ಚೆನ್ನೈನ ಪುಟ್ಟ ಓಣಿಯ ಹುಡುಗಿಯವಳು. ಮೂಟೆ ಹೊರುವ ಕೆಲಸ ಮಾಡುತ್ತಿದ್ದ ಅಪ್ಪನಿಗೆ ಕೇರಂ ಇಷ್ಟ. ಮೂರು ವರ್ಷದ ಹುಡುಗಿಗೆ ತಂದೆ ಕೇರಂ ಆಡಲು ಹೇಳಿಕೊಟ್ಟರು. ಈಕೆಯೂ ಕಲಿತಳು. ಆದರೆ ಹನ್ನೆರಡರ ವಯಸ್ಸಿಗೆ ಬರುತ್ತಿದ್ದಂತೆ ತಂದೆ ಇಲ್ಲವಾದರು. ಮನೆಯಲ್ಲಿ ಬಡತನ ಎಷ್ಟಿತ್ತೆಂದರೆ ಶಾಲೆ ಬಿಟ್ಟು ಈ ಹುಡುಗಿ ಸ್ಟೀಲ್ ವರ್ಕ್ಶಾಪ್ನಲ್ಲಿ ಕೆಲಸ ಶುರು ಮಾಡಬೇಕಾಯಿತು. ಸ್ನೇಹಿತರು ಶಾಲೆಗೆ ಹೋದರೆ ಈಕೆ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಆಕೆ ಕೇರಂ ಆಡುವುದನ್ನು ಬಿಡಲಿಲ್ಲ. ಕೇರಂ ಅವಳ ಸೋತ ದೇಹ ಮತ್ತು ಮನಸ್ಸುಗಳಿಗೆ ಸಮಾಧಾನ ತರುತ್ತಿತ್ತು. ಈ ಆಟವನ್ನು ಅವಳು ಹೃದಯಕ್ಕೆ ಹಚ್ಚಿಕೊಂಡು ಆಡುತ್ತಿದ್ದಳು. ಕೆಲಸದ ಅವಧಿ ದೀರ್ಘವಾಗಿತ್ತು. ಆದರೂ ಸಮಯ ಮಾಡಿಕೊಂಡು ಸಣ್ಣಪುಟ್ಟ ಕೇರಂ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಳು. ಅವುಗಳಲ್ಲಿ ಗೆದ್ದಾಗ ಸಿಗುವ ಹಣ ಕುಟುಂಬದ ಖರ್ಚಿಗಾಗುತ್ತಿತ್ತು. ಈ ಗೆಲುವು ಕೇರಂ ಆಟದ ಬಗೆಗಿನ ಅವಳ ಕನಸುಗಳು ವಿಸ್ತಾರವಾಗುತ್ತಲೇ ಹೋಗಲು ಸಹ ಕಾರಣವಾಯಿತು. ನಿತ್ಯರಾಜನ್ ಎನ್ನುವವರು ತಮ್ಮ ಮಗನ ಜತೆ ಆಡಿದ ಕೀರ್ತನಾಳ ಪ್ರತಿಭೆಯನ್ನು ಗುರುತಿಸಿ ಅವಳಿಗೆ ಸಹಾಯ ಮಾಡಿದರು. ಕೀರ್ತನಾಳಿಗೆ ಆಡುವ ಅವಕಾಶ ಸಿಕ್ಕು ಅವಳು ತನ್ನ ಬದುಕೇ ಕೇರಂ ಮೇಲೆ ನಿಂತಿದೆಯೇನೋ ಎಂಬಂತೆ ಆಡತೊಡಗಿದಳು.

ಅಬ್ದುಲ್ ಕಲಾಂ ಹೇಳಿದಂತೆ ಆಕೆ ದೊಡ್ಡ ಕನಸನ್ನೇ ಕಂಡಿದ್ದಳು. ಒಂದೆಡೆ ಹೊಟ್ಟೆ ತುಂಬಿಸಿಕೊಳ್ಳಲು ದುಡಿಯುತ್ತಲೇ ತನ್ನ ಕನಸಿಗಾಗಿಯೂ ಕಷ್ಟಪಟ್ಟಳು. ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಎರಡು ಚಿನ್ನ ಗೆದ್ದಳು. ಅವಳ ಕನಸು ಬೆಳೆಯುತ್ತಿತ್ತು. ಕೇರಂ ಆಟದ ಅವಧಿ ರಾತ್ರಿಯನ್ನು ಹಿಗ್ಗಿಸುತ್ತಿತ್ತು. ಬೆಳಿಗ್ಗೆ ನಾಲ್ಕು ಗಂಟೆಗೆ ಮತ್ತೆ ಅಭ್ಯಾಸ ಮಾಡಲು ಕೂರುತ್ತಿದ್ದಳು. ಆ ಪ್ರಯತ್ನ ಆಕೆಯನ್ನು 2025ರ ಡಿಸೆಂಬರ್ ಮೊದಲ ವಾರದಲ್ಲಿ ಮಾಲ್ದೀವ್ಸ್ನಲ್ಲಿ ನಡೆದ ಏಳನೇ ಕೇರಂ ವಿಶ್ವ ಚಾಂಪಿಯನ್ಶಿಪ್ವರೆಗೆ ಕರೆದುಕೊಂಡು ಹೋಯಿತು. ಮಾತ್ರವಲ್ಲ, ಮಹಿಳಾ ಸಿಂಗಲ್ಸ್ನಲ್ಲಿ, ಡಬಲ್ಸ್ನಲ್ಲಿ, ಮಹಿಳಾ ತಂಡ ಸ್ಪರ್ಧೆಯಲ್ಲಿ ಗೆಲುವು ತಂದುಕೊಟ್ಟಿತು. ಎಲ್ಲ ವಿಭಾಗಗಳಲ್ಲೂ ಗೆದ್ದು ಮೂರು ಚಿನ್ನದ ಪದಕ ಗಳಿಸಿದ ಈ ಅಪ್ರತಿಮ ಸಾಧಕಿಗೆ ವಿಶ್ವ ಚಾಂಪಿಯನ್ ಗೌರವ ಲಭಿಸಿತು. ತಮಿಳುನಾಡಿನ ಮುಖ್ಯಮಂತ್ರಿ ಈಕೆಗೆ ಒಂದು ಕೋಟಿ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು ಕೂಡ.

ಎಲ್.ಕೀರ್ತನಾ ಎಂಬ ಹೆಸರಿನ ಇಪ್ಪತ್ತೊಂದು ವರ್ಷದ ಈ ಯುವತಿ ಈಗ ವಿಶ್ವ ಚಾಂಪಿಯನ್ ಟ್ರೋಫಿಯ ಮೂಲಕ ಕೇವಲ ತನ್ನ ಕನಸುಗಳನ್ನು ಮಾತ್ರ ನನಸಾಗಿಸಿಕೊಂಡಿಲ್ಲ. ಕನಸು ಕಾಣುವ ಅನೇಕ ಮಕ್ಕಳಿಗೆ ಅದರಲ್ಲೂ ತುತ್ತಿನ ಚೀಲ ತುಂಬಿಸಿಕೊಳ್ಳುವ ಕಾಯಕದಲ್ಲಿ ಬಿದ್ದು ಕನಸುಗಳನ್ನು ಕಾಣದ ಅಥವಾ ಕಂಡರೂ ಅವನ್ನು ಮರೆತುಬಿಡುವ ಪರಿಸ್ಥಿತಿಯಲ್ಲಿರುವವರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅಷ್ಟೇ ಅಲ್ಲ, ಬೇರೆಯವರೂ ಈ ಸಾಧನೆ ಮಾಡಲು ಸಹಾಯ ಮಾಡುವುದಾಗಿ ಹೇಳಿರುವ ಕೀರ್ತನಾ ತಮ್ಮಂತಹ ಆಟಗಾರರು ಬಹಳಷ್ಟು ಮಂದಿ ಇದ್ದಾರೆ, ಅವರೂ ಗೆಲ್ಲಬೇಕು ಎಂದಿದ್ದಾರೆ.

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇದೆ. ಪ್ರತಿಭೆಗೆ ಪೂರಕವಾಗಿ ಪರಿಶ್ರಮವೂ ಸೇರಿದರೆ ಅದ್ಭುತಗಳು ಸಾಧ್ಯ. ಕೀರ್ತನಾರಂತಹ ಸಾಧಕಿಯರು ಈ ಮಾತಿಗೆ ಉದಾಹರಣೆಯಾಗುತ್ತಾರೆ. ಮತ್ತು ಕತ್ತಲಲ್ಲಿರುವ ಅದೆಷ್ಟೋ ಮಂದಿಗೆ ಮೋಡದಂಚಿನ ಬೆಳ್ಳಿರೇಖೆಯೂ ಆಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.