಯಲ್ಲಿಯೇ ಸಾಗಿ ಅದನ್ನು ಮಣಿಸಬೇಕು ಎಂದುಕೊಂಡಿರುವ ಮಮತಾ, ಆರ್‌ಎಸ್‌ಎಸ್‌ಗೆ ಪ್ರತಿಯಾಗಿ ಜೈ ಹಿಂದ್ ವಾಹಿನಿ, ಜೈ ಬಂಗಾ ಜನನಿ ಸಂಘಟನೆಗಳನ್ನು ಆರಂಭಿಸಿದ್ದಾರೆ. ಹಿಂದುತ್ವಕ್ಕೆ ಪ್ರತಿಯಾಗಿ ಬಂಗಾಳಿ ಅಸ್ಮಿತೆಯನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿದ್ದಾರೆ. ಬಿಜೆಪಿಯ ಜೈಶ್ರೀರಾಮ್‌ಗೆ ಪ್ರತಿಯಾಗಿ ಜೈಬಾಂಗ್ಲಾ ಮೊಳಗಿಸಲು ಶುರು ಮಾಡಿದ್ದಾರೆ. 

‘ನೋಡಿ ಇವರಿಗೆ ಜೈಬಾಂಗ್ಲಾ ಅನ್ನಬೇಕು ಎಂಬುದು ಅರಿವಾಗಲು ಬಿಜೆಪಿಯೇ ಬೇಕಾಯ್ತು’ ಎಂದು ಇದೀಗ ಬಿಜೆಪಿ ಪ್ರಚಾರ ಮಾಡುತ್ತಿದೆ. ಬಂಗಾಳಿ ಅಸ್ಮಿತೆಯನ್ನ ಬಡಿದೆಬ್ಬಿಸುವ ದೀದಿ ಯತ್ನವು ಹಿಂದುತ್ವ ರಾಜಕಾರಣದಲ್ಲಿ ಪಳಗಿರುವ ಬಿಜೆಪಿಯ ಎದುರು ಮಕ್ಕಳಾಟದಂತೆ ಕಾಣಿಸುತ್ತಿದೆ.

ಇದನ್ನೂ ಓದಿ: ‘ಮಮತಾ ದೀದಿ ಪ್ರತಿ ವರ್ಷ ನನಗೆ ಕುರ್ತಾ ಉಡುಗೊರೆ ನೀಡುತ್ತಾರೆ’ ನರೇಂದ್ರ ಮೋದಿ

‘ಇಂಥ ಕ್ರಮಗಳ ಮೂಲಕ ಮಮತಾ ಬಿಜೆಪಿ ತೋಡಿರುವ ಖೆಡ್ಡಾಕ್ಕೆ ಬೀಳುತ್ತಿದ್ದಾರೆ’ ಎನ್ನುವುದು ರವೀಂದ್ರ ಭಾರತಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ವಿಶ್ವನಾಥ ಚಕ್ರವರ್ತಿ ಅವರ ವಿಶ್ಲೇಷಣೆ (ಇಂಡಿಯಾ ಟುಡೆ, ಜೂನ್ 14).

‘ಜೈ ಬಂಗಾ ಜನನಿ ಮತ್ತು ಜೈ ಹಿಂದ್ ವಾಹಿನಿಯ ಮೂಲಕ ಆರ್‌ಎಸ್‌ಎಸ್‌ ಮೇಲೆ ಮೇಲುಗೈ ಸಾಧಿಸುವ ಅವರ ಪ್ರಯತ್ನ ಎಷ್ಟರಮಟ್ಟಿಗೆ ಕೈಗೂಡಲಿದೆ ಎನ್ನುವುದು ಸದ್ಯಕ್ಕೆ ಹೇಳಲು ಆಗುವುದಿಲ್ಲ. ಆರ್‌ಎಸ್‌ಎಸ್‌ಗೆ ನಿಷ್ಠ ಕಾರ್ಯಕರ್ತರ ಪಡೆ ಇದೆ. ಅದರ ಸಂಪರ್ಕ ವ್ಯವಸ್ಥೆಯನ್ನು ಬೇರೊಂದು ಸಂಘಟನೆಯ ಜೊತೆಗೆ ಹೋಲಿಸಲು ಆಗುವುದಿಲ್ಲ. ಬಂಗಾಳಿ ಅಸ್ಮಿತೆಯನ್ನು ಬಡಿದೆಬ್ಬಿಸುವ ಮೂಲಕ ಹಿಂದೂಗಳ ಮತ ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿರುವ ಮಮತಾ ಅವರಿಗೆ ಇದೇ ವೇಳೆ ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟ ಶೇ28ರಷ್ಟಿರುವ ಮತ್ತು ಬಹುಕಾಲದಿಂದ ತಮಗೆ ನಿಷ್ಠರಾಗಿರುವ ಮುಸ್ಲಿಮ್ ಮತಬ್ಯಾಂಕ್ ಕಳೆದುಕೊಳ್ಳುವ ಅಪಾಯ ಅರ್ಥವಾದಂತೆ ಕಾಣುತ್ತಿಲ್ಲ’ ಎನ್ನುತ್ತಾ ವಿಶ್ವನಾಥ ಚಕ್ರವರ್ತಿ.

ಇನ್ನೊಂದೆಡೆ ಪಶ್ಚಿಮ ಬಂಗಾಳದಲ್ಲಿ ಹಿಂದೂ ಮತ ಬ್ಯಾಂಕ್ ಕ್ರೋಡೀಕರಿಸಿಕೊಳ್ಳಲು ಇದೀಗ ಬಿಜೆಪಿ ರಾಷ್ಟ್ರೀಯ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ಕಾಯ್ದೆಯ ವಿಚಾರವನ್ನು ಬಿಜೆಪಿ ಮುನ್ನೆಲೆಗೆ ತಂದಿದೆ.

ಪಶ್ಚಿಮ ಬಂಗಾಳದಲ್ಲಿ 2021ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಆನೆ–ಮೊಸಳೆ ಆಟ ನಿರಂತರ ನಡೆಯುತ್ತಲೇ ಇರುತ್ತದೆ. ಇದೀಗ ಈ ಆಟಕ್ಕೆ ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ಎನ್ನುವ ರಿಂಗ್‌ ಮಾಸ್ಟರ್ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿಯತ್ತ ಮಮತಾ ಬ್ಯಾನರ್ಜಿ ಗೂಗ್ಲಿ ಹಾಕ್ತಾರಾ? ಕಾದು ನೋಡೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು