ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಚ್ಚಿ ‘ಹುಚ್ಚ’ರಾದ ಸಿನಿಮಾ ಮಂದಿ

Last Updated 16 ಫೆಬ್ರುವರಿ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕಲಾತ್ಮಕ ಮತ್ತು ಪ್ರಾಯೋಗಿಕ ಸಿನಿಮಾಗಳ ದಿಗ್ಗಜ ಅವರು. ಒಳ್ಳೆಯ ಸಾಹಿತಿಯೂ ಹೌದು. ಅವರು ಸಿನಿಮಾ ಮಾಡಿದರೆ ಅದು ಹತ್ತಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವುದು, ಪ್ರಶಸ್ತಿಗಳನ್ನು ಬಾಚಿಕೊಳ್ಳುವುದೇ ಅವರ ಹೆಗ್ಗಳಿಕೆ. ಅಂಥ ಅಗ್ರ ನಿರ್ಮಾಪಕ–ನಿರ್ದೇಶಕ, ಸಾಲಗಾರರ ಕಾಟದಿಂದ ಪಾರಾಗಲು ಒಮ್ಮೆ ಮನೆಯಲ್ಲೇ ಹುಚ್ಚನಂತೆ ನಟಿಸಿದ್ದನ್ನು ಸ್ಮರಿಸಿಕೊಂಡು ‘ಚಂದನವನ’ದ ಕೆಲವು ಹಿರಿಯರು ಈಗಲೂ ನಗುತ್ತಾರೆ. ತಮ್ಮ ಮನೆ–ಮಠ ರಕ್ಷಿಸಿಕೊಳ್ಳುವ ಸಲುವಾಗಿ ಹಾಗೆ ನಟಿಸುವಂಥ ಅನಿವಾರ್ಯ ಆ ನಿರ್ಮಾಪಕರಿಗೆ ಸೃಷ್ಟಿಸಿದ್ದು ಫೈನಾನ್ಸ್‌ ಸಂಸ್ಥೆಯವರು.

ಫೈನಾನ್ಸ್‌ ಸಂಸ್ಥೆಯೊಂದರಿಂದ ದೊಡ್ಡ ಮೊತ್ತದ ಹಣ ಪಡೆದು ಅವರು ಕಲಾತ್ಮಕ ಸಿನಿಮಾ ನಿರ್ಮಿಸಿದ್ದರು. ಆ ಸಿನಿಮಾ ಹಣ ತಂದುಕೊಡಲಿಲ್ಲ. ಫೈನಾನ್ಸ್‌ ಸಂಸ್ಥೆಯವರು ಮನೆ ಬಾಗಿಲಿಗೆ ಬರುತ್ತಾರೆ ಎಂಬುದು ಖಚಿತವಾಗುತ್ತಿದ್ದಂತೆ, ಮನೆಯವರೊಂದಿಗೆ ಸೇರಿ ಒಂದು ನಾಟಕವಾಡಿದರು. ಉಟ್ಟ ಬಟ್ಟೆಯನ್ನೆಲ್ಲ ಬಿಚ್ಚಿ, ಕೊಠಡಿಯೊಳಗೆ ಕುಳಿತು ಒಬ್ಬರೇ ಮಾತನಾಡುತ್ತಾ, ಏತ್ತೆತ್ತಲೋ ನೋಡುತ್ತಾ ಹುಚ್ಚನಂತೆ ಅಭಿನಯಿಸಿದರು. ‘ಸಿನಿಮಾದಲ್ಲಿ ಹಣ ಕಳೆದುಕೊಂಡಿದ್ದರಿಂದ ಅವರಿಗೆ ಹುಚ್ಚು ಹಿಡಿದಿದೆ’ ಎಂದು ಮನೆಯವರು ಸುದ್ದಿ ಹಬ್ಬಿಸಿದರು. ಮನೆಗೆ ಬಂದಿದ್ದ ಫೈನಾನ್ಸ್‌ ಸಂಸ್ಥೆಯರಿಗೂ ಈ ಬೆಳವಣಿಗೆ ಗಾಬರಿ ಹುಟ್ಟಿಸಿತ್ತು. ಬಂದ ದಾರಿಗೆ ಸುಂಕವಿಲ್ಲವೆಂದು ಅವರು ವಾಪಸಾದರು. ರಾಷ್ಟ್ರ, ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದ ಸಾಹಿತಿ– ನಿರ್ದೇಶಕ ಆಗಿದ್ದರಿಂದ ಅವರು ಹಾಗೆ ಪಾರಾದರು. ಅಂಥ ಭಾಗ್ಯ ಚಿತ್ರರಂಗದ ಎಲ್ಲ ನಿರ್ಮಾಪಕರು, ನಿರ್ದೇಶಕರಿಗೆ ಇಲ್ಲ. ಅದೆಷ್ಟೋ ನಿರ್ಮಾಪಕರು ಮೀಟರ್‌ ಬಡ್ಡಿ ದಂಧೆಯ ಬಲೆಗೆ ಸಿಕ್ಕು ಮನೆಮಠ ಮಾರಿ ಬೀದಿಗೆ ಬಂದಿದ್ದನ್ನು, ಅಕ್ಷರಶಃ ಭಿಕ್ಷುಕರಾದದ್ದನ್ನು ಗಾಂಧಿನಗರ ಕಣ್ಣಾರೆ ಕಂಡಿದೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗಕ್ಕೆ ಇಂಥ ಫೈನಾನ್ಸರ್‌ಗಳ ಮೂಲಕವೇ ಹಣ ಬರಬೇಕಿತ್ತು. ಇನ್ನೇನು ಚಿತ್ರ ಬಿಡುಗಡೆ ಆಗಬೇಕು ಎಂದಾಗ ಇಂಥ ಫೈನಾನ್ಸರ್‌ಗಳು ನಿರ್ಮಾಪಕರ ಕತ್ತು ಹಿಡಿದು ಹಣ ವಸೂಲಿಗೆ ಮುಂದಾಗುತ್ತಿದ್ದರು. ‘ಚಿತ್ರದ ಫೈನಲ್‌ ಪ್ರಿಂಟ್‌ ಕೊಡಬೇಕಾದರೆ ಫೈನಾನ್ಸರ್‌ಗಳಿಂದ ಪತ್ರ ತರಬೇಕು’ ಎಂದು ಸ್ಟುಡಿಯೊದವರು ನಿರ್ಮಾಪಕರಿಗೆ ತಾಕೀತು ಮಾಡಿದ್ದೂ ಇದೆ. ಇಂಥ ಸಾಲಕ್ಕೆ ಶೇ 25 ರಿಂದ ಶೇ 30ರಷ್ಟು ಬಡ್ಡಿ ವಿಧಿಸುತ್ತಿದ್ದರು. ಮನೆ ಮಾರಿಯಾದರೂ ಹಣ ಸಂದಾಯ ಮಾಡಿದವರು, ಚಿತ್ರ ಗೆದ್ದರೆ ತಾವೂ ಗೆಲ್ಲುತ್ತಾರೆ. ಬಿದ್ದರೆ ಬೀದಿಗೆ ಬರುತ್ತಾರೆ. ಅದು ಕನ್ನಡ ಚಿತ್ರೋದ್ಯಮದ ಒಂದು ಕಾಲಘಟ್ಟ.

ಆನಂತರದ ಘಟ್ಟದಲ್ಲಿ ಕೆಲವು ಹಿರಿಯ ನಿರ್ಮಾಪಕರು ಹೈದರಾಬಾದ್‌ನಿಂದ ಕಡಿಮೆ ಬಡ್ಡಿಗೆ ಹಣ ತರಲು ಆರಂಭಿಸಿದರು. ಇನ್ನೂ ಕೆಲವರಿಗೆ ಮುಂಬೈ ಮೂಲದಿಂದ ಹಣ ಬರುತ್ತಿತ್ತು. ಈ ಮೂಲಗಳಿಂದ ಹಣ ಪಡೆದವರೂ ಬರ್ಬಾದ್‌ ಆದದ್ದು ಇದೆ. ಆದರೆ ಈಗ ಈ ಬಡ್ಡಿ ದಂಧೆ ಅಸ್ತಿತ್ವ ಕಳೆದುಕೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಒಬ್ಬ ನಿರ್ಮಾಪಕರು ಹೇಳುತ್ತಾರೆ.

ಈಗ ಚಿತ್ರೋದ್ಯಮ ಇನ್ನೊಂದು ಕಾಲಘಟ್ಟಕ್ಕೆ ಬಂದಿದೆ. ಉದ್ಯಮಿಗಳು, ರಿಯಲ್‌ ಎಸ್ಟೇಟ್‌ ಕುಳಗಳು ಚಿತ್ರ ನಿರ್ಮಿಸಲು ಆರಂಭಿಸಿದ್ದಾರೆ. ಬೇರೆಯವರಿಂದ ಸಾಲ ಪಡೆದು ಚಿತ್ರ ನಿರ್ಮಿಸುವ ದರ್ದು ಇವರಿಗಿಲ್ಲ. ಚಿತ್ರ ತೋಪೆದ್ದರೂ ಬೀದಿಗೆ ಬರುವಂಥ ಕುಳಗಳಲ್ಲ ಇವು.

ವಿತರಕರ ಮಧ್ಯಸ್ಥಿಕೆ ಇಲ್ಲದೆ, ನೇರವಾಗಿ ಮಲ್ಟಿಪ್ಲೆಕ್ಸ್‌ಗಳ ಜೊತೆ ವ್ಯವಹಾರ ಮಾಡುವಂಥ ನಿರ್ಮಾಪಕರ ಇನ್ನೊಂದು ವರ್ಗವೂ ಇದೆ. ಇಂಥವರು ಚಿತ್ರವನ್ನು ಮಲ್ಟಿಪ್ಲೆಕ್ಸ್‌ಗಳಿಗೆ ಕೊಟ್ಟು, ಬಂದ ಹಣದಲ್ಲಿ ಶೇ 50ರಷ್ಟು ಪಾಲು ಪಡೆಯುತ್ತಾರೆ. ಇಂದು ನಡೆದ ಪ್ರದರ್ಶನದ ಹಣವು ನಾಳೆ ಬೆಳಿಗ್ಗೆಯಾಗುವುದರೊಳಗೆ ನಿರ್ಮಾಪಕರ ಕೈಸೇರುತ್ತದೆ. ಆದ್ದರಿಂದ ಮೀಟರ್‌ ಬಡ್ಡಿ ದಂಧೆ ಶೇ 99ರಷ್ಟು ನಿಯಂತ್ರಣಗೊಂಡಿದೆ ಎನ್ನುತ್ತಾರೆ ಈಗಿನ ನಿರ್ಮಾಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT