ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಾ ಅವಕಾಶ: ದ್ವಂದ್ವ ಯಾಕೆ?

ಒಂದೆಡೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಾ, ಮತ್ತೊಂದೆಡೆ ನೋಟಾಗೆ ಅವಕಾಶ ಕಲ್ಪಿಸಿರುವ ಕ್ರಮ ಮತದಾರರಲ್ಲಿ ಗೊಂದಲ ಮೂಡಿಸುತ್ತದೆ
Last Updated 14 ಏಪ್ರಿಲ್ 2019, 20:43 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಇದೇ 18ರಂದು ನಡೆಯಲಿದೆ. ತಮ್ಮ ಮತಕ್ಕೆ ಯಾರು ಅರ್ಹರು ಎಂದು ನಿರ್ಧಾರ ಕೈಗೊಳ್ಳಲು ಜನರಿಗೆ ಇದು ಸೂಕ್ತ ಸಮಯ. ಆದರೆ, ತಮ್ಮ ಮತಕ್ಕೆ ಯಾರೂ ಅರ್ಹರಲ್ಲ ಎಂದು ಅನ್ನಿಸಿದರೆ ಅಂತಹವರು ‘ನೋಟಾ’ ಒತ್ತುವ ಅವಕಾಶವನ್ನು ಚುನಾವಣಾ ಆಯೋಗ ಮಾಡಿಕೊಟ್ಟಿದೆ. ಇದು ಒಂದು ರೀತಿಯಲ್ಲಿ ಮತದಾರರ ಸಾಕ್ಷಿಪ್ರಜ್ಞೆಯನ್ನು ಕೆಣಕುವಂತಿದೆ.

ಅಭ್ಯರ್ಥಿಗಳ ಕುರಿತಂತೆ ಮತದಾರರ ನಿರೀಕ್ಷೆ ವಿಪುಲ. ತಾವು ಬಯಸುವ ಅಭ್ಯರ್ಥಿ ಮೊದಲಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವವರಾಗಿ ಇರಬೇಕು, ಕೈಬಾಯಿ ಸ್ವಚ್ಛವಾಗಿ ಇಟ್ಟುಕೊಂಡಿರಬೇಕು, ಅವರ ನಡತೆ ಸರಿಯಾಗಿ ಇರಬೇಕು, ತನ್ನ ಕ್ಷೇತ್ರದ ಅಭಿವೃದ್ಧಿಗೆ ಮನಸ್ಸು ಕೊಟ್ಟು ಕೆಲಸ ಮಾಡಬೇಕು, ಸಾರ್ವಜನಿಕರಿಗೆ ನೇರವಾಗಿ ಸಿಗುವಂತೆ ಇರಬೇಕು, ಕಮಿಷನ್‍ ರಹಿತವಾಗಿ ಸಾರ್ವಜನಿಕರ ಕೆಲಸ ಮಾಡಿಕೊಡುವವರು ಆಗಿರಬೇಕು ಎಂಬಿತ್ಯಾದಿ ನೂರೆಂಟು ಅಪೇಕ್ಷೆಗಳು ಅಭ್ಯರ್ಥಿಗಳ ಬಗೆಗೆ ಮತದಾರರಿಗೆ ಇವೆ. ಅದರಲ್ಲೂ ಪ್ರಜ್ಞಾವಂತ ಮತದಾರರಿಗೆ ಇಂಥ ಆಕಾಂಕ್ಷೆಗಳು ಬಹಳ. ಆದರೆ ಇಂಥ ಎಲ್ಲ ನಿರೀಕ್ಷೆಗಳನ್ನೂ ಸಾಕಾರಗೊಳಿಸುವಂತಹ ಅಭ್ಯರ್ಥಿಗಳು ಎಲ್ಲೆಡೆ ಸ್ಪರ್ಧಾಕಣದಲ್ಲಿ ಇರುವರೇ ಎಂಬ ಸಂದೇಹ ಮತದಾರರನ್ನು ಸಹಜವಾಗಿಯೇ ಕಾಡುತ್ತದೆ.

ರಾಜ್ಯದ ಎಲ್ಲ ಮತಕ್ಷೇತ್ರಗಳಲ್ಲಿ ಇರುವ ಉಮೇದುವಾರರನ್ನು, ಅವರ ಕಾರ್ಯವೈಖರಿ, ಚರಿತ್ರೆಯನ್ನು ನೋಡಿದಾಗ, ಬೆರಳೆಣಿಕೆಯ ಕೆಲವರನ್ನು ಹೊರತುಪಡಿಸಿದರೆ ಇನ್ನುಳಿದವರು ಮತದಾರರ ನಿರೀಕ್ಷೆಗೆ ನಿಲುಕುತ್ತಿಲ್ಲ ಎಂದೆನಿಸುತ್ತದೆ. ವಸ್ತುಸ್ಥಿತಿ ಹೀಗಿರುವಾಗ, ತಮ್ಮ ಅಪೇಕ್ಷೆಗೆ ಸೂಕ್ತವಾದ ಅಭ್ಯರ್ಥಿ ಯಾರೂ ಇಲ್ಲವೆಂದು ಬಹಳಷ್ಟು ಪ್ರಜ್ಞಾವಂತ ಮತದಾರರು ನೋಟಾದ ಮೊರೆ ಹೋದರೆ ಚುನಾವಣೆಯ ಬಹುಮುಖ್ಯ ಉದ್ದೇಶದ ಗತಿ ಏನಾದೀತು ಎಂಬ ಬಗ್ಗೆಯೂ ಚಿಂತಿಸಬೇಕಾಗುತ್ತದೆ.

‘ಮತದಾನ ಪವಿತ್ರವಾದ ಕಾರ್ಯ, ಮತ ನಿಮ್ಮ ಹಕ್ಕು, ಅದನ್ನು ಚಲಾಯಿಸಿ’ ಎಂದು ಚುನಾವಣಾ ಆಯೋಗ ಒಂದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಇದರ ಜೊತೆಗೆ, ಮತದಾನಕ್ಕೆ ಅರ್ಹರಾದವರು ಯಾರೂ ಕಣದಲ್ಲಿ ಇರದಿದ್ದರೆ ನೋಟಾ ಗುಂಡಿ ಒತ್ತುವ ಅವಕಾಶವನ್ನೂ ಕಲ್ಪಿಸಿದೆ. ಆಯೋಗದ ಇಂತಹ ಕ್ರಮ ವಿಪರ್ಯಾಸವಲ್ಲದೆ ಮತ್ತೇನು? ಇದು ಮತದಾರರಲ್ಲಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ದ್ವಂದ್ವ ಭಾವನೆಯನ್ನು ಹುಟ್ಟುಹಾಕುತ್ತದೆ.

ಇಂತಹ ವ್ಯತಿರಿಕ್ತ ಸಂದೇಶಗಳನ್ನು ಮತದಾರರಿಗೆ ನೀಡುವುದರ ಹಿಂದಿನ ಉದ್ದೇಶವಾದರೂ ಏನು? ಇದು ಪ್ರಜಾಪ್ರಭುತ್ವದ ಬಗ್ಗೆ ಮತದಾರರಲ್ಲಿ ಯಾವ ರೀತಿಯ ಅಭಿಪ್ರಾಯವನ್ನು ಉಂಟು ಮಾಡಬಹುದು? ಮತದಾರರಿಗೆ ಯಾವ ಬಗೆಯ ಸಂದೇಶ ನೀಡಬಹುದು? ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿರುವ ಇಂತಹ ಪ್ರಶ್ನೆಗಳಿಗೆ ಚುನಾವಣಾ ಆಯೋಗವೇ ಉತ್ತರ ನೀಡಬೇಕು. ಗೊಂದಲಗಳನ್ನು ಪರಿಹರಿಸಬೇಕು.

ಹೆಚ್ಚು ಜನರು ನೋಟಾ ಮೊರೆ ಹೋದರೆ, ಪ್ರಜೆಗಳ ಇಂತಹ ನಿಲುವು ಪ್ರಜಾಪ್ರಭುತ್ವದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬ ಪ್ರಶ್ನೆ ಸಹ ಮೂಡುತ್ತದೆ. ಅಂತೆಯೇ ನೋಟಾದ ಬದಲು ಸೂಕ್ತ ಅಭ್ಯರ್ಥಿಯ ಆಯ್ಕೆಯೇ ಸರಿ ಎನ್ನಬೇಕಾಗುತ್ತದೆ. ಮತದಾರರ ಎಲ್ಲ ಅಪೇಕ್ಷೆಗಳಿಗೆ ನಿಲುಕುವ ಅಭ್ಯರ್ಥಿಗಳು ಕಣದಲ್ಲಿ ಇಲ್ಲದೇ ಇರಬಹುದು. ಆದರೆ ಕೆಲವು ಅಥವಾ ಒಂದೆರಡು ಅಪೇಕ್ಷೆಗಳಿಗೆ ನಿಲುಕುವ ಉಮೇದುವಾರರಾದರೂ ಕಣದಲ್ಲಿ ಸಿಕ್ಕೇ ಸಿಗುತ್ತಾರೆ. ಅಂತಹವರಲ್ಲಿಯೇ ತಮಗೆ ಸೂಕ್ತ ಎನಿಸಿದ ಒಬ್ಬರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಮತದಾನ ಮಾಡುವುದೇ ಯೋಗ್ಯ ನಿರ್ಣಯ ಆಗಬಹುದು.

ನೋಟಾಕ್ಕೆ ಮತ ನೀಡಿ, ಅದನ್ನು ರದ್ದಾದ ಕಸದ ಬುಟ್ಟಿಗೆ ಸೇರಿಸುವುದಕ್ಕಿಂತ, ಕುರುಡರಲ್ಲಿ ಮೆಳ್ಳೆಗಣ್ಣಿನವ ಶ್ರೇಷ್ಠ ಎಂಬಂತೆ ನಡೆದುಕೊಳ್ಳುವುದೇ ಒಳ್ಳೆಯದು. ಐದು ವರ್ಷಕ್ಕೊಮ್ಮೆ ದೊರೆಯುವ ಈ ಪವಿತ್ರ ಹಕ್ಕನ್ನು ಕಳೆದುಕೊಳ್ಳದೇ ಇರುವುದು ಸಮರ್ಪಕ ಕ್ರಮ ಆಗುವುದರಲ್ಲಿ ಸಂದೇಹವಿಲ್ಲ.

ಈ ದಿಸೆಯಲ್ಲಿ, ಬೆಂಗಳೂರಿನ ಸಮರ್ಥ ಭಾರತ ಟ್ರಸ್ಟ್‌ ಸಂಸ್ಥೆಯು ‘ನೋಟಾ ಆಯ್ಕೆ ಬೇಡ’ ಕುರಿತು ಮತದಾರರಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಇದರ ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ, ಹೊಸ ಮತದಾರರೂ ಸೇರಿದಂತೆ ಎಲ್ಲರಲ್ಲೂ ‘ಮತದಾನ ನಿಮ್ಮ ಹಕ್ಕು. ಮತ ಚಲಾಯಿಸಿ’ ಎಂದು ಮನವಿ ಮಾಡುತ್ತಿದ್ದಾರೆ. ರಾಜ್ಯದೆಲ್ಲೆಡೆ ಇಂತಹ ಕಾರ್ಯ ನಡೆಯಬೇಕಾದ ಅಗತ್ಯವಿದೆ. ಮತದಾನದ ಕುರಿತು ಸರ್ಕಾರಿ ಅಧಿಕಾರಿಗಳು ನಡೆಸುತ್ತಿರುವ ಮತ ಜಾಗೃತಿ ಕಾರ್ಯಕ್ರಮದಲ್ಲಿ ‘ನೋಟಾ ಬೇಡ’ ಎಂದು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕೆಲಸವೂ ಆಗಬೇಕು. ರಾಜಕೀಯ ಪಕ್ಷಗಳು ಕೂಡ ತಮಗೆ ಮತ ಕೇಳುವುದರ ಜತೆಗೆ, ನೋಟಾ ಗುಂಡಿ ಒತ್ತದಂತೆಯೂ ಮತದಾರರಲ್ಲಿ ಮನವಿ ಮಾಡಬೇಕು.

‘ನೋಟಾ ಬೇಡ’ ಒಂದು ಜನಾಂದೋಲನವಾಗಿ, ಒಂದು ರಾಷ್ಟ್ರೀಯ ಸಂದೇಶವಾಗಿ ರೂಪುಗೊಳ್ಳಬೇಕಾಗಿರುವುದು ಈಗಿನ ತುರ್ತು ಅವಶ್ಯಕತೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT